ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲೂ ಕಾಂಗ್ರಸ್ ಪಕ್ಷಕ್ಕೆ ಭಾರೀ ಮುಖ ಭಂಗ!

ಬೆಂಗಳೂರು, ಡಿ.30- ಲೋಕಸಭೆಯಿಂದ ಗ್ರಾಮ ಪಂಚಾಯತ್ ಚುನಾವಣೆವರೆಗೂ ಎಲ್ಲಾ ಕಡೆ ಸೋತು ಸೋರಗಿ ಹೋಗಿದ್ದರೂ ಕಾಂಗ್ರೆಸ್ ಇನ್ನೂ ಬುದ್ದಿ ಕಲಿತಿಲ್ಲ. ಈ ಮೊದಲು ತನ್ನದೇ ಮತ ಬ್ಯಾಂಕ್‍ನ ಇಡುಗಂಟನ್ನು ಹೊಂದಿದ್ದ ಕಾಂಗ್ರೆಸ್ ಎಲ್ಲಾ ಕಡೆ ಗೆಲ್ಲುತ್ತಿತ್ತು. ಕಾಲ ಕ್ರಮೇಣ ತನ್ನ ಗೊಂದಲಕಾರಿ ನಿಲುವುಗಳಿಂದ ಎಲ್ಲವನ್ನೂ ಕಳೆದುಕೊಳ್ಳುತ್ತಿದೆ. ಈಗ ಅತ್ತ ಮೇಲ್ವರ್ಗವೂ ಇಲ್ಲ, ಇತ್ತ ಕೆಳವರ್ಗಗಳೂ ಇಲ್ಲದೆ ಮತ ಬ್ಯಾಂಕ್‍ನ್ನು ಕಳೆದುಕೊಂಡು ತ್ರಿಶಂಕು ಸ್ಥಿತಿಗೆ ತಲುಪಿದ್ದು, ಗ್ರಾಮ ಪಂಚಾಯತ್ ಚುನಾವಣೆಯಲ್ಲೂ ಹಿನ್ನೆಡೆ ಅನುಭವಿಸಿದೆ.

ದಕ್ಷಿಣ ಭಾರತದ ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಕಳೆದು ಹೋಗಿದ್ದು, ಪ್ರಾದೇಶಿಕ ಪಕ್ಷಗಳು ಮೇಲುಗೈ ಸಾಧಿಸಿವೆ.

ಕೇರಳದಲ್ಲಿ ಎಡ ಪಕ್ಷಗಳ ಪ್ರಾಬಲ್ಯವಿದೆ. ಉಳಿದಿದ್ದು ಕರ್ನಾಟಕ ಮಾತ್ರ. ಇಲ್ಲಿ ಕಾಂಗ್ರೆಸ್‍ಗೆ ಭದ್ರ ನೆಲೆ ಇತ್ತು. ಆದರೆ ಕಾಂಗ್ರೆಸ್ ನಾಯಕರೇ ಸುಫಾರಿ ಪಡೆದವರಂತೆ ಮೂಲ ನೆಲೆಯನ್ನು ಹಾಳುಗೆಡವಿದ್ದಾರೆ. ಏಕಮೇವ ನಾಯಕತ್ವಕ್ಕೆ ಜೋತು ಬಿದ್ದು ಮನಸ್ಸಿಗೆ ಬಂದಂತಹ ನಿರ್ಧಾರಗಳಿಂದ ಮತ ಬ್ಯಾಂಕ್‍ನ್ನು ಕಳೆದುಕೊಂಡಿದೆ.

ಬಿಜೆಪಿ ತನ್ನ ನಿಲುವುಗಳಲ್ಲಿ ಖಚಿತತೆ ಹೊಂದಿದೆ. ಅದು ಯಾರಿಗೆ ತಪ್ಪು ಎನಿಸುತ್ತದೆ, ಯಾರಿಗೆ ಸರಿ ಎನ್ನಿಸುತ್ತದೆ ಎಂಬ ಗೋಜಿಗೆ ಹೋಗದೆ ಹಿಂದುತ್ವ, ರಾಷ್ಟ್ರೀಯತೆ ಎಂಬ ನಿಲುವುಗಳಿಗೆ ಪಕ್ಕಾ ಅಂಟಿಕೊಂಡಿದೆ. ಅದು ಇಷ್ಟ ಇಲ್ಲದೆ ಇರುವವರು ಬಿಜೆಪಿಯಿಂದ ದೂರವಾಗಬಹುದು, ಆದರೆ ಸಿದ್ಧಾಂತಕ್ಕೆ ಸಮ್ಮತಿ ಇರುವವರು ಖಚಿತವಾಗಿ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ.

ಈ ಮೂಲಕ ಪ್ರತಿ ಚುನಾವಣೆಯಲ್ಲೂ ನಿರ್ದಿಷ್ಠವಾದ ಮತಬ್ಯಾಂಕ್‍ನ್ನು ಕಾಪಾಡಿಕೊಳ್ಳುತ್ತಿದೆ. ಚುನಾವಣೆಯಲ್ಲಿ ಬದ್ಧತೆಯಿಂದ ಕೆಲಸ ಮಾಡುವ ಆರ್‍ಎಸ್‍ಎಸ್ ಪಡೆಯಿದೆ, ಬಿಜೆಪಿ ಕಾರ್ಯಕರ್ತರ ಬಲ ಮತ್ತು ಸಂಘ ಪರಿವಾರ ಶಕ್ತಿ ಸೇರಿದರೆ ನಿರ್ದಿಷ್ಟ ಮತ ಬ್ಯಾಂಕ್‍ನ ಜೊತೆಗೆ ಗೆಲುವಿಗೆ ಬೇಕಾದ ಮಾರ್ಜಿನ್ ಮತಗಳನ್ನು ಪಡೆದುಕೊಳ್ಳುವುದು ಕಷ್ಟವೇನಲ್ಲ. ಹಾಗಾಗಿ ಉಪಚುನಾವಣೆಗಳು ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಗೆಲ್ಲುತ್ತಲೆ ಇದೆ.

ಕಾಂಗ್ರೆಸ್‍ನ ಮತಬ್ಯಾಂಕ್ ಯಾರು ಎಂಬ ಗೊಂದಲಗಳು ಈವರೆಗೂ ಬಗೆ ಹರಿದಿಲ್ಲ. ಸಾಂಪ್ರದಾಯಿಕವಾಗಿ ದಲಿತರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದರು. ಆದರೆ ಅಧಿಕಾರಕ್ಕೆ ಬರುವವರೆಗೂ ದಲಿತ ಜಪ ಮಾಡುವ ಕಾಂಗ್ರೆಸ್ ಗೆದ್ದ ಬಳಿಕ ಅಧಿಕಾರ ನೀಡುವಾಗ ದಲಿತರನ್ನೂ ಮೂಲೆಗುಂಪು ಮಾಡುವುದರಿಂದ ಆ ವರ್ಗವೂ ಕಾಂಗ್ರೆಸ್‍ನಿಂದ ದೂರವಾಗಿದೆ. ಹಿಂದುಳಿದ ವರ್ಗಗಳ ಮತಗಳು ಹರಿದು ಹಂಚಿಕೆಯಾಗಿ ಹೋಗಿವೆ.

ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಲು ಕಾಂಗ್ರೆಸ್ ಹರ ಸಾಹಸ ಪಡುತ್ತಿದೆ. ಗೋ ಹತ್ಯೆ ನಿಷೇಧ, ರಾಮಮಂದಿರ-ಬಾಬ್ರಿಮಸೀದಿ ಸೇರಿದಂತೆ ಅನೇಕ ಸಂದರ್ಭದಲ್ಲಿ ಕಾಂಗ್ರೆಸ್ ನಿಲುವುಗಳು ಕರಾರುವಕ್ಕಾಗಿಲ್ಲ. ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರು ಪ್ರಮುಖ ವಿವಾದಗಳಲ್ಲಿ ಬಿಜೆಪಿ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ್ದಾರೆ. ಹೀಗಾಗಿ ಅಲ್ಪಸಂಖ್ಯಾತರು ಕಾಂಗ್ರೆಸ್ ಜೊತೆ ನಿಲ್ಲುತ್ತಿಲ್ಲ. ಹಾಗೂ ಹೀಗೂ ಒಂದಿಷ್ಟು ಮಂದಿ ಕಾಂಗ್ರೆಸ್ ಪರವಾಗಿ ವಾಲಿದರೂ, ಓವೈಸಿಯ ಎಐಎಂಐಎಂ ಪಕ್ಷ ಆ ಮತಗಳನ್ನು ಬಾಚಿಕೊಂಡು ಹೋಗಿ ಬಿಡುತ್ತಿದೆ. ಹೀಗಾಗಿ ಕಾಂಗ್ರೆಸ್ ತನ್ನ ಮತ ಬ್ಯಾಂಕ್‍ನ್ನು ಕಳೆದುಕೊಳ್ಳುವ ಜೊತೆಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದೆ ಅತಂತ್ರ ಸ್ಥಿತಿಯಲ್ಲಿದೆ.

ಹಿಂದೆ ಕೆಲ ವರ್ಗಗಳಿಗೆ ನಮ್ಮ ಸರ್ಕಾರ ಕೊಡುಗೆ ನೀಡಿದೆ, ಆ ಸಮುದಾಯಗಳು ಕಾಂಗ್ರೆಸ್‍ಗೆ ಋಣಿಯಾಗಿರಬೇಕು ಎಂಬ ಧೋರಣೆಯಲ್ಲೇ ಕಾಲುಚಾಚಿ ಮಲಗಿ ರಾಜಕಾರಣ ಮಾಡುತ್ತಿದೆ. ಈಗಿನ ರಾಜಕೀಯ ಟ್ರೆಂಡ್‍ನಲ್ಲಿ ಹಿಂದಿನ ಸ್ಮರಣೆ ಮರೆತು ಹೋಗಿದೆ. ಮುಂದಿನ ಲಾಭವನ್ನಷ್ಟೆ ಜನ ನೋಡುತ್ತಾರೆ ಎಂಬುದನ್ನು ಕಾಂಗ್ರೆಸ್ ಮರೆತಿದೆ.
ಗ್ರಾಮ ಪಂಚಾಯತ್ ಚುನಾವಣೆ ಎಂದರೆ ಎಲ್ಲಾ ಪಕ್ಷಗಳ ತಳಹದಿಯ ರಾಜಕಾರಣ. ಅಲ್ಲೂ ಕೂಡ ಕಾಂಗ್ರೆಸ್ ಸೋಲು ಕಂಡಿದೆ. ನಗರ ಪ್ರದೇಶಗಳಲ್ಲಿ ಹೆಚ್ಚು ಶಕ್ತಿ ಹೊಂದಿದ್ದ ಬಿಜೆಪಿ ಈಗ ಗ್ರಾಮೀಣ ಭಾಗಕ್ಕೂ ಲಗ್ಗೆಯಿಟ್ಟಿದೆ. ಹಾಗಾಗಿ ಇನ್ನೂ ಮುಂದೆ ಕಾಂಗ್ರೆಸ್ ನೆಲೆ ಎಲ್ಲಿ ಎಂದು ಹುಡುಕಬೇಕಿದೆ.

error: Content is protected !!