ಸೂರಿಲ್ಲದೆ ಸೊರಗಿದ್ದಾರೆ ಕಾವೇರಿ ತೀರದ ಜನ!

ಸುದ್ದಿ ಸಂತೆ ವಿಶೇಷ ವರದಿ: ಗಿರಿಧರ್ ಕೊಂಪುಳಿರ ಮತ್ತು ಚಿತ್ರ ಕೃಪೆ: ವಾಸು ಸಿದ್ಧಾಪುರ

ಕೊಡಗು: ಜಿಲ್ಲೆಯ ಕರಡಿಗೋಡು ಗ್ರಾಮದ ಕಾವೇರಿ ನದಿ ತೀರದಲ್ಲಿ ವಾಸವಾಗಿರುವ ಜನ ಸರಿಯಾದ ಶಾಶ್ವತ ಸೂರಿಲ್ಲದೆ ಅತಂತ್ರರಾಗಿ ಬದುಕು ಸಾಗಿಸುವಂತಾಗಿದೆ.

ಇಲ್ಲಿ ಸುಮಾರು ಅರವತ್ತಕ್ಕೂ ಹೆಚ್ಚಿನ ಕುಟುಂಬಗಳು ವಾಸವಿದ್ದು, ಎಲ್ಲರೂ ಕಾರ್ಮಿಕ ಕುಟುಂಬಗಳೇ ಆಗಿವೆ. ಮೂರು ವರ್ಷದಿಂದ ಟೆಂಟ್ ಮನೆಗಳಲ್ಲೇ ಅನಿಶ್ಚಿತತೆಯಲ್ಲಿ ದಿನ ದೂಡುತ್ತಿರುವ ಇವರುಗಳಲ್ಲಿ ಕೆಲವರು ಇಲ್ಲಿ ಮನೆ ಕಟ್ಟಿಕೊಂಡರೂ ಎರಡು ವರ್ಷದ ಹಿಂದೆ ಬಂದ ಪ್ರವಾಹ ಮನೆಗಳನ್ನು ಭಾಗಶಃ ನಾಶ ಮಾಡಿತ್ತು. ಆಗ ಇಲ್ಲಿಗೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಪೊಳ್ಳು ಭರವಸೆ ನೀಡಿ ಪ್ರಚಾರ ಪಡೆದು ಹೋದವರು ಮತ್ತೆ ಇತ್ತ ಮುಖವೂ ಹಾಕಿ ನೋಡಿಲ್ಲ.

ಪ್ರವಾಸ ಪರಿಸ್ಥಿತಿ ಎದುರಾಗುತ್ತಿದ್ದಂತೆ ಇಲ್ಲಿನ ಜನ ಅಕ್ಷರಶಃ ನಿರ್ಗತಿಕರಂತೆ ಪರದಾಡುತ್ತಾರೆ ಅದನ್ನು ಬಿಂಬಿಸುವಂತಿದೆ ಈ ಚಿತ್ರ
ಜನ ನಿರ್ಮಿಸಿಕೊಂಡಿದ್ದ ಶಾಶ್ವತ ಮನೆಗಳು ಎರಡು ವರ್ಷದ ಹಿಂದೆ ಎದುರಾದ ಪ್ರವಾಹ ಪರಿಸ್ಥಿತಿಯಿಂದ ಭಾಗಶಃ ಹಾನಿಗೊಂಡಿರುವ ಚಿತ್ರ.

ಈಗಾಗಲೇ ಕೆಲವರಿಗೆ ಲಾಟರಿ ಮೂಲಕ ನಿವೇಶನಗಳನ್ನು ಮಂಜೂರು ಮಾಡಿದ್ದರೂ ಮನೆಗಳನ್ನು ಕಟ್ಟಿಕೊಡುವ ಯಾವ ಲಕ್ಷಣಗಳೂ ಕಂಡು ಬರುತ್ತಿಲ್ಲ. ಹಾಗಾಗಿ ಆಕಾಶದತ್ತ ಚಿತ್ತವಿಟ್ಟು ಚಿಂತೆಯಲ್ಲಿ ತಲೆ ಮೇಲೆ ಕೈ ಇಟ್ಟುಕೊಂಡ ಇಲ್ಲಿನ ಜನರ ಸ್ಥಿತಿ ಶೋಚನೀಯವಾಗಿದೆ. ಇಲ್ಲಿ ಆನೆ ಕಾಟದ ಅಪಾಯಗಳೂ ಹೆಚ್ಚಿರುವುದರಿಂದ ಜೀವವನ್ನು ಕೈಯಲ್ಲಿ ಇಟ್ಟುಕೊಂಡು ಉಸಿರಾಡುವ ಅನಿವಾರ್ಯತೆ ಇದೆ. ಕ್ಷಣ ