ರಂಗಭೂಮಿಯ ‘ಚೇತನ’ದ ಸೇವಾ ಬೆಳಕು…
“Theatre is the most perfect artistic form of coercion”. -Augusto Boal
Brazilian theatre practitioner
ಚೇತನ್ ನಿನಾಸಂ ಅವರು ಒಳ್ಳೆಯ ರಂಗಭೂಮಿ ಕಲಾವಿದರಾಗಿ ತಮ್ಮ ಸೇವೆಯನ್ನು ಅವಿರತ ಸಲ್ಲಿಸುತ್ತಿದ್ದಾರೆ. ತಮ್ಮ ಇಡೀ ಜೀವನವನ್ನೇ ಕಲೆಗಾಗಿ ಮೀಸಲಿಟ್ಟು ಅದರಲ್ಲೇ ಬದುಕೆಂಬ ಜಟಕಾ ಬಂಡಿಯನ್ನು ಸಾಗಿಸುವ ಛಾತಿ ಹೊಂದಿದ್ದಾರೆ. ಮೂಲತಃ ಇವರು ತುಮಕೂರು ಜಿಲ್ಲೆಯವರಾದರೂ ಕೊಡಗು ಜಿಲ್ಲೆಗೂ ತಮ್ಮ ಕಲಾ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಮರೆಯದೆ ಪ್ರತಿ ವರ್ಷ.
ತುಮಕೂರಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಮಾಡುತ್ತಿದ್ದ ಅವಧಿಯಲ್ಲಿ ಬೀದಿನಾಟಕ ಹಾಗು ಕಾಲೇಜು ರಂಗಭೂಮಿಯ ನಂಟನ್ನು ಗಟ್ಟಿಯಾಗಿ ಬೆಳೆಸಿಕೊಂಡರು. ವಿದ್ಯಾಭ್ಯಾಸ ಮುಗಿಸಿ, ಸಂಗೀತ ನಿರ್ದೇಶಕರಾದ ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಶಾಲೆಯಲ್ಲಿ ಪಠ್ಯ ಹಾಗು ಪಠ್ಯೇತರ ವಿಷಯಗಳನ್ನು ಅಲ್ಲಿನ ಬಡ ಹಾಗು ನಿರ್ಗತಿಕ ಮಕ್ಕಳಿಗೆ ಕಲಿಸುವ ಶಿಕ್ಷಕರಾಗಿ ಸೇರಿಕೊಂಡರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವುದರೊಂದಿಗೆ ಹಂಸಲೇಖ ಅವರ ಜೊತೆ ಒಡನಾಟವನ್ನೂ ಬೆಳೆಸಿಕೊಂಡು ಜನಪದ ಸಂಗೀತ ಹಾಗು ರಂಗಭೂಮಿಯ ಹಲವಾರು ವಿಚಾರಗಳನ್ನು ಕಲಿತರು ಚೇತನ್ ನೀನಾಸಂ ಅವರು.
ರಂಗಭೂಮಿ, ಅಭಿನಯ, ಹಾಗು ಜನಪದ ಸಂಗೀತದ ವಾತಾವರಣ ಅಪಾರವಾಗಿ ಪ್ರಭಾವ ಬೀರಿದ್ದರಿಂದ ಹಾಗು ನಾದಬ್ರಹ್ಮ ಹಂಸಲೇಖ ಅವರ ಶಾಲೆಯಲ್ಲಿ ಅವರ ಕಾರ್ಯ ದಕ್ಷತೆಯನ್ನು, ಪ್ರತಿಭೆಯನ್ನು ಗಮನಿಸಿ ಹಲವರ ಸಲಹೆಯ ಮೇರೆಗೆ ಜೀವನವನ್ನೇ ರಂಗಭೂಮಿಯ ಕಲಾ ಸೇವೆಗೆ ಮುಡಿಪಾಗಿಡಲು ನಿರ್ಧರಿಸಿದರು. ಹಾಗೆ ನಿರ್ಧರಿಸಿದವರೇ ಹೆಚ್ಚಿನ ತರಬೇತಿಗಾಗಿ ನೀನಾಸಂ ಸೇರಿದರು.
ನಿನಾಸಂನ ಶಿಸ್ತು ಬದ್ಧ ತಾಲೀಮು, ಅಲ್ಲಿ ಕಲಿಸುವ ಜೀವನ ಪಾಠ, ರಂಗಭೂಮಿಗೆ ಒಬ್ಬನನ್ನು ಸರ್ವಾಂಗೀಣವಾಗಿ ಸಿದ್ಧ ಪಡಿಸುವ ರೀತಿ ಎಲ್ಲವನ್ನೂ ಚಾಚೂ ತಪ್ಪದೆ ಕಲಿತರು ಚೇತನ್ ಅವರು. ಅದಕ್ಕೂ ಮುಂಚೆ ಕೆಲಸ ಮಾಡುತ್ತಿದ್ದ ಹಂಸಲೇಖ ಅವರ ಶಾಲೆಯಲ್ಲೇ ನಟನೆಯ ವಿಷಯದಲ್ಲಿ ಡಿಪ್ಲೊಮಾ ಮುಗಿಸಿದ್ದರು.
