ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು: ಪ್ರಧಾನಿ ಮೋದಿ

ದೇಶದ ವಸ್ತುಗಳಿಗೆ ಜಗತ್ತಿನ ಇತರ ಭಾಗಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ದೇಶದ ರಫ್ತು ಪ್ರಮಾಣವು 400 ಶತಕೋಟಿ ಡಾಲರ್‌ (30 ಲಕ್ಷ ಕೋಟಿ ರೂ.)ನ ಗುರಿ ಸಾಧಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

87ನೇ ಆವೃತ್ತಿಯ “ಮನ್‌ ಕಿ ಬಾತ್‌’ನಲ್ಲಿ ಮಾತನಾಡಿದ ಅವರು, ದೇಶದ ಪ್ರತಿ ನಾಗರಿಕನೂ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಪ್ರಚಾರ ನೀಡಬೇಕು. ಇಂಥ ಕ್ರಮದ ಮೂಲಕ ಅವುಗಳು ಜಗತ್ತಿನ ಮೂಲೆ ಮೂಲೆಗೆ ತಲುಪುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ರೈತರು, ನೇಕಾರರು, ಎಂಜಿನಿಯರ್‌ಗಳು, ಸಣ್ಣ ಉದ್ದಿಮೆದಾರರು, ಸಣ್ಣ ಮತ್ತು ಮಧ್ಯಮ ಕ್ಷೇತ್ರದ ಉದ್ದಿಮೆಗಳಲ್ಲಿಯೇ ದೇಶದ ಶಕ್ತಿ ಅಡಕವಾಗಿದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಅವರೆಲ್ಲರ ಶ್ರಮದಿಂದಲೇ ರಫ್ತು ಗುರಿ ಸಾಧಿಸಲು ಸಾಧ್ಯವಾಯಿತು. ಇದರಿಂದಾಗಿ ನಮ್ಮ ದೇಶದಲ್ಲಿ ಸಿದ್ಧಗೊಂಡ ವಸ್ತುಗಳಿಗೆ ಜಗತ್ತಿನ ಇತರ ಭಾಗಗಳಲ್ಲಿ ಹೆಚ್ಚು ಬೇಡಿಕೆ ಪಡೆಯುತ್ತಿವೆ ಎಂಬುದು ಸಾಬೀತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ವಸ್ತುಗಳ ಪೂರೈಕೆ ಸರಣಿ ಬಲಿಷ್ಠವಾಗಿದೆ. ಅಸ್ಸಾಂನ ಹೈಲಾಕಂಡಿಯ ಚರ್ಮದ ಉತ್ಪನ್ನಗಳು, ಉಸ್ಮಾನಾಬಾದ್‌ನ ಕೈಮಗ್ಗದ ಉತ್ಪನ್ನಗಳು, ಕರ್ನಾಟಕದ ವಿಜಯಪುರದಲ್ಲಿ ಬೆಳೆಯುವ ತರಕಾರಿ ಮತ್ತು ಹಣ್ಣುಗಳಿಗೆ ಜಗತ್ತಿನ ವಿವಿಧ ಭಾಗಗಳಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ವಿದೇಶಗಳ ಮಾರುಕಟ್ಟೆಗಳಲ್ಲೂ ಇವುಗಳು ಲಭಿಸಲು ಆರಂಭಿಸಿವೆ ಎಂದೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!