124 ಸಿಖ್ ರೆಜಿಮೆಂಟಲ್ಲಿ ಅನುರಾಗ್ ಠಾಕೂರಿಗೆ ಗೌರವ ಕ್ಯಾಪ್ಟನ್ ಪದೋನ್ನತಿ!

ದೆಹಲಿ: ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ನೂತನ ಅಭಿದಾನಕ್ಕೆ ಪಾತ್ರರಾಗಿದ್ದಾರೆ. ಸಚಿವ ಮತ್ತು ಸಂಸದರಾಗಿದ್ದಾಗಲೇ ಭೂಸೇನೆಯಲ್ಲಿ ಗೌರವ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಹಮಿರ್ಪುರ್ ಕ್ಷೇತ್ರದ ಸಂಸದ ಅನುರಾಗ್ ಠಾಕೂರ್ ಅವರು ಇದೀಗ 124 ಸಿಖ್ ರೆಜಿಮೆಂಟ್​ನಲ್ಲಿ ಕ್ಯಾಪ್ಟನ್ ಗೌರವಕ್ಕೆ ಪಾತ್ರವಾಗಿದ್ದಾರೆ. 2016ರ ಜೂನ್​ನಿಂದಲೇ ಗೌರವ ಲೆಫ್ಟಿನೆಂಟ್ ಹುದ್ದೆ ನಿರ್ವಹಿಸುತ್ತಿದ್ದ ಅವರು ಇದೀಗ ಪದೋನ್ನತಿ ಹೊಂದಿದ್ದಾರೆ.

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ‘ಲೆಫ್ಟಿನೆಂಟ್ ಪದವಿಯಿಂದ ಕ್ಯಾಪ್ಟನ್ ಹುದ್ದೆಗೆ ಪದೋನ್ನತಿ ಹೊಂದುತ್ತಿರುವುದು ಖುಷಿಯ ಸಂಗತಿ. ಮಾತೃಭೂಮಿಗೆ ಸೇವೆ ಸಲ್ಲಿಸಲು ಸೈನ್ಯದಲ್ಲಿ ಇನ್ನೂ ಹೆಚ್ಚಿನ ಅವಕಾಶ ದೊರೆತಿರುವುದು ಅತ್ಯಂತ ಹೆಮ್ಮೆಯ ಸಂಗತಿ.

ದೇಶದ ಕುರಿತು ನನ್ನ ಅಭಿಮಾನ ಮತ್ತು ಸೇವಾ ಮನೋಭಾವವನ್ನು ಇನ್ನೂ ಹೆಚ್ಚಿಸಿಕೊಳ್ಳುತ್ತೇನೆ’ ಎಂದು ತಿಳಿಸಿದ್ದಾರೆ.

ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಬಹು ಹಿಂದಿನಿಂದಲೂ ಸೇನೆಗೆ ಸೇರಿ ಸೇವೆ ಸಲ್ಲಿಸುವ ಪದ್ಧತಿಯಿದೆ. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಈ ಪದ್ಧತಿಯನ್ನು ನಾನು ಮುಂದುವರೆಸಿಕೊಂಡು ಹೋಗಬಯಸುತ್ತೇನೆ. ಈ ಅವಕಾಶ ನನಗೆ ದೊರೆತಿರುವುದು ಸಹಜವಾಗಿ ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

error: Content is protected !!