ಆಮ್ಲಜನಕ ದಾಸ್ತಾನಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ
ಕೊಡಗು ಜಿಲ್ಲೆಯ ಎಲ್ಲಾ ಹಂತದ ಆಸ್ಪತ್ರೆಗಳಲ್ಲಿ ಆಮ್ಲಜನಕ ಕೊರತೆಯಾಗಂತೆ ಅವಶ್ಯವಾದಷ್ಟು ದಾಸ್ತಾನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ವಸತಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಯ ಜಿಲ್ಲಾ ಕೋವಿಡ್ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಆಮ್ಲಜನಕ ದಾಸ್ತಾನು ಹಾಗೂ ಕೋವಿಡ್ ನಿಯಂತ್ರಣ ಬಗ್ಗೆ ವಿಡಿಯೊ ಸಂವಾದ ಮೂಲಕ ಜಿಲ್ಲಾಧಿಕಾರಿ ಅವರಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಆಮ್ಲಜನಕ ಕೊರತೆಯಾಗದಂತೆ ಎಲ್ಲಾ ರೀತಿಯ ಕ್ರಮಕೈಗೊಳ್ಳಬೇಕು ಹಾಗೂ ಪರಿಸ್ಥಿತಿಯನ್ನು ಆಗಿಂದಾಗ್ಗೆ ಅವಲೋಕಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿಗೆ ಸಚಿವರು ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಸೋಂಕು ಹರಡದಂತೆ ಬಿಗಿ ಕ್ರಮ ಜಾರಿಗೊಳಿಸುವಲ್ಲಿ ಈಗಾಗಲೇ ಹೊರಡಿಸಲಾಗಿರುವ ಸರ್ಕಾರದ ನಿರ್ದೇಶನವನ್ನು ಚಾಚುತಪ್ಪದೆ ಪಾಲಿಸಬೇಕು.
ಆಮ್ಲಜನಕ, ಲಸಿಕೆ ಮತ್ತಿತರ ಸಂಬಂಧ ಹೆಚ್ಚುವರಿಯಾಗಿ ಬೇಕಿದ್ದಲ್ಲಿ ತಕ್ಷಣವೇ ಮಾಹಿತಿಯ ಪಟ್ಟಿ ಒದಗಿಸುವಂತೆ ವಿ.ಸೋಮಣ್ಣ ಅವರು ತಿಳಿಸಿದರು.
ಕೋವಿಡ್-19 ಸೋಂಕಿತರ ಚಿಕಿತ್ಸೆ ಹಾಗೂ ಕೋವಿಡ್ 19 ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳ ಕೈಗೊಳ್ಳುವುದರ ಕುರಿತಂತೆ ನಡೆದ ವಿಡಿಯೊ ಸಂವಾದಲ್ಲಿ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಜಿಲ್ಲೆಯಲ್ಲಿ ಕೋವಿಡ್ 19 ನಿಯಂತ್ರಣ ಸಂಬಂಧ ಹಲವು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಚಾರುಲತ ಸೋಮಲ್ ಅವರು ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳು ಹಾಗೂ ಆಮ್ಲಜನಕ ಪೂರೈಕೆ ಮತ್ತಿತರ ಬಗ್ಗೆ ಮಾಹಿತಿ ನೀಡಿದರು.