ಹಿಮಕ್ರೀಡೆಯ ಅದಮ್ಯ ಸಾಹಸಿ ತೆಕ್ಕಡ ಭವಾನಿ ನಂಜುಂಡ
ಹಿಮವೇ ಕಾಣದ ನಾಡಿನಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳು ಮಂಜುಗುಡ್ಡೆಯಲ್ಲೇ ಆಟವಾಡಿ ಇದೀಗ ರಾಷ್ಟೀಯ ದಾಖಲೆ ಮಾಡಿರುವುದು ಪುಟ್ಟ ಜಿಲ್ಲೆ ಕೊಡಗಿನ ಪಾಲಿಗೆ ಅಸಾಮಾನ್ಯ, ವೀರೋಚಕ ಸಾಧನೆ.! ಅಂತಹದೊಂದು ಕ್ರೀಡೆಯನ್ನು ಆಯ್ದುಕೊಂಡ ಯಶಸ್ಸು ಕಂಡಂತಹ, ಇಂದಿನ ಸುದ್ಧಿ ಸಂತೆ ನಿಮಗೆ ಪರಿಚಯಿಸುತ್ತಿರುವ ಅಪರೂಪದ ಕ್ರೀಡಾ ಸಾಧಕಿಯೆ ನಮ್ಮ ಕೊಡಗಿನ ಕುವರಿ
ತೆಕ್ಕಡ ಭವಾನಿ ನಂಜುಂಡ.
ಅಸಾಮಾನ್ಯ ಕ್ರೀಡಾಳು ಕೊಡಗಿನ ಸ್ಕೀಯಿಂಗ್ ಚಾಂಪಿಯನ್, ದಕ್ಷಿಣ ಭಾರತದಲ್ಲೇ ಪ್ರಪ್ರಥಮವಾಗಿ ರಾಷ್ಟ್ರೀಯ ಸ್ಕೀಯಿಂಗ್ ಕ್ರಾಸ್ ಕಂಟ್ರಿ ರೇಸ್ʼನಲ್ಲಿ ಚಿನ್ನದ ಪದಕ ಗಳಿಸಿದ ಧೀರೆ ಇಪ್ಪತ್ತಾರು ವರ್ಷದ ತೆಕ್ಕಡ ಭವಾನಿ ಅವರ ಇಂತಹ ಛಲಗಾರಿಕೆಯ ಸಾಹಸಗಾಥೆಯನ್ನು ಈ ಬಾರಿ ಸುದ್ಧಿಸಂತೆ ಅತ್ಯಂತ ಆಸ್ಥೆಯಿಂದ ಬಿತ್ತರಿಸುತ್ತಿದೆ. ಹೆಣ್ಣೊಬ್ಬಳು ತನ್ನ ಸಾಧನೆಗಾಗಿ ತಾಯಿ ತಂದೆಯರನ್ನು ಬಿಟ್ಟು ಏಕಾಂಗಿಯಾಗಿ ಜಮ್ಮು ಕಾಶ್ಮೀರದಂತಹ ಸೂಕ್ಷ್ಮ ಪ್ರದೇಶದಲ್ಲಿ ಅಭ್ಯಾಸಕ್ಕೆಂದೇ ತೆರಳಿ ರಾಷ್ಟ್ರೀಯ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಸ್ವ ಪ್ರಯತ್ನದೊಂದಿಗೆ ಭಾಗವಹಿಸಿ ಯಶಸ್ಸು ಗಳಿಸಿ ಹಿಂತಿರುಗಿರುವುದು ಮೂಗಿನ ಮೇಲೆ ಬೆರಳಿಡುವಂತಹದ್ದಾಗಿದೆ.
