ಸೌಜನ್ಯ ಆತ್ಮಹತ್ಯೆ ಪ್ರಕರಣ; ಪೊಲೀಸ್ ತನಿಖೆ ಚುರುಕು!

ಬೆಂಗಳೂರು: ಕಿರುತೆರೆ ನಟಿ ಸೌಜನ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸೌಜನ್ಯಾ ತಂದೆ ಪ್ರಭು ನೀಡಿದ್ದ ದೂರಿನನ್ವಯ ನಟ ವಿವೇಕ್ ಮತ್ತು ಪಿಎ ಮಹೇಶ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಪಿಎ ಮಹೇಶ್ ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎ ಮಹೇಶ್ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ಕಾಲ್ ಹಿಸ್ಟರಿ, ವಾಟ್ಸ್ ಆಪ್ ಸೇರಿ ಟೆಲಿಗ್ರಾಮ್ ಚಾಟಿಂಗ್ ಹಿಸ್ಟರಿ, ಜಿ-ಮೇಲ್ ಗ್ಯಾಲರಿಯಲ್ಲಿನ ಸಿಕ್ರೇಟ್ ಫೋಲ್ಡರ್ ಗಳಲ್ಲಿನ ಭಾವಚಿತ್ರ ಹಾಗೂ ವಿಡಿಯೋ ವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಡೆತ್‌ನೋಟ್ ಬರೆದಿಟ್ಟು ನಟಿ ಸೌಜನ್ಯ ಆತ್ಮಹತ್ಯೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಹಳೆಬೀಡಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಈ ಕುರಿತು ಸಮಗ್ರ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿರುವೆ ಎಂದು ಹೇಳಿದ್ದಾರೆ.
ನಟಿ ಸೌಜನ್ಯ ಕೇಸ್ ಬಗ್ಗೆ ನಮ್ಮ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಯಾವುದೇ ಪ್ರಕರಣವಾದರೂ ಪೊಲೀಸರು ಕೂಲಂಕುಷವಾಗಿ ತನಿಖೆ ಕೈಗೊಳ್ಳುತ್ತಾರೆ ಎಂದರು.
ಚೌಕಟ್ಟು ಸಿನಿಮಾ ನಟಿ ಸೌಜನ್ಯ ಅಲಿಯಾಸ್ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದ ರಾಮನಗರ ತಾಲೂಕಿನ ದೊಡ್ಡಬೆಲೆ ಗ್ರಾಮದ ಸನ್ ವರ್ತ್ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ಪೊಲೀಸರು ಶುಕ್ರವಾರ ಸ್ಥಳ ಮಹಜರು ನಡೆಸಿದರು.
ಕುಂಬಳಗೋಡು ಠಾಣೆ ಪೊಲೀಸರು ಸೌಜನ್ಯ ಮಾದಪ್ಪ ಅವರ ತಂದೆ ಪ್ರಭು ಮಾದಪ್ಪ ಅವರ ಸಮ್ಮುಖದಲ್ಲಿ ಸ್ಥಳ ಮಹಜರು ಮಾಡಿದರು. ಆರ್ಆರ್ ಆಸ್ಪತ್ರೆಯಲ್ಲಿ ನಟಿ ಸೌಜನ್ಯ ಮಾದಪ್ಪ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಬಳಿಕ ಕುಟುಂಬಕ್ಕೆ ಮೃತದೇಹ ಹಸ್ತಾಂತರ ಮಾಡಲಾಗುತ್ತದೆ. ಕುಶಾಲನಗರ ತಾಲ್ಲೂಕಿನ ಶುಂಠಿಕೊಪ್ಪದ ಅಂದಗೋವೆ ಗ್ರಾಮದಲ್ಲಿ ಶುಕ್ರವಾರ ನಟಿಯ ಅಂತ್ಯಕ್ರಿಯೆ ನಡೆಯಲಿದೆ.
ಇನ್ನು ಸೌಜನ್ಯ ಆತ್ಮಹತ್ಯೆಗೆ ಸಾವಿಗೆ ಕಾರಣ ಏನು ಎಂಬುದು ಗೊತ್ತಿಲ್ಲ. ಮರಣೋತ್ತರ ವರದಿಗಾಗಿ ಕಾಯುತ್ತಿದ್ದೇನೆ ಎಂದು ವಿವೇಕ್ ಹೇಳಿದ್ದಾರೆ.
ನಟಿ ಸೌಜನ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ತ ಗೆಳೆಯ ವಿವೇಕ್ ಸುದ್ದಿಗಾರರೊಂದಿಗೆ ಮಾತನಾಡಿ, ಆತ್ಮಹತ್ಯೆಗೆ ಕಾರಣ ಏನು ಎಂಬುದು ನನಗೆ ಗೊತ್ತಿಲ್ಲ. ಸದ್ಯ ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇನೆ. ಪೊಲೀಸರ ತನಿಖೆ ಬಳಿಕ ಸಾವಿನ ನಿಖರ ಕಾರಣ ಗೊತ್ತಾಗಲಿದೆ ಎಂದರು.
ಆಕೆಯ ಹೆತ್ತವರು ನೋವಿನಲ್ಲಿರುವುದರಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಮಾತಾಡಲಿ ಬಿಡಿ, ಈ ಕುರಿತು ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದರು.
ಇಬ್ಬರಿಗೂ ಕಳೆದ ಒಂದು ವರ್ಷದಿಂದ ಪರಿಚಯ ಇತ್ತು. ಮ್ಯೂಚುಯಲ್ ಫ್ರೆಂಡ್ನಿಂದ ನನಗೆ ಸೌಜನ್ಯ ಪರಿಚಯ ಆಗಿದ್ದು, ಆಕೆಗೆ ಬೇಜಾರಾದಾಗ ನನಗೆ ಆಗಾಗ ಸಿಗುತ್ತಿದ್ದಳು. ತುಂಬಾ ಇನೋಸೆಂಟ್, ಒಬಿಡಿಯಂಟ್ ಆಗಿದ್ದಳು. ಈ ಆತ್ಮಹತ್ಯೆಗೆ ಕಾರಣ ಏನು ಅನ್ನೋದು ಗೊತ್ತಾಗುತ್ತಿಲ್ಲ. ನನಗೂ ಕೂಡ ಅಚ್ಚರಿಯಾಗಿದೆ. ಪೊಲೀಸರು ತನಿಖೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಅಲ್ಲಿಯವರೆಗೂ ಕಾಯಬೇಕು ಎಂದರು.