ಮರಳು ಅಕ್ರಮ ಸಂಗ್ರಹ: ಯಾಂತ್ರಿಕ ದೋಣಿ ವಶ, ಜಲ್ಲಿಕಲ್ಲು ಸಾಗಿಸುತ್ತಿದ್ದ ಮೂರು ಲಾರಿಗಳ ಮುಟ್ಟುಗೋಲು
ಕೊಡಗು: ಅಕ್ರಮ ಮರಳುಗಾರಿಕೆ ಹಾಗೂ ಕಲ್ಲುಗಣಿಗಾರಿಕೆ ನಡೆಸುತ್ತಿದ್ದ ಆರೋಪದಡಿ ಮೂರು ಲಾರಿ ಹಆಗೂ ಒಂದು ಯಾಂತ್ರಿಕ ದೋಣಿಯನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಮರಳು ಹಾಗೂ ಜಲ್ಲಿ ಕಲ್ಲು ಸಹಿತ ಲಾರಿಗಳನ್ನು ಶನಿವಾರಸಂತೆ ಪೊಲೀಸರಿಗೆ ಒಪ್ಪಿಸಿದ್ದಾರೆ._
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿಯ ಹಂಪಾಪುರ ಗ್ರಾಮ ವ್ಯಾಪ್ತಿಯ ಹೇಮಾವತಿ ನದಿ ಪಾತ್ರದಲ್ಲಿ ಅನಧಿಕೃತವಾಗಿ ಯಾಂತ್ರಿಕೃತ ದೋಣಿ ಬಳಸಿ ಮರಳು ಗಣಿಗಾರಿಕೆ ಮಾಡುತ್ತಿರುವುದಾಗಿ ದೊರೆತ ಸುಳಿವಿನ ಮೇರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯವರ ಸೂಚನೆಯಂತೆ ಭೂ ವಿಜ್ಞಾನಿಗಳಾದ ಹೆಚ್.ಡಿ.ರೋಜಾ, ಲೋಯಲ್ ಮತ್ತು ಎಂ.ಎಸ್.ರಾಹುಲ್, ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.
ಈ ಸಂದರ್ಭ ಮರಳು ಸಹಿತ ಯಾಂತ್ರಿಕ ದೋಣಿಯನ್ನು ವಶಪಡಿಸಿಕೊಂಡು ಕೊಡ್ಲಿಪೇಟೆ ಪೊಲೀಸ್ ಉಪ ಠಾಣೆಗೆ ಒಪ್ಪಿಸಲಾಯಿತು.ಮತ್ತೊಂದೆಡೆ ಪರವಾನಗಿಯನ್ನು ದುರ್ಬಳಕೆ ಮಾಡಿಕೊಂಡು ಮರಳನ್ನು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಮತ್ತು ಪರವಾನಗಿ ಇಲ್ಲದೆ ಜಲ್ಲಿಕಲ್ಲು ಸಾಗಿಸುತ್ತಿದ್ದ ಒಂದ ಲಾರಿಯನ್ನು ವಶಪಡಿಸಿಕೊಂಡು ಶನಿವಾರಸಂತೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿಯವರು ತಿಳಿಸಿದ್ದಾರೆ.