fbpx

ಹಾಲೇರಿ ಗ್ರಾಮಸ್ಥರ ದುಸ್ವಪ್ನವಾಗಿರುವ ಮಳೆಗಾಲ

ಚಿತ್ರ ವರದಿ: ಮಂಜು ಪೂಜಾರಿ,ಸುಂಟಿಕೊಪ್ಪ

ಮಳೆಗಾಲ ಬಂತೆಂದರೆ ಈ ಗ್ರಾಮದ 23 ಕುಟುಂಬಗಳು ಬೆಚ್ಚಿ ಬೀಳುತ್ತವೆ. ನಿದ್ದೆಯಿಲ್ಲದೇ ರಾತ್ರಿ ಕಳೆಯಬೇಕಾಗುತ್ತದೆ. ಮೇಘ ಸ್ಫೋಟಕ್ಕೆ ಮನೆ ಉಳಿಯುತ್ತದೆಯೋ ಅಥವಾ ಇಲ್ಲವೋ ಎಂದು ದಿನ ದೂಡಬೇಕಾಗುತ್ತದೆ. ಒಮ್ಮೆ ನಿರಾತಂಕವಾಗಿ ಮಳೆಗಾಲ ಕಳೆದರೆ ಸಾಕು ಎಂದು ಅವಲತ್ತುಕೊಳ್ಳುತ್ತಾರೆ. ಇವರ ಈ ಆತಂಕಕ್ಕೆ ಕಾರಣವಿಲ್ಲದಿಲ್ಲ. ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ ಗುಡ್ಡ ಕುಸಿತ ಇವರ ಜೀವನವನ್ನೇ ಕಸಿದುಕೊಂಡು ಕಂಗೆಡುವಂತೆ ಮಾಡಿದೆ. ಗುಡ್ಡ ಕುಸಿತ ಹಾಗೂ ಜಲ ಪ್ರವಾಹದ ದುಃಸ್ವಪ್ನ ಇನ್ನೂ ಮಾಸದೇ ಮರಳಿ ಬದುಕು ಕಟ್ಟಿಕೊಳ್ಳಲು ಹಪಹಪಿಸುತ್ತಿದ್ದಾರೆ. ಹೀಗಾಗಿ ಹಾಲೇರಿ ಗ್ರಾಮದ ತಾತಿಮನೆ ಪೈಸಾರಿಯ ನಿವಾಸಿಗಳು ಮಳೆಗಾಲದಲ್ಲಿ ದೇವರೇ ಗತಿ ಎಂದು ಮೊರೆಯಿಡುತ್ತಿದ್ದಾರೆ.

ಗುಡ್ಡದ ಇಳಿಜಾರಿನಲ್ಲಿ ಕಾಣಸಿಗುವ ತಾತಿಮನೆ ಪೈಸಾರಿಯಲ್ಲಿ 23 ಕುಟುಂಬಗಳಿದ್ದು, ವಯೋವೃದ್ಧರು, ಹೆಂಗಳೆಯರು, ಪುರುಷರು ಮಕ್ಕಳು ಸೇರಿದಂತೆ ಅಂದಾಜು 120ಕ್ಕಿಂತಲೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಈಗಾಗಲೇ ಮನೆಯನ್ನು ಖಾಲಿ ಮಾಡಿ ಎಂದು ಸಂಬಂಧಿಸಿದ ಇಲಾಖೆಯಿಂದ ನೋಟೀಸ್ ಜಾರಿಗೊಳಿಸಲಾಗಿದೆ. ಇಲ್ಲಿನ ಮನೆಯೊಂದರಲ್ಲಿ ಒಂದು ತಿಂಗಳ ಹಸುಗೂಸು ಹಾಗೂ 9 ತಿಂಗಳು ತುಂಬಿದ ಗರ್ಭಿಣಿ ಹಾಗೂ ಬಾಣಂತಿ ಇದ್ದಾರೆ. ಮನೆಯನ್ನು ಖುಲ್ಲಾ ಮಾಡಿ ಎಂದು ಫಾರ್ಮಾನ್ ಕೈ ಸೇರಿದ್ದರಿಂದ ಇವರನ್ನು ಬೇರೆಡೆ ನೆಂಟರ ಮನೆಗೆ ಸ್ಥಳಾಂತರಗೊಳಿಸಲಾಗಿದೆ.