‘ಕೇವಲ ಶಿಕ್ಷಣವನ್ನು ಮಕ್ಕಳಿಗೆ ನೀಡಿದರೆ ಅದು ಅಕ್ಷರತೆ ಅನ್ನಿಸಿಕೊಳ್ಳುವುದಿಲ್ಲ. ನಿಜವಾದ ಸರ್ವತೋಮುಖ ಬೆಳವಣಿಗೆ ಅಂದರೆ ಸಾಂಸ್ಕೃತಿಕ, ನೈತಿಕ, ಕೌಶಲ್ಯಯುತ ವಿಚಾರಗಳನ್ನೂ ಒಳಗೊಂಡಂತೆ ಪಠ್ಯ ವಿಚಾರಗಳನ್ನು ಓದಿ ತಿಳಿದಾಗಲೇ ಆ ಶಿಕ್ಷಣಕ್ಕೊಂದು ಬೆಲೆ ಇರುತ್ತದೆ ಎಂಬುದನ್ನು ಮಕ್ಕಳ ಪೋಷಕರು ಅರಿತುಕೊಳ್ಳಬೇಕಿದೆ.’ ಎಂದು ಅರ್ಥಪೂರ್ಣವಾಗಿ ತಮ್ಮ ಶಿಕ್ಷಣದ ಕುರಿತಾದ ತಮ್ಮ ಪರಿಕಲ್ಪನೆಯನ್ನು ತೆರೆದಿಡುತ್ತಾರೆ.
ಈಗಿನ ಶಿಕ್ಷಣ ವ್ಯವಸ್ಥೆಯ ಕುರಿತು ಕಳವಳ ವ್ಯಕ್ತಪಡಿಸುವ ಅವರು ,’ ಪುಸ್ತಕದಲ್ಲಿರುವ ವಿಚಾರಗಳನ್ನು ಕಲಿಯುವುದು ಶಿಕ್ಷಣವೆಂದು ನಂಬುವುದು ಶುದ್ಧ ಮೂರ್ಖತನ. ನಾವು ಹುಟ್ಟಿ, ಬೆಳೆಯುತ್ತಿರುವ ಪರಿಸರ, ಇತಿಹಾಸ, ಸಂಸ್ಕೃತಿಯನ್ನು ನಾವು ಅರಿಯುವ ಆಸಕ್ತಿ ಬೆಳೆಸಿಕೊಳ್ಳಲಿಲ್ಲವೆಂದರೆ ನಾವು ಈ ಭೂಮಿಯಲ್ಲಿ ಹುಟ್ಟಿರುವುದೇ ವ್ಯರ್ಥ’ ಎನ್ನುತ್ತಾರೆ ರಂಗಕರ್ಮಿ ಚೇತನ್ ಅವರು.
ನಿನಾಸಂ ತರಬೇತಿಯನ್ನು ಒಂದು ವರ್ಷದ ಕಾಲ ಪಡೆದ ನಂತರ 2 ವರ್ಷ ತಿರುಗಾಟದಲ್ಲಿ ಅತ್ಯಮೂಲ್ಯ ಅನುಭವಗಳನ್ನು ಪಡೆದರು. ಅದೇ ಸಮಯದಲ್ಲಿ ನಿನಾಸಂ ಅಲ್ಲಿ ಜೂನಿಯರ್ ಆಗಿದ್ದ ಕಲಾವಿದೆ ಸುನೀಲಾ ಅವರೊಂದಿಗೆ ಪ್ರೇಮಾಂಕುರವಾಗಿ ವಿವಾಹವಾದರು. ಇಬ್ಬರೂ ರಂಗಭೂಮಿಯವರೇ ಆದ್ದರಿಂದ ಸದಭಿರುಚಿಯೊಂದಿಗೆ ಕಲೆಯಲ್ಲೇ ಜೀವನ ನಡೆಸುತ್ತಿರುವರು.
ಇತ್ತೀಚೆಗೆ ‘ಸಮ್ಮತ’ ಎನ್ನುವ ಸಂಸ್ಥೆಯನ್ನು ಕಟ್ಟಿ ವಾರಾಂತ್ಯದಲ್ಲಿ ನಾಟಕ ಚಿತ್ರಕಲೆಯ ತರಬೇತಿಯ ತರಗತಿಗಳನ್ನು ಶುರು ಮಾಡಿದ್ದಾರೆ ಚೇತನ್ ದಂಪತಿಗಳು. ಅದರಲ್ಲಿ ಸದ್ಯಕ್ಕೆ 48 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದು, ಬಂದ ಶುಲ್ಕವೇ ಜೀವನ ನಿರ್ವಹಣೆಗೆ ಇವರಿಗೆ ಸಂಪಾದನೆಯಾಗಿದೆ.
