ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಕಾರ್ಯಗಾರ

ಸೋಮವಾರಪೇಟೆ ಕಾಫಿ ಮಂಡಳಿ, ಕಾರ್ಮಿಕ ಇಲಾಖೆ ಹಾಗು ‘ಕಾರ್ಯಪ್ಪ ಬಡಾವಣೆ ಉಸ್ತುವಾರಿ ಸಮಿತಿ’ ಜಂಟಿ ಆಶ್ರಯದಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಕಾರ್ಯಗಾರ ನಡೆಯಿತು.
ಮಾದಾಪುರದ ಸ್ಥಳೀಯ ಬೆಳೆಗಾರರಿಗೆ ಹಾಗು ತೋಟ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಸರಕಾರದ ಸೌಲಭ್ಯಗಳನ್ನು ತಿಳಿಸುವ ಸಲುವಾಗಿ ಸೋಮವಾರಪೇಟೆ ತಾಲೂಕು ಕಾಫಿ ಮಂಡಳಿ, ಕಾರ್ಮಿಕ ಇಲಾಖೆ ಹಾಗು ಜಂಬೂರು ಬಾಣೆ ಫೀಲ್ಡ್ ಮಾರ್ಷಲ್ ಕೆಂ ಎಂ ಕಾರ್ಯಪ್ಪ ಬಡಾವಣೆ ಉಸ್ತುವಾರಿ ಸಮಿತಿಯ ಜಂಟಿ ಆಶ್ರಯದಲ್ಲಿ ಜಂಬೂರು ಬಾಣೆಯ ಅಂಬೇಡ್ಕರ್ ಭವನದಲ್ಲಿ ಇಂದು ಮಾಹಿತಿ ಕಾರ್ಯಾಗಾರ ನಡೆಸಲಾಯ್ತು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದ ಕಾಫಿ ಮಂಡಳಿ ಸೋಮವಾರಪೇಟೆ ತಾಲೂಕಿನ ಹಿರಿಯ ಅಧಿಕಾರಿ ಎಸ್ ಗೋಪಾಲ್ ನಾಯಕ್ ಅವರು ಮಾತನಾಡಿ,
ಕೇಂದ್ರ ಸರಕಾರವು ’75ನೇ ಸ್ವತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ನಿಟ್ಟಿನಲ್ಲಿ’ ಮಾರ್ಚ್ ಹನ್ನೆರಡರಿಂದ ಸತತ ಎಪ್ಪತೈದು ವಾರಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು. ಆ ನಿಟ್ಟಿನಲ್ಲಿ ಇಂದು ಜಂಬೂರಿನ ಕಾರ್ಯಪ್ಪ ಬಡಾವಣೆ ನಿವಾಸಿಗಳಿಗೆ ಹಾಗು ಮಾದಾಪುರದ ನಿವಾಸಿಗಳಿಗೆ ಇಂದು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭ ಅವರು ಸಣ್ಣ ಬೆಳೆಗಾರರಿಗೆ ಹಾಗು ತೋಟ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು ಹಾಗು ಸಬ್ಸಿಡಿ ಸೌಲಭ್ಯಗಳ ಕುರಿತು, ಬೆಳೆಗಾರರ ಹಾಗು ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರ ನೀಡುವ ವಿದ್ಯಾರ್ಥಿ ವೇತನಗಳ ಕುರಿತು ಮಾಹಿತಿ ನೀಡಿ, ಸೌಲಭ್ಯಕ್ಕಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ರೀತಿ ರಿವಾಜುಗಳನ್ನು ಕೂಲಂಕುಷವಾಗಿ ವಿವರಿಸಿದರು ಹಾಗು 25ಏಕರೆಗಿಂತ ಹೆಚ್ಚು ಸ್ಥಳವಿರುವ ಕೃಷಿಕರಿಗೆ ನೂತನ ತೋಟ ನಿರ್ಮಾಣ, ಹಳೆ ಗಿಡಗಳನ್ನು ತೆಗೆದು ಬದಲಿಗಿಡ ನೆಡುವಾಗ ಸಿಗುವ ೪೦% ಸಬ್ಸಿಡಿ ಕುರಿತು ಹಾಗು ಕೃಷಿ ಉಪಕರಣಗಳ ಸಬ್ಸಿಡಿ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಕರೆ, ಬಾವಿಗೆ ಸಹಾಯ ಧನ, ಮಿನಿ ಟ್ರಾಕ್ಟರ್, ಪಲ್ಪರ್ ಯಂತ್ರ, ಗೋಡಾಣ್ ನಿರ್ಮಾಣ, ಕಾಫಿ ಕಣ ನಿರ್ಮಾಣಕ್ಕೆ ಇರುವ ಸಬ್ಸಿಡಿ ಹಾಗು ಬೋರಾರ್ ಕೀಟಗಳ ತಡೆಗೆ ಗಿಡಕ್ಕೆ ಸುತ್ತುವ ಬಟ್ಟೆ ಮೇಲಿನ ಸಬ್ಸಿಡಿ, ಯಂತ್ರೋಪಕರಣಗಳ ಖರೀದಿ ಮೇಲಿರುವ ಸಬ್ಸಿಡಿಗಳ ಕುರಿತು ಕೂಡ ಮಾಹಿತಿ ನೀಡಿದರು.
ಕಟ್ಟಡ ಕಾರ್ಮಿಕರಿಗೆ ಕಾರ್ಮಿಕರ ಕಛೇರಿಯಲ್ಲಿ ನೋಂದಣಿ ಮಾಡಿಕೊಳ್ಳುವ ಕುರಿತು ಹಾಗು ಅವರಿಗೆ, ಅವರ ಮಕ್ಕಳಿಗೆ ಸಿಗುವ ಸವಲತ್ತುಗಳ ಕುರಿತು ಹಾಗು ನಿವೃತ್ತ ಪಿಂಚಣಿ, ಕಾರ್ಮಿಕರ ವಿದ್ಯಾರ್ಥಿ ವೇತನಗಳ ಸೌಲಭ್ಯದ ಕುರಿತು ಹಾಗು ಅವರ ಕೆಲಸಕ್ಕೆ ಬೇಕಿರುವ ಯಂತ್ರೋಪಕರಣಗಳ ಖರೀದಿಗೆ ಸಿಗುವ ಸರಕಾರದ ಸವಲತ್ತುಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಹಾಯಕ ಅಧಿಕಾರಿ ಕೃಷ್ಣ ಕುಮಾರ್, ವಿಸ್ತಾರಣ ನಿರೀಕ್ಷರುಗಳಾದ ಎಂ ಇ ವರ್ಗೀಸ್, ಅನುಷಾ ಹಾಗು ಕಾರ್ಯಪ್ಪ ಬಡವಾಣೆಯ ಉಸ್ತುವಾರಿ ಸಮಿತಿಯ ಗೌರವ ಸಲಹೆಗಾರ ಸತ್ಯನಾರಾಯಣ, ಅಧ್ಯಕ್ಷ ತೀರ್ಥ ಪ್ರಸಾದ್, ನಿರಾಶ್ರಿತರ ಸಂಘದ ಅಧ್ಯಕ್ಷ ಗಾಂಧಿ ಮತ್ತಿತರರು ಉಪಸ್ಥಿತರಿದ್ದರು.
ರಂಜಿತ್ ಕವಲಪಾರ