ದೇಶಕ್ಕಾಗಿ ಯುದ್ಧದಲ್ಲಿ ಹೋರಾಡಿದ ಧೀರ ಧೀಮಂತ ಯೋಧ! : ಹವಲ್ದಾರ್ ಮಲ್ಚೀರ ಕಾಳಪ್ಪ ಅಚ್ಚಯ್ಯ
ರಾಷ್ಟ್ರ ರಕ್ಷಕರು EPISODE-10
ದೇಶಕ್ಕೆ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುವಿನೊಂದಿಗೆ ಸೆಣೆಸಿದ ಧೀರ ಯೋಧ. ಶತ್ರು ಪಡೆಯನ್ನು ಎದುರಿಸಿ ಏಟಿಗೆ ಎದುರೇಟು ನೀಡಿದ್ದ ವೀರ ಸೈನಿಕ. ದೇಶ ನನಗೇನು ಮಾಡಿದೆ? ಎಂದು ಯೋಚಿಸದೆ ದೇಶಕ್ಕಾಗಿ ನಾನೇನು ಮಾಡಿರುವೆ? ಎಂಬ ಪ್ರಶ್ನೆ ಹಾಕಿಕೊಂಡು ದೇಶ ಸೇವೆಗೆ ಜೀವನ ಮುಡಿಪಾಗಿಟ್ಟ ಮುಂದಾಳು ಸಿಪಾಯಿ ಹವಲ್ದಾರ್ ಮಲ್ಚೀರ ಕಾಳಪ್ಪ ಅಚ್ಚಯ್ಯ!
1962ಕ್ಕೆ ಸೇನೆಗೆಂದು 18ನೇ ಹರೆಯದಲ್ಲಿ ದೇಶ ಸೇವೆ ಮಾಡಲು ಸೇರಿಯೇ ಬಿಟ್ಟರು ಭಾರತೀಯ ಸೇನೆಯನ್ನು. ಅಣ್ಣ ಸೇನೆಯಲ್ಲಿದ್ದರು. ಇವರಿಗೂ ಸೇನೆಗೆ ಸೇರುವ ಅಪರಿಮಿತ ಹುಮ್ಮಸ್ಸು, ಉತ್ಸಾಹವಿತ್ತು.
3ನೇ ವಯಸ್ಸಿಗೆ ತಾಯಿ ಗಂಗಮ್ಮ ಅನಾರೋಗ್ಯದಿಂದ ವಿಧಿವಶರಾದರು. ನಂತರ ತಂದೆ ಕಾಳಪ್ಪ ಅವರು ತಮ್ಮ 8 ಮಕ್ಕಳನ್ನು ಸಾಕಲು ಸಾಕಷ್ಟು ಹೆಣಗಬೇಕಾಯಿತು. ಹಾಗಾಗಿ ನಾದಿನಿಯನ್ನು ಮದುವೆಯಾದರು. ಅವರು ಕೂಡ ಮಕ್ಕಳನ್ನು ತಮ್ಮದೇ ಮಕ್ಕಳಂತೆ ಸಾಕಿದರು. ತುಂಬಿದ ಕುಟುಂಬದಲ್ಲಿ ಹುಟ್ಟಿದ್ದ ಅಚ್ಚಯ್ಯ ಅವರು ದುಡಿಯಲು ಹಾಗು ಸೇವೆ ಸಲ್ಲಿಸಲು ಭಾರತೀಯ ಸೇನೆಗೆ ಸೇರುವ ಇರಾದೆ ವ್ಯಕ್ತ ಪಡಿಸಿದರು. 18 ವರ್ಷಕ್ಕೇ ಸೇನೆಗೆ ಸೇರಿ, ದೇಶಕ್ಕಾಗಿ ಪ್ರಾಣವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸಲು ಮುಂದಾದರು.
ಸೇನೆಗೆ ಸೇರಿ ತರಬೇತಿ ನಂತರ ಪಂಜಾಬ್, ಕಾಶ್ಮೀರದ ವಿವಿಧೆಡೆ ಸೇವೆ ಸಲ್ಲಿಸಿದರು. ಮುಖ್ಯವಾಗಿ ಕಪೂರ್ ತಲಾ, ಪಟಿಯಾಲಾ, ಜಲಂಧರ್, ಅಮೃತಸರ್ ನಲ್ಲಿ ಎಲ್ಲಾ ಸೇವೆ ಸಲ್ಲಿಸಿದರು.