ಜೊತೆಗೆ ಜಂಗಮ Collectives ಅಂತ 11ಜನರ ರಂಗಕರ್ವಿಗಳ ತಂಡ ಕಟ್ಟಿ, ಒಂದು ವರ್ಷದಿಂದ ಈಚೆಗೆ ಮುಚ್ಚುವ ಹಂತಕ್ಕೆ ಬಂದಿರುವ ಸರಕಾರಿ ಶಾಲೆಗಳಿಗೆ ಹೋಗಿ ಅಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿ, ಆ ಊರಿನ ಬಡ ಮಕ್ಕಳಿಗೆ ಉಚಿತವಾಗಿ ಗುಣಮಟ್ಟದ ಸಾಂಸ್ಕೃತಿಕವಾಗಿ ಶಿಕ್ಷಣವನ್ನು ನೀಡಿ ಅಲ್ಲಿನ ಸಮುದಾಯಗಳೊಂದಿಗೆ ಶಾಲೆಯನ್ನು ಬಡಸೆದು ಒಂದು ಸಂಪರ್ಕ ಸೇತುವೆಯಂತೆ ಕೆಲಸ ಮಾಡುತ್ತಾರೆ. ಆ ಮೂಲಕ ಮುಚ್ಚುವ ಹಂತದಲ್ಲಿರುವ ಸರಕಾರಿ ಶಾಲೆಗಳ ಪುನಶ್ಚೇತನಕ್ಕೆ ಪ್ರಯತ್ನಿಸುತ್ತಾರೆ. ಹಾಗೆ ಸಮಾಜಿಕ ಶೈಕ್ಷಣಿಕ ಸದ್ದುದ್ದೇಶಕ್ಕೂ ಕೆಲಸ ಮಾಡುತ್ತಿದ್ದಾರೆ ಚೇತನ್ ಹಾಗು ಸುನೀಲಾ ದಂಪತಿಗಳು.
ನಾಟಕ, ಅಭಿನಯ ಮಾಡುತ್ತಾ ರಂಗಭೂಮಿಯಲ್ಲಿಯೇ ಜೀವನ ಕಂಡುಕೊಂಡಿರುವ ಚೇತನ್ ಹಾಗು ಅವರ ಪತ್ನಿ ಪ್ರತಿ ವರ್ಷವೂ ಡಿಸೆಂಬರ್ ತಿಂಗಳ 21ರಿಂದ ಒಂದು ವಾರದ ಕಾಲ ಕೊಡಗಿನ ಆಯ್ದ ಶಾಲೆಯ ಮಕ್ಕಳಿಗೆ ಸರಕಾರದ ‘ಅಭಿರಂಗ’ ಯೋಜನೆಯ ಅಡಿಯಲ್ಲಿ ಬಂದು ಅಭಿನಯದ ತರಬೇತಿ ಕೊಡಗಿನಲ್ಲಿ ನೀಡುತ್ತಾರೆ. ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಮೂರು ವರ್ಷದಿಂದ ಅಭಿರಂಗ ಯೋಜನೆಯನ್ನು ನಡೆಸಿದ್ದಾರೆ ಚೇತನ್ ದಂಪತಿಗಳು.
ಬದಲಾಗುತ್ತಿರುವ ಇಂದಿನ ದಿನಮಾನದಲ್ಲಿ ಜೀವನಶೈಲಿಯ ಬದಲಾವಣೆಗಳು ಆಗುತ್ತಿರುವುದರಿಂದಾಗಿ ಕಲೆಗಳಿಗೆ ಎಲ್ಲೋ ಮನ್ನಣೆ ಕಡಿಮೆಯಾಗುತ್ತಿದೆ ಎಂಬ ಆತಂಕ ಕಾಡುತ್ತದೆ. ರಂಗಭೂಮಿ ನಮ್ಮ ಜಿಲ್ಲೆಯಲ್ಲೂ ಬೆಳೆಯಬೇಕು.ಒಂದು ರಂಗಮಂದಿರದ ನಿರ್ಮಾಣವನ್ನು ಸರಕಾರ ಆದಷ್ಟು ಬೇಗ ನಿರ್ಮಿಸಬೇಕು. ಹಾಗೆ ಆದಲ್ಲಿ ನಮ್ಮ ಜಿಲ್ಲೆಯಲ್ಲೂ ಉದಯೋನ್ಮುಕ ಕಲಾವಿದರು ಬೆಳೆದು ಚೇತನ್ ನೀನಾಸಂ ಅವರಂತೆ ಸಾಧನೆಯ ಹಾದಿಯಲ್ಲಿ ಸಾಗಬಲ್ಲರು.