fbpx

ಕೆಡಿಪಿ ಸಭೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ: ಸಚಿವ ಬಿ.ಸಿ.ನಾಗೇಶ್

ಮಡಿಕೇರಿ ಅ.10:-ಅಧಿಕಾರಿಗಳು ಕೆಡಿಪಿ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಎಚ್ಚರಿಸಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಸಕ್ತ(2022-23) ಸಾಲಿನ ಸೆಪ್ಟೆಂಬರ್-2022 ರ ಅಂತ್ಯದ ವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾ ಮಟ್ಟದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆಡಿಪಿ ಸಭೆಗೆ ಉರು ಹೊಡೆದಂತೆ ಮಾಹಿತಿ ತರುವುದಲ್ಲ, ಎಲ್ಲಾ ರೀತಿಯ ಮಾಹಿತಿಯನ್ನು ಅಧ್ಯಯನ ಮಾಡಿಕೊಂಡು ಬರಬೇಕು. ನಿಖರ ಮಾಹಿತಿ ಒದಗಿಸಬೇಕು. ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಬಿ.ಸಿ.ನಾಗೇಶ್ ಅವರು ಚಾಟಿ ಬೀಸಿದರು.
ಕೆಡಿಪಿ ಸಭೆಗೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗಬೇಕು. ಇಂದು ಕೆಲವು ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಾಗಿದೆ. ಮುಂದುವರಿದು ಇನ್ನೂ 10-15 ದಿನದಲ್ಲಿ ಕೆಡಿಪಿ ಸಭೆಯ ದಿನಾಂಕ ನಿಗಧಿಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಬಿರುನಾಣಿ ಭಾಗದ ಅಕ್ರಮ ಸಕ್ರಮ ಯೋಜನೆಯಡಿ 22 ಕಡತಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ಒಪ್ಪಿಗೆಗೆ ಕಳುಹಿಸಿದ್ದಾರೆ. ಇದು ಒಳ್ಳೆಯ ಕ್ರಮವಲ್ಲ. ಬಿರುನಾಣಿ ಪ್ರದೇಶದ ಜನರ ಕಷ್ಟ ಅಧಿಕಾರಿಗಳಿಗೆ ಅರ್ಥವಾಗುವುದಿಲ್ಲ ಎಂದು ಸಿಟ್ಟಾದರು. 

ಈ ಸಂದರ್ಭದಲ್ಲಿ ಸಮಿತಿ ಸದಸ್ಯರೊಬ್ಬರು ತಿತಿಮತಿ ವ್ಯಾಪ್ತಿಯ ಬೊಂಬುಕಾಡು, ಚೈನಿಹಡ್ಲು ಸೇರಿದಂತೆ ನಾಲ್ಕು ಹಾಡಿಗಳಲ್ಲಿ ಸುಮಾರು 500 ಕುಟುಂಬಗಳಿದ್ದು, ಇದುವರೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ಅವರು ಗಮನ ಸೆಳೆದರು.

ಈ ಕುರಿತು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಹಾಡಿಗಳಿಗೆ ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಅಂಗನವಾಡಿ ಮತ್ತಿತರ ಕನಿಷ್ಟ ಮೂಲ ಸೌಲಭ್ಯವನ್ನಾದರೂ ಕಲ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ದುಬಾರೆಯ ಹಲವು ಮಾವುತ ಕುಟುಂಬಗಳು ಕುಡಿಯುವ ನೀರು ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದು, ಕೂಡಲೇ ಕುಡಿಯುವ ನೀರು ಸಂಪರ್ಕಕ್ಕೆ ಅವಕಾಶ ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇರುವ ಎರಡು ಬೋರ್‍ವೆಲ್‍ಗಳು ಕೆಟ್ಟಿದ್ದು, ಕುಡಿಯುವ ನೀರಿಗೆ ತೊಂದರೆಯಾಗಿದೆ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಅಳವಡಿಸಬೇಕು ಎಂದರು.
‘ಮೈಸೂರು ದಸರಾಗೆ ಅಭಿಮನ್ಯು ಸೇರಿದಂತೆ ಹಲವು ಸಾಕಾನೆಗಳು ತೆರಳುತ್ತವೆ. ಅಲ್ಲಿನ ಮಾವುತರಿಗೆ ಕನಿಷ್ಠ ಸೌಲಭ್ಯವಿಲ್ಲದಿದ್ದರೆ ಹೇಗೆ ಎಂದು ಕೆ.ಜಿ.ಬೋಪಯ್ಯ ಅವರು ಪ್ರಶ್ನಿಸಿದರು.’

