ಪುಸ್ತಕ ಪರಿಚಯ

ನಿರುತ್ತರ

ಮನದಲಿ ಅಡಗಿರುವ ದುಃಖಗಳು ಸಾವಿರ
ಭಾವನೆಗಳೊಂದಿಗೆ ಬದುಕುವುದೇ ಅಮರ
ಕವಿತೆಗಳಿಗೆ ಜೀವ ನೀಡುವ ಸಂಗೀತ ರವರ
ಮನಮುಟ್ಟುವ ಕವನ ಸಂಕಲನ ನಿರುತ್ತರ .

ನಿರುತ್ತರ ಕವನ ಸಂಕಲನದ ಕವಿಯತ್ರಿ ಸಂಗೀತ ರವಿರಾಜ್

ಅದೆಷ್ಟೋ ಪ್ರಶ್ನೆಗಳಿಗೆ ಬದುಕಿನಲ್ಲಿ ಉತ್ತರಗಳೇ ಇರುವುದಿಲ್ಲ . ಕೆಲವು ಪ್ರಶ್ನೆಗಳಿಗೆ ಎಷ್ಟು ಉತ್ತರ ಕೊಟ್ಟರು ಸಾಕಾಗುವುದಿಲ್ಲ . ಅಂತಹ ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದೇ, ಸೋತು ಹೋಗಿರುವ ಜೀವಗಳಿಗೆ ತಮ್ಮ ಮನದಲಿ ಮೂಡಿದ ಭಾವನೆಗಳು ಕವನ ಸಂಕಲನದ ಮೂಲಕ ಎಲ್ಲರ ಮನವನ್ನು ತಲುಪುವಂತೆ ಮಾಡಿದ್ದಾರೆ ಕವಯತ್ರಿ ಸಂಗೀತ ರವಿರಾಜ್. ಇವರ ನಿರುತ್ತರ ಎಂಬ ಅತ್ಯುತ್ತಮ ಕವನ ಸಂಕಲನವನ್ನು ಡಿಸೆಂಬರ್ 24ರಂದು ಕೊಡಗಿನ ಮಡಿಕೇರಿ ತಾಲ್ಲೂಕಿನಲ್ಲಿ ಬಿಡುಗಡೆ ಮಾಡಿದರು. ಶ್ರೀಮತಿ ಸಂಗೀತಾ ರವಿರಾಜ್ ಇವರು ಚೆಂಬು ಗ್ರಾಮದ ನಿವಾಸಿ . ಇವರು ಮೂರು ಕವನ ಸಂಕಲನಗಳು. ಪ್ರಬಂಧ ಸಂಕಲನ, ಅರೆಭಾಷೆಗೆ ಅನುವಾದಿತ ಕೃತಿ ಪ್ರಕಟಗೊಂಡಿದೆ. ಕಪ್ಪು ಹುಡುಗಿ ಎಂಬ ಪ್ರಬಂಧ ಸಂಕಲನಕ್ಕೆ ಕೊಡಗಿನ ಗೌರಮ್ಮ ಪ್ರಶಸ್ತಿ ಲಭಿಸಿದೆ. ಕೃಷಿ ಕುಟುಂಬದ ಮಹಿಳೆಯಾಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ತಮ್ಮ ಭಾವನೆಗಳನ್ನು ಹಾಗೂ ಈಗಿನ ಸಮಾಜದಲ್ಲಿ ಆಗಿರುವ ಬದಲಾವಣೆಯ ಬೆಳಕನ್ನು ತಮ್ಮ ಕವಿತೆಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ಅರಿವಾಗುವಂತೆ ತಮ್ಮ ಬರಹದ ಮೂಲಕ ವರ್ಣಿಸಿದ್ದಾರೆ.


ನಿರುತ್ತರ ಎಂಬ ಕವನ ಸಂಕಲನದ ಬಗ್ಗೆ ಹೇಳುವುದಾದರೆ ಈ ಕವನ ಸಂಕಲನವನ್ನು ಎಂ. ಜಿ ಕಾವೇರಮ್ಮ ಅವರಿಗೆ ತುಂಬು ಹೃದಯದಿಂದ ಅರ್ಪಣೆ ಮಾಡಿದ್ದಾರೆ. ಕಾವೇರಮ್ಮ ರಂತಹ ಹಿರಿಯ ಹಾಗೂ ನಮ್ಮ ಹೆಮ್ಮೆಯ ಕವಿಯತ್ರಿ ಬಗ್ಗೆ ಹೇಳುವುದಾದರೆ ಪದ ಪುಂಜಗಳು ಸಾಕಾಗುವುದಿಲ್ಲ. ಕಾವೇರಮ್ಮನ ಕಥೆ, ಕವನ, ಬರಹಗಳು ಯುವ ಜನತೆಗೆ ಪ್ರೇರಿತವಾಗಿದೆ. ಅಂತಹ ಹೆಮ್ಮೆಯ ಹಿರಿಯ ಕವಯತ್ರಿಗೆ ಇಂತಹ ಒಳ್ಳೆಯ ಕವನ ಸಂಕಲನವನ್ನು ಅರ್ಪಣೆ ಮಾಡಿದ್ದಾರೆ ಕವಯತ್ರಿ ಸಂಗೀತ ರವಿರಾಜ್ ಇವರು. ಅ. ನಾ ಪೂರ್ಣಿಮ ಮಂಗಳೂರು ಇವರು ನಿರುತ್ತರ ಕವನ ಸಂಕಲನದ ಒಳಗೆ ತಲೆ ಎತ್ತಿ ನಿಂತಿರುವ ಕವನಗಳ ಬಗ್ಗೆ ತಮ್ಮ ಭಾವನೆಗಳ ಮೂಲಕ , ಮುಗ್ಧ, ಮುಕ್ತ , ಅಭಿವ್ಯಕ್ತಿಯ ಕವಿತೆಗಳು ಎಂದು ಕವನಗಳ ಬಗ್ಗೆ ತುಂಬಾ ಸುಂದರವಾಗಿ ವಿಮರ್ಶಿಸಿದ್ದಾರೆ. ಕವಿತೆಗಳಿಗೆ ಜೀವವನ್ನು ತುಂಬಿದ ಸಂಗೀತ ರವಿರಾಜ್ ಅವರು ಮನಸಾರೆ ತಮ್ಮ ಮಾತುಗಳನ್ನು ಹೇಳುತ್ತಾ “ಸುಂದರ ಸರಳ ಕವಿತೆ ನೇಯುವುದು ನನಗಿನ್ನೂ ಸಂಪೂರ್ಣವಾಗಿ ಒಲಿದಿಲ್ಲವೆಂದು” ಮನದ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕವಿತೆಗಳು ಎಂತಹ ಮನುಷ್ಯನ ಜೀವನವನ್ನು ಬದಲಿಸುವ ಶಕ್ತಿ ಹೊಂದಿವೆ ಮತ್ತು ಕವನ ಎಂಬುದು ಕೇವಲ ಸಾಲುಗಳು ಮಾತ್ರವಲ್ಲ ಅದೊಂದು ಜೀವದ ಸ್ವರೂಪ ಎಂಬುದನ್ನು ಕವಯತ್ರಿ ತಿಳಿಸಿಕೊಟ್ಟಿದ್ದಾರೆ.

