ಪುಸ್ತಕದ ಕುರಿತು ನನ್ನ ವಿಮರ್ಶೆ

‘ಕೋರೆಗಾವ ಕದನ ‘,’ದಲಿತ ದಿಗ್ವಿಜಯ’

ದೀಪಕ್ ಪೊನ್ನಪ್ಪ, ತಾಲೂಕು ಸಂಚಾಲಕರು, ದಲಿತ ಸಂಘರ್ಷ ಸಮಿತಿ, ಮಡಿಕೇರಿ.

ಅದು ಎರಡನೇ ಲಾಕ್ಡೌನ್ ಸಮಯ.ನನ್ನ ಕಂಪನಿಯ ಕೆಲಸ ಅತೀ ಕಡಿಮೆ ಇದ್ದುದರಿಂದ ಬಹಳ ಬೇಸರವಾಗುತ್ತಿತ್ತು.ಅಂತಹ ಸಮಯದಲ್ಲಿ ‘ತೇಜಸ್ವಿ ಸಾಹಿತ್ಯ ಬಳಗ’ ಎನ್ನುವ ವಾಟ್ಸ್ ಆಪ್ ಗುಂಪಿಗೆ ಒಬ್ಬ ಅನಾಮಧೇಯರು ನನ್ನನ್ನು ಸೇರಿಸಿಕೊಂಡರು.ಅದೊಂದು ಪುಸ್ತಕಗಳನ್ನು ಮಾರಾಟ ಮಾಡುವ ತಂಡವಾಗಿದ್ದು ಅಲ್ಲಿ ಅಂಬೇಡ್ಕರ್ ಮತ್ತು ಅವರ ಹೋರಾಟಗಳಿಗೆ ಸಂಭಂದಿಸಿದ ಪುಸ್ತಕಗಳು ದೊರೆಯುತ್ತದೆಂಬ ಮಾಹಿತಿ ಅಲ್ಲಿ ದೊರೆಯಿತು. ಮೊದಲೇ ಅಂಬೇಡ್ಕರ್ ಅವರ ವಿಚಾರಗಳನ್ನು ತಿಳಿದುಕೊಳ್ಳುವಲ್ಲಿ ಬಹು ಆಸಕ್ತಿ ಇರುವ ನಾನು ಮೊದಲಿಗೆ “ದಲಿತ ಅಸ್ಮಿತೆ” ,”ಗಾಂಧಿ ಮತ್ತು ಅಸ್ಪೃಶ್ಯರ ವಿಮೋಚನೆ” , “ನಾನು ಹಿಂದು ಆಗಿ‌ ಸಾಯಲಾರೆ”, “ದಲಿತ ದಿಗ್ವಿಜಯ” ಹಾಗು ಅಂಬೇಡ್ಕರ್ ಅವರು ಇಂಗ್ಲೀಷ್ನಲ್ಲಿ ಬರೆದು ಡಾ.ಎನ್ .ಜಗದೀಶ್ ಕೊಪ್ಪ ಅನುವಾದ ಮಾಡಿರುವ “ಬುದ್ಧ ಮತ್ತು ಆತನ ಧಮ್ಮ” ಎಂಬ ಪುಸ್ತಕಗಳನ್ನು ತರಿಸಿಕೊಂಡೆ.

ಅದರಲ್ಲಿ ಮೊದಲು ನಾನು ಓದಲು ಆಯ್ಕೆ ಮಾಡಿಕೊಂಡಿದ್ದು ಬಾಬಾಸಾಹೇಬರ ತಂದೆ ರಾಂ ಜೀ ಸಕ್ಪಾಲ್ ಮತ್ತ ಅವರ ತಂದೆಯನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಲು‌ ಕಾರಣವಾದ ಭೀಮಾ ಕೋರೆಗಾವ ಕದನ.

