fbpx

ಅಕ್ರಮ ಮರ ನಾಟಗಳ ಸಾಗಾಟ: ಪರಾರಿಯಾದ ಆರೋಪಿಗಳಿಗಾಗಿ ಹುಡುಕಾಟ

ಮಡಿಕೇರಿ: ಶುಂಠಿ ಸಾಗಾಟದ ನೆಪದಲ್ಲಿ ಲಾರಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟಿ ಮರದ ನಾಟಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆ ದಾಳಿ ನಡೆಸಿ, ರೂ.6 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದು, ಆರೋಪಿಗಳು ಅರಣ್ಯ ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದಾರೆ.

ಮೂರ್ನಾಡು ರಸ್ತೆ ಮೂಲಕ ಮರದ ನಾಟಗಳ ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅರಣ್ಯ ಇಲಾಖೆ ಬೋಯಿಕೇರಿ ಸಮೀಪದ ಸಿಂಕೋನದಲ್ಲಿ ವಾಹನವನ್ನು ಅಡ್ಡಗಟ್ಟಿದೆ. ಪೊಲೀಸರ ಜೀಪು ಕಂಡ ಲಾರಿ ಚಾಲಕ ಮತ್ತು ಲಾರಿಯಲ್ಲಿದ್ದ ಇನ್ನೋರ್ವ ಲಾರಿಯನ್ನು ಅಲ್ಲಿಯೇ ನಿಲ್ಲಿಸಿ ಪರಾರಿಯಾಗಿದ್ದಾರೆ.

ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಲಾರಿಯನ್ನು ಪರಿಶೀಲಿಸಿದಾಗ ಶುಂಠಿ ಚೀಲದ ಕೆಳ ಭಾಗದಲ್ಲಿ ಭಾರಿ ಗಾತ್ರದ 34 ಬೀಟೆ ನಾಟ ಪತ್ತೆಯಾಗಿದೆ. ಲಾರಿಯನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದೆ.

error: Content is protected !!