ಒಂದು ಪುಸ್ತಕ ಎಂದ ಮೇಲೆ ಆ ಪುಸ್ತಕದ ಕರ್ತೃ ಮುಖ್ಯ ಹಾಗೂ ಕರ್ತೃವಿನ ಪರಿಚಯ ಕೂಡ ಅಷ್ಟೇ ಮುಖ್ಯ . ನಿರುತ್ತರ ಪುಸ್ತಕದ ಕವಿಯತ್ರಿಯ ಬಗ್ಗೆ ತಮ್ಮ ಮನಸಾರೆ ಪ್ರೀತಿಯಿಂದ ತಮ್ಮ ಸುಂದರವಾದ ಸಾಲುಗಳಲ್ಲಿ ತಿಳಿಸುತ್ತಾ ಕವಿಯ ಕನಸಿಗೂ ಹಾಗೂ ಕವಿತೆಗಳಿಗೆ ಸೇತುವೆ ಕೊಟ್ಟಿರುವುದರ ಬಗ್ಗೆ ತುಂಬಾ ಸೊಗಸಾಗಿ ತಿಳಿಸಿದ್ದಾರೆ ಅಡುಗೆ ಮನೆ ಕವಿಯತ್ರಿ ಎಂದು ಪ್ರಸಿದ್ಧಿ ಆಗಿರುವ ಸ್ಮಿತಾ ಅಮೃತ್ ರಾಜ್ ಸಂಪಾಜೆ ಇವರು.
ಇನ್ನು ನಿರುತ್ತರದ ಕವನಗಳ ಬಗ್ಗೆ ಹೇಳುವುದಾದರೆ ಸುಮಾರು 50 ಕವನಗಳನ್ನು ಹೊಂದಿರುವ ಈ ಕವನ ಸಂಕಲನದಲ್ಲಿನ ಕವನಗಳು ಎಲ್ಲರ ಮನಸೆಳೆಯುತ್ತಿದೆ .