ಅದರಲ್ಲೂ ಪೋಷಕರಿಗೆ ಹಣಕಾಸಿನ ಕೊರತೆ ಎದುರಾದರೂ ಎಂದೂ ಆಕೆಯನ್ನು ತಡೆಯದೆ ಹಣ ಹೊಂದಿಸಿ ಬೆಂಬಲಿಸಿದ್ದು ಅದಕ್ಕೆ ಪೂರಕವಾಗಿ ತನ್ನನ್ನು ತಾನು ಇಂಥಹದೊಂದು ಸಾಹಸದಲ್ಲಿ ತೊಡಗಿಸಿಕೊಂಡು ಗೆದ್ದಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಸಾಮಾನ್ಯವಾಗಿ ತಂದೆ ತಾಯಿ ಪ್ರೋತ್ಸಾಹ ನೀಡಿದರೂ ಏಕಾಗ್ರತೆಯಿಂದ ಸಾಧಿಸುತ್ತೇನೆ ಎಂದು ಮುಂದೆ ಬರುವ ಮಕ್ಕಳೇ ಕಡಿಮೆ. ಅದರಲ್ಲೂ ತಾವಾಗಿಯೆ ಏನಾದರೂ ಸಾಧನೆ ಮಾಡುತ್ತೇನೆ ಎನ್ನುವ ಮಕ್ಕಳು ಸಿಗುವುದಂತು ದುರ್ಲಭವೇ ಹೌದು, ಅಷ್ಟು ಮಾತ್ರವಲ್ಲದೆ ಮಕ್ಕಳು ಸಾಧನೆಯ ಹಾದಿಯಲ್ಲಿದ್ದರೂ ಕೆಲವೊಮ್ಮೆ ಪೋಷಕರು, ಸಮಾಜ, ಸರ್ಕಾರಗಳಿಂದ ಸಮಯಕ್ಕೆ ಸರಿಯಾಗಿ ಸಂಪೂರ್ಣ ಸಹಕಾರ ಸಿಗುವುದೇ ಕಷ್ಟಕರವಾಗಿರುತ್ತದೆ. ಅಂತಹದರಲ್ಲಿ ಒಳ್ಳೆಯ ಆಲೋಚನೆಯೊಂದಿಗೆ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎಂಬುದನ್ನು ತೋರಿಸಿರುವುದು ತೆಕ್ಕಡ ಕುಟುಂಬ. ಕೈಗೆ ಸಿಕ್ಕ ನೌಕರಿಯನ್ನೂ ತೊರೆದು ಇಂತಹದೊಂದು ಕ್ರೀಡೆಯ ಹಿಂದೆ ಬಿದ್ದಿರುವ ಭವಾನಿಯ ಬೆನ್ನು ತಟ್ಟುತ್ತ ಬೆನ್ನಿಗೆ ನಿಂತವರೇ ಬಲ್ಲಮಾವಟಿಯ ತೆಕ್ಕಡ ಶಂಭು ನಂಜುಂಡ ಹಾಗು ಪಾರ್ವತಿ ದಂಪತಿ ಮತ್ತು ತಮ್ಮ ಸಂಪೂರ್ಣ ದಾವನೆಯನ್ನು ಅಕ್ಕ ಭವಾನಿಗಾಗಿ ಧಾರೆ ಎರೆಯುತ್ತಿರುವ ದ್ವಿತೀಯ ಪುತ್ರಿ ಸಿಂಚನ ಸೀತಮ್ಮ!
ಭವಾನಿ ಜಮ್ಮು ಕಾಶ್ಮೀರ ರಾಜ್ಯದ ಗುಲ್ʼಮೊಹರ್ʼನಲ್ಲಿ ನಡೆದ ವಿಂಟರ್ ಬಯಥ್ಲಾನ್ ಚಾಂಪಿಯನ್ ಶಿಪ್-2022ರಲ್ಲಿ 1.5ಕಿ.ಮೀ, 10ಕಿ.ಮೀ, ಮತ್ತು 5ಕಿ.ಮೀ ಸ್ಪರ್ಧೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಿ ಎರಡು ಬೆಳ್ಳಿಪದಕ ಪಡೆಯುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದು ರಾಜ್ಯ ಕ್ರೀಡಾಮಂತ್ರಿ ಡಾ.ನಾರಾಯಣಗೌಡರಿಂದ ಎರಡು ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಪಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಕಾರ್ಮಿಕ ಇಲಾಖೆಯ ಯೋಜನೆಗಳ ಜಾಗೃತಿ ಅಭಿಯಾನದ ಅಂಗವಾಗಿ ಕಾರವಾರದಿಂದ ಬೆಂಗಳೂರಿನವರೆಗೆ ಸ್ಕೇಟಿಂಗ್ ಮಾಡಿದ 63 ಸಮಾನ ಮನಸ್ಕ ಸ್ಪರ್ಧಿಗಳೊಂದಿಗೆ 620 ಕಿ.