ಹೊಂದಾಣಿಕೆ ಇದ್ದಾಗಲೇ ಬದುಕು ಸುಖಕರ!

ಈ “ಎಲ್ಲಾ ಅವರವರ ಭಾವಕ್ಕೆ ಅವರವರ ಭಕುತಿಗೆ” ಎಂಬ ಮಾತು ಬಹಳ ಸತ್ಯವಾದ ಮಾತು. ಬೆಳಗ್ಗೆ ನಗುತ್ತಾ ಮಾತಾಡಿದ ವ್ಯಕ್ತಿ ಮಧ್ಯಾಹ್ನಕ್ಕೆ ಮೂಕನಾಗಬಹುದು, ದಿನವಿಡೀ ಉತ್ಸಾಹದಿಂದ ಇದ್ದವನು ಸಂಜೆಯ ಹೊತ್ತಿಗೆ ಸೋಮಾರಿಯಾಗಬಹುದು. ಮನಸ್ಸಿನ ಚಂಚಲತೆ ಇಲ್ಲದೆ ಇರುವ ವ್ಯಕ್ತಿಯೇ ಇಲ್ಲ. ಒಬ್ಬ ಮನುಷ್ಯನಲ್ಲಿ 0.1% ಅಷ್ಟಾದರೂ ಚಂಚಲತೆ ಇದ್ದೇ ಇರುತ್ತದೆ. ಈ ಕಾಲಚಕ್ರದ ಒಳಗೆ ಸಿಲುಕಿ ಒದ್ದಾಡದ ವ್ಯಕ್ತಿಯೇ ಇಲ್ಲ.

ಕೆಲವರು ಯಾರದೋ ಮೇಲಿನ ಕೋಪವನ್ನ ಯಾರ ಮೇಲೋ ತೀರಿಸಿಕೊಳ್ಳುವ ಕಥೆಗಳನ್ನು ನೀವು ಕೇಳಿರಬಹುದು ಅಥವಾ ಅದು ನಿಮ್ಮ ಅನುಭವಕ್ಕೂ ಬಂದಿರಬಹುದು. ಮನಸ್ಥಿತಿ ಏನೇ ಇರಬಹುದು ಆದರೆ ನಮ್ಮ ಮುಂದಿರುವ ವ್ಯಕ್ತಿಗೂ ಒಂದು ಮನಸ್ಸಿದೆ ಎಂಬುದನ್ನು ಮರೆತಾಗ ಮಾತ್ರ ಈ ಯಾರದೋ ಮೇಲಿನ ಕೋಪದ ಬಾಣ ಯಾರ ಮೇಲೋ ಪ್ರಹಾರವಾಗಿಬಿಡುತ್ತದೆ.

ಈ ಮಾತಿನ ಜಗಳ ದೈಹಿಕ ಜಗಳಕ್ಕಿಂತ ಕೆಟ್ಟದ್ದು. ಹುಡುಗರ ಮಧ್ಯದಲ್ಲಿ ಜಗಳ ಹೆಚ್ಚು ಕಾಲ ನಿಲ್ಲುವುದಿಲ್ಲ ಏಕೆಂದರೆ ಅವರ ಜಗಳ ಮಾತಿಗಿಂತ ಕೈಗಳಿಂದಗುವುದೇ ಹೆಚ್ಚು. ನಾವು ಹುಡುಗಿಯರು ಮಾತಿನಲ್ಲೇ ಜಗಳವಾಡಿ ಮಾತನ್ನೇ ಬಿಟ್ಟುಬಿಡುತ್ತೇವೆ. ಆ ಮಾತುಗಳು ಮನಸ್ಸಲ್ಲಿ ಹಾಗೆ ಉಳಿದು ಬಿಡುವುದರಿಂದ ಕ್ಷಮಿಸೋದು ಕಷ್ಟವಾಗಿಬಿಡುತ್ತದೆ. ಹಾಗಂತ ಇನ್ನು ಎಲ್ಲಾ ಹುಡುಗಿಯರು ಜುಟ್ಟು ಹಿಡಿದು ಜಗಳವಾಡಬೇಕು ಎಂದಲ್ಲ ನನ್ನ ಮಾತಿನ ಅರ್ಥ. ಮಾತಿನ ಪೆಟ್ಟು ಎಷ್ಟು ಹರಿತ ಎಂದು ಹೇಳಿದೆ ಅಷ್ಟೇ.

ನಮ್ಮ ಯೋಚನೆ ಅಥವಾ ನಿರ್ಧಾರ ನಮಗೆ ಸರಿಯಾಗಿಯೇ ಕಾಣಬಹುದು. ನಾವು ಇನ್ನೊಬ್ಬರಿಗೆ ಹೇಳುವ ಮಾತು ನಮಗೆ ತಪ್ಪಾಗಿ ಕಾಣದೆ ಇರಬಹುದು. ಆ ಮಾತಿನ ಪೆಟ್ಟು ಹೇಗಿದೆ ಎಂದು ಅರಿಯಲು ಇನ್ನೊಬ್ಬರ ಜಾಗದಲ್ಲಿ ನಾವಿದ್ದಾಗ ಮಾತ್ರ ಸಾಧ್ಯ.
ಈ ಯೋಚನೆ – ಜಗಳ ಎಂದಾಗ ಒಂದು ವಿಷಯ ನೆನಪಿಗೆ ಬಂತು. ಅತ್ತೆ – ಸೊಸೆ – ನಾದಿನಿಯರ ಗಲಾಟೆ. ಅತ್ತೆ ಸೊಸೆಯನ್ನು ದೂರುತ್ತಾಳೆ. ಸೊಸೆ ತನ್ನ ಅತ್ತೆಯನ್ನು ದ್ವೇಷಿಸುತ್ತಾಳೆ. ಇನ್ನು ಈ ನಾದಿನಿಯರು ಶಿವಪೂಜೆಯಲ್ಲಿ ಕರಡಿ ಬಿಟ್ಟ ಹಾಗೆ ನನ್ನ ತಾಯಿಯನ್ನು ಅತ್ತಿಗೆ ಸರಿಯಾಗಿ ನೋಡಿಕೊಳ್ಳುವುದಿಲ್ಲ ಎಂದು ಅತ್ತಿಗೆಯ ಮೇಲೆ ಬೇಸರಗೊಳ್ಳುತ್ತಾಳೆ.
ಸೊಸೆಯನ್ನು ದ್ವೇಷಿಸುವ ಅತ್ತೆಗೆ ತನ್ನ ಮಗಳು ಅವಳ ಅತ್ತೆಯನ್ನು ಹೇಗೆ ನೋಡಿ ಕೊಳ್ಳುತ್ತಿದ್ದಾಳೆ ಎಂಬುದು ತಿಳಿದಿರುವುದಿಲ್ಲ. ಅತ್ತೆಯನ್ನು ದೂರುವ ಸೊಸೆಗೆ ತನ್ನ ತಾಯಿ ಅತ್ತೆಯಾಗಿ ಹೇಗಿದ್ದಾರೆ ಎಂಬುದನ್ನು ಮರೆತಿರುತ್ತಾಳೆ. ಇನ್ನು ಈ ನಾದಿನಿಯರು ಅಮ್ಮನ ಮಾತು ಕೇಳಿ ಅತ್ತಿಗೆಯನ್ನು ದೂರುತ್ತಾ ದೂರುತ್ತಾ ಸತ್ಯವನ್ನು ಅರಿಯುವ ಪ್ರಯತ್ನವನ್ನೇ ಮರೆತುಬಿಡುತ್ತಾರೆ.

ತಾಯಿ ಅತ್ತೆಯಾದಾಗ ಕ್ರೂರಿಯೆ ಆಗುವಳು….
ಮಗಳು ಸೋಸೆಯಾದಾಗ ಬೇಜವಬ್ದಾರಿಯೇ ಆಗುವಳು….
ಅಮ್ಮನ ಪ್ರೀತಿಯನ್ನು ಅತ್ತೆಯಲ್ಲಿ ಬಯಸುವ ಹುಚ್ಚು ಸೊಸೆಯದ್ದು..
ಸ್ವಂತ ಮಕ್ಕಳ ಹಾಗೆಯೇ ಪ್ರಾಮುಖ್ಯತೆ ಕೊಡಬೇಕು ಎಂಬ ಆಸೆ ಅತ್ತೆಯದು…

ಜೀವನ ಒಂದು ನಾಟಕರಂಗ ಎಂದು ಸುಮ್ಮನೆ ಹೇಳಿಲ್ಲ. ಒಬ್ಬ ತಾಯಿ, ಅಮ್ಮನಾಗಿ ಕರುಣಾಮಯಿ ಆದರೆ ಆತ್ತೆಯಾಗಿ ರಾಕ್ಷಸಿಯಾಗಬಹುದು. ಮುದ್ದಿನ ಮಗಳು ಮಗಳಾಗಿ ಪ್ರೀತಿಯ ದೇವತೆಯಾದರೇ ಸೊಸೆಯ ಪಾತ್ರದಲ್ಲಿ ಕೆಟ್ಟವಳೇ. ಇಲ್ಲಿ ಪಾತ್ರಗಳ ತಪ್ಪೇ ಹೊರತು ಅತ್ತೆ – ಸೊಸೆಯರದ್ದಲ್ಲ.

ನಮ್ಮ ಕಣ್ಣಿಗೆ ಕಂಡದ್ದು ಮನಸ್ಸಿಗೆ ಸರಿ ಎಂದಾಗಬಹುದು. ಆದರೆ ನಿರ್ಧರಿಸುವ ಹಕ್ಕು ಬುದ್ದಿಗೆ ಕೊಟ್ಟಾಗ ಮಾತ್ರ Practicle ಆಗುವುದು. Practicle ಆಗಿ ಬದುಕುವವನು ಆದರ್ಶಗಳನ್ನು ಮರೆತವರೂ ಅಲ್ಲ, ಆದರ್ಶ ಜೀವನ ನಡೆಸುವ ವ್ಯಕ್ತಿಗಳು practicle ಆಗಿ ಯೂಚಿಸಲಾರರು ಎಂದೂ ಅಲ್ಲ.

ಆ ಸಮಯಕ್ಕೆ, ಸಂದರ್ಭಕ್ಕೆ ಯೋಗ್ಯವಾಗಿ ನಡೆಯುವವನಿಗೆ ನನ್ನ ಮಾತುಗಳು ಒಪ್ಪಿಗೆಯಾಗಬಹುದು. ಪ್ರತಿಯೊಂದರಲ್ಲೂ ತಪ್ಪು ಹುಡುಕುವವರಿಗೆ, ತಪ್ಪು ಹುಡುಕಲು ಒಂದು ಕೆಲಸವಾಗಬಹುದು.

✍🏻 ಪ್ರಣಮ್ಯ ಭುವನೇಶ್

error: Content is protected !!