fbpx

30ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜಕೀಯ ಪಕ್ಷಗಳ ಬ್ಯಾನರ್ ಹಾಕದಿದ್ದರೆ, ಅಖಿಲ ಕೊಡವ ಸಮಾಜ ಹಾಗೂ ಯೂತ್ ವಿಂಗ್ ಬೆಂಬಲ

ಸೈನಿಕನ ಕುಟುಂಬದ ಮೇಲಿನ ಹಲ್ಲೆಯನ್ನು ಖಂಡಿಸಿ ಇದೇ 30ನೇ ಶುಕ್ರವಾರ ವಿವಿಧ ಸಂಘಟನೆಗಳು ಮಡಿಕೇರಿಯ ಜ.ತಿಮ್ಮಯ್ಯ ವ್ರತ್ತದಲ್ಲಿ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಗೆ ಅಖಿಲ ಕೊಡವ ಸಮಾಜ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಬೆಂಬಲ ಸೂಚಿಸಿದೆ.

ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಚಮ್ಮಟೀರ ಪ್ರವೀಣ್ ಉತ್ತಪ್ಪ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರಲ್ಲದೆ ರಾಜಕೀಯ ರಹಿತವಾಗಿ ಯಾವುದೇ ಸಂಘಟನೆಗಳು ಈ ಘಟನೆಯ ವಿರುದ್ಧ ಹೋರಾಟ ಹಮ್ಮಿಕೊಂಡರೆ ನಮ್ಮ ಸಂಪೂರ್ಣ ಬೆಂಬಲವಿದೆ ಆದರೆ ಈ ಪ್ರತಿಭಟನೆಗಳು ಯಾವುದೇ ರಾಜಕೀಯ ಪಕ್ಷದ ಚಿಹ್ನೆ ಅಥವಾ ಬ್ಯಾನರ್ ಅಡಿಯಲ್ಲಿ ಆಗಬಾರದು ಎಂದು ತಿಳಿಸಿದ್ದಾರೆ. ಈಗಾಗಲೇ ಕೆಲವೊಂದು ಸಂಘಟನೆಗಳು 30ರಂದು ಶುಕ್ರವಾರ 11ಗಂಟೆಗೆ ಮಡಿಕೇರಿಯ ಜ. ತಿಮ್ಮಯ್ಯ ವ್ರತ್ತದ ಬಳಿ ಪ್ರತಿಭಟನೆಗೆ ಕರೆಕೊಟ್ಟಿದ್ದು ನಮ್ಮ ಎರಡು ಸಂಘಟನೆಗಳು ಇದಕ್ಕೆ ಸಂಪೂರ್ಣ ಬೆಂಬವಿದೆ ಎಂದಿದ್ದಾರೆ. ಈಗಾಗಲೇ ಈ ಘಟನೆಯನ್ನು ಖಂಡಿಸಿದ್ದು ಇದೀಗ ಕೆಲವು ಆರೋಪಿಗಳ ಬಂದನದ ಹಿಂದೆಯೇ ಅವರನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಈ ರೀತಿ ಆರೋಪಿಗಳನ್ನು ಬಿಡುಗಡೆ ಮಾಡುವುದಾದರೆ ಇನ್ನಷ್ಟು ಅಪರಾಧಗಳು ಅಧಿಕವಾಗುವ ಸಾದ್ಯತೆ ಹೆಚ್ಚು. ಘಟನೆ ಆಕಸ್ಮಿಕವಾಗಿ ಆಗಿದ್ದರು ಹಲ್ಲೆ ಹಾಗೂ ದರೋಡೆ ಉದ್ದೇಶ ಪೂರ್ವಕವಾಗಿಯೇ ಆಗಿದೆ. ಇಲ್ಲಿ ಹಲ್ಲೆಗೊಳಗಾದವರ ಹೇಳಿಕೆಯನ್ನು ಹೊರತು ಪಡಿಸಿದ್ದರು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ ಇಪ್ಪತ್ತಕ್ಕೂ ಅಧಿಕ ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ಮೊಬೈಲ್ ಕರೆಗಳ ಆಧಾರ ಹಾಗೂ ಹತ್ತಿರದ ಸಿಸಿ ಟಿವಿ ಕ್ಯಾಮೆರಾ ಆಧಾರದ ಮೇಲೆ ತನಿಖೆ ನಡೆಸಿ ಎಲ್ಲಾರನ್ನು ಕೂಡಲೇ ಬಂಧಿಸಬೇಕಿದೆ. ಕೊಡಗಿನಲ್ಲಿ ತಾಲಿಬಾನ್ ಸಂಸ್ಕೃತಿಯನ್ನು ಮಟ್ಟಹಾಕಬೇಕಿದೆ. ದೇಶದಲ್ಲಿ ಉಗ್ರಗಾಮಿಗಳ ಚಟುವಟಿಕೆ ಅಧಿಕವಾಗಿದ್ದು, ಯೋಧನ ಚಲನವಲನಗಳನ್ನು ಗಮನಿಸಿ ಅಪಘಾತ ಮಾಡಿ ಹಲ್ಲೆ ನಡೆಸಿ ಆತನ ಮನೋಬಲವನ್ನು ಕುಗ್ಗಿಸುವ ಪ್ರಯತ್ನವು ನಡೆಸುವ ಸಾಧ್ಯತೆ ಇದ್ದು, ಇದನ್ನು ಸರಿಯಾಗಿ ತನಿಖೆಯಾಗುವ ಮೊದಲೇ ಆರೋಪಿಗಳನ್ನು ಬಿಡುಗಡೆಗೊಳಿಸಿ ಸಾಕ್ಷಿ ನಾಶ ಮಾಡಲು ಅವಕಾಶ ಮಾಡಿಕೊಟ್ಟದ್ದು ಎಷ್ಟು ಸರಿ. ಹಾಗೇ ಈ ವಿಷಯದಲ್ಲಿ ಆಡಳಿತ ಪಕ್ಷದಲ್ಲಿರುವ ಶಾಸಕರು ಹಾಗೂ ಸಂಸದರು ಸೇರಿದಂತೆ ಪ್ರಮುಖರು ಮೌನ ಮುರಿಯದೇ ಇರುವುದು ಎಷ್ಟು ಸರಿ. ಹಾಗೇ ಕೊಡಗಿನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾಂಗ್ರೆಸ್ ಮುಖಂಡರಲ್ಲಿ ವೀಣಾ ಅಚ್ಚಯ್ಯ ಹಾಗೂ ಒಂದಿಬ್ಬರು ಆಸ್ಪತ್ರೆಗೆ ಹೋಗಿ ಹಲ್ಲೆಗೊಳಗಾದವರಿಗೆ ಸಾಂತ್ವನ ಹೇಳಿ ಘಟನೆಯನ್ನು ಖಂಡಿಸಿದ್ದು ಹೊರತುಪಡಿಸಿದರೆ ಉಳಿದವರು ಮೌನವಾಗಿರುವುದರ ಹಿಂದೆ ಓಟ್ ಬ್ಯಾಂಕ್ ರಾಜಕೀಯವೇ ಅಥವಾ ಜೆಡಿಎಸ್ ಕೂಡ ತಮ್ಮ ಪಕ್ಷದ ಪ್ರಮುಖರು ಇದರಲ್ಲಿ ಇದ್ದಾರೆಂದು ಮೌನಕ್ಕೆ ಶರಣಾಗಿದ್ದಾರೆಯೇ ಎಂಬ ಬಗ್ಗೆ ಸಂಶಯ ಮೂಡುತ್ತಿದೆ.

