ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರಾದಿವೀರ ‘ಮಂಗಲ್ ಪಾಂಡೆ’!

ಭಾರತದ ಇತಿಹಾಸದಲ್ಲಿ ದಾಖಲಾದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಿಡಿ, ಸ್ವಾಭಿಮಾನಿ ಸೈನಿಕ,ತಮಗರಿವಿಲ್ಲದೆಯೇ ಭಾರತೀಯರ ಮನದಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿ ಹುತಾತ್ಮರಾದ ಮಂಗಲ್ ಪಾಂಡೆ ಯವರ ಜನ್ಮದಿನವಿಂದು…

ಮಂಗಲ್ ಪಾಂಡೆ
ಮಂಗಲ್ ಪಾಂಡೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ, ನಾಗವ ಹಳ್ಳಿಯಲ್ಲಿ ಜುಲೈ 19 1827 ರಲ್ಲಿ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. ತಂದೆಯ ಹೆಸರು ದಿವಾಕರ್ ಪಾಂಡೆ ಇವರು ರೈತರಾಗಿದ್ದರು. ಇವರು 1830 ರಲ್ಲಿ ನಿಧಾನರಾದರು.

ಮಂಗಲ್ ಪಾಂಡೆ ತಮ್ಮ 22ನೆ ವಯಸಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಸೇವೆಗೆ ಸೇರಿದರು.

ಸಿಪಾಯಿ ಹೋರಾಟ(ದಂಗೆ):
ಅಂದಿನ ದಿನಗಳಲ್ಲಿ ಭಾರತೀಯರನ್ನು ಅಗೌರವದಿಂದ ಕಾಣುತಿದ್ದರು. ಹಣೆಗೆ ತಿಲಕವಿಡಲು ನಿಷೇದವಿತ್ತು, ಕೆಲ ದರ್ಜೆಯ ಕೆಲಸಗಳನ್ನು ಭಾರತೀಯರೇ ಮಾಡಬೇಕಾಗಿತ್ತು ಹೀಗೆ ತಮ್ಮ ನೆಲದಲ್ಲೇ ತಾವೇ ಜೀತದಾಳುಗಳಾಗಿ ಬದುಕಬೇಕಾಗಿದ್ದ ಸ್ಥಿತಿ ಭಾರತೀಯರದಾಗಿತ್ತು…

ಹೀಗಿರುವಾಗ 1857 ರಲ್ಲಿ ಸೇನೆಗೆ ಹೊಸ ಲೀ ಎನ್ ಫೀಲ್ಡ್ ಬಂದೂಕಿಗೆ ಹೊಸ ತೋಟಾಗಳನ್ನು ನೀಡಲಾಯಿತು. ಈ ತೋಟಾಗಳನ್ನು ಬಂದೂಕಿಗೆ ತುಂಬುವ ಮೊದಲು ಹಲ್ಲಿನಿಂದ ಕಚ್ಚಿ ತೆರೆಯಬೇಕಾಗಿತ್ತು. ಈ ತೋಟಾಗಳಿಗೆ ಗೋವು ಮತ್ತೂ ಹಂದಿಯ ಕೊಬ್ಬನ್ನು ಸವರಿದ್ದಾರೆಂಬ ವದಂತಿ ಎಲ್ಲೆಡೆ ಹಬ್ಬಿತು. ಇದು ಭಾರತೀಯರನ್ನು ಧಾರ್ಮಿಕವಾಗಿ ಪ್ರಚೋದನೆಗೊಳ್ಳುವಂತೆ ಮಾಡಿತು. ಏಕೆಂದರೆ ಗೋವು ಹಿಂದುಗಳಿಗೆ ಪವಿತ್ರವಾಗಿದ್ದರೆ, ಹಂದಿ ಮುಸಲ್ಮಾನರಿಗೆ ನಿಷೇದವಾಗಿತ್ತು.

ಬ್ರಿಟಿಷ್ ಮೇಲಧಿಕಾರಿಗಳು ಇದನ್ನು ಬಳಸಲು ಆದೇಶಿಸಿದಾಗ ಭಾರತೀಯ ಸೈನಿಕರು ಬಳಸಲು ನಿರಾಕರಿಸಿದರು… ಮತ್ತೆ ಮತ್ತೆ ಬ್ರಿಟಿಷರು ಬಳಸಲೇಬೇಕೆಂಬ ಪಟ್ಟು ಹಿಡಿದಾಗ 1857 ಮಾರ್ಚ್ 29 ರಂದು ಬಂಗಾಳ ಪ್ರಾಂತ್ಯದ ಬ್ಯಾರಕ್ಕ್ಪುರ ದ ಲ್ಲಿ ಮಂಗಲ್ ಪಾಂಡೆ ಎಂಬ ಸ್ವಾಭಿಮಾನಿ ಸೈನಿಕ ಬ್ರಿಟಿಷ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದರು. ಇದು ಸಿಪಾಯಿ ಹೋರಾಟಕ್ಕೆ ತಕ್ಷಣದ ಕಾರಣವಾಗಿತ್ತು…

ಇದು ಅಪರಾಧವೆಂದು ತೀರ್ಮಾನಿಸಿ, ಈಸ್ಟ್ ಇಂಡಿಯಾ ಕಂಪನಿ ಮಂಗಲ್ ಪಾಂಡೆಯವರನ್ನು ಗಲ್ಲಿಗೇರಿಸಿತು….

ಬ್ರಿಟಿಷರ ದಬ್ಬಾಳಿಕೆಯ ವಿರುದ್ಧದ ಈ ಹೋರಾಟ ಸೂಕ್ತ ಯೋಜನೆ ಇಲ್ಲದ ಕಾರಣ ಹತ್ತಿಕ್ಕಲ್ಪ್ಪಟ್ಟಿತ್ತಾದರೂ ಮುಂದಿನ ಅನೇಕ ಹೋರಾಟಗಳಿಗೆ ಸ್ಫೂರ್ತಿಯಾಯಿತು. ಸಿಪಾಯಿಗಳ ಹೋರಾಟ ವಿಫಲವಾದ ನಂತರ ಭಾರತದ ವಿದ್ಯಾವಂತರು ಎಚ್ಚೆತ್ತುಕೊಂಡರು ಮತ್ತು ಸಂಘಟಿತರಾದರು….

ಹೀಗೆ ಯಾರನ್ನೂ ಲೆಕ್ಕಿಸದೆ ತನ್ನ ಧರ್ಮಕ್ಕೆ ವಿರೋಧವೆಂಬ ಕಾರಣಕ್ಕೆ ಬ್ರಿಟಿಷರ ವಿರುದ್ಧ ಸಿಡಿದೆದ್ದು ತಮಗರಿವಿಲ್ಲದೆಯೇ ಸ್ವಾತಂತ್ರ್ಯದ ದೀವಿಗೆಗೆ ಕಿಡಿ ಹಚ್ಚಿದ ಹೋರಾಟಗಾರರಾದ ಮಂಗಲ್ ಪಾಂಡೆಯವರ ಜನ್ಮದಿನವಾದ ಇಂದು ಅವರ ಧೈರ್ಯ, ಸಾಹಸವನ್ನು ತಿಳಿದುಕೊಳ್ಳುವ ಪ್ರಯತ್ನ ಪ್ರತಿಯೊಬ್ಬ ಭಾರತೀಯನದಾಗಬೇಕಿದೆ….

✍🏻 ಪ್ರತೀಕ್ ಪರಿವಾರ ಮರಗೋಡು

error: Content is protected !!