ಅದು 1962ರ ಇಸವಿ ಇಂಡೋ-ಚೀನಾ ಯುದ್ಧ ಆರಂಭವಾಗಿತ್ತು. ಇತ್ತ ಪಾಕಿಸ್ತಾನ ಕೂಡ ಗಡಿ ತಕರಾರು ಶುರುವಿಟ್ಟಿತ್ತು. ಹಾಗಾಗಿ ಅದನ್ನು ಎದುರಿಸಲು ಜಮ್ಮು ಕಾಶ್ಮೀರದ ಸಾಂಬಾ ಪ್ರದೇಶದಲ್ಲಿ ಅಚ್ಚಯ್ಯ ಅವರೂ ಇದ್ದ ಸೇನಾ ತಂಡ ತ್ವರಿತವಾಗಿ ಹೋಯಿತು. ಭಾರತೀಯ ಸೇನೆಗೆ ಫೈರ್ ಆರ್ಡರ್ ನೀಡಲೇ ಇಲ್ಲ.
ಅದು ಆಗ ಪಾಕಿಸ್ತಾನ ಭಾರತದೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಿದ್ದ ಸಮಯ. ಅಚ್ಚಯ್ಯ ಅವರು ಹವಲ್ದಾರ್ ಆಗಿ Armed Coreನಲ್ಲಿ ಸೇವೆ ಸಲ್ಲಿಸುತ್ತಿದ್ದರು. Centurian tank ಎಂಬ ಮಿಲಿಟರಿ ಘನ ಗಾತ್ರ ಟ್ಯಾಂಕರನ್ನು ನಿಯಂತ್ರಿಸುವ ನಾಲ್ಕು ಜನರ ಪಡೆಯಲ್ಲಿ ಇವರೂ ಒಬ್ಬರಾಗಿದ್ದರು.
1965ರಲ್ಲಿ ಭಾರತದ ಪ್ರಧಾನ ಮಂತ್ರಿ ಪಟ್ಟಕ್ಕೆ ಏರಿದರು ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು. ಆಗ ಭಾರತೀಯ ಸೇನೆಯ ಜನರಲ್ ಜೆ.ಎನ್ ಚೌಧರಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿಂದೀಚೆಗೆ ರಕ್ಷಣಾ ನೀತಿ ಖಡಕ್ ಆಯಿತು ಎಂದು ನಿಟ್ಟುಸಿರು ಬಿಟ್ಟರು.
Centurian tank ನಿರ್ವಾಹಕರಾಗಿ ಸುಬೇದಾರ್ ಅಚ್ಚಯ್ಯ ಅವರು…
ಇಂಡೋ-ಪಾಕ್ ನಡುವಣ ಯುದ್ಧ 1965ರಿಂದ ಶುರುವಾಗಿ ಬಿಟ್ಟಿತ್ತು. ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರು ದೇಶದ ಖಡಕ್ ರಕ್ಷಣಾ ನೀತಿಯನ್ನು ಜಗತ್ತಿಗೆ ತೋರಿಸಲು ಮುಂದಾಗಿದ್ದರು. ಅದಕ್ಕೆ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಕೂಗಿ ರೈತರು ಹಾಗು ಸೈನಿಕರನ್ನು ಎಚ್ಚರಿಸುವ ಹಾಗು ಜಾಗೃತಗೊಳಿಸುವ ಕೆಲಸ ಮಾಡಿದ್ದರು.
