ಹಿಜಾಬ್ ಭಾರತೀಯ ಸಂಸ್ಕೃತಿಯ ಭಾಗ ಎಂದ ಆರ್.ಎಸ್.ಎಸ್ ಮುಸ್ಲಿಂ ಮಂಚ್!

ಮಹತ್ವದ ನಡೆಯೊಂದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಂಗ ಸಂಸ್ಥೆ ಮುಸ್ಲಿಂ ಮಂಚ್ ಹಿಜಾಬ್​ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಾಮುಖ್ಯತೆ ಮೆರೆದ ಮಂಡ್ಯದ ವಿದ್ಯಾರ್ಥಿನಿ ಬೀಬಿ ಮುಸ್ಕಾನ್​ ಖಾನ್​ಳ ಬೆಂಬಲಕ್ಕೆ ನಿಂತಿದೆ.

ಹಿಜಬ್ ಅಥವಾ ಪರದೆಯು ಭಾರತೀಯ ಸಂಸ್ಕೃತಿಯದ್ದೇ ಒಂದು ಭಾಗವಾಗಿದೆ ಎಂದು ಹೇಳಿದೆ.

ಆರ್​.ಎಸ್.​ಎಸ್.​ ಮುಸ್ಲಿಂ ವಿಭಾಗವಾದ ಮುಸ್ಲಿಂ ರಾಷ್ಟ್ರೀಯ ಮಂಚ್​​ ಹಿಜಾಬ್​ ಧರಿಸಲು ಬೀಬಿ ಮುಸ್ಕಾನ್​ ನಡೆಯನ್ನು ಬೆಂಬಲಿಸಿದೆ ಹಾಗೂ ಕೇಸರಿ ಶಾಲು ಹಿಡಿದ ಯುವಕರ ನಡೆಯನ್ನು ಖಂಡಿಸಿದೆ.

ಮುಸ್ಲಿಂ ರಾಷ್ಟ್ರೀಯ ಮಂಚ್​​ನ ಅವಧ್​ ಪ್ರಾಂತ್​ ಸಂಚಾಲಕ ಅನಿಲ್​ ಸಿಂಗ್​ ಈ ವಿಚಾರವಾಗಿ ಮಾತನಾಡಿದ್ದು, ಈಕೆ ನಮ್ಮದೇ ಸಮುದಾಯದ ಸಹೋದರಿ ಹಾಗೂ ಮಗಳಾಗಿದ್ದಾಳೆ. ಈ ವಿವಾದದಲ್ಲಿ ನಾವು ಆಕೆಯ ಪರವಾಗಿದ್ದೇವೆ ಎಂದು ಹೇಳಿದ್ದಾರೆ.

ಹಿಂದೂ ಸಂಸ್ಕೃತಿಯು ಮಹಿಳೆಯರಿಗೆ ಗೌರವ ನೀಡುವಂತೆ ಹೇಳುತ್ತದೆ. ಹೀಗಿರುವಾಗ ಜೈ ಶ್ರೀರಾಮ್ ಎಂದು ಕೂಗುತ್ತಿದ್ದ ವಿದ್ಯಾರ್ಥಿಗಳು ಯುವತಿಯನ್ನು ಅಡ್ಡಗಟ್ಟಲು ಯತ್ನಿಸಿದ್ದು ನಿಜಕ್ಕೂ ತಪ್ಪು ಎಂದು ಮುಸ್ಲಿಂ ರಾಷ್ಟ್ರೀಯ ಮಂಚ್​ ತನ್ನ ಹೇಳಿಕೆಯಲ್ಲಿ ತಿಳಿಸಿದೆ.‌

ಹಿಜಾಬ್​ ಧರಿಸಲು ಯುವತಿಗೆ ಸಾಂವಿಧಾನಿಕವಾದ ಹಕ್ಕಿದೆ. ಆಕೆ ಕ್ಯಾಂಪಸ್​ನಲ್ಲಿ ಕಾಲೇಜಿನ ಡ್ರೆಸ್​ಕೋಡ್​ನ್ನು ಉಲ್ಲಂಘಿಸಿದ್ದಲ್ಲಿ ಆಕೆಯ ವಿರುದ್ಧ ಕ್ರಮ ಕೈಗೊಳ್ಳಲು ಕಾಲೇಜು ಆಡಳಿತ ಮಂಡಳಿಗೆ ಅಧಿಕಾರವಿದೆ. ಕೇಸರಿ ಶಾಲನ್ನು ಧರಿಸಿದ್ದ ವಿದ್ಯಾರ್ಥಿಗಳು ಜೈ ಶ್ರೀರಾಮ್​ ಎಂದು ಕೂಗುತ್ತಾ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿದ್ದು ತಪ್ಪು ಎಂದು ಹೇಳಿದೆ.

error: Content is protected !!