fbpx

ಸ್ವದೇಶಿ ಸುಂದರಿ, ಶ್ವೇತವರ್ಣೆಯ ಕುರಿತಾದ ಫ್ಲಾಶ್ ಬ್ಯಾಕ್ ಸ್ಟೋರಿ ಇದು…!

ದೇಶಾದ್ಯಂತ ತನ್ನ ರಾಜ ಗಾಂಭೀರ್ಯ ಮತ್ತು ಗತ್ತಿನಿಂದಲೇ ಬಳಕೆಯಲ್ಲಿದ್ದ ಸ್ವದೇಶಿ ಕಾರು ಸ್ವದೇಶಿ ಶ್ವೇತವರ್ಣೆ ‘ಅಂಬಿ’ ಅಲಿಯಾಸ್ ‘ಅಂಬಾಸಿಡರ್’. ರಾಷ್ಟ್ರದ ಉದ್ದಗಲದ ರೋಡುಗಳಲ್ಲಿ ಅಂಬಿ ರಾರಾಜಿಸಿದ ಬಗೆ ನಿಜಕ್ಕೂ ಬೆರಗು ಮೂಡಿಸುತ್ತದೆ.


1958ರಲ್ಲಿ ಹಿಂದುಸ್ಥಾನ್ ಮೋಟರ್ಸ್ ಕಂಪೆನಿಯ ಲಾಂಛನದಡಿ ಬಿ.ಎಂ ಬಿರ್ಲಾ ಅವರ ಮಾಲಿಕತ್ವದಲ್ಲಿ ಶುರುವಾಗಿದ್ದ, ‘ಅಂಬಾಸಿಡರ್’ ಸ್ವದೇಶಿ ನಿರ್ಮಿತ ಕಾರು ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಹಾಗೆ 1958ರಲ್ಲಿ ಉತ್ಪಾದನೆ ಆರಂಭಿಸಿದ್ದ ಕಾರಿನ ಪ್ರಾಥಮಿಕ ಬೆಲೆ ಸುಮಾರು 14,000 ರೂಪಾಯಿಯಷ್ಟಿತ್ತು. 1960’s ಮತ್ತ 70’s ದಶಕದಲ್ಲಿ ಅಂಬಾಸಿಡರ್ ಕಾರ್ ಪ್ರತಿಷ್ಠೆಯ ಶ್ರೀಮಂತಿಕೆಯ ಪ್ರತೀಕವೆಂದೇ ಪರಿಗಣಿತವಾಗಿತ್ತು.
ರಸ್ತೆಯಲ್ಲಿ ಅಂಬಾಸಿಡರ್ ಕಾರ್ ಹಾದು ಹೋದರೆ ಸಾಕು, ನೋಡುಗರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದರು. ಹಿಂದೆ ಅಂಬಾಸಿಡರ್ ಕಾರ್ ಕೊಳ್ಳಬೇಕು ಎಂದರೆ ಆರ್ಡರ್ ಮಾಡಿ 5ವರ್ಷ ಚಾತಕ ಪಕ್ಷಿಯಂತೆ ಕಾಯಬೇಕಿತ್ತು ಗ್ರಾಹಕ.


ಆಗಿನ ಕಾಲಕ್ಕೆ ಅಂಬಾಸಿಡರ್ ಕಾರ್ ಬಿಟ್ಟರೆ, ಮಾರುತಿ 800, ಪ್ರಿಮಿಯರ್ ಪದ್ಮಿನಿ ಫಿಯಟ್ ಕಾರ್ ಗಳು ಸುಪ್ರಸಿದ್ಧಿ ಪಡೆದಿದ್ದವು. ಆದರೂ ಅಂಬಾಸಿಡರ್ ಕಾರಿಗಿದ್ದ ಚರಿಷ್ಮಾ ಬೇರಾವ ಕಾರುಗಳಿಗೂ ಇರಲಿಲ್ಲ ಎಂಬುದು ಖರೆ. ಮನೆ ಮಂದಿಯೆಲ್ಲಾ ಕುಟುಂಬ ಸಮೇತರಾಗಿ ತಮ್ಮ ಸಾಕು ಪ್ರಾಣಿಗಳು ಜೊತೆಗೂ ಬೇಕಾದ ಗಂಟು ಮೂಟೆ ಸಮೇತ ಅಂಬಾಸಿಡರ್ ಅಲ್ಲಿ ಪ್ರವಾಸ ಮಾಡುವುದೆಂದರೆ ಹಿಂದೆ ದೊಡ್ಡ ಸಂಭ್ರಮ, ಸಡಗರದ ವಿಷಯವೇ ಆಗಿತ್ತು. ದೇಶದ ಅಧಿಕಾರಿ ವರ್ಗದಿಂದ ಹಿಡಿದು ರಾಜಕಾರಣಿಗಳ ತನಕವೂ ಅಂಬಾಸಿಡರ್ ಕಾರ್ Hot Favourite ಆಗಿತ್ತು. ಕಂಪೆನಿ ಉತ್ಪಾದಿಸುತ್ತಿದ್ದ ಕಾರ್ ಗಳ ಪೈಕಿ 16%ನಷ್ಟು ಕಾರ್ ಗಳು ಸರಕಾರದ ಬಳಕೆಗೆ ಮಾರಾಟವಾಗುತ್ತಿತ್ತು.


