ಸೋನಿಯಾರನ್ನು 2024 ಚುನಾವಣೆಗೆ ಮನೆಗೆ ಕಳಿಸುತ್ತೇನೆ: ಸ್ಮೃತಿ ಇರಾನಿ

2019ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯನ್ನ ಸೋಲಿಸಿದ ಬಿಜೆಪಿ ಈಗ ಸೋನಿಯಾ ಗಾಂಧಿ ಅವರ ರಾಯ್ಬರೇಲಿ ಕ್ಷೇತ್ರದ ಮೇಲೆ ಕಣ್ಣಿಟ್ಟಂತೆ ಕಾಣ್ತಿದೆ. ಇವತ್ತು ಅಮೇಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ‘ಈ ಕ್ಷೇತ್ರದ ಜನರು ಕಿರುಕುಳಕ್ಕೆ ಒಳಗಾಗಲು ಇಷ್ಟಪಡೋದಿಲ್ಲ. ಒಂದ್ವೇಳೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಲು ಅಥವಾ ಅವಮಾನಿಸುವ ದುಸ್ಸಾಹಸವನ್ನ ಕಾಂಗ್ರೆಸ್ನವರು ಮಾಡಿದ್ರೆ 2024ರ ಲೋಕಸಭೆ ಚುನಾವಣೆಯಲ್ಲಿ ರಾಯ್ಬರೇಲಿ ಕ್ಷೇತ್ರವನ್ನ ಕೂಡ ಖಾಲಿ ಮಾಡಿಸುತ್ತೇವೆ’ ಅಂತ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಯ್ಬರೇಲಿ ಕ್ಷೇತ್ರದ ಸಂಸದರಾಗಿದ್ದಾರೆ. ಇಲ್ಲಿ 2004ರಿಂದ ಸೋನಿಯಾ ಗಾಂಧಿಯೇ ಗೆಲ್ತಾ ಬಂದಿದ್ದಾರೆ.

ಇದೊಂಥರ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ ಬಿಜೆಪಿ ಗೆದ್ದಿರೋದು ಕೇವಲ ಎರಡು ಸಲ. ಅದು ಕೂಡ 1990ರ ದಶಕದಲ್ಲಿ. ಇದೀಗ ಆ ಕ್ಷೇತ್ರದಲ್ಲೂ ಸೋನಿಯಾ ಗಾಂಧಿಯನ್ನ ಸೋಲಿಸುವ ಎಚ್ಚರಿಕೆಯನ್ನ ಬಿಜೆಪಿ ಕೊಟ್ಟಿದೆ. ಅಂದ್ಹಾಗೆ 2019ರಲ್ಲಿ ಅಮೇಠಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಇದೇ ಸ್ಮೃತಿ ಇರಾನಿ ಗೆದ್ದಿದ್ದರು. ಅವರೇ ಈಗ ಸೋನಿಯಾ ಗಾಂಧಿಯನ್ನ ಸೋಲಿಸುವ ಬಗ್ಗೆ ಮಾತನಾಡಿರೋದು ಗಮನಾರ್ಹ.

error: Content is protected !!