fbpx

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಪ್ರತಿಮೆ ಅನಾವರಣಕ್ಕೆ ದಿನಗಣನೆ ಆರಂಭ!

ಮಡಿಕೇರಿ ಆ.30 : ಭಾರತ-ಪಾಕ್ ನಡುವೆ ಐದೂವರೆ ದಶಕಗಳ ಹಿಂದೆ 1965ರಲ್ಲಿ ನಡೆದ ಯುದ್ಧದಲ್ಲಿ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ಹೊಡೆದುರುಳಿಸಿ ಬಲಿದಾನಗೈದ ಕೊಡಗಿನ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಸ್ಥಾಪನೆಗೆ ದಿನಗಣನೆ ಆರಂಭವಾಗಿದೆ.

ನಗರದ ಹಳೆಯ ಖಾಸಗಿ ಬಸ್ ನಿಲ್ದಾಣದ ವೃತ್ತದಲ್ಲಿ ವೀರಯೋಧನ ಪ್ರತಿಮೆಯನ್ನು ನಿಲ್ಲಿಸಲು ಕಾಮಗಾರಿಯನ್ನು ಆರಂಭಿಸಲಾಗಿದ್ದು, ಸೆ.7 ರಂದು ಅನಾವರಣಗೊಳ್ಳಲಿದೆ.
ಭಾರತ-ಪಾಕಿಸ್ತಾನದ ಯುದ್ಧದ ಸಂದರ್ಭ ಶತ್ರು ರಾಷ್ಟ್ರದ ಯುದ್ಧ ವಿಮಾನವನ್ನು ತಮ್ಮ ಹಳೆಯ ವಿಮಾನದ ಮೂಲಕ ಕೆಡಹುವ ಮೂಲಕ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಆ ಸಂದರ್ಭ ವೀರಮರಣವನ್ನಪ್ಪಿದರು. ಈ ವಿಚಾರವನ್ನು ಪಾಕ್ ಸೇನೆಯ ಯುದ್ಧ ವಿಮಾನದ ಪೈಲಟ್ ಆಗಿದ್ದ ಅಮ್ಜದ್ ಹುಸೇನ್ ಅವರು ಆನಂತರದ ದಿನಗಳಲ್ಲಿ ತಿಳಿಸಿದ್ದರು. ವಿಮಾನದ ಎರಡೂ ರೆಕ್ಕೆಗಳಿಗೆ ಬೆಂಕಿ ತಗುಲಿದ್ದರೂ ಅದರ ಮೂಲಕವೇ ಯುದ್ಧ ಮಾಡಿದ ಸ್ಕ್ವಾ.ಲೀ.ದೇವಯ್ಯ ಅವರ ಸಾಹಸವನ್ನು ದೇಶ ವಿದೇಶಗಳಿಂದ ಕೊಡಗು ಜಿಲ್ಲೆಗೆ ಆಗಮಿಸುವವರಿಗೆ ತಿಳಿಸಲು ಮತ್ತು ವೀರಯೋಧನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ನಗರದ ಹೃದಯ ಭಾಗದಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಗುತ್ತಿದೆ.

ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸ್ಮಾರಕ ಟ್ರಸ್ಟ್ ಪ್ರಮುಖರಾದ ಅಜ್ಜಮಾಡ ಕಟ್ಟಿ ಮಂದಯ್ಯ ಅವರ ನೇತೃತ್ವದಲ್ಲಿ ಮಹಾನ್ ಯೋಧನ ವಿಗ್ರಹವನ್ನು ನಿರ್ಮಿಸಲಾಗಿದೆ.

ಜಿಲ್ಲೆಯ ಶಾಸಕರುಗಳು, ವಿಧಾನ ಪರಿಷತ್ ಸದಸ್ಯರುಗಳು ಸೇರಿದಂತೆ ಎಲ್ಲಾ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ.

ಸುಮಾರು 15 ರಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವೀರಯೋಧನ ಪ್ರತಿಮೆ ಸೆ.7 ರಂದು ಅನಾವರಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

error: Content is protected !!