‘ಇದಕ್ಕೆ ಧ್ವನಿಗೂಡಿಸಿದ ಬಿ.ಸಿ.ನಾಗೇಶ್ ಅವರು ಮೈಸೂರು ದಸರಾ ಸಂದರ್ಭದಲ್ಲಿ ಮಾವುತರಿಗೆ ರಾಜ ಆತಿಥ್ಯ ನೀಡುತ್ತಾರೆ. ಅವರ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡುತ್ತಾರೆ. ಆದರೆ ಅವರ ಸ್ವ ಸ್ಥಳಕ್ಕೆ ಹಿಂದಿರುಗಿದಾಗ ಯಥಾಸ್ಥಿತಿ ಮುಂದುವರಿಯುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ರಾಜ್ಯದ ಗೌರವ ಎಂಬುದನ್ನು ಪರಿಗಣಿಸಿ ಮಾವುತರ ಕುಟುಂಬದವರಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.’
ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕಡಮಕಲ್ಲು-ಕೂಟಿಯಾಲ ರಸ್ತೆ ನಿರ್ಮಾಣಕ್ಕೆ ಕಳೆದ 25 ವರ್ಷಗಳಿಂದ ಒತ್ತಾಯ ಮಾಡಿಕೊಂಡು ಬರಲಾಗಿದೆ. ಆದರೆ ಇದುವರೆಗೆ ಈ ಕಾರ್ಯ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಅವರು ಆನ್‍ಲೈನ್ ಮೂಲಕ ಇನ್ನೂ ಸಹ ಅರ್ಜಿ ಸ್ವೀಕಾರ ಆಗಿಲ್ಲ ಎಂದು ತಿಳಿಸಿದರು.
ಇದಕ್ಕೆ ಆನ್‍ಲೈನ್ ಅರ್ಜಿ ಎಂದು ಹೇಳುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸುತ್ತಿಲ್ಲ ಎಂದು ಕೆ.ಜಿ.ಬೋಪಯ್ಯ ಅವರು ದೂರಿದರು.
ಕಡಮಕಲ್ಲು ರಸ್ತೆ ನಿರ್ಮಾಣವಾದರೆ ಮಳೆಗಾಲದಲ್ಲಿ ಮಂಗಳೂರು ರಸ್ತೆ ಕಡಿತಗೊಂಡಲ್ಲಿ ದಕ್ಷಿಣಕನ್ನಡಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು.

ಕಡಮಕಲ್ಲು, ಕೂಟಿಯಾಲ ರಸ್ತೆ ಸಂಬಂಧ ಹೆಚ್ಚುವರಿ ಭೂಮಿಯನ್ನು ಸಹ ಅರಣ್ಯ ಇಲಾಖೆಗೆ ಒದಗಿಸಲಾಗಿದೆ. ಆದರೂ ಕಡಮಕಲ್ಲು-ಕೂಟಿಯಾಲ ರಸ್ತೆ ನಿರ್ಮಾಣ ಆಗುತ್ತಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.
ಜೀವ ವೈವಿದ್ಯ ಮಂಡಳಿ ರಾಜ್ಯಾಧ್ಯಕ್ಷರಾದ ನಾಪಂಡ ರವಿಕಾಳಪ್ಪ ಅವರು ಮಾತನಾಡಿ ಜೀವ ವೈವಿಧ್ಯ ಮಂಡಳಿ ವ್ಯಾಪ್ತಿಗೆ  ಕೃಷಿ, ತೋಟಗಾರಿಕೆ, ಅರಣ್ಯ ಮತ್ತಿತರ ಇಲಾಖೆಗಳು ಬರಲಿದ್ದು, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವಂತೆ ತಿಳಿಸಿದರು.
ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಮಂಗಳವಾರ ಸಭೆ ನಡೆಸಿ ನಿಖರ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ಸುಜಾ ಕುಶಾಲಪ್ಪ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಬಿಸಿಎಂ ಇಲಾಖೆ ಅಧಿಕಾರಿ ಎನ್. ಮಂಜುನಾಥ್ ಇತರರು ಇದ್ದರು.

error: Content is protected !!