ಮೀ ಕ್ರಮಿಸಿ ವಿಧಾನಸೌಧ ತಲುಪಿದ್ದ ಸ್ಕೀಯಿಂಗ್ ಆಕಾಂಕ್ಷಿಗಳನ್ನು ಕಾರ್ಮಿಕ ಇಲಾಖೆಯ ಮಂತ್ರಿಗಳು ಸೇರಿ ಕ್ರೀಡಾಮಂತ್ರಿಗಳು ಹೃತ್ಪೂರ್ವಕವಾಗಿ ಸ್ವಾಗತಿಸಿತಲ್ಲದೆ, ಸ್ಕೀಯಿಂಗ್ ರಾಷ್ಟ್ರೀಯ ಸಾಧನೆ ಮಾಡಿದ ಭವಾನಿಯವರನ್ನು ಹಾರ್ದಿಕವಾಗಿ ಸನ್ಮಾನಿಸಿ ಗೌರವಿಸಿದೆ. ಭವಾನಿಯವರ ಮತ್ತೊಂದು ಅಮೋಘ ಸಾಧನೆ ಎಂದರೆ ಮೌಂಟೇನೇರಿಂಗ್ʼಗಾಗಿ ರಷ್ಯಾ ತಲುಪಿ ಗುರಿ ಸಾಧಿಸಿದ್ದು. ಇದಕ್ಕಾಗಿ ಏರ್ʼಪೋರ್ಟ್ʼನಲ್ಲಿ ಒಂದು ಲಕ್ಷ ಹಣದ ಕೊರತೆ ಉಂಟಾದಾಗ ಭವಾನಿಯವರ ತಂದೆ ಅವರ ಹೊಸ ದುಬಾರಿ ಬೈಕನ್ನು ತಕ್ಷಣವೇ ಅರ್ಧ ಬೆಲೆಗೆ ಮಾರಿ ಮಗಳಿಗಾಗಿ ಹಣ ಹೊಂದಿಸಿದ್ದು ಮಗಳ ಸಾಧನೆಯ ಮೇಲೆ ಇವರಿಗಿರುವ ಅಭಿಮಾನವನ್ನು ಎತ್ತಿ ತೋರಿಸಿದೆ. ಮೌಂಟನೇರಿಂಗ್ʼ ಮಾತ್ರವಲ್ಲದೆ ಹಿಮಾಂಗಣದ ಅನೇಕ ಸ್ಪರ್ಧೆಗಳಲ್ಲಿ ಬಹುಮಾನಗಳಿಸಿ ಅಮೋಘ ಸಾಧನೆ ತೋರಿರುವ ಈ ಸಾಧಕಿಯ ಪೋಷಕರು ಇದೀಗ ಕರ್ನಾಟಕದಲ್ಲಿ ಪ್ರಪ್ರಥಮ ಬಯಥ್ಲಾನ್ ಸ್ಕೀಯಿಂಗ್ ಅಸೋಸಿಯೇಷನ್ ತೆರೆಯುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಅಸೋಸಿಯನ್ ಸೇರ್ಪಡೆಗೊಳ್ಳಲು ಅನೇಕ ಸ್ಕೀಯಿಂಗ್ ಹವ್ಯಾಸಿಗರು ಉತ್ಸಾಹಿಗಳು ಕಾತರಗೊಂಡಿದ್ದಾರೆ. ಇದಕ್ಕೆ ಸರ್ಕಾರದ ಅನುಮೋದನೆ ಅತಿಮುಖ್ಯವಾಗಿರುವುದರಿಂದ ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರು ಇವರಿಗೆ ಕೈಜೋಡಿಸಬೇಕಾಗಿದೆ. ಇದರ ಭಾಗವಾಗಿ ಸ್ಕೀಯಿಂಗ್, ವಾಲ್ ಕ್ಲೈಂಬಿಂಗ್, ಮೌಂಟನೇರಿಂಗ್, ಸ್ಕೇಟಿಂಗ್ ಮುಂತಾದ ವಿಭಾಗಗಳ ನಿರ್ವಹಣೆ ಹಾಗೂ ತರಬೇತಿ ಜವಾಬ್ದಾರಿಯನ್ನೂ ಭವಾನಿಯವರೇ ಹೆಗಲಿಗೇರಿಸಿಕೊಂಡಿದ್ದಾರೆ.
ಇಂತಹ ಅದಮ್ಯ ಸಾಹಸಿಗೆ ನಾಡಿನ ಸಮಸ್ತ ಜನರ ಪ್ರೋತ್ಸಾಹ ಸಹಕಾರ ಇನ್ನಷ್ಟು ಲಭಿಸಿದರೆ ದೇಶದ ಪತಾಕೆ ಪ್ರಪಂಚದಾದ್ಯಂತ ಹಾರಿಸಬಲ್ಲಳು ಎಂಬುದರಲ್ಲಿ ಸಂಶಯವಿಲ್ಲ. ಈ ಅಮೂಲ್ಯ ಸಾಧಕಿಗೆ ಸುದ್ಧಿ ಸಂತೆ ಬಳಗವು ಅಭಿನಂದನೆಗಳನ್ನು ಸಲ್ಲಿಸುತ್ತ, ಇವರ ಸ್ಕೀಯಿಂಗ್ ಭವಿಷ್ಯ ಉಜ್ವಲಗೊಂಡು ಉತ್ತುಂಗಕ್ಕೇರಲೆಂದು ಆಶಿಸುತ್ತದೆ.
ಸ್ಕೀಯಿಂಗ್ ಆಸಕ್ತರು ವಿಚಾರಣೆಗಳಿಗೆ ಸಂಪರ್ಕಿಸಬಹುದಾದ ದೂ: ಸಂ: 9611663951
ಲೇಖನ:
ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್, ಬರಹಗಾರರು ಹಾಗು ಸಾಹಿತಿ
ಹಾಸನ,