fbpx

ಉದಯೋನ್ಮುಖ ಹಾಕಿ ಪಟು ‘ಮಯೂರ್ ಮುತ್ತಪ್ಪ’

ಕೊಡಗಿನ ಮೂರ್ನಾಡು ಬಾಡಗ ಗ್ರಾಮದ ಮಯೂರ್ ಪುಟ್ಟ ಬಾಲಕನಿದ್ದಾಗಲೇ ಕೊಡವ ಕುಟುಂಬ ಹಾಕಿ ಕೂಟದಲ್ಲಿ ಹಾಕಿ ಸ್ಟಿಕ್ ಹಿಡಿದು ಫೋಸು ನೀಡಿ ಗಮನ ಸೆಳೆದು ಮಿಂಚಿದ್ದ ಬಾಲಕ. ಅದೇ ಯುವಕ ಮಯೂರ್ ಖೇಲೋ ಇಂಡಿಯಾದ ವಿಜೇತ ತಂಡದಲ್ಲಿ ಮಿನುಗಿ ಹಾಕಿ ಅಂಗಳದಲ್ಲಿ ಇದೀಗ ಗಟ್ಟಿಯಾಗಿ ತನ್ನ ಕಾಲೂರಿದ್ದಾರೆ.

ಹೀಗೆ ಮಯೂರ್ ಹಾಕಿಯನ್ನು ಆಸ್ಥೆಯಿಂದ ಮೈಗೂಡಿಸಿಕೊಂಡಿರಲು ಮುಖ್ಯ ಕಾರಣ ಅವರ ಕುಟುಂಬವೇ ಹಾಕಿಪಟುಗಳದ್ದಾಗಿರುವುದು ಎಂದರೆ ತಪ್ಪಾಗಲಾರದು. ಮಯೂರ್ ತಂದೆ ಕಂಬೀರಂಡ ಸತೀಶ್ ಮುತ್ತಪ್ಪ, ಇವರು ತಮ್ಮ ಕಾಲೇಜು ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಮುಖ್ಯ ಹಾಕಿ ಕ್ರೀಡಾ ಕಲಿಯಾಗಿ ಹೊರಹೊಮ್ಮಿದ್ದವರು. ಈಗ ಸಂಘ ಸಂಸ್ಥೆಗಳ ಬ್ಯಾಡ್ಮಿಂಟನ್ ಟೂರ್ನಮೆಂಟ್ʼಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕೃಷಿ ಮತ್ತು ವ್ಯಾಪಾರ ವ್ಯವಹಾರ ಮಾಡಿಕೊಂಡಿರುವ ಶ್ರಮಿಕರು. ಮಯೂರ್ ತಾಯಿ ದಿವ್ಯ ಮುತ್ತಪ್ಪ ಕೂಡ ಮೈಸೂರು ಕ್ರೀಡಾ ನಿಲಯದ ಕ್ರೀಡಾಕಲಿ, ಇವರು ಕೂಡ ಜ್ಯೂನಿಯರ್ ಮತ್ತು ಸೀನಿಯರ್ ಹಾಕಿ ಕ್ರೀಡಾಕೂಟದಲ್ಲಿ ರಾಜ್ಯ ಪ್ರತಿನಿಧಿಸಿರುವ ರಾಷ್ಟೀಯ ಸ್ಪರ್ಧಾರ್ಥಿ. ಕೊಡಗು ಹಾಕಿ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿರುವ ಇವರು ಪ್ರಸ್ತುತ ತಮ್ಮನ್ನು ಸ್ವಂತ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಮಯೂರ್ʼ ತಮ್ಮ ಮಾನವ್ ಮೇದಪ್ಪ ಸಾಯಿ STC ಬೆಂಗಳೂರಿನಲ್ಲಿ ತಮ್ಮ ಹಾಕಿ ಭವಿಷ್ಯವನ್ನು ಕಟ್ಟಿಕೊಳ್ಳುತ್ತಿದ್ದು ಅವರು ಕೂಡ 2020 ಮಿನಿ ಒಲಂಪಿಕ್ ಗೇಮ್ʼನಲ್ಲಿ ವಿಜೇತ ತಂಡದ ಭಾಗಿದಾರರಾಗಿ ಗಮನ ಸೆಳೆದಿದ್ದಾರೆ. ಹೀಗೆ ಬಾಡಗ ಎಂಬ ಗ್ರಾಮ ಒಂದೇ ಕುಟುಂಬದಿಂದ ಅನೇಕ ಹಾಕಿಪಟುಗಳನ್ನು ಸಮಾಜಕ್ಕೆ ಕೊಡುಗೆ ನೀಡುವುದರ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಂತಹ ಗ್ರಾಮದ ಮಯೂರ್ ಇದೀಗ ಸುದ್ಧಿಸಂತೆಯಲ್ಲಿ ಪ್ರಸ್ತುತ ಪಡಿಸಲಾಗುತ್ತಿರುವ ರಾಷ್ಟ್ರೀಯ ಹಾಕಿಪಟುವಾಗಿದ್ದಾರೆ. ಕೆ.ಎಂ.ಮಯೂರ್ 2017ರಲ್ಲಿ ತರಬೇತುದಾರರಾದ ‘ಲಾಲಾ’ ಅವರ ಶಿಷ್ಯರಾಗಿ ಹಾಕಿ ಟೀಂ ಕೂರ್ಗ್ ಮುಖೇನ ಹಾಕಿ ಇಂಡಿಯಾ ಜ್ಯೂನಿಯರ್ ನ್ಯಾಷನಲ್ಸ್ʼನಲ್ಲಿ ಅಂಗಣಕ್ಕಿಳಿದಿದ್ದರು.

2019ರಲ್ಲಿ ತರಬೇತುದಾರರಾದ ಆರೋಕ್ಯ ದಾಸ್ ಅವರಿಂದ ತರಬೇತಿ ಪಡೆದು 2019ರಲ್ಲಿ ಮತ್ತೆ ಹಾಕಿ ಇಂಡಿಯ ಜ್ಯೂನಿಯರ್ ನ್ಯಾಷನಲ್ಸ್ ಆಡುವ ಅವಕಾಶ ಗಳಿಸಿಕೊಂಡಿದ್ದರು. 2021ರಲ್ಲಿ ತರಬೇತುದಾರರಾದ ಕವಿ ಯರಸು ಅವರ ಕೆಳಗೆ ಅಭ್ಯಾಸ ನಡೆಸಿ ಸಾಯಿ ತಂಡದಿಂದ ಸೀನಿಯರ್ ಮೆನ್ ಇಂಟರ್ ಡಿಪಾರ್ಟ್ʼಮೆಂಟ್ ನ್ಯಾಷನಲ್ಸ್ ಚಾಂಪಿಯನ್ʼಶಿಪ್ 2021ರಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು. ಈ ವರ್ಷ ಬಿ.ಕಾಂ ವ್ಯಾಸಂಗ ಮುಗಿಸಿರುವ ಮಯೂರ್ ತರಬೇತುದಾರರಾದ ವಿಜಯಕೃಷ್ಣ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಸಿಟಿ ಯೂನಿವರ್ಸಿಟಿಯಿಂದ 2021 ಖೇಲೋ ಇಂಡಿಯಾ 28th ನೆಹರು ಆಲ್ ಇಂಡಿಯ ಯೂನಿವರ್ಸಿಟಿ ಮಟ್ಟದಲ್ಲಿ ಆಟವಾಡಿ ಹಾಕಿ ಕ್ರೀಡಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹಾಗೂ ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮಾರ್ಸ್ ಇವರನ್ನು ಕಾಲೇಜಿನ ಅತ್ಯುತ್ತಮ ಹಾಕಿಪಟು ಎಂದು ಸನ್ಮಾನಿಸಿ ಗೌರವಿಸಿದೆ.

ಎಲೆಮರೆಕಾಯಿಯಂತಿರುವ ಇಂತಹ ನೂರಾರು ಕ್ರೀಡಾಳುಗಳನ್ನು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಸುದ್ಧಿಸಂತೆ ವಾಹಿನಿ ಬಳಗವು ಇವರ ಇತರೆ ಹವ್ಯಾಸಗಳ ನಡುವೆ ಹಾಕಿಯನ್ನು ಯಥೇಚ್ಚವಾಗಿ ಪ್ರೀತಿಸುತ್ತ ಸಾಧಿಸಲಿಳಿದಿರುವ ಸಾಧಕನಿಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತ ಹಾಗೂ ಹಾರೈಸುತ್ತ ಈತನ ಭವಿಷ್ಯತ್ತಿನ ಅಂತರರಾಷ್ಟ್ರೀಯ ಸಾಧನೆಯನ್ನು ಎದುರುನೋಡುತ್ತಿರುತ್ತದೆ.

ಸಂಗ್ರಹ:
ಮಾಳೇಟಿರ ಸೀತಮ್ಮ ವಿವೇಕ್

error: Content is protected !!
satta king chart