ಹುಳಿಮಜ್ಜಿಗೆ ಬೆರೆಸಿದ ಬದನೆಗೊಜ್ಜು ಎನ್ನುತ್ತಾ , ಜೀವನದ ಆಗು- ಹೋಗುಗಳನ್ನು ನೇಪಥ್ಯ ಎಂಬ ಶೀರ್ಷಿಕೆಯ ಮೂಲಕ ತಿಳಿಸಿದ್ದಾರೆ. ದೂರದರ್ಶನದಲ್ಲಿ ಬರುವ ಧಾರಾವಾಹಿಗೆ ಮಹಿಳೆಯರು ಹೇಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದರ ಪ್ರತಿರೂಪವು ಅನಾವರಣ ಎಂಬ ಕವನ . ಬದುಕಿನಲ್ಲಿ ಕಷ್ಟಗಳು ಬರುವುದು ಸಹಜ , ಕಷ್ಟಗಳು ಎದುರಿಸಿ ಮುನ್ನಡೆಯುವುದು ನಿಜವಾದ ಜೀವನ ಎಂಬುದನ್ನು ಜೇಡನ ಉದಾಹರಣೆಯಾಗಿ ತೆಗೆದುಕೊಂಡು ಜೇಡ ತಾನು ಬಲೆಯನ್ನು ಕಟ್ಟುವಾಗ ಅನೇಕ ಬಾರಿ ಕೆಳಗೆ ಬೀಳುತ್ತದೆ. ಆದರೆ ತನ್ನಿಂದ ಆಗುವುದಿಲ್ಲ ಎಂದು ಓಡಿ ಹೋಗುವುದಿಲ್ಲ. ಹಾಗೆಯೇ ಮನುಜನು ಕಷ್ಟಗಳನ್ನು ಎದುರಿಸಿ ಸಾಧನೆ ಮಾಡಬೇಕು ಎಂಬುದನ್ನು ಜೇಡನ ಸ್ವಾಗತ ಎಂಬ ಕವನದ ಸಾಲುಗಳ ಮೂಲಕ ತಿಳಿಸಿದ್ದಾರೆ.
ಭಾವ ಚಿತ್ರ ಎಂಬ ಕವನ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಕವಯತ್ರಿ ಕಿಟಿಕಿಯಿಂದ ಜಿಗಿಯಬಹುದೇ ಎಂಬ ಕವನದಲ್ಲಿ ಬಸ್ಸಿನ ಕಿಟಕಿ ಪಕ್ಕ ಕುಳಿತುಕೊಂಡರೆ ಆಗುವ ಅನುಭವಗಳನ್ನು ಕವಿತೆಗಳ ಮೂಲಕ ಪ್ರತಿಯೊಬ್ಬರ ಮನ ಮುಟ್ಟುವಂತೆ ವರ್ಣನೆ ಮಾಡಿದ್ದಾರೆ.
ಬೆರಗುಗೊಳಿಸಿದ ಕಾಲದಲ್ಲಿ ಎಂಬ ಕವನದ ಮೂಲಕ ನಮ್ಮನ್ನೇ ಬೆರಗುಗೊಳಿಸಿದ್ದಾರೆ. ಆಶಾವಾದವಿದು ವರ್ಷಧಾರೆ ಕವಿತೆಯು ಹಾಗೂ ಮಳೆಯ ಬಗ್ಗೆ ಬರೆದಿರುವ ಮುಗ್ಧ ಮಳೆಯ ಕವನ ಮತ್ತು ಮಳೆ ಮನಸು , ಮೃತ್ತಿಕೆ ಎಂಬ ಕವನ ಉತ್ತಮವಾದ ಕವನಗಳು .
ಮಳೆ ಹುಡುಗಿ , ಯಾರಿಗೆ ಯಾರು ಆಸರೆ , ಬಡತನದ ಬಗ್ಗೆ ತಿಳಿಸುವ ನಿರ್ಗತಿಕರು ಕವನ , ರಾತ್ರಿಯಲ್ಲಿ ನಡೆಯುವ ಕೆಲವೊಂದು ವಿಸ್ಮಯಗಳ ಬಗ್ಗೆ ತಿಳಿಸುವ ರಾತ್ರಿಯ ಸತ್ಯಗಳು , ನಾಳೆಗಳ ದಿನದ ಬಗ್ಗೆ ತಿಳಿಸುವ ನಾಳೆಗಳ ಹೊಸ್ತಿಲಲ್ಲಿ ಎಂಬ ಕವನ , ಮತ್ತು ಮುಖಸ್ತುತಿ , ವೈಶಾಖ , ಬಡವಿಯ ಸ್ವಗತ ಈ ಕವನಗಳು ಜೀವನದ ಪಾಠಗಳನ್ನು ತಿಳಿಸುವ ಕವನಗಳಾಗಿವೆ . ಈ ಕವಿತೆಗಳನ್ನು ಓದಿದ ಪ್ರತಿಯೊಬ್ಬ ಮನುಜನು ಕವನದ ಅರ್ಥ ಹಾಗೂ ಸಾಲುಗಳನ್ನು ಇಷ್ಟ ಪಡದೆ ಇರುವುದಿಲ್ಲ. ದೀಪಾವಳಿ ಎಂಬ ಕವನದಲ್ಲಿ ದೀಪಾವಳಿ ಹಬ್ಬದಲ್ಲಿ ಮನೆಯಲ್ಲಿರುವ ಸಡಗರದ ಬಗ್ಗೆ ಕವಯತ್ರಿ ದೀಪಾವಳಿಯ ದಿನವನ್ನು ದಿನನಿತ್ಯ ನೆನಪಿಸುವಂತೆ ಮಾಡಿದ್ದಾರೆ. ಸರಳ ರೇಖೆ, ಎಂಬ ಕವನದ ಮೊದಲನೇ ಸಾಲುಗಳು ನೋವುಗಳ ಬಗ್ಗೆ ಅರ್ಥವನ್ನು ನೀಡುತ್ತದೆ ಹಾಗೂ ಕನ್ನಡಿಯನ್ನು ಕಾಲಕ್ಕೆ ಹೋಲಿಕೆ ಮಾಡಿ ಕನ್ನಡಿಯಲ್ಲಿ ಕಂಡಿದ್ದು ಕಾಲ ಎಂದು ಜೀವನದ ಮಹತ್ವವನ್ನು ತಿಳಿಸಿ ಕೊಟ್ಟಿದ್ದಾರೆ . ಇನ್ನು ಅನೇಕ ಸುಂದರವಾದ ಕವನಗಳೆಂದರೆ ನದಿಯ ಗೀತಾ ಆಗಿರಬಹುದು , ನಿರುತ್ತರ , ನೆಲ ಮುಗಿಲ ಸಂತೆ, ನಾಚಿಕೆ ಮುಳ್ಳು, ಬುದ್ದನ ಕೊನೆಯ ಊಟ, ಪಾರಿಜಾತ, ಬೆಳದಿಂಗಳ ಬೆಳಕಿಗೇ, ಧಾರೆ ಸುರಿ ಸುರಿದು, ಉರಿಯುವ ಬದಲು ಬೆಳಗಬೇಕು, ಬದುಕೆಂದ ಮೇಲೆ, ಒಂದು ನಿವೇದನೆ, ಮಣ್ಣಿನಂಗಳದ ಮಗು, ಅವಳ ಕನಸುಗಳು ಮಳೆಯಾಗಿ , ಆಸ್ಪತ್ರೆ, ಕಂದ ಹೇಳಿದ್ದು, ಸಾವು ಮತ್ತು ಪ್ರೀತಿ, ವ್ಯತ್ಯಾಸ, ಅಮೂರ್ತ, ಪ್ರೀತಿ ನೇಯುವ ಗೂಡು, ಶಹರದ ಗರ್ಭದೊಳಗೆ, ಆರದಿರಲಿ ಬೆಳಕು, ರೂಪಾಂತರ, ಕಂಡರಿಯದ ಕಾಲ , ಬದುಕಿನಡುಗೆ ಮನೆಗೆ , ಮಣ್ಣಾಗಿ ಹೋಗದಿರು ಕಾಯವೇ , ಈಗಿನ ಜನರನ್ನು ಸೆಳೆಯುತ್ತಿರುವ ಮೊಬೈಲ್ ಬಗ್ಗೆ ಹೇಳಿರುವ ಮಾಯಾವಿ ಮೊಬೈಲ್, ನನ್ನೊಳಗಿನ ಕವಿತೆ, ಲಾಕ್ ಡೌನ್ ಮನಸಿಗಲ್ಲ ಎಂಬ ಕವನ ತುಂಬಾ ಅರ್ಥಪೂರ್ಣವಾಗಿದೆ, ಅಪರಾಜಿತೆ, ಮತ್ತು ಕೊನೆಯ ಕವನ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂಬ ಕವನ . ಎಲ್ಲಾವು ಒಂದಕ್ಕಿಂತ ಒಂದು ಸೊಗಸಾದ ಕವನಗಳಾಗಿವೆ . ಇಂತಹ ಒಳ್ಳೆಯ ಕವನ ಸಂಕಲನವನ್ನು ಎಲ್ಲರೂ ಓದಿ ಉತ್ತಮವಾದ ವಿಷಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು . ಕವನ ಎಂಬುದು ಬರೀ ಸಾಲುಗಳು ಮಾತ್ರವಲ್ಲ ಎಂಬುದನ್ನು ನಾನು ಮತ್ತೊಮ್ಮೆ ಹೇಳುವೆ.

ಕವನವು ಮನುಷ್ಯನ ಜೀವನವನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ನಿರುತ್ತರ ಎಂಬ ಕವನ ಸಂಕಲನದ ಮೂಲಕ ತಿಳಿಯಬಹುದಾಗಿದೆ. ನೀವೆಲ್ಲರು ಈ ಕವನ ಸಂಕಲನವನ್ನು ಓದಿ ಕವಯತ್ರಿ ಸಂಗೀತ ರವಿರಾಜ್ ಅವರನ್ನು ಈ ಮೂಲಕ ಹಾರೈಸಬೇಕೆಂಬದು ನನ್ನ ಆಶಯ.

ಬರಹ      
ಕುಸುಮಾಕರ ಅಂಬೆಕಲ್ಲು
ಮಡಿಕೇರಿ ತಾಲ್ಲೂಕು
ಕೊಡಗು ಜಿಲ್ಲೆ
ಚೆಂಬು ಗ್ರಾಮ

error: Content is protected !!
satta king chart