ಮೇಜರ್ |ಡಾ| ಕುಶ್ವಂತ್ ಕೋಳಿಬೈಲು

ನಮಗೆ ಮಳೆ ಹೊಸದಲ್ಲ…ಸೇತುವೆ ಮೇಲೆ ನೀರು ಏರಿ ಮೇಲಿನ ಭಾಗಮಂಡಲ ಪಟ್ಟಣ ಪ್ರಪಂಚದ ಜೊತೆ ಸ್ವಲ್ಪ ದಿನಗಳ ಕಾಲ ಸಂಪರ್ಕ ಕಡಿದುಕೊಳ್ಳುವುದೂ ಹೊಸದಲ್ಲ… ಅದೆಷ್ಟೋ ವರ್ಷಗಳಿಂದ ಇದನ್ನು ನಾವು ನೋಡಿದ್ದೇವೆ..

ಕೆಳೆದ ವರ್ಷದಿಂದ ಆಗುತ್ತಿರುವ ಭೂಕುಸಿತ ಅತ್ಯಂತ ಕಳವಳಕಾರಿ. ಕೋರಂಗಾಲದಲ್ಲಿ ಬೆಟ್ಟ ಜರಿದು ಜನರು ಸಮಾಧಿಯಾದ ಮಾದರಿಯ ಘಟನೆ ನಮ್ಮೂರಿನ ಇತಿಹಾಸದಲ್ಲಿ ಹಿಂದೆಂದೂ ಆಗಿರಲಿಲ್ಲ.ತಲಕಾವೇರಿ ಭಾಗಮಂಡಲ 300-250 ಇಂಚು ಮಳೆ ಸುರಿಯುವ ಪ್ರದೇಶ. ಇಷ್ಟು ವರ್ಷಗಳ ಕಾಲ ಭೂಕುಸಿತವಾಗುತ್ತಿರಲಿಲ್ಲ.. ಅದಕ್ಕೆ ಕಾರಣಗಳನ್ನು ಒಂದಷ್ಟು ಹಳಬರ ಬಳಿ ಮಾತನಾಡಿಸಿ ತಿಳಿಯುವ ಪ್ರಯತ್ನ ಮಾಡಿದ್ದೆ.. ನಿರಂತರವಾಗಿ ಎರಡು ಮೂರು ದಿನ, ದಿನಕ್ಕೆ ಹತ್ತು – ಹದಿನೈದು ಇಂಚು ಮಳೆ ಸುರಿದರೆ ಮಣ್ಣು ತೇವಗೊಂಡು ಗುಡ್ಡ ಕುಸಿಯುವುದು ಅಥವಾ ಜಲ ಸ್ಪೋಟವಾಗುವುದೆಂದು ಎಂದು ಹೆಚ್ಚಿನವರು ಅಭಿಪ್ರಾಯಪಟ್ಟರು..

2019ರಲ್ಲಿ ಒಟ್ಟು ವಾರ್ಷಿಕ ಮಳೆ ಕಮ್ಮಿಯಿತ್ತು. ಇನ್ನೂರು ಇಂಚು ಕೂಡ ಸುರಿದಿರಲಿಲ್ಲ. ಅದರೆ ಆಗಸ್ಟ್ ಎರಡನೆ ವಾರದಲ್ಲಿ ಸತತವಾಗಿ ಮೂರು ನಾಲ್ಕು ದಿನ ಸುರಿದ ಮಳೆಗೆ ಕೊರಂಗಾಲ ಸೇರಿ ಅನೇಕ ಕಡೆ ಭೂಕುಸಿತಗಳಾದವು.. 2018ರಲ್ಲಿ ಭಾಗಮಂಡಲ – ತಲಕಾವೇರಿಯ ವರ್ಷಾವಾರು ಮಳೆಯ ಪ್ರಮಾಣ ಜಾಸ್ತಿಯಿದ್ದರೂ ಅದು ಬಿಟ್ಟು ಬಿಟ್ಟು ಬಾರಿಸುತ್ತಿದ್ದ ಕಾರಣ ಅಲ್ಲಿ ಭೂಕುಸಿತಗಳಾಗಲಿಲ್ಲ..

2020.. ಹೇಳಿ ಕೇಳಿ ಈ ವರ್ಷದಲ್ಲಿ ಒಳ್ಳೆಯದಕ್ಕಿಂತ ಜಾಸ್ತಿ ಕೆಟ್ಟದ್ದಾಗಿದೆ.. ಭಾಗಮಂಡಲದಲ್ಲಿ ಇಲ್ಲಿಯ ತನಕ 45-50 ಇಂಚು ಮಳೆಯಾಗಿದೆ.ಮಳೆ ಈಗಷ್ಟೆ ತನ್ನ ಆರ್ಭಟ ಶುರುಮಾಡುತ್ತಿದೆ. ದಿನಕ್ಕೆ ಸರಾಸರಿ ನಾಲ್ಕಿಂಚಿನಷ್ಟು ಮಳೆಯಾಗುತ್ತಿದೆಯಂತೆ.. ಸೇತುವೆ ಮೇಲೆ ನೀರು ಏರುವುದು ಇನ್ನೂ ಬಾಕಿಯಿದೆ..

ಅಷ್ಟರಲ್ಲಿ ತಲಕಾವೇರಿ – ಭಾಗಮಂಡಲ ರಸ್ತೆಯಲ್ಲಿ ಭೂಕುಸಿತವಾಗಿದೆ..
ಕೆಲವು ಘಟನೆಗಳು ವೈಜ್ಞಾನಿಕ ತರ್ಕಕ್ಕೆ ಸಿಗದಾಗ ನಾನು ಕಣ್ಣಿಗೆ ಕಾಣದ ಶಕ್ತಿಯನ್ನು ಪ್ರಾರ್ಥಿಸುತ್ತೇನೆ..

ಮೇಜರ್ |ಡಾ| ಕುಶ್ವಂತ್ ಕೋಳಿಬೈಲು

ಅನುಭವಿ ಮಕ್ಕಳ ತಜ್ಞರು ಹಾಗು ಬರಹಗಾರರು

error: Content is protected !!
satta king chart