ಸೂರ್ಯನ ಸಮೀಪದಲ್ಲಿರುವ ನಕ್ಷತ್ರದಲ್ಲಿ ಏಲಿಯನ್ಸ್?!

ಏಲಿಯನ್​ ಕುರಿತಾದ ಜಿಜ್ಞಾಸೆ ಇಂದು ನಿನ್ನೆಯದಲ್ಲ. ವಿಜ್ಞಾನ ಜಗತ್ತು ಅವುಗಳಿಗಾಗಿ ನಿರಂತರ ಅಧ್ಯಯನ ಮಾಡುತ್ತಲೇ ಬಂದಿದೆ. ಏಲಿಯನ್​ಗಳ ಬೆನ್ನುಬಿದ್ದು ಅವುಗಳ ಅಸ್ತಿತ್ವದ ಕುರಿತಾಗಿ ಸಂಶೋಧಿಸುತ್ತಿರುವ ಆಸ್ಟ್ರೇಲಿಯಾದ ಖಗೋಳಶಾಸ್ತ್ರಜ್ಞರಿಗೆ ಈಗ ಅಚ್ಚರಿಯೊಂದು ಎದುರಾಗಿದೆ. ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುವ ಪ್ರಾಕ್ಸಿಮಾ ಸೆಂಚುರಿ ನಕ್ಷತ್ರದೆಡೆಯಿಂದ ಕುತೂಹಲಕಾರಿ ತರಂಗಗಳು ಹೊರಹೊಮ್ಮುತ್ತಿರುವ ವಿಚಾರ ಪತ್ತೆಯಾಗಿದೆ.

ಕಳೆದ ವರ್ಷ ಏಪ್ರಿಲ್​, ಮೇ ತಿಂಗಳಲ್ಲಿ ನಡೆಸಿದ ಅಧ್ಯಯನ ಈ ಕುತೂಹಲವನ್ನು ಹುಟ್ಟುಹಾಕಿದೆ. ಪಾರ್ಕ್ಸ್​ ಟೆಲಿಸ್ಕೋಪ್​ನಿಂದ ಸುಮಾರು 30 ಗಂಟೆಗಳ ಕಾಲ ಗಮನಿಸಿದಾಗ ಪ್ರಾಕ್ಸಿಮಾ ಸೆಂಚುರಿ ನಕ್ಷತ್ರದ ಕಡೆಯಿಂದ ರೇಡಿಯೋ ತರಂಗಗಳು ಹೊರ ಹೊಮ್ಮಿರುವ ವಿಚಾರ ಪತ್ತೆ ಆಗಿದೆ.

ಖಗೋಳಶಾಸ್ತ್ರಜ್ಞರಿಗೆ ಇಂತಹ ತರಂಗಗಳು ಕಾಣಿಸುವುದು ಅತೀ ಸಾಮಾನ್ಯ ಪ್ರಕ್ರಿಯೆ.

ಆದರೆ, ಈ ತರಂಗಗಳು ಪ್ರಕೃತಿ ಸಹಜವಾಗಿ ಮೂಡುತ್ತಿರುವುದೋ ಅಥವಾ ಯಾವುದಾದರೂ ಜೀವಿಯ ಹಸ್ತಕ್ಷೇಪದಿಂದ ಆಗುತ್ತಿರುವುದೋ ಎಂಬ ವಿಚಾರ ಇನ್ನೂ ಖಚಿತವಾಗಿಲ್ಲ. ಸಾಧಾರಣವಾಗಿ ಯಾವುದೇ ಆಕಾಶಕಾಯಗಳಲ್ಲಿ ಸ್ಫೋಟವಾದಗಲೂ ತರಂಗಗಳು ಹೊರಹೊಮ್ಮುವ ಸಾಧ್ಯತೆ ಇರುತ್ತದೆ ಎಂದು ವರದಿಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಸಾದ ಮಾಜಿ ವಿಜ್ಞಾನಿ ಪೀಟ್​ ವಾರ್ಡನ್, ಈ ಅಧ್ಯಯನ ಅತ್ಯಂತ ಪ್ರಮುಖವಾಗಿದೆ. ವಿಜ್ಞಾನಿಗಳು ಕೆಲವು ಅಸ್ವಾಭಿವಿಕ ತರಂಗಗಳನ್ನು ಪತ್ತೆ ಹಚ್ಚಿದ್ದಾರೆ. ಅವುಗಳ ಮೂಲ ಯಾವುದು ಎನ್ನುವುದನ್ನು ತಿಳಿಯಬೇಕಿದೆ. ಅಧ್ಯಯನ ಇನ್ನೂ ಪ್ರಗತಿಯಲ್ಲಿರುವುದರಿಂದ ಈಗಲೇ ಖಚಿತವಾಗಿ ಮಾತನಾಡುವುದು ಕಷ್ಟ ಎಂದು ತಿಳಿಸಿದ್ದಾರೆ.

