ಹಿಜಾಬ್ ಸಮವಸ್ತ್ರವಲ್ಲ!

ತಿರುವನಂತಪುರ: “ಮೊದಲೆಲ್ಲ ಹೆಣ್ಣು ಮಕ್ಕಳನ್ನು ಭೂಮಿಯಡಿ ಹೂತಿಡುತ್ತಿದ್ದರು. ಈಗ ಅವರನ್ನು ಶಾಲು, ತ್ರಿವಳಿ ತಲಾಖ್ ಹೆಸರಲ್ಲಿ ತುಳಿಯಲಾಗುತ್ತಿದೆ’ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ ಕುರಿತು “ನ್ಯೂಸ್18′ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಆಕ್ರಮಣಕಾರರಿಂದಾಗಿ ಉತ್ತರ ಭಾರತಕ್ಕೆ ಈ ಶಾಲು ಬಂದಿತು.
ಆದರೆ ಈಗ ಅದು ಕಡ್ಡಾಯವಾಗಿ ಉಳಿದಿಲ್ಲ. ವಿದ್ಯಾರ್ಥಿಗಳು ಶಾಲೆಗೆ ಸೇರಿದ್ದಾರೆ ಎಂದ ಮೇಲೆ ಅಲ್ಲಿನ ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಬೇರೆ ಶಾಲೆಗೆ ಸೇರಬೇಕು. ಹಿಂದಿನ ಸರಕಾರ ನಿಯಮ ಮೀರುವವರ ಮುಂದೆ ತಲೆ ಬಾಗುತ್ತಿತ್ತು. ಆದರೆ ಈಗಿನ ಸರಕಾರ ಹಾಗಿಲ್ಲ’ ಎಂದು ಅವರು ಹೇಳಿದ್ದಾರೆ.
“ಹಿಂದೆ ಮುಸ್ಲಿಂ ಪ್ರವಾದಿಯೊಬ್ಬರ ಮನೆಯ ಹೆಣ್ಣು ಮಗಳೇ ಹಿಜಾಬ್ ಧರಿಸುವುದಕ್ಕೆ ನಿರಾಕರಿಸಿದ್ದಳು. ನಾನು ಸುಂದರವಾಗಿದ್ದೇನೆ. ದೇವರು ನನ್ನಲ್ಲಿ ಸೌಂದರ್ಯ ತುಂಬಿದ್ದಾನೆ. ಅದನ್ನು ನಾನು ಬೇರೆಯವರಿಗೆ ತೋರಿಸಲೇಬೇಕೆಂದು ವಾದಿಸಿದ್ದಳು. ಇಸ್ಲಾಂನ ಮೊದಲ ತಲೆಮಾರಿನ ಹೆಣ್ಣು ಮಕ್ಕಳು ಇದ್ದಿದ್ದು ಹೀಗೆ…’ ಎಂದು ಇತಿಹಾಸವನ್ನೂ ನೆನಪಿಸಿದ್ದಾರೆ.
ಇದೇ ವೇಳೆ ಹಿಜಾಬ್ ನಿಷೇಧ ವಿರೋಧಿಸಿ ದಿಲ್ಲಿಯ ಕರ್ನಾಟಕ ಭವನದ ಎದುರು ಶುಕ್ರವಾರ ಎಸ್‌ಎಫ್‌ಐ ಸಂಘಟನೆ ಪ್ರತಿಭಟನೆ ನಡೆಸಿದೆ.
ವಾರಕ್ಕೆ ಒಂದು ದಿನ ಸಾಂಪ್ರದಾಯಿಕ ವಸ್ತ್ರ
ಹಿಜಾಬ್ ವಿವಾದದ ನಡುವೆಯೇ ಅರುಣಾಚಲ ಪ್ರದೇಶದಲ್ಲಿ ಖಾಸಗಿ ಶಾಲೆಗಳಿಗೆ ವಾರಕ್ಕೆ ಒಂದು ದಿನ ಅಂದರೆ ಪ್ರತೀ ಸೋಮವಾರ ಸಾಂಪ್ರದಾಯಿಕ ವಸ್ತ್ರವನ್ನು ಧರಿಸಲು ಅನುಮತಿ ನೀಡಲಾಗಿದೆ. ರಾಜ್ಯದ 180 ಶಾಲೆಗಳ ವಿದ್ಯಾರ್ಥಿಗಳಿಗೆ ವಾರಕ್ಕೆ ಒಮ್ಮೆ ಸಾಂಪ್ರದಾಯಿಕ ವಸ್ತ್ರ ಧರಿಸಲು ಅನುಮತಿ ನೀಡಲಾಗುವುದು. ಉಳಿದ ಎಲ್ಲ ದಿನಗಳು ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಬೇಕು ಎಂದು ಖಾಸಗಿ ಶಾಲೆಗಳು, ಮಕ್ಕಳ ಕಲ್ಯಾಣ ಇಲಾಖೆ ಹೇಳಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಬುಡಕಟ್ಟು ಮತ್ತು ಉಪ-ಬುಡಕಟ್ಟು ವಿದ್ಯಾರ್ಥಿಗಳಿದ್ದು, ಅವರ ಸಾಂಪ್ರದಾಯಿಕ ವಸ್ತ್ರ ಧರಿಸಲು ಅವಕಾಶ ನೀಡಲಾಗಿದೆ.