ಪಾಕಿಸ್ತಾನದ ಸೇನಾ ಬಲ ದುರ್ಬಲವಾಗಿದ್ದರೂ, ಅಮೇರಿಕಾ ಅದರ ಬೆನ್ನ ಹಿಂದೆ ನಿಂತು ‘ಛೂ’ ಬಿಡುವ ಕುಮಕ್ಕು ನೀಡುತ್ತಿತ್ತು. ಚೀನಾದ ಯುದ್ಧ ಜೋರಾಗಿ ನಡೆಯುತ್ತಿತ್ತು. ಆ ಯುದ್ಧದಲ್ಲಿ ಭಾರತ Centurion tankಅನ್ನು ಪಾಕಿಸ್ತಾನ ಬಳಸುತ್ತಿದ್ದ ಅಮೇರಿಕಾ ಕೊಟ್ಟ M47 ಹಾಗು M48 ಪಾಟನ್ ಟ್ಯಾಂಕುಗಳ ವಿರುದ್ಧ ಸೆಣೆಸಲು ಬಳಸಿತು.
Centurion tank ಒಂದು ಒಟ್ಟು 51 ಟನ್ನಿನಷ್ಟು ತೂಕವಿರುತ್ತದೆ. ಅದರ ನಿಯಂತ್ರಣಕ್ಕಾಗಿ ಕಮಾಂಡರ್, ಗನ್ನರ್, ಲೋಡರ್ ಹಾಗು ಡ್ರೈವರ್ ಇರುತ್ತಾರೆ. ಆ ಸಿಬ್ಬಂದಿಗಳ ಪೈಕಿ ಒಬ್ಬರಾಗಿದ್ದರು ಸುಬೇದಾರ್ ಎಂ.ಕೆ ಅಚ್ಚಯ್ಯ.
ಭಾರತೀಯ ಸೇನೆಯು 1946ರಲ್ಲಿ Centurion tankಅನ್ನು ಬಳಸಲು ಆರಂಭಿಸಿತ್ತು. ಇಂಗ್ಲೆಂಡ್ made ಆಗಿರುವ ಈ ಬಾರೀ ಗಾತ್ರದ ಸೇನಾ ಟ್ಯಾಂಕರ್ ಈಗಲೂ ಭಾರತೀಯ ಸೇನೆಯ ಬಳಕೆಯಲ್ಲಿದೆ. ಅಮೇರಿಕನ್ made M4 ಹಾಗು M48 ಪಾಟನ್ ಟ್ಯಾಂಕುಗಳ ವಿರುದ್ಧ Centurion tankಗಳು ಸಮರ್ಥವಾಗಿದ್ದವು.
ಕೊಡಗಿನ ತಂಡವೇ ಅಲ್ಲಿ ಇತ್ತು!
ಪಂಚ ನದಿಗಳು ಹರಿಯುವ ರಾಜ್ಯ ಎಂಬುದಕ್ಕೆ ಪಂಜಾಬ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಪಂಜಾಬ್ ಅಲ್ಲಿ ಕೊಡಗಿನ ಸುಮಾರು 30 ಮಂದಿ ಯೋಧರು ಕರ್ತವ್ಯದಲ್ಲಿ ಇದ್ದರು. ಆ ಪೈಕಿ 4 ಕೊಡಗು ಮೂಲದ ಹಿರಿಯ ಸಹೋದ್ಯೋಗಿ ಯೋಧರಾದ ಪೊನ್ನಪ್ಪ, ಕಾವೇರಪ್ಪ, ಐಯ್ಯಣ್ಣ ಹಾಗು ಕಾರ್ಯಪ್ಪ ಎಂಬುವವರು ಕಣ್ಣೆದುರಿಗೇ ಪಾಕಿಸ್ತಾನದ ಸೈನಿಕರ ವಿರುದ್ಧ ಸೆಣೆಸುವಾಗ ಅಮರರಾದರು.
