1800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ ದೇವಸ್ಥಾನ

ತೆಲಂಗಾಣದಲ್ಲಿ 1800 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ದೇವಾಲಯವೊಂದು ಲೋಕಾರ್ಪಣೆಗೊಂಡಿದೆ. ಈ ಭವ್ಯವಾದ ಮಂದಿರ ನಿರ್ಮಾಣಕ್ಕೆ ಕೆಜಿಗಟ್ಟಲೆ ಬಂಗಾರವನ್ನು ಬಳಸಲಾಗಿದೆ. ತೆಲಂಗಾಣದ ಯಾದಾದ್ರಿಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯ ಇದು.

ಭಕ್ತರಿಗಾಗಿ ದೇವಾಲಯ ತೆರೆಯುವ ಮುನ್ನ ದೊಡ್ಡ ದೊಡ್ಡ ಯಜ್ಞ ಯಾಗಾದಿಗಳನ್ನು ಮಾಡಲಾಗಿದೆ. ಈ ದೇವಾಲಯ ತೆರೆಯುವ ಮುಹೂರ್ತವನ್ನು ಖುದ್ದು ಸಿಎಂ ಕೆಸಿ ಚಂದ್ರಶೇಖರ್‌ ರಾವ್‌ ಅವರ ಗುರೂಜಿ ಚಿನ್ನ ಜೀಯರ್‌ ಸ್ವಾಮೀಜಿ ಅವರೇ ನಿರ್ಧರಿಸಿದ್ದರು. ದೇವಾಲಯದ ಪುನರಾರಂಭಕ್ಕೂ ಮುನ್ನ ‘ಮಹಾ ಸುದರ್ಶನ ಯಾಗ’ ನಡೆದಿದೆ. ಇದಕ್ಕಾಗಿ ನೂರು ಎಕರೆ ಯಾಗದ ವಾಟಿಕಾವನ್ನು ನಿರ್ಮಿಸಲಾಗಿದ್ದು, 1048 ಯಜ್ಞಕುಂಡಗಳನ್ನು ಸಿದ್ಧಪಡಿಸಲಾಗಿತ್ತು.

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನವು ಹೈದರಾಬಾದ್‌ನಿಂದ ಸುಮಾರು 80 ಕಿಮೀ ದೂರದಲ್ಲಿದೆ. ಈ ದೇವಾಲಯದ ಸಂಕೀರ್ಣವು 14.5 ಎಕರೆಗಳಷ್ಟು ವಿಸ್ತಾರವಾಗಿದೆ ಮತ್ತು ಇದರ ಪುನರ್ನಿರ್ಮಾಣವು 2016 ರಲ್ಲಿ ಪ್ರಾರಂಭವಾಗಿತ್ತು. ಈ ಬೃಹತ್ ದೇವಾಲಯದ ಒಂದು ವಿಶೇಷತೆಯೆಂದರೆ, ಅದರ ಪುನರ್‌ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಬಳಸಿಲ್ಲ. ದೇವಾಲಯದ ಮರು ನಿರ್ಮಾಣಕ್ಕೆ 2.5 ಲಕ್ಷ ಟನ್ ಗ್ರಾನೈಟ್ ಅನ್ನು ವಿಶೇಷವಾಗಿ ಆಂಧ್ರಪ್ರದೇಶದ ಪ್ರಕಾಶಂನಿಂದ ತರಲಾಗಿದೆ.

ಇದಲ್ಲದೇ ದೇವಾಲಯದ ಪ್ರವೇಶ ದ್ವಾರಗಳನ್ನು ಹಿತ್ತಾಳೆಯಿಂದ ಮಾಡಲಾಗಿದೆ. ಅವುಗಳಿಗೆ ಚಿನ್ನದಿಂದ ಅಲಂಕರಿಸಲಾಗಿದೆ. ದೇವಸ್ಥಾನದ ವಿಶೇಷ ದ್ವಾರಕ್ಕೆ 125 ಕೆಜಿ ಚಿನ್ನದಿಂದ ಅಲಂಕಾರ ಮಾಡಿರುವುದು ವಿಶೇಷ. ಇದಕ್ಕಾಗಿ ಸಿಎಂ ಕೆಸಿಆರ್ ಸೇರಿದಂತೆ ಹಲವು ಸಚಿವರು ಕೂಡ ಬಂಗಾರವನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಕೆಸಿಆರ್ ಕುಟುಂಬದಿಂದ ಸುಮಾರು ಒಂದೂವರೆ ಕೆಜಿ ಚಿನ್ನವನ್ನು ದಾನ ಮಾಡಲಾಗಿದೆ. ಈ ದೇವಾಲಯದ ವಿನ್ಯಾಸವನ್ನು ಪ್ರಸಿದ್ಧ ಚಲನಚಿತ್ರ ಸೆಟ್ ಡಿಸೈನರ್ ಆನಂದ್ ಸಾಯಿ ಸಿದ್ಧಪಡಿಸಿದ್ದಾರೆ.

error: Content is protected !!