ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಾದ ದಾಳಿ: ಸಚಿವ ಪ್ರಕಾಶ್ ಜಾವಡೇಕರ್

ನವದೆಹಲಿ: ಮಹಾರಾಷ್ಟ್ರದಲ್ಲಿನ ಬೆಳವಣಿಗೆ ತುರ್ತುಪರಿಸ್ಥಿತಿಯ ದಿನಗಳನ್ನು ಮತ್ತೆ ನೆನಪಿಗೆ ಬರುವಂತೆ ಮಾಡಿದೆ. ಇದು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಖಂಡಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ನಾವು ಖಂಡಿಸುತ್ತೇವೆ. ಮಾಧ್ಯಮಗಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ. ತುರ್ತು ಪರಿಸ್ಥಿತಿಯ ದಿನಗಳಲ್ಲಿ ಮಾಧ್ಯಮಗಳನ್ನು ಇದೇ ರೀತಿ ನಡೆಸಿಕೊಳ್ಳಲಾಗಿತ್ತು. ಅದು ಈಗ ಮತ್ತೆ ನೆನಪಿಗೆ ಬರುವಂತಾಯಿತು ಎಂದು ಸಚಿವ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮುಂದುವರಿಸಿರುವ ಸಚಿವ ಜಾವಡೇಕರ್, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ತುರ್ತುಪರಿಸ್ಥಿತಿಯ ಮನಸ್ಥಿತಿಯನ್ನು ನಾವು ಖಂಡಿಸುತ್ತೇವೆ.

ಇದಕ್ಕೆ ಮಹಾರಾಷ್ಟ್ರ ವೇದಿಕೆಯಾಗಿದ್ದು, ಅಲ್ಲಿ ಅವರದೇ ಸರ್ಕಾರವಿದೆ ಎಂದು ಟೀಕಿಸಿದ್ದಾರೆ. ಎರಡು ವರ್ಷ ಹಳೆಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅರ್ನಾಬ್ ಗೋಸ್ವಾಮಿ ಅವರನ್ನು ಪೊಲೀಸರು ಬುಧವಾರ ಬೆಳಗ್ಗೆ ಬಂಧಿಸಿದರು.