ಆ ಪಾಕಿಸ್ತಾನದ ದುಷ್ಕೃತ್ಯವನ್ನು ಸಹಿಸದೆ ಅದರ ಕೆಲವು ಭೂ ಭಾಗವನ್ನು ಭಾರತೀಯ ಸೇನೆ ವಶಪಡಿಸಿಕೊಂಡು, 8 ಮಂದಿ ಪಾಕಿಸ್ತಾನಿ ಸೈನಿಕರನ್ನು ಬಂಧಿಸಿತ್ತು. ಲಾಹೋರಿಗೆ ತಲುಪಲು ಭಾರತೀಯ ಸೇನೆಗೆ ಕೇವಲ 6 ಕಿಲೋಮೀಟರ್ ಅಷ್ಟೇ ಬಾಕಿ ಇತ್ತು ಎನುವಾಗ ಕದನ ವಿರಾಮ ಘೋಷಣೆಯಾಯಿತು. ಆಗ ಪ್ರಧಾನಿಗಳಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಭದ್ರತೆಯೊಂದಿಗೆ ಅಲ್ಲಿಗೆ ಬಂದು ಭಾರತೀಯ ಸೈನಿಕರ ತಾಕತ್ತನ್ನು ಪ್ರಶಂಶಿಸಿ ಕೊಂಡಾಡಿದರು. ಆಗ ಎದುರು ಬದುರಾಗಿ ನಿಂತು ಶಾಸ್ತ್ರಿ ಜಿ ಅವರು ಸುಬೇದಾರ್ ಅಚ್ಚಯ್ಯ ಅವರ ಬೆನ್ನು ತಟ್ಟಿ, ಕೈ ಕುಲಕಿ ಶಹಬಾಶ್ ಗಿರಿ ನೀಡಿದ್ದರಂತೆ.
ಅದಾದ ವರ್ಷದಲ್ಲೇ ಟಾಷ್ಕೆಂಟ್ ಒಪ್ಪಂದಕ್ಕೆ ರಷ್ಯಾಗೆ ಹೋದ ಅವರು ಅನುಮಾನಾಸ್ಪದವಾಗಿ ಮೃತಪಟ್ಟರು. ಬೇಸರದ ಸಂಗತಿ ಹಾಗು ಭಾರತಕ್ಕೆ ಆದ ನಷ್ಟ ಅದು ಎಂದು ಹೇಳಿ ತಮ್ಮ ಅಂಗಡಿಯಲ್ಲಿ ಹಾಕಿದ್ದ ಶಾಸ್ತ್ರಿ ಅವರ ಪೊಟೋನತ್ತ ಒಮ್ಮೆ ನೋಟ ಬೀರಿದರು.
ಚಟಗಳಿಂದ ಬಹು ದೂರ ಈ ಶಿಸ್ತಿನ ಸಿಪಾಯಿ!
ಹವಲ್ದಾರ್ ಎಂ.ಕೆ ಅಚ್ಚಯ್ಯ ಅವರ ಸೇನಾ ಸೇವೆಯ ಅವಧಿಯಲ್ಲಿ ಪಂಜಾಬ್, ಜಮ್ಮು ಕಾಶ್ಮೀರದ ವಿವಿಧ ತಾಣಗಳಲ್ಲಿ ಕೆಲಸ ಮಾಡಬೇಕಾಗಿ ಬಂತು. ಹಾಗಾಗಿ ಚಳಿಯಿಂದ ಕಾಪಾಡಿಕೊಳ್ಳುವ ಸಲುವಾಗಿ ಸೈನಿಕರಿಗೆಲ್ಲಾ ವಾರಕ್ಕೆ 7 ಪ್ಯಾಕ್ ಸಿಗರೇಟ್, ಆಹಾರದೊಂದಿಗೆ ಪೆಗ್ ಅಳತೆಯಷ್ಟು ಮದ್ಯಪಾನವನ್ನು ನೀಡುತ್ತಿದ್ದರು. ಆದರೆ ಅಚ್ಚಯ್ಯ ಅವರು ಯಾವತ್ತಿಗೂ ಸಿಗರೇಟನ್ನು ತುಟಿಗಳ ನಡುವೆ ಇಟ್ಟು ಭೂದಿ ಮಾಡಿದವರಲ್ಲ.
ಮದ್ಯಪಾನದ ಗುಟುಕನ್ನು ಗಂಟಲ ಒಳಗೆ ಇಳಿಸಿದವರೇ ಅಲ್ಲ. ಸದಾ ಅವುಗಳಿಂದ ದೂರವಿದ್ದರು. ಅದನ್ನು ಊರಿಗೆ ಬಂದಾಗ ತಂದೆಗೆಂದು ತಂದು ಕೊಡುತ್ತಿದ್ದರು. ಇಂದಿಗೂ ಅವರು ತಮಾಷೆಗೂ ಅವುಗಳನ್ನು ಅವರು ಮುಟ್ಟುವುದಿಲ್ಲ.