‘ಗುಡ್ಡದ ಭೂತ

ಸ್ಥಳೀಯ ನಿವಾಸಿಗಳ ಮನೆಯ ಹಿಂದಿರುವ ಬಾಲಾಜಿ ತೋಟದ ಗುಡ್ಡ 2018ರಲ್ಲಿ ಜಲ ಪ್ರವಾಹದಿಂದ ಕುಸಿದು ಭಾರೀ ಅನಾಹುತವನ್ನು ಸೃಷ್ಟಿಸಿತ್ತು. ಈಗಲೂ ಗುಡ್ಡದಲ್ಲಿ ಬಿರುಕು ಉಂಟಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ. ಒಂದು ರೀತಿಯಲ್ಲಿ ಈ ಗುಡ್ಡ ಸ್ಥಳೀಯರ ಪಾಲಿಗೆ “ಗುಡ್ಡದ ಭೂತ” ಎಂದೆನಿಸಿದೆ. ಪುನಃ ಕುಸಿಯಬಹುದೆಂಬ ಭೀತಿಯನ್ನುಂಟು ಮಾಡಿರುವ ಈ ಗುಡ್ಡದ ಭೂತವು ತಾತಿಮನೆ ಪೈಸಾರಿಯ ಮನೆಯವರ ಬೆನ್ನ ಹಿಂದೆ ಬಿದ್ದಿದೆ. ಇಲ್ಲಿನ ಒಂದೆರಡು ಮನೆಗಳ ಗೋಡೆ ಬಿರುಕುಬಿಟ್ಟಿದ್ದು ಮೊತ್ತೊಂದರ ಅಡಿಪಾಯ ಕುಸಿಯಲಾರಂಭಿಸಿದೆ. ಈ ಹಿಂದೆ ಭೂಕುಸಿತವಾದ ಸನಿಹದಲ್ಲಿರುವ ಕುಡಿಯುವ ನೀರಿನ ಟ್ಯಾಂಕ್ ಮೇ ತಿಂಗಳಲ್ಲಿ ಬಿರುಕುಬಿಟ್ಟಿದ್ದು ಅದನ್ನು ಸರಿಪಡಿಸಿರುವುದಿಲ್ಲ. ಹೀಗಾಗಿ ಟ್ಯಾಂಕ್ ಹಿಡಿಸುವಷ್ಟು ನೀರನ್ನು ಸಂಗ್ರಹಿಸದೇ, ಎಷ್ಟು ಅಗತ್ಯವೋ ಅಷ್ಟು ಮಾತ್ರವನ್ನು ಶೇಖರಿಸಿ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಮನೆಗಳ ಸುತ್ತಿಲಿನಲ್ಲಿ ಕೆಲವಡೆ ಬರೆ ಕುಸಿತವಾಗುತ್ತಿದ್ದು, . ಭೂಮಿಯ ಒಳಗೆ ನೀರಿನ ಶಬ್ಧ ಬರುತ್ತಿದೆ. ಹೀಗಾಗಿ ಮತ್ತಷ್ಟು ಭಯದ ವಾತಾವರಣ ಸೃಷ್ಟಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ಜಲ ಉಕ್ಕಿಸುತ್ತಿರುವ ಇಂಗು ಗುಂಡಿ

ಮನೆಯ ನೀರು ಇಂಗಲೆಂದು ನಿರ್ಮಿಸಿದ ಇಂಗು ಗುಂಡಿ ಮೃತ್ಯು ಗುಂಡಿಯಾಗಿ ಪರಿಣಮಿಸಿದೆ. ನೀರನ್ನು ಇಂಗಿಸುವ ಬದಲಿಗೆ ಈ ಇಂಗು ಗುಂಡಿ ಅಂತರ್ಜಲವನ್ನು ಉಕ್ಕಿ ಹರಿಸುತ್ತಿದೆ. ಇದರಿಂದ ಮನೆಯ ಸುತ್ತಲೆಲ್ಲಾ ಧಾರಾಕಾರ ಜಲದಿಂದ ಆವೃತವಾಗುತ್ತಿದೆ. ಇದಲ್ಲದೇ ಬರೆ ಕುಸಿತಕ್ಕೊಳಗಾಗಿರುವ ಸ್ಥಳದಲ್ಲಿ ಆವಿರ್ಭವಿಸುತ್ತಿರುವ ಜಲದಿಂದಲೂ ಮನೆಗಳಿಗೆ ಹಾನಿಯಾಗಲಿದೆ. ಅಲ್ಲದೇ ಒಂದೊಮ್ಮೆ ವರುಣನ ಅಬ್ಬರ ಉಲ್ಭಣಗೊಂಡರೆ ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ.

