‘ಅರೆಭಾಷೆ ಅಕಾಡೆಮಿ ಸಾಧನೆಯ ಹಾದಿ’ ಪುಸ್ತಕ ಬಿಡುಗಡೆ
ಮಡಿಕೇರಿ ಅ.14:-ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ನಾಲ್ಕನೇ ಅಧ್ಯಕ್ಷರ ಮೂರು ವರ್ಷದ ಅವಧಿಯು ಅಕ್ಟೋಬರ್ 15 ಕ್ಕೆ ಮೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಅಕಾಡೆಮಿ ವತಿಯಿಂದ ಹೊರ ತರಲಾಗಿರುವ ‘ಅರೆಭಾಷೆ ಅಕಾಡೆಮಿ ಸಾಧನೆಯ ಹಾದಿ’ ಪುಸ್ತಕವನ್ನು ಮಡಿಕೇರಿ ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ನಗರದ ಗೌಡ ಸಮಾಜದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು ಅರೆಭಾಷೆ ಅಕಾಡೆಮಿಯ ನಾಲ್ಕನೇ ಅವಧಿಯ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಯೋಜನೆ ರೂಪಿಸಿ ತಂಡವಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ಅಕಾಡೆಮಿ ಅಧ್ಯಕ್ಷರಾದಲ್ಲಿ ಸಾಧನೆ ಮಾಡಲು ಸಾಧ್ಯ ಎಂಬುದನ್ನು ತಿಳಿಸಿದ್ದಾರೆ ಎಂದರು.
ನಾವೇನೂ ಮಾಡಿದ್ದೇವೆ ಎಂದು ಹೇಳುವುದಕ್ಕಿಂತ, ಅಧ್ಯಕ್ಷರು ಮತ್ತು ತಂಡದ ಕೆಲಸಗಳನ್ನು ಜನರು ಮಾತನಾಡುವಂತಿರಬೇಕು. ಆ ದಿಸೆಯಲ್ಲಿ ಅರೆಭಾಷೆ ಅಕಾಡೆಮಿಯ ಅಧ್ಯಕ್ಷರು ಅವಿರತ ಸೇವೆ ಸಲ್ಲಿಸಿದ್ದಾರೆ. ಪರಿಪೂರ್ಣ ಕೆಲಸ ಮಾಡುವಲ್ಲಿ ದುಡಿದಿದ್ದಾರೆ ಎಂದು ಪ್ರೆಸ್‍ಕ್ಲಬ್ ಅಧ್ಯಕ್ಷರು ಹೇಳಿದರು.
ಕನ್ನಡ ಸುವರ್ಣ ಸಮುಚ್ಚಯ ಭವನ ಶೀಘ್ರ ಉದ್ಘಾಟನೆಯಾಗಿ ಭವನದಲ್ಲಿ ಸಾಂಸ್ಕøತಿಕ ಚಟುವಟಿಕಟಗಳು ನಡೆಯುವಂತಾಗಲಿ ಎಂದು ರಮೇಶ್ ಕುಟ್ಟಪ್ಪ ಅವರು ತಿಳಿಸಿದರು.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀ ನಾರಾಯಣ ಕಜೆಗದ್ದೆ ಅವರು ಮಾತನಾಡಿ ಕಳೆದ ಮೂರು ವರ್ಷದಲ್ಲಿ ಹಲವು ಯೋಜನೆ ರೂಪಿಸಿ, ಕಾರ್ಯಕ್ರಮ ನಿರ್ವಹಿಸಲಾಗಿದೆ. ಪ್ರತಿಯೊಬ್ಬ ಸದಸ್ಯರು ತಮ್ಮ ಪಾಲಿನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಕಾರ್ಯಕ್ರಮ ಅನುಷ್ಠಾನಕ್ಕೆ ಕೈಜೋಡಿಸಿದ್ದಾರೆ ಎಂದರು.
ಅರೆಭಾಷೆ ಅಕಾಡೆಮಿಯ ಪುಸ್ತಕಗಳ ಡಿಜಿಟಲೀಕರಣ ಮಾಡಲು ಶ್ರಮಿಸಲಾಗಿದೆ. ದೃಶ್ಯಮಾದ್ಯಮ ಕಾರ್ಯಗಾರ ಏರ್ಪಡಿಸಲು ಉದ್ದೇಶಿಸಲಾಗಿತ್ತು ಎಂದು ಅಧ್ಯಕ್ಷರು ಹೇಳಿದರು.
ಅರೆಭಾಷೆ ಸಾಹಿತ್ಯ, ಸಂಸ್ಕøತಿ ಉಳಿವಿಗೆ ಹಲವು ಪ್ರಯತ್ನ ಮಾಡಲಾಗಿದೆ. ಮುಂದಿನ ತಲೆಮಾರಿಗೆ ಅರೆಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಅಡಿಪಾಯ ಹಾಕಲಾಗಿದೆ ಎಂದು ಅವರು ನುಡಿದರು.
ಅರೆಭಾಷೆ ಅಕಾಡೆಮಿಯ ರಿಜಿಸ್ಟ್ರಾರ್ ಜಿನ್ನಸ್ವಾಮಿ ಮಾತನಾಡಿ ಅಕಾಡೆಮಿ ವತಿಯಿಂದ ಅರೆಭಾಷೆ ಪದಕೋಶ, ಪಾರಂಪರಿಕ ವಸ್ತುಕೋಶ, ವಿಶ್ವಕೋಶ ಹೀಗೆ ಹಲವು ಪುಸ್ತಕಗಳನ್ನು ಪ್ರಕಟಿಸಿರುವುದು ವಿಶೇಷವಾಗಿದೆ ಎಂದರು.
ಅಕಾಡೆಮಿ ಸದಸ್ಯರಾದ ಡಾ.ವಿಶ್ವನಾಥ್ ಬದಿಕಾನ ಅವರು ಕಳೆದ ಮೂರು ವರ್ಷದ ಅಕಾಡೆಮಿ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.
ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಡಾ.ದಯಾನಂದ ಕೂಡಕಂಡಿ, ಎ.ಟಿ.ಕುಸುಮಾಧರ, ಜಯಪ್ರಕಾಶ್ ಮೊಂಟಡ್ಕ ಬಿಳಿನೆಲೆ, ದಂಬೆಕೋಡಿ ಎಸ್.ಆನಂದ, ಪುರುಷೋತ್ತ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ ಇತರರು ಇದ್ದರು.