ಅಂಗಡಿ ವ್ಯಾಪಾರದಲ್ಲಿ ಇರುವ ಅವರ ಬಳಿ ಸಿಗರೇಟ್, ಗುಟ್ಕ, ತಂಬಾಕು ಹುಡುಗರು ಖರೀದಿಸುವಾಗ ಆರೋಗ್ಯ ಹಾಳು ಮಾಡಿಕೊಳ್ಳುತ್ತಾರಲ್ಲಾ ಎಂದು ಒಳಗೇ ಕೊರಗುತ್ತಾರೆ. ಮತ್ತು ದೇಶದ ಮಾನವ ಸಂಪನ್ಮೂಲ ಹಾಗು ನೈಜ್ಯ ಸಂಪತ್ತಾದ ಯುವ ಜನರು ಚಟಗಳಿಂದ ಯಾವಾಗಲೂ ದೂರವಿರಬೇಕು ಎಂಬ ಸಂದೇಶ ರವಾನಿಸಿದರು.
ಆ ರೋಚಕ ಕಾದಾಟ!
1971ರಲ್ಲಿ ಪಾಕಿಸ್ತಾನ-ಭಾರತ ನಡುವಣ ಮತ್ತೆ ಯುದ್ಧವಾಗಿ ಪೂರ್ವ ಪಾಕಿಸ್ತಾನವನ್ನು ಭಾರತ ಸ್ವಾತಂತ್ರ್ಯ ದೇಶವನ್ನಾಗಿ ಮಾಡಲು ಯಶಸ್ವಿಯಾಯಿತು. ಆ ಯುದ್ಧದಲ್ಲಿ ಪಾಕಿಸ್ತಾನ ಸೋತು ಸುಣ್ಣಾಗಿ ಶರತ್ತು ರಹಿತ ಸಂಪೂರ್ಣ ಶರಣಾಗತಿಯನ್ನು ಹೊಂದಿತು.
ಒಟ್ಟು 93,000 ಪಾಕಿಸ್ತಾನದ ಸೇನಾ ಸದಸ್ಯರು ಶರಣಾಗತಿ ಘೋಷಿಸಿ, ಬಾರಿ ಮುಖಭಂಗ ಅನುಭವಿಸಿದರು. 16 ಡಿಸೆಂಬರ್ 1971ರಲ್ಲಿ ಡಾಖಾದಲ್ಲಿ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ನಿರ್ಮಾಣದ ನಿರ್ಣಯವಾಯಿತು. ಆದ ನಂತರವೂ ಸುಮ್ಮನಿರದೆ ಪಾಕಿಸ್ತಾನ ಒಳಗೊಳಗೇ ಹಲ್ಲು ಮಸೆಯುವ ಜಾಯಮಾನ ಮುಂದುವರೆಸಿತ್ತು.
1974ರಲ್ಲಿ ಮತ್ತೆ ಗಡಿಯಲ್ಲಿ ತೀಟೆ ಬುದ್ಧಿ ಮುಂದುವರೆಸಿತು ಅದು. ಭಾರತ ಅದಕ್ಕೆ ತಕ್ಕ ಉತ್ತರ ನೀಡುತ್ತಲೂ ಇತ್ತು ಕೂಡ. ಆಗ Centurian Tank ಮೂಲಕ ಹೋರಾಡಲು ಮುಂದಾಗಿತ್ತು ಭಾರತೀಯ ಸೇನೆ ಆ ಪ್ರದೇಶದಲ್ಲಿ. ಅಚಾನಕ್ ಬೆಳವಣಿಗೆ ಎಂಬಂತೆ ಪಾಕಿನ ವಾಯುಪಡೆ ಅವುಗಳ ಮೇಲೆ ವೈಮಾನಿಕ ದಾಳಿ ಮಾಡಿತು.
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡರು ಸುಬೇದಾರ್ ಎಂ.ಕೆ ಅಚ್ಚಯ್ಯ ಹಾಗು ಅವರ ತಂಡದ ಸದಸ್ಯರುಗಳು.
ಹಾಗೆ ಗಾಯಗೊಂಡ ಸುಬೇದಾರ್ ಅಚ್ಚಯ್ಯ ಅವರಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 4 ದಿನಗಳ ಕಾಲ ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದರು. ಎಡ ಕಾಲಿಗೆ ಬಲವಾದ ಏಟಾಯಿತು. ನಂತರ ಅವರ 31ನೇ ವಯೋಮಾನಕ್ಕೆ ವೈದ್ಯಕೀಯ ಕಾರಣಕದ ಆಧಾರದಲ್ಲಿ ನಿವೃತ್ತಿ ಹೊಂದಬೇಕಾಯಿತು.
ವ್ಯಾಪಾರದಲ್ಲಿ ಈಗ ನಿರತರಾಗಿದ್ದಾರೆ…
ಸೇನೆಯಿಂದ ಬಂದು ಕೊಡಗಿನಲ್ಲಿ ಐ.ಟಿ.ಸಿ ಕಂಪೆನಿಯ ಸಹಕಾರದಲ್ಲಿ ಒಂದು ಅಂಗಡಿ ಶುರು ಮಾಡಿದ ಸುಬೇದಾರರು ಅದಕ್ಕೆ ‘ಜೈ ಜವಾನ್ ಸ್ಟೋರ್’ ಎಂಬ ಹೆಸರಿಟ್ಟರು. ಅದರ ಪ್ರವೇಶದ ಸಮಾರಂಭಕ್ಕೆ ಕೊಡಗಿನ ಹೆಮ್ಮಯಾದ ಫೀಲ್ಡ್ ಮಾರ್ಷಲ್ ಕೆ. ಎಂ ಕಾರ್ಯಪ್ಪ ಅವರನ್ನು ಕರೆಸಿದ್ದರು. ಅವರು ತಮ್ಮ ಅಮೃತ ಹಸ್ತದಿಂದ ಅಂಗಡಿಯ Ribbon cut ಮಾಡಿ, ಆಯೋಜಿಸಿದ್ದ ಸಮಾರಂಭದಲ್ಲಿ ಭಾಷಣವನ್ನೂ ಮಾಡಿದ್ದರು. ಹಾಗೆ ಅಂಗಡಿ ಶುರುವಾದ ನಂತರ ಪಾರ್ವತಿ ಎಂಬುವವರನ್ನು ವಿವಾಹವಾದರು.
ಈಗ ಅಂಗಡಿ ವ್ಯಾಪಾರ ಮಾಡಿಕೊಂಡು ಪೆನ್ಷನ್ ಲೈನ್ ಅಲ್ಲಿ ನಿವೃತ್ತ ಜೀವನವನ್ನು ತಮ್ಮ ಸ್ವಂತ ಮನೆಯಲ್ಲಿ ಕಳೆಯುತ್ತಿದ್ದಾರೆ.
ಇಬ್ಬರು ಮಗಂದಿರಿದ್ದು, ಇಬ್ಬರೂ ಸಂಸಾರಸ್ತರಾಗಿದ್ದಾರೆ. ಒಬ್ಬಾತ ಪ್ರವೀಣ್ ಪೊನ್ನಪ್ಪ ದಿನ ಪತ್ರಿಕೆಯ ಕಛೇರಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಮತ್ತೊಬ್ಬ ನವೀನ್ ನಾಣಯ್ಯ ಅವರು ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕೂಡ ವಿವಾಹಿತರಾಗಿ ಪತ್ನಿ ರೇಷ್ಮಾ, ಹಾಗು ಮಕ್ಕಳಾದ ದಿಲನ್ ಹಾಗು ಶರಣ್ ಅವರ ಸುಖ ಸಂಸಾರವನ್ನು ಹೊಂದಿದ್ದಾರೆ. ಕೊನೆಯದಾಗಿ ನಮ್ಮ ರಾಷ್ಟ್ರ ರಕ್ಷಕರಾಗಿ ದೇಶ ಸೇವೆ ಮಾಡಿದ ಮಲ್ಚೀರ ಕಾಳಪ್ಪ ಅಚ್ಚಯ್ಯ ಅವರಿಗೆ ಸಲಾಂ ಸುದ್ದಿ ಸಂತೆ ಬಳಗದಿಂದ