ಹಳೇ ಸ್ಮಾರ್ಟ್ಫೋನ್ ಇದೆಯೇ??

ಇಂದಿನ ಪ್ರಪಂಚ ಬೆರಳ ತುದಿಯಲ್ಲಿಯೇ ಇದೆ ಎಂದರೆ ತಪ್ಪಾಗಲಾರದು. ನಮಗೆ ಬೇಕಾದ ಎಲ್ಲಾ ಮಾಹಿತಿ ಮನೋರಂಜನೆ ನಾವು ಇರುವ ಸ್ಥಳದಲ್ಲಿಯೇ ಸಿಗುತ್ತಿದೆ. ಕೈಲೊಂದು ಸ್ಮಾರ್ಟ್ಫೋನ್ ಮೊಬೈಲ್ ಜೊತೆಗೆ ಒಳ್ಳೆಯ ನೆಟ್ವರ್ಕ್ ಇದ್ದರೆ ಸಾಕು. ಪ್ರಪಂಚದ ಆಗು ಹೋಗುಗಳನ್ನು ಕುಳಿತಲ್ಲಿಯೇ ವೀಕ್ಷಿಸಬಹುದು.
೨೦೨೦ ರ ಪ್ರಾರಂಭದಿಂದಲೂ ಪ್ರಪಂಚವನ್ನು ಕಾಡುತ್ತಿರುವ ಕೊರೊನಾ ಮಹಾಮಾರಿ ಎಲ್ಲರನ್ನು ಮನೆಯಲ್ಲಿಯೇ ಕಟ್ಟಿಹಾಕಿದೆ. ವಿಧಿ ಇಲ್ಲದೆ ಎಲ್ಲರೂ ತಮ್ಮ ಮೊಬೈಲ್’ನ ಮೊರೆ ಹೋಗಿದ್ದಂತು ಸತ್ಯ.
ಶಾಲಾ ಕಾಲೇಜುಗಳು ತೆರೆಯದೇ ತಿಂಗಳುಗಳೇ ಕಳೆದಿವೆ. ಶಿಕ್ಷಣ ಸಂಸ್ಥೆಗಳು ಆನ್ಲೈನ್ ತರಗತಿಗಳನ್ನು ನಡೆಸಲು ತೀರ್ಮಾನಿಸಿದ್ದು, ಕೆಲವು ಶಾಲಾ ಕಾಲೇಜುಗಳು ಈಗಾಗಲೇ ಆನ್ಲೈನ್ ಶಿಕ್ಷಣವನ್ನು ನೀಡುತ್ತಿವೆ.
ಒಟ್ಟಿನಲ್ಲಿ ಮಕ್ಕಳಿಗೆ ಯಾವುದೋ ಒಂದು ರೀತಿ ಶಿಕ್ಷಣ ಸಿಗುತ್ತಿದೆ ಎನ್ನುವ ಸಮಾಧಾನ ಕೆಲವರಿಗೆ ಆದರೆ, ಇನ್ನೂ ಕೆಲವರಿಗೆ ಮಕ್ಕಳಿಗೆ ಮೊಬೈಲ್ ಕೊಡಿಸುವುದೇ ಆಗಿದೆ.
ಕೊರೊನಾ ಬಂದ ಮೇಲಂತೂ ಇಡೀ ಪ್ರಪಂಚವೇ ಸ್ತಬ್ಧವಾಗಿ ಬಿಟ್ಟಿದೆ. ದಿನಗೂಲಿ ನೌಕರರಂತೂ ಕಂಗಾಲಾಗಿ ಹೋಗಿದ್ದಾರೆ. ಹೇಗೋ ಸಾಲ ಸೋಲ ಮಾಡಿ ತಮ್ಮ ಮಕ್ಕಳು ಎರಡಕ್ಷರ ಇಂಗ್ಲಿಷ್ ಕಲಿಯಲಿ ಎಂದು ದೊಡ್ಡ ದೊಡ್ಡ ಶಾಲೆಗಳಿಗೆ ಸೇರಿಸಿದವರಿಗೆ ಈಗ ಪರದಾಡುವಂತೆ ಆಗಿದೆ.
ಇತ್ತ ಕೆಲಸ ಇಲ್ಲ. ಅತ್ತ ಮಕ್ಕಳ ಭವಿಷ್ಯದ ಪ್ರಶ್ನೆ. ಮತ್ತೊಂದೆಡೆ ಇನ್ನು ಶಾಲೆ ಪ್ರಾರಂಭವಾಗಿಲ್ಲ. ಮಕ್ಕಳಿಗೆ ಆನ್’ಲೈನ್ ತರಗತಿಗಳು ಪ್ರಾರಂಭವಾಗಿದೆ ಆದರೆ ಅದಕ್ಕೆ ಬೇಕಾದ ಸ್ಮಾರ್ಟ್ಫೋನ್ ತೆಗೆದುಕೊಳ್ಳಲು ಕಾಸಿಲ್ಲ!!!