ಪ್ರಾಕ್ಸಿಮಾ ಬಿ ನಕ್ಷತ್ರದಲ್ಲಿ ಜೀವಿಗಳು ಇರುವುದು ಕಷ್ಟಸಾಧ್ಯ. ಭೂಮಿಗೆ ಚಂದ್ರ ಹೇಗೆ ಸಮೀಪದಲ್ಲಿರುವುದೋ, ಅಂತೆಯೇ ಪ್ರಾಕ್ಸಿಮಾ ಬಿ ಸಹ ಸೂರ್ಯನಿಗೆ ಅಂಟಿಕೊಂಡಿದೆ. ಒಂದು ಪಾರ್ಶ್ವದಲ್ಲಿ ಬೆಳಕಿದ್ದಾಗ ಇನ್ನೊಂದೆಡೆ ಸಂಪೂರ್ಣ ಕತ್ತಲಾವರಿಸಿರುತ್ತದೆ. ಆದರೆ, ಅಲ್ಲಿಯ ವಾತಾವರಣದಲ್ಲಿ ಜೀವಿಗಳು ಸೃಷ್ಟಿಯಾಗುತ್ತವೆ ಎಂದು ಊಹಿಸಿಕೊಳ್ಳುವುದು ಸಹ ಕಷ್ಟವಿದೆ. ಇಷ್ಟಾದರೂ ನಮ್ಮ ಊಹೆ ತಪ್ಪಾಗಲಿ ಎಂದೇ ನಾವು ನಿರೀಕ್ಷಿಸುತ್ತೇವೆ ಎಂದು ವಿಜ್ಞಾನಿ ಡಾರ್ಟ್​ನೆಲ್ ಹೇಳಿದ್ದಾರೆ.

ಭೂಮಿಯ ಹೊರತಾಗಿ ಬೇರೆಡೆ ಜೀವಿಗಳು ನೆಲೆಸಿರುವ ಕುರಿತು ನಡೆಯುತ್ತಿರುವ ಅಧ್ಯಯನ ಇಂದು ನಿನ್ನೆಯದಲ್ಲ. 1897ರಲ್ಲಿ ಅಮೆರಿಕಾದ ನಿಕೋಲಾ ಟೆಸ್ಲಾ ಎನ್ನುವವರು ಮಂಗಳ ಗ್ರಹದಿಂದ ರೇಡಿಯೋ ತರಂಗಗಳು ಹೊಮ್ಮುತ್ತಿರುವುದಾಗಿ ವಾದಿಸಿದ್ದರು. ಅಲ್ಲಿ ಜೀವಿಗಳು ಇರಬಹುದು ಎಂದು ಅಂದಾಜಿಸಲಾಗಿತ್ತಾದರೂ ಮಂಗಳ ಗ್ರಹದ ಮೇಲೆ ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ಅಲ್ಲಿ ಜೀವಿಗಳು ನೆಲೆಸಿಲ್ಲ ಎನ್ನುವುದು ಗೊತ್ತಾಗಿದೆ.

ಅಂತೆಯೇ, 1967, 1977, 2003ನೇ ಇಸವಿಯಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ಮಹತ್ತರ ಅಧ್ಯಯನಗಳು ನಡೆದಿವೆ. ಆದರೆ, ಇದುವರೆಗಿನ ಯಾವ ಅಧ್ಯಯನದಲ್ಲೂ ಏಲಿಯನ್​ ಅಸ್ತಿತ್ವದ ಕುರಿತಾಗಿ ನಿಖರ ಮಾಹಿತಿ ಸಿಕ್ಕಿಲ್ಲ.

error: Content is protected !!