fbpx

ಹಿಂದು ಜಾಗರಣ ವೇದಿಕೆ ಹಾಗು ಹಿಂದು ಯುವ ವಾಹಿನಿ ಜಂಟಿಯಾಗಿ ಕಾರ್ಗಿಲ್ ವಿಜಯ್‌ ದಿವಸ್, ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆ

ಹಿಂದು ಜಾಗರಣ ವೇದಿಕೆಯ ಯುವ ಘಟಕ ಹಿಂದು ಯುವ ವಾಹಿನಿ ನೇತೃತ್ವದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.

ನಗರದ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಈ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸೈನಿಕರಿಗೆ ಗೌರವ ನಮನಗಳನ್ನು ಸಲ್ಲಿಸಲಾಯಿತು. ನಗರದ ಪ್ರಥಮ ಪ್ರಜೆ ಶ್ರೀಮತಿ ಅನಿತಾ ಪೂವಯ್ಯ, ನಿವೃತ್ತ ಸೇನಾಧಿಕಾರಿಗಳಾದ ಮೇಜರ್ ಚಿಂಗಪ್ಪ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಶ್ರಿ ಸೋಮಣ್ಣ,ಸಾಮಾಜಿಕ ಚಿಂತಕರಾದ ಪ್ರಕಾಶ್ ಮಲ್ಪೆ,ಹಿಂದು ಜಾಗರಣ ವೇದಿಕೆಯ ಪದಾಧಿಕಾರಿಗಳು,ನಗರ ಸಭಾ ಸದಸ್ಯರುಗಳು,ಮಾಜಿ ಸೈನಿಕರು,ವಿವಿಧ ಸಂಘ ಸಂಸ್ಥೆಗಳ ಪ್ರಮುಖರುಗಳು ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಮಾಡುವ ಮೂಲಕ ಗೌರವ ಸಮರ್ಪಣೆ ಮಾಡಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ಅಂಕಣಕಾರರು,ಸಾಮಾಜಿಕ ಚಿಂತಕರು ಆದ ಶ್ರಿ ಪ್ರಕಾಶ್ ಮಲ್ಪೆ ಯವರು ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರ ಕೆಚ್ಚೆದೆಯ ಹೋರಾಟಗಳನ್ನು ಎಳೆಎಳೆಯಾಗಿ ವಿವರಿಸಿದರು. ಈ ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟು ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ಹಗಲಿರುಳು ಸದಾ ಜಾಗೃತ ಸ್ಥಿತಿಯಲ್ಲಿರುವ ಸೈನಿಕರಿಂದಾಗಿ ಮಾತ್ರ ಇಂದು ನಾವೆಲ್ಲರೂ ನೆಮ್ಮದಿಯಿಂದ ಬದುಕುತ್ತಿದ್ದೇವೆ. ಇಂತಹ ಅಪ್ರತಿಮ ದೇಶಭಕ್ತ ಸೈನಿಕರ ತ್ಯಾಗ ಬಲಿದಾನಗಳನ್ನು ಕೆಲವು ಮತಿಗೆಟ್ಟ ರಾಜಕಾರಣಿಗಳು ಅಪಮಾನಿಸುತ್ತಿರುವುದು ದೇಶಭಕ್ತರೆಲ್ಲರಿಗೂ ಅತ್ಯಂತ ಬೇಸರ ತರಿಸಿದೆ. ಯುದ್ಧದ ಸಮಯದಲ್ಲಿ ನಡೆದ ಹಲವು ಮನಕಲಕುವ ಘಟನೆಗಳನ್ನು ಮತ್ತು ಸೈನಿಕರ ಮನೆಯ ವಿಶೇಷ ಸನ್ನಿವೇಶಗಳನ್ನು ಮನಮುಟ್ಟುವಂತೆ ತಮ್ಮ ಸುಧೀರ್ಘ ಭಾಷಣದಲ್ಲಿ ವಿವರಿಸುವ ಮೂಲಕ ಪ್ರಕಾಶ್ ಮಲ್ಪೆ ಯವರು ನೆರೆದಿದ್ದವರಲ್ಲಿ ಭಾರತೀಯ ಸೇನೆ ಮತ್ತು ಸೈನಿಕರ ಬಗ್ಗೆಗಿನ ಗೌರವವನ್ನು ಹೆಚ್ಚಿಸಿದರು. ಸಭಾಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಕೊಟ್ಟುಕತ್ತಿರ ಸೋಮಣ್ಣರವರು ಮಾತನಾಡಿ ಭಾರತೀಯ ಸೇನೆಗೆ ಕೊಡಗು ಜಿಲ್ಲೆಯ ಕೊಡುಗೆ ಅಪಾರವಾಗಿದೆ.ಭಾರತೀಯ ಸೈನಿಕರು ದೇಶಕ್ಕಾಗಿ ಯಾವುದೇ ತ್ಯಾಗ ಬಲಿದಾನಗಳಿಗೆ ಮಾನಸಿಕವಾಗಿ ತಯಾರಿರುವ ಮನಸ್ಥಿತಿಯವರಾಗಿರುವುದರಿಂದ ದೇಶ ಅತ್ಯಂತ ಸುರಕ್ಷಿತವಾಗಿದೆಯೆಂದರು.

ಇದರೊಂದಿಗೆ ದೇಶದ ಆಡಳಿತದ ಚುಕ್ಕಾಣಿಯೂ ಅತ್ಯಂತ ಸುರಕ್ಷಿತ ಕೈಗಳಲ್ಲಿದೆಯೆಂದರು. ನೂತನವಾಗಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಅಗ್ನಿಪಥ್ ನಲ್ಲಿ ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇರ್ಪಡೆಗೊಂಡು ದೇಶ ಸೇವೆಗೆ ಸಿಕ್ಕಿರುವ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಅಗ್ನಿಪಥ್ ಕುರಿತು ಹಬ್ಬುತ್ತಿರುವ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡದಂತೆ ಸಲಹೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದು ಜಾಗರಣ ವೇದಿಕೆಯ ಮಂಗಳೂರು ವಿಭಾಗ ಸಂಯೋಜಕ್ ಮಹೇಶ್ ಕಡಗದಾಳು, ಹಿಂ.ಜಾ.ವೇ. ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್ ,ಹಿಂದು ಯುವ ವಾಹಿನಿಯ ವಿನಯ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಹಿಂದುಪರ ಸಂಘಟನೆಗಳ ಪ್ರಮುಖರುಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು,ಕಾಲೇಜು ವಿದ್ಯಾರ್ಥಿಗಳು,ಸಾರ್ವಜನಿಕರು ಪಾಲ್ಗೊಂಡಿದ್ದರು.ಹಿಂದು ಯುವ ವಾಹಿನಿಯ ವಿನಯ್ ಪ್ರಾಸ್ತವಿಕವಾಗಿ ಮಾತನಾಡಿ, ಸುನಿಲ್ ಮಾದಾಪುರ ನಿರೂಪಿಸಿ ಮನುರೈ ವಂದಿಸಿದರು.

error: Content is protected !!