ಆತ್ಮನಿರ್ಭರ್ ಭಾರತದ ಕರೆಗೆ ಬೆಂಬಲ
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೀಡಿರುವ ‘ಆತ್ಮನಿರ್ಭರ ಭಾರತ’ದ ಕರೆಗೆ ದೇಶದ ಪ್ರಮುಖ ಆಧ್ಯಾತ್ಮಿಕ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಉದ್ದೇಶ ಸಾಧಿಸಲು ‘ಸ್ಥಳೀಯತೆಗೆ ಆದ್ಯತೆ’ (ವೋಕಲ್ ಫಾರ್ ಲೋಕಲ್) ನೀಡಬೇಕೆಂಬ ಕರೆಯನ್ನು ಜನಪ್ರಿಯಗೊಳಿಸಲು ನೆರವಾಗಬೇಕೆನ್ನುವ ಪ್ರಧಾನಿಯವರ ಆಹ್ವಾನವನ್ನು ಅವರು ಸ್ವೀಕರಿಸಿದ್ದು, ಪೂರಕವಾಗಿ ನಡೆಯುವುದಾಗಿ ಭರವಸೆ ನೀಡಿದ್ದಾರೆ.
ಯೋಗ ಗುರು ಬಾಬಾ ರಾಮದೇವ್, ಶ್ರೀ ಶ್ರೀ ರವಿಶಂಕರ್, ಸದ್ಗುರು ವಾಸುದೇವ, ಸ್ವಾಮಿ ಅವಧೇಶಾನಂದ ಮತ್ತು ದೇವಕಿ ನಂದನ್ ಠಾಕೂರ್ ಮೊದಲಾದವರು ಮೋದಿ ಮನವಿಗೆ ಬೆಂಬಲ ಸೂಚಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಈ ಅಭಿಯಾನಕ್ಕೆ ಪೂರಕವಾಗಿ ತಮ್ಮ ಸಂಸ್ಥೆಯ ಯುವಜನರು ಒಂದು ಆಪ್ ಅಭಿವೃದ್ಧಿ ಪಡಿಸಲಿದ್ದಾರೆ ಎಂದು ಶ್ರೀ ಶ್ರೀ ರವಿಶಂಕರ್ ಹೇಳಿದ್ದಾರೆ.
ಈ ಮಹತ್ವದ ಅಭಿಯಾನಕ್ಕೆ ಪತಂಜಲಿಯ ಸಂಪೂರ್ಣ ಬೆಂಬಲವಿದೆ. ಇತರ ಆಧ್ಯಾತ್ಮಿಕ ನಾಯಕರನ್ನು ಸಂರ್ಪಸಿ ಬೆಂಬಲ ಕ್ರೋಡೀಕರಿಸುವುದಾಗಿ ಬಾಬಾ ರಾಮ ದೇವ್ ಘೋಷಿಸಿದ್ದಾರೆ.
ಜೈನಾಚಾರ್ಯ ಶ್ರೀ ವಿಜಯ ವಲ್ಲಭ ಸುರೀಶ್ವರ ಜೀ ಮಹಾರಾಜ್ ಅವರ 151ನೇ ಜಯಂತಿ ಆಚರಣೆ ಸಂದರ್ಭದಲ್ಲಿ ಪ್ರಧಾನಿ ಈ ಮನವಿ ಮಾಡಿದ್ದರು. ತಮ್ಮ ಬೋಧನೆಗಳಲ್ಲಿ ಹಾಗೂ ಅನುಯಾಯಿಗಳೊಂದಿಗಿನ ಸಂವಾದದಲ್ಲಿ ‘ಆತ್ಮನಿರ್ಭರ ಭಾರತ’ ಅಭಿಯಾನದ ಪರಿಕಲ್ಪನೆ ಪಸರಿಸುವಂತೆ ಕೋರಿದ್ದರು. (ಏಜೆನ್ಸೀಸ್)