ಎಲ್ಲೋ ಒಂದು ಕಡೆ ಅಪ್ಪ ಹಣ ಸಾಲದೆ ಸಾಧಾರಣ ಮೊಬೈಲ್ ಕೊಡಿದಿದ್ದಕ್ಕೆ ಮಗಳು ಅಪ್ಪನ ಮೇಲೆ ರೇಗಾಡಿದ್ದಳು. ಮನನೊಂದ ಅಪ್ಪ ನೇಣಿಗೆ ಶರಣಾದ. ಮಗನಿಗೆ ಸ್ಮಾರ್ಟ್ಫೋನ್ ಕೊಡಿಸಲು ತಾಯಿ ತನ್ನ ಮಾಂಗಲ್ಯವನ್ನೇ ಒತ್ತೆ ಇಟ್ಟ ಘಟನೆ ಕೂಡ ನಮ್ಮ ಕಣ್ಣಮುಂದೆ ಇದೆ. ಇದೆರಡು ಕಣ್ಣಿಗೆ ಕಂಡ ಪ್ರಕರಣಗಳು. ಇಂತದ್ದು ಇನ್ನಷ್ಟು ಆಗಿರಬಗುದು.
ಇಷ್ಟಾಗಿಯೂ ಶಿಕ್ಷಣ ಸಂಸ್ಥೆಗಳು ಹಟಕ್ಕೆ ಬಿದ್ದಂತೆ ತರಗತಿಗಳನ್ನು ಪ್ರಾರಂಭಿಸಲು ತುದಿಗಾಲಿನಲ್ಲಿ ನಿಂತಿವೆ. ಸದ್ಯದ ಮಟ್ಟಿಗೆ ಅಂತು ಆನ್ಲೈನ್ ತರಗತಿಗಳೇ ಇರಲಿ ಎಂದು ಸರಕಾರ ಕೂಡ ಆದೇಶ ನೀಡಿದೆ.
ಇಂದಿನ ಕಾಲಘಟ್ಟದಲ್ಲಿ ಎಲ್ಲರ ಬಳಿಯೂ ಸ್ಮಾರ್ಟ್ಫೋನ್ ಗಳು ಇದ್ದೇ ಇದೆ. ಕೆಲವರಂತೂ ಪ್ರತಿ ವರ್ಷವೂ ಹೊಸ ಹೊಸ ಮೊಬೈಲ್ ಖರೀದಿಯಲ್ಲಿ ತೊಡಗಿದ್ದಾರೆ. ಏನಿಲ್ಲ ಎಂದರೂ ಪ್ರತಿಯೊಬ್ಬರ ಬಳಿ ಕೂಡ ಉಪಯೋಗಿಸದೇ ಇರುವ ಒಂದಾದರು ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಬ್ಯಾಟರಿ ಸರಿ ಇಲ್ಲದೆಯೋ, ಡಿಸ್ಪ್ಲೇ ಹೋಗಿಯೋ ಅಥವಾ ಇನ್ನಾವುದೋ ಸಣ್ಣಪುಟ್ಟ ಕಾರಣಗಳು ಇರಬಹುದು. ಇಂದೇ ಆ ಮೊಬೈಲ್ ಅನ್ನು ಹುಡುಕಿ ತೆಗೆದು ಸಾಧ್ಯವಾದರೆ ಸಣ್ಣ ಮಟ್ಟದ ರಿಪೇರಿ ಮಾಡಿಸಿ ಇಂತಹ ಅಗತ್ಯತೆ ಇರುವ ಮಕ್ಕಳನ್ನು ಗುರುತಿಸಿ ನೀಡಿದರೆ ನಿಜವಾದ ಸಮಾಜ ಸೇವೆ ಆಗುತ್ತದೆ. ಒಬ್ಬ ವಿಧ್ಯಾರ್ಥಿಯ ಬಾಳಲ್ಲಿ ಬೆಳಕಾದಂತೆ, ಕುಟುಂಬದ ಕಷ್ಟಕ್ಕೆ ಹೆಗಲು ಕೊಟ್ಟಂತೆ ಆಗುತ್ತದೆ.
ಎಲ್ಲರೂ ನಿಮ್ಮ ಹಳೆಯ ಸ್ಮಾರ್ಟ್ಫೋನ್ ಇಂದೇ ಹುಡುಕಿ ಇಡುತ್ತೀರಲ್ಲ???
✍🏻ವಿನೋದ್ ಮೂಡಗದ್ದೆ