ತಪ್ಪು ಯಾರೇ ಮಾಡಿದ್ದರು ತಪ್ಪೇ, ಇದಕ್ಕೆ ರಾಜಕೀಯ ಹಾಗೂ ಜಾತಿಯ ಬಣ್ಣ ಕಟ್ಟದೆ ಘಟನೆಯನ್ನು ಎಲ್ಲಾರು ರಾಜಕೀಯ ರಹಿತವಾಗಿ ಖಂಡಿಸಬೇಕಿದೆ. ಕೊಡಗು ಸರ್ವ ಜನಾಂಗದ ಶಾಂತಿಯ ತೋಟ ಇಲ್ಲಿ ಆಶಾಂತಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಬೇಕಿದೆ. ಅದರಲ್ಲೂ ಒಬ್ಬ ಯೋಧ ಹಾಗೂ ಆತನ ಕುಟುಂಬ ಈ ದೇಶದ ಆಸ್ತಿ. ಒಂದೆಡೆ ದೇಶದೊಳಗೆ ಉಗ್ರರು ಸಂಚು ನಡೆಸುತ್ತಿದ್ದಾರೆ ಎಂಬ ಗುಪ್ತಚರ ಮಾಹಿತಿ ಹೇಳುತ್ತಿದೆ. ಹೀಗಿರುವಾಗ ಇಲ್ಲಿ ಹಲ್ಲೆ ಮಾಡಿದವರಿಗೆ ಕ್ರಿಮಿನಲ್ ಹಿನ್ನಲೆ ಇದೆಯಾ ಅಥವಾ ಬೇರೆ ಉದ್ದೇಶ ಇದೆಯಾ ಎಂದು ತನಿಖೆಯಾಗಬೇಕಿದೆ. ಇವರಲ್ಲಿ ಒಳ್ಳೆಯ ಉದ್ದೇಶ ಇದ್ದಿದ್ದರೆ ಅಷ್ಟು ಜನರನ್ನು ಕರೆಸಿಕೊಂಡು ಗುಂಪು ಹಲ್ಲೆ ಮಾಡಿ ದರೋಡೆ ನಡೆಸುವ ಅಗತ್ಯತೆ ಇರಲಿಲ್ಲ. ಈ ಬಗ್ಗೆ ಸತ್ಯಾಸತ್ಯತೆ ಹೊರಬೀಳಬೇಕಿದೆ. ತನಿಖೆಗೆ ಮೊದಲೇ ಆರೋಪಿಗಳನ್ನು ಬಿಡುಗಡೆ ಮಾಡಿರುವುದು ಹಾಗೂ ಈ ಕೃತ್ಯದಲ್ಲಿ 20ಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು ಕೇವಲ ಐದು ಜನರನ್ನು ಮಾತ್ರ ಬಂಧಿಸಲಾಗಿದೆ. ಕೂಡಲೇ ಎಲ್ಲಾ ಆರೋಪಿಗಳನ್ನು ಬಂಧಿಸಬೇಕಿದೆ ಇವರ ವಿರುದ್ಧ ಸರಿಯಾದ ಆರೋಪ ಪಟ್ಟಿಯನ್ನು ತಯಾರಿಸಿ ಆದಷ್ಟು ಬೇಗ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ. ಈ ಮೂಲಕ ಆರೋಪಿಗಳಿಗೆ ಕಠೀಣ ಶಿಕ್ಷೆಯಾಗಬೇಕಿದೆ. ಕೊಡಗಿನಲ್ಲಿ ಬಹುತೇಕ ಮನೆಗಳಲ್ಲಿ ಕೋವಿ ಇರುತ್ತದೆ ಎನ್ನುವ ಕಾರಣಕ್ಕೆ ಇಂತಹವರು ಮನೆಗಳಿಗೆ ನುಗ್ಗಲು ಹಿಂದೇಟು ಹಾಕುತ್ತಿದ್ದಾರೆ ಇಲ್ಲವೆಂದರೆ ಕೊಡಗಿನ ಪರಿಸ್ಥಿತಿ ಎಲ್ಲಿಗೆ ತಲಪುತಿತ್ತು ಎಂದು ಊಹಿಸಲು ಅಸಾಧ್ಯ ಎನ್ನಬಹುದು. ಆರೋಪಿಗಳು ಎಷ್ಟೇ ಪ್ರಭಾವಿಗಳಿರಲಿ ಕೂಡಲೇ ಎಲ್ಲಾರನ್ನು ಬಂಧಿಸಬೇಕಿದೆ. ತನಿಖೆಯ ನಂತರ ಇವರನ್ನು ಅಪರಾಧಿಗಳು ಹಾಗೂ ನಿರಪರಾಧಿಗಳು ಎಂದು ತಿರ್ಮಾನಿಸಲಿ. ಹಾಗೇ ಈ ಕೃತ್ಯವನ್ನು ಖಂಡಿಸಿ ರಾಜಕೀಯ ರಹಿತವಾಗಿ ಶುಕ್ರವಾರ ನಡೆಯಲಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.

error: Content is protected !!