ಹೌದು 1/1/1818ರಂದು ನಡೆದ ಭೀಮಾಕೋರೆಗಾವ ಕದನ ದಲಿತ ಸೈನಿಕರ (ಮಹಾರ ಜನಾಂಗದವರ) ಸ್ವಾಭಿಮಾನ ಮತ್ತು ಪರಾಕ್ರಮವನ್ನು ಪ್ರತಿಬಿಂಬಿಸುವ ಕದನವಾಗಿದೆ.ಭೀಮಾನದಿ ತೀರದಲ್ಲಿ ನಡೆದ ಈ ಕದನದಲ್ಲಿ 500 ಮಹಾರ ಜನಾಂಗದ ಸೈನಿಕರು ಮತ್ತು 250 ಅಶ್ವ ದಳವನ್ನು ಹೊಂದಿದ ಬ್ರಿಟಿಷ್ ಸೇನೆಯು 8000ಸೈನ್ಯ ಮತ್ತು 20000 ಅಶ್ವದಳವನ್ನು ಹೊಂದಿದ ಪೇಶ್ವೆ ಸೇನೆಯನ್ನು ಕೇವಲ 12 ಗಂಟೆಗಳಲ್ಲಿ ನಡೆದ ಯುದ್ಧದಲ್ಲಿ ಹಿಮ್ಮೆಟ್ಟಿಸಿತು.

ಮರಾಠ ಮತ್ತು ಪೇಶ್ವೆಗಳ ಸೈನ್ಯದಲ್ಲಿ ಯಾವುದೇ ಯುದ್ಧದ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದ ಮಹಾರರು ಬ್ರಿಟಿಷ್ ಸೈನ್ಯ ಸೇರಿದ್ದು ಬರೀ ಯುದ್ಧಕಾಲದ ನಡೆಯಲ್ಲದೇ ಅದೊಂದು ಕ್ರಾಂತಿಕಾರಿ ಬೆಳವಣಿಗೆಯಾಗಿತ್ತು.ಶಿವಾಜಿಯ ಕಾಲದಿಂದಲೂ ಅನೇಕ‌ ಕದನಗಳಲ್ಲಿ ಭಾಗವಹಿಸಿ ಗೆದ್ದುಕೊಟ್ಟಿದ್ದರು.

ಛತ್ರಪತಿ ಶಿವಾಜಿ ಮಹಾರಾಜರ ಸೇನೆಯಲ್ಲಿ ಮರಾಠ,ಕುಣಬಿ,ಬ್ರಾಹ್ಮಣ, ಕ್ಷತ್ರಿಯ, ಮಹಾರ,ಮುಸ್ಲಿಂ, ಕೋಳಿ,ಭಂಡಾರಿ, ಕುರುಬ,ಪ್ರಭು,ರಾಮೋಶಿ,ನಾವಲಿಗ,ಶೆಣವಿ ಮೊದಲಾದ 56ಜನಾಂದ ಯೋಧರಿದ್ದರು.ಹಾಗಾಗಿ ಶಿವಾಜಿ ಸೈನ್ಯ ರಾಷ್ಟ್ರೀಯ ಐಕ್ಯ ಮತದ ಪ್ರತೀಕವಾಗಿತ್ತು.ಮಹಾರ ವೀರರು ಹುಟ್ಟಿನಿಂದಲೇ ಪರಾಕ್ರಮಿಗಳಾಗಿದ್ದು ಅದರಿಂದ ಪ್ರಭಾವಿತರಾಗಿ ಮಹಾರಾಜರು “ಕಿಲ್ಲೆದಾರ” ಎನ್ನುವ ಜವಾಬ್ದಾರಿಯುತ ಪದವಿಗೆ ನೇಮಿಸುತ್ತಿದ್ದರು.ಇದನ್ನರಿತ ಸಂತ ಶಿರೋಮಣಿ ತುಕಾರಾಮ ‘ ಬ್ರಾಹ್ಮಣರಿಗಿಂತ ಮಹಾರರು ಮಹಾಮಹಿಮರು’ ಎಂದು ತಮ್ಮ ಅಭಂಗದಲ್ಲಿ ಹೇಳಿದ್ದಾರೆ.ಅದಲ್ಲದೇ ಅನೇಕ ಮುಸ್ಲಿಂ ಸೈನಿಕರಿಗೆ ಕೂಡ ಉನ್ನತ ಅಧಿಕಾರ ನೀಡಿ ಅವರಿಗಾಗಿಯೇ ರಾಯಗಡದಲ್ಲಿ ಮಸೀದಿ ಕಟ್ಟಿಸಿಕೊಟ್ಟಿದ್ದರು.ಆದರೆ ಕೆಲವು ಪಂಡಿತರು ಅವರನ್ನು ಮುಸ್ಲಿಂ ವಿರೋಧಿಯನ್ನಾಗಿ ಪ್ರತಿಬಿಂಬಿಸಿದ್ದು ಇತಿಹಾಸ ಮರೆತಿಲ್ಲ.

