fbpx

ಹಿಜಾಬ್ ಪ್ರಕರಣದ ತೀರ್ಪು ನೀಡಿದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಆರೋಪದ ಮೇಲೆ ಇಬ್ಬರ ಬಂಧನ

ಚೆನ್ನೈ/ಬೆಂಗಳೂರು: ವಿದ್ಯಾರ್ಥಿಗಳು ತರಗತಿಯಲ್ಲಿ ಹಿಜಾಬ್ ಧರಿಸುವುದಕ್ಕೆ ಹೇರಲಾಗಿರುವ ನಿಷೇಧವನ್ನು ಎತ್ತಿ ಹಿಡಿದು ಮಾರ್ಚ್ 15 ರಂದು ಹಿಜಾಬ್ ಕುರಿತು ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡು ಪೊಲೀಸರು ಇಬ್ಬರನ್ನು ಶನಿವಾರ ಬಂಧಿಸಿದ್ದಾರೆ.

ಕೋವೈ ರಹಮತುಲ್ಲಾನನ್ನು ತಿರುನಲ್ವೇಲಿಯಲ್ಲಿ ಬಂಧಿಸಲಾಗಿದ್ದು, ಎಸ್. ಜಮಾಲ್ ಮುಹಮ್ಮದ್ ಉಸ್ಮಾನಿ (44)ಯನ್ನು ತಂಜಾವೂರಿನಲ್ಲಿ ಬಂಧಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನ ತ್ರಿಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಹಾಗೂ ತಲೆ ಸ್ಕಾರ್ಫ್ ಅನ್ನು ನಿಷೇಧಿಸುವುದು ಸಮಂಜಸವಾದ ನಿರ್ಬಂಧದ ಅಡಿಯಲ್ಲಿ ಬರುತ್ತದೆ ಎಂದಿತ್ತು. ಶಿಕ್ಷಣ ಸಂಸ್ಥೆಗಳು ಕಡ್ಡಾಯಗೊಳಿಸಿದ ಸಮವಸ್ತ್ರವನ್ನು ವಿದ್ಯಾರ್ಥಿಗಳು ಪಾಲಿಸಬೇಕೆಂದು ಫೆಬ್ರವರಿ 5 ರ ಕರ್ನಾಟಕ ಸರಕಾರದ ಆದೇಶವನ್ನು ನ್ಯಾಯಾಲಯವು ಎತ್ತಿಹಿಡಿದಿತ್ತು.

ಕರ್ನಾಟಕ ಹೈಕೋರ್ಟ್ ನ ತೀರ್ಪಿನ ವಿರುದ್ಧ ಹಲವಾರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ಸಂಘಟನೆಗಳು ತಮಿಳುನಾಡಿನಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಗುರುವಾರ ತಮಿಳುನಾಡಿನ ಮಧುರೈನಲ್ಲಿ ನಡೆದ ಇಂತಹ ಪ್ರತಿಭಟನಾ ಸಭೆಯ ವೀಡಿಯೊ ತುಣುಕು ಎರಡು ದಿನಗಳ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು timesofindia ವರದಿ ಮಾಡಿದೆ.

ತಮಿಳುನಾಡು ತೌಹೀದ್ ಜಮಾತ್ (ಟಿಎನ್ಟಿಜೆ) ಲೆಕ್ಕ ಪರಿಶೋಧನಾ ಸಮಿತಿಯ ಸದಸ್ಯ ಕೋವೈ ರಹಮತುಲ್ಲಾ ‘ತಪ್ಪು’ ತೀರ್ಪು ನೀಡಿದ್ದ ನ್ಯಾಯಾಧೀಶರನ್ನು ಜಾರ್ಖಂಡ್ ನಲ್ಲಿ ಬೆಳಗಿನ ನಡಿಗೆಯ ವೇಳೆ ಕೊಲ್ಲಲಾಯಿತು ಎಂದು ಹೇಳಿರುವುದು ವೀಡಿಯೊದಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ.

“ನಮ್ಮ ಸಮುದಾಯದಲ್ಲಿ ಕೆಲವು ಭಾವನಾತ್ಮಕ ಜನರಿದ್ದಾರೆ. ಅವರಿಗೆ (ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು) ಏನಾದರೂ ಸಂಭವಿಸಿದರೆ, ನಮ್ಮನ್ನು ದೂಷಿಸಲು ಬಿಜೆಪಿ ಅವಕಾಶಕ್ಕಾಗಿ ಕಾಯುತ್ತಿರುತ್ತದೆ”ಎಂದು ರಹಮತುಲ್ಲಾ ಹೇಳುತ್ತಿರುವುದು ಕಂಡುಬಂದಿದೆ.

ಸಭೆಯನ್ನು ಆಯೋಜಿಸಿದ್ದ ಟಿಎನ್ಟಿಜೆ ಮಧುರೈ ಜಿಲ್ಲಾಧ್ಯಕ್ಷ ಹಬೀಬುಲ್ಲಾ ಮತ್ತು ಉಪಾಧ್ಯಕ್ಷ ಅಸನ್ ಬಾದ್ ಶಾ ಎಂಬ ಇಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಂಜಾವೂರಿನಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಟಿಎನ್ಟಿಜೆ ಪ್ರಧಾನ ಸ್ಪೀಕರ್ ಎಸ್. ಜಮಾಲ್ ಮುಹಮ್ಮದ್ ಉಸ್ಮಾನಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಮತ್ತು ಸಂಘಟನೆಯ ತಂಜಾವೂರು ಜಿಲ್ಲಾ ನಾಯಕ ರಾಜಿಕ್ ಮುಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

error: Content is protected !!