ಉಕ್ಕಿನ ಮೈಯನ್ನು ಹೊಂದಿದ್ದ‌ ಅಂಬಾಸಿಡರ್ ಬಲ ಭೀಮನಂತೆ ತಾಕತ್ತು ಹೊಂದಿದ್ದ ವಾಹನವಾಗಿತ್ತು. ಆರು ದಶಕಗಳ ಕಾಲ ದೇಶಾದ್ಯಂತ ಸದ್ದು ಸುದ್ದಿ ಮಾಡಿದ ಅಂಬಾಸಿಡರ್ ಕಾರ್ ಜಾಸ್ತಿಯಾದ ಪೈಪೋಟಿ, ವಿದೇಶಿ ಕಾರ್ ಕಂಪಡನಿಗಳ ಹಾವಳಿಯಿಂದ ಕಳೆಗುಂದುತ್ತಾ ಬಂದಿತು. ದೇಶ ವಿದೇಶದ ಐಶಾರಾಮಿ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ SUV, MUV, Hatchback, Sedan, Crossover, Coupe, Convertible, EV ಬಗೆಯ ಕಾರ್ ಗಳಿಂದ ಅಂಬಾಸಿಡರ್ ಮಾರಾಟದಲ್ಲಿ ಗಣನೀಯ ಇಳಿಕೆಯಾಯಿತು. 2003ರಲ್ಲಿ ಆತ್ಮ ರಕ್ಷಣೆಯ ಸಲುವಾಗಿ ಆಗ ಪ್ರಧಾನಿಗಳಾಗಿದ್ದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ತಮ್ಮ ಸರಕಾರಿ ಅಂಬಾಸಿಡರ್ ಕಾರನ್ನು ಬಿಟ್ಟು, ಬಿಎಂಡಬ್ಲ್ಯೂ(BMW) ಕಾರ್ ಬಳಸಲು ಆರಂಭಿಸಿದರು.

ಅಲ್ಲಿಂದ ರಾಜಕಾರಣಿಗಳು, ಅಧಿಕಾರಿಗಳು ಕೂಡ ಬೇರೆ ಬೇರೆ ವಾಹನಗಳನ್ನು ಬಳಸಲು ಆರಂಭಿಸಿದ್ದರು. ಮತ್ತೂ ಹಿನ್ನಡೆ ಆಗಲು ಕಾರಣ 2014ರಲ್ಲಿ ಕೇಂದ್ರ ಸರಕಾರ ಅಂಬಾಸಿಡರ್ ಖರೀದಿಯನ್ನು ನಿಲ್ಲಿಸಿ ಬೇರೆ ಕಾರುಗಳ ಬಳಕೆಗೆ ನಿರ್ಧಾರ ಕೈಗೊಂಡಿತು. ನಂತರ ಅಂಬಾಸಿಡರ್ ಮಾರುಕಟ್ಟೆ ಎದ್ದೇಳಲಾಗದಷ್ಟು ನಷ್ಟ ಅನುಭವಿಸುವ ಕಾಲ ಬಂದಿದ್ದರಿಂದ ಕಂಪೆನಿ ಉತ್ಪಾದನೆಯನ್ನು ಸಂಪೂರ್ಣ ನಿಲ್ಲಿಸಿ, ಕಾರ್ಖಾನೆಗೆ ಬೀಗ ಜಡಿಯುವ ನಿಲುವು ತಾಳಿದರು. ಹಾಗೆ ಅಂತ್ಯವಾಯಿತು ‘ಅಂಬಿ’ ಎಂಬ ಸಾಮಾನ್ಯ ಜನರ ವಾಹನದ ದರ್ಬಾರು. ಆದರೂ ಅಂತಹ ಕಾರು ಮತ್ತೊಙದು ಬರಲಿಲ್ಲ ಭಾರತದಲ್ಲಿ. ಆಳುವ ನಾಯಕರಿಂದ ಹಿಡಿದು ಹೊಟ್ಟೆ ಪಾಡಿಗೆ ಟ್ಯಾಕ್ಸಿ ಓಡಿಸುವ ಚಾಲಕರವರೆಗೂ ಯತೇಚ್ಛವಾಗಿ ಬಳಕೆಯಲ್ಲಿದ್ದ ಕಾರೆಂದರೆ ಅದು One and only Ambassador.


ಮತ್ತೆ ಈ ಕಾರ್ ನವೀನ ತಂತ್ರಜ್ಞಾನಗಳೊಂದಿಗೆ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರುವ ಗುಮಾನಿ ಜೋರಿದೆ. ನಿಜವಾಗುತ್ತದಾ ಕಾದು ನೋಡಬೇಕು…!

error: Content is protected !!