ಕ್ರಮೇಣ ಛತ್ರಪತಿ ಮಹಾರಾಜರ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಅವರ ಸೈನ್ಯದಲ್ಲಿ ದಂಡನಾಯಕನಾಗಿದ್ದ ಪೇಶ್ವೆಗಳು ಮತ್ತು ಕೊಂಕಣಿ ಬ್ರಾಹ್ಮಣರು ಅಧಿಕಾರವನ್ನು ಕಸಿದುಕೊಂಡು ಪೇಶ್ವೆ ರಾಜ್ಯಾಧಿಕಾರ ಪ್ರಾರಂಭಿಸಿದರು.ಇವರ ಆಡಳಿತದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಿದ್ದ ಮಹಾರರು ಬ್ರಿಟಿಷ್ ಅಧಿಕಾರಕ್ಕು ಮುಂಚೆ ಅಸ್ಪೃಶ್ಯತೆಯ ಆಚರಣೆಗೆ ಬಲಿಯಾಗಬೇಕಾಯಿತು. ಮಹಾರ ರ ಶೌರ್ಯ, ಪರಾಕ್ರಮ‌ ತಿಳಿದಿದ್ದ ಪೇಶ್ವೆ ಹಾಗು ಬ್ರಾಹ್ಮಣರು ಇವರನ್ನು ಸದೆಬಡಿಯದೇ ಉಳಿಸಿದಲ್ಲಿ ಮುಂದೊಂದು ದಿನ ಇವರು ಸ್ವತಂತ್ರ ರಾಜರಾಗುತ್ತಾರೆಂಬ ಭಯ ಇದ್ದುದರಿಂದ ಮಹಾರರನ್ನು ದೂರವಿಡುವಂತಹ ಅನೇಕ‌ ಜಾತೀಯತೆಯ ಆಚರಣೆಯಿಂದ ಅವರನ್ನು ಅನುಮಾನ ಮತ್ತು ಅಪಮಾನಕ್ಕೆ ಈಡುಮಾಡಿದರು.