ತಾತಿಮನೆ ಪೈಸಾರಿಯ ವರಿಗೆ ಇಲ್ಲ ಮನೆ ಭಾಗ್ಯ


2018ರ ಪ್ರಕೃತಿ ವಿಕೋಪದ ಕಹಿ ಘಟನೆಯ ನಂತರ ಐದು ಕುಟುಂಬಗಳಿಗೆ ಮಾತ್ರ ಜಂಬೂರು ಬಾಣೆಯಲ್ಲಿ ಮನೆ ಮಂಜೂರು ಮಾಡಲಾಗಿದೆ. ಆದರೆ ಉಳಿದ ಕುಟುಂಬಗಳಿಗೆ ನೀಡಿದ್ದ ಮನೆ ಪತ್ರದ ಸಂಖ್ಯೆಗಳನ್ನೇ ರದ್ದುಗೊಳಿಸಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಈ ಕುಟುಂಬಗಳು ಪರ್ಯಾಯವಾಗಿ ಸೂರು ದೊರೆಯದೇ ಅತಂತ್ರವಾಗಿವೆ.

“ಬರೆ ಕುಸಿದು ಇನ್ನಷ್ಟು ಅಪಾಯ ಸಂಭವಿಸಬಹುದಾದ ಸಾಧ್ಯತೆಯಿದ್ದರೂ ಪರ್ಯಾಯ ವ್ಯವಸ್ಥೆಯನ್ನು ಮಾಡದೇ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯಲು ಸೂಚಿಸಲಾಗುತ್ತಿದೆ. ಕೋರೋನಾ ಸಂದರ್ಭದಲ್ಲಿ ಸಣ್ಣ ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಪರಿಹಾರ ಕೇಂದ್ರದಲ್ಲಿ ಇರಿಸುವುದಾದರೂ ಹೇಗೆ ?” ಎಂಬುವುದು ಸ್ಥಳೀಯರಾದ ಅಣ್ಣುರವರ ಪ್ರಶ್ನೆಯಾಗಿದೆ. “ ಮನೆಯೊಳಗೆ ತೆರಳಲು ಭಯವಾಗುತ್ತಿದೆ. ಅಡಿಪಾಯ ಕುಸಿದಿದೆ. ಮನೆಯ ಅಕ್ಕಪಕ್ಕ ಬರೆ ಕುಸಿಯುತ್ತಿದೆ. ನಮಗೆ ಪರಿಹಾರ ಕೊಡಿ. ನಮಗೂ ಆಶ್ರಯ ನೀಡಿ” ಎಂದು ಸ್ಥಳೀಯರಾದ ಸುರೇಶ್ ದೇವಪ್ಪ ಅಣ್ಣು ಹಾಗೂ ರುಕ್ಮಿಣಿಯವರು ಕೇಳಿಕೊಳ್ಳುತ್ತಿದ್ದಾರೆ.
ಹೀಗಾಗಿ ಒಂದೆಡೆ ಬೆನ್ನ ಹಿಂದೆ ಬಿದ್ದಿರುವ ಗುಡ್ಡದ ಭೂತ, ಮತ್ತೊಂದೆಡೆ ಕುಸಿಯುತ್ತಿರುವ ಬರೆ ಮತ್ತು ಗೋಡೆ, ಜಾರುತ್ತಿರುವ ಅಡಿಪಾಯದ ಕಲ್ಲುಗಳು ಮತ್ತೊಂದೆಡೆ ಉಕ್ಕುತ್ತಿರುವ ಜಲ ಹಾಗೂ ಭೂಮಿ ಅಡಿಯಲ್ಲಿ ಕೇಳಿಬರುತ್ತಿರುವ ನೀರಿನ ಶಬ್ಧದಿಂದಾಗಿ ನಿದ್ದೆಯಿಲ್ಲದೇ ದಿನ ಸವೆಸುತ್ತಿರುವ ತಾತಿಮನೆ ನಿವಾಸಿಗಳು ಪ್ರಾರ್ಥಿಸಿಕೊಳ್ಳುತ್ತಿದ್ದಾರೆ…. “ಪ್ರಕೃತಿ ಮುನಿಯದಿರಲಿ” ಎಂದು.

error: Content is protected !!