ದಲಿತರ ನೆರಳು ಬಿದ್ದರೂ ಮೈಲಿಗೆಯಾಗುತ್ತದೆಂಬ ಭ್ರಮೆ ಇದ್ದ ಕಾಲದಲ್ಲಿ ಸವರ್ಣೀಯರು ಬರುವ ದಾರಿಯಲ್ಲಿ ದಲಿತರು ಎದುರಾದರೆ ಆ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಸಾಗಬೇಕಾಗಿತ್ತು.ಸಣ್ಣ ಕುಡಿಜೆಯೊಂದನ್ನು‌ ಸದಾ ಕುತ್ತಿಗೆಗೆ ಕಟ್ಟಿಕೊಂಡು ಉಗುಳು ಬಂದರೆ ಅದರಲ್ಲಿ ಉಗುಳಬೇಕಾಗಿತ್ತು.ಅವರು ನಡೆಯುವ ದಾರಿಯಲ್ಲಿ ಹೆಜ್ಜೆ ಗುರುತುಗಳು ಅಳಿಸಿ ಹೋಗುವಂತೆ ಬೆನ್ನಿಗೆ ಸದಾ ಮುಳ್ಳು ಕೋರೆಗಳನ್ನು ಕಟ್ಟಿಕೊಂಡು ನಡೆಯಬೇಕಾಗಿತ್ತು.ಹೊಸಬಟ್ಟೆಯನ್ನು ಖರೀದಿಸಬೇಕಾದರೆ ಅಂಗಡಿಯಿಂದ ಬಹಳ ದೂರದಿಂದಲೇ ನೋಡಿ ಆಯ್ಕೆ ಮಾಡಬೇಕಾಗಿತ್ತು ಮತ್ತು ಆಯ್ಕೆ ಮಾಡಿದ ಬಟ್ಟೆಗಳನ್ನು ನೀರಿನಲ್ಲಿ ಅದ್ದಿ ಮಣ್ಣಿನಲ್ಲಿ ಹೊರಳಾಡಿಸಿ ಎರಡು ತುಂಡರಿಸಿ ಧರಿಸಬೇಕಾಗಿತ್ತು.

ರಣರಂಗದಲ್ಲಿ ಸಿಗುತ್ತಿದ್ದ ಗೌರವ,ಸಮಾನತೆ ಸಮಾಜದಲ್ಲಿ ಸಿಗದೇ ಅಸ್ಪೃಶ್ಯತೆ, ಅಸಮಾನತೆ ,ಅತ್ಯಾಚಾರಗಳನ್ನು ಪ್ರತಿಬಿಂಬಿಸುವ ಅನೇಕ‌ ಆಚರಣೆಗಳಿಂದ ಬೇಸತ್ತಿದ್ದ ಮಹಾರರು ಪೇಶ್ವೆಸೈನ್ಯ ತ್ಯಜಿಸಿ‌ ಬರೀ ವೀರತ್ವ ಪರಾಕ್ರಮಗಳನ್ನೇ ಆಧರಿಸಿ ಗೌರವ ನೀಡುತ್ತಿದ್ದ ಬ್ರಿಟಿಷ್ ಸೈನ್ಯ ಸೇರಿ ಪೇಶ್ವೆ ರಾಜರ ಕೊನೆಯ ಪೇಶ್ವೆಯಾದ ಎರಡನೇ ಬಾಜಿರಾವನ ಕಾಲದಲ್ಲಿ ಐತಿಹಾಸಿಕ ಘಟನೆಯಾದ ಕೋರೆಗಾವ ಕದನವನ್ನು ಮಾಡಿ ಪೇಶ್ವೆ ಆಡಳಿತಕ್ಕೆ ಮುಕ್ತಿ ಕೊಟ್ಟರು.

ಪೇಶ್ವೆಗಳಿಗೆ ಬ್ರಿಟಿಷರ ಮೇಲೆ‌‌ ಮೊದಲ ಅಸಮಾಧಾನ
1817ರಲ್ಲಿ ಪೇಶ್ವೆ, ಸಿಂಧೆ,ಹೋಳ್ಕರ್,ಗಾಯಕವಾಡರು ಸೇರಿ ತಮ್ಮ ನೆಲೆಯನ್ನು ಗಟ್ಟಿಗೊಳಿಸುವ ಸಲುವಾಗಿ “ಮರಾಠ ಕಾನ್ಫಿಡರೆಸಿ” ಯನ್ನು ಸ್ಥಾಪಿಸಿದರು. ಆದರೆ ಪೇಶ್ವೆ ಮತ್ತು ಬ್ರಿಟಿಷರ ನಡುವೆ 1902ರಲ್ಲಿ ನಡೆದ ‘ವಸಯಿ’ ಒಪ್ಪಂದದಿಂದ “ಮರಾಠ ಕಾನ್ಫಿಡರೆಸಿ” ಅಸ್ತಿತ್ವ ಕಳೆದುಕೊಂಡಿತು.ಇದರಿಂದ ಪೇಶ್ವೆಗಳು‌ ಬ್ರಿಟಿಷರನ್ನು ದ್ವೇಷಿಸುವಂತಾಯಿತು.ಇದಕ್ಕೆ ಸಾಕ್ಷಿಯೆಂಬಂತೆ 1817ರಲ್ಲಿ ನಡೆದ ಖಡಕಿ ಕದನ‌ ಮತ್ತು ಯರವಾಡ ಕದನ ಎರಡರಲ್ಲಿಯೂ ಬ್ರಿಟಿಷ್ ಸೇನೆ‌ವಿಜಯ‌ ಸಾಧಿಸಿತು.

ಈ ಕದನದಲ್ಲಿ ತಲೆಮರೆಸಿಕೊಂಡಿದ್ದ ಎರಡನೇ ಬಾಜಿರಾವ ಮತ್ತು ಗೋಖಲೆ ತಮ್ಮ ಸೇನೆಯನ್ನು ಬಲಪಡಿಸುವ ಸಲುವಾಗಿ ನಿಪ್ಪಾಣಿಯ ಅಪ್ಪಾಸಾಹೇಬರಿಂದ ಮತ್ತು ಸಾಂಗ್ಲಿಯ ಪಟವರ್ಧನನಿಂದ 7000 ಅಶ್ವದಳ ,1000 ಅರಬರ ಸೈನ್ಯವನ್ನು ಸೇರಿಸಿಕೊಂಡು ಪುಣೆಯನ್ನು ಮರಳಿ‌ಪಡೆಯುವ ಸಲುವಾಗಿ‌ ಪುಣೆಯತ್ತ ಧಾವಿಸಿದರು.ಸುದ್ದಿ‌ತಿಳಿದ ಕರ್ನಲ್ ಶಿರೂರದ ಲೆಫ್ಟಿನೆಂಟ್ ಕರ್ನಲ್ ಫಿಲ್ಸ್ಮನ್ ನಿಂದ “ಸೆಕೆಂಡ್ ಬಟಾಲಿಯನ್ ಆಫ್‌ ದಿ ಫಸ್ಟ್ ರೆಜಿಮೆಂಟ್ ಬಾಂಬೆ ನೇಟಿವ್ ಇನ್ಫ್ರಂಟಿ ” ಯನ್ನು ಕರೆಯಿಸಿಕೊಂಡರು.ಈ ಸೇನೆಯ ಮಂದಾಳತ್ವವನ್ನು ಕ್ಯಾಪ್ಟನ್ ಸ್ಟಂಟನ್ ವಹಿಸಿದ್ದರು.

31/12/1818 ರ ರಾತ್ರಿ 8ಗಂಟೆಗೆ ಶಿರೂರದಿಂದ ಹೊರಟ 500 ಸೈನ್ಯ ಮತ್ತು 250 ಅಶ್ವದಳ ಹೊಂದಿದ ಮಹಾರ ಸೇನೆ‌ ಮಾರನೇ ದಿನ ಬೆಳಗ್ಗೆ 9ಗಂಟೆಗೆ ಭೀಮಾ ನದಿ‌ತೀರಕ್ಕೆ ಬಂದು ತಲುಪಿತು.

ಮೊದಲಿಗೆ ಪೇಶ್ವೆ ಸೇನೆ ನೋಡಿ ಬೆದರಿದ ಸ್ಟಂಟನ್ ನಂತರ ಕೋರೆಗಾವ ಕೋಟೆಯನ್ನು ಬಳಸಿ ಗ್ರಾಮಪ್ರವೇಶ ಮಾಡಿದರು.ಪೇಶ್ವೆಸೇನೆ ಕೋಟೆಯ ನಾಲ್ಕು ದಿಕ್ಕುಗಳಿಂದ ಗ್ರಾಮಪ್ರವೇಶ ಮಾಡಿ ಕದನ ಶುರು‌ ಮಾಡಿದರು.ಸತತ 22ಮೈಲಿ‌ ಕಾಲ್ನಡಿಗೆ ಮಾಡಿ ಮತ್ತು ಆಹಾರದ ಕೊರತೆಯಿಂದ ಕಂಗೆಟ್ಟಿದ್ದ ಬ್ರಿಟಿಷ್‌ ಸೇನೆ ಪೇಶ್ವೆಸೇನೆಯ ದಾಳಿಗೆ ಮೊದಲು ತತ್ತರಿಸಿತು. ಖಡ್ಗಗಳ ವರಸೆ ,ತೋಪಿನ ಸ್ಫೋಟದಿಂದ ಯುದ್ಧ ಪ್ರಾರಂಭವಾಗಿ ತೋಪಿನ‌ ಅಧಿಕಾರಿ ಚಿಶೋಲಂ ಹತ್ಯೆಗಯ್ಯಲ್ಪಟ್ಟನು.ಇತರ ಅಧಿಕಾರಿಗಳಾದ ಕೋನ್ ಲೇನ್ ,ಅಸಿಸ್ಟೆಂಟ್ ವುಯಿಂಗೆಲ್ ಸ್ಟಂಟನ್ನ ಹೊರತುಪಡಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಮೊದಲಿಗೆ ಶರಣಾಗತಿಯಾಗುವುದು ಲೇಸೆಂದು ಭಾವಿಸಿ ಮರುಕ್ಷಣವೇ ತನ್ನ ನಿರ್ಧಾರ ಬದಲಾದವರಂತೆ ಸೈನಿಕರಿಗೆ “ಹೆದರಿಕೆ ಬಿಟ್ಟು ಬಿಡಿ ,ಯಾವುದೇ ಕಾರಣಕ್ಕೆ ಅಂಜಿ ಯುಧ್ದ ಮಾಡುವುದು ಬೇಡ,ಮರಣ ಬಂದರು ಸೈ ,ಆದರೆ ಶರಣಾಗುವುದು ಬೇಡವೆಂದು” ಕರೆ ನೀಡಿದರು.

ಸ್ಟಂಟನ್ ಕರೆಗೆ ನವಚೈತನ್ಯ ಬಂದಂತೆ ಮಹಾರರ ಬಲ ಹೆಚ್ಚಾಗಿ ಮತ್ತೆ ಯುದ್ಧದ ತೀವ್ರತೆ ಹೆಚ್ಚಾಯಿತು. ಬೆರಳೆಣಿಕೆಯಷ್ಟಿದ್ದ ಮಹಾರರು ಶಿಸ್ತುಬದ್ಧ ಆಕ್ರಮಣದಿಂದ ವೈರಿಪಡೆಯನ್ನು 1/1/1818 ರ ರಾತ್ರಿ 9 ಗಂಟೆಗೆ ಹಿಂದೆ ಸರಿಯುವಂತೆ ಮಾಡಿ ಫುಲಗಾವಲದವರೆಗೆ ಬೆನ್ನಟ್ಟಿ ಓಡಿಸಿದರು.ಅಲ್ಲಿಗೆ ಪೇಶ್ವೆ ಸಾಮ್ರಾಜ್ಯದ ಪತನವಾಯಿತು.

ಕದನದಲ್ಲಿ ಸೀನನಾಕ ಕಮಲನಾಕ,ರಾಮನಾಕ ಏಸನಾಕ,ಗೋಂದನಾಕ ಕೋಡೆನಾಕ,ರಾಮನಾಕ ಏಸನಾಕ,ಭಾಗನಾಕ ಹರನಾಕ,ಅಂಬರನಾಕ ಕಾನನಾಕ,ರೂಪನಾಕ ಲಖನಾಕ,ಗಣನಾಕ ಬಾಳನಾಕ,ಕಾಳನಾಕ ಕೋಂಡನಾಕ, ವಪನಾಕ ರಾಮನಾಕ ,ವಿಟನಾಕ ಧಾಮನಾಕ,ರಾಜನಾಕ ಗಣನಾಕ,ವಪನಾಕ ಹರನಾಕ,ರೈನಾಕ ವಾನನಾಕ,ಗಣನಾಕ ಧಮರನಾಕ,ದೇವನಾಕ ಆನನಾಕ,ಗೋಪಾಳನಾಕ ಬಾಳನಾಕ,ಹರನಾಕ ಹೀರನಾಕ,ಜೇಠನಾಕ ದೈನಾಕ,ಗಣನಾಕ ಲಖನಾಕ ಎನ್ನುವ20 ಮಹಾರ ಯೋಧರು ಹುತಾತ್ಮರಾದರು.

1/1/1818 ರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾಗಿ ರಾತ್ರಿ 9 ಗಂಟೆಗೆ ಮುಕ್ತಾಯವಾದ ಈ ಯುದ್ದದಲ್ಲಿ ಒಟ್ಟು 50 ಯೋಧರು ವೀರ ಮರಣವನ್ನಪ್ಪಿದ್ದು ,ಅದರಲ್ಲಿ 22 ಮಹಾರರು ,16 ಮರಾಠರು,8 ರಜಪೂತರು,2 ಹಿಂದೂಗಳು ,ಒಬ್ಬ ಮುಸ್ಲಿಂ ಮತ್ತು ಒಬ್ಬ ಕ್ರಿಶ್ಚಿಯನ್ ಸೇರಿದ್ದಾರೆ.

ಇತಿಹಾಸ ಸೃಷ್ಟಿಸಿದ ಈ ಯುದ್ದದಲ್ಲಿ ಜಯಗಳಿಸಿದ ಸವಿನೆನಪಿಗಾಗಿ ಒಂದು ಸ್ಮರಣ ಸ್ತಂಭಕ್ಕೆ 21/3/1821ರಂದು ಅಡಿಗಲ್ಲು ಹಾಕಿ 18222ರಲ್ಲಿ ಪೂರ್ಣನಿರ್ಮಾಣ ಮಾಡಿ “ವಿಜಯಸ್ತಂಭ” ಎಂಬ ಹೆಸರಿಡಲಾಯಿತು.

1/1/1927 ರಂದು ಮೊಟ್ಟಮೊದಲ ಬಾರಿಗೆ ಅಂಬೇಡ್ಕರ್ ಅವರು ಭೀಮಾಕೋರೆಗಾವ ಭೇಟಿ ನೀಡಿ ಸ್ತಂಭಕ್ಕೆ ಗೌರವ ವಂದನೆ ಸಲ್ಲಿಸಿದರು.ಮತ್ತು ಆ ದಿನವನ್ನು ಕೋರೆಗಾವ ಕದನದ ಮಹಾರ ಕಲಿಗಳ ಸ್ಮೃತಿ ದಿನವನ್ನಾಗಿ ಆಚರಿಸಿದರು.

ಈ ಕದನ‌ ನಡೆದು 203 ವರ್ಷಗಳೇ ಕಳೆದರೂ ನಾನಿನ್ನು‌ ಈ‌ ವೀರಭೂಮಿಗೆ ಭೇಟಿ ನೀಡಿಲ್ಲ ಎಂಬುದು‌ ನನ್ನ ದುಃಖಕ್ಕೆ ಕಾರಣವಾಗಿದೆ.

ದೀಪಕ್ ಪೊನ್ನಪ್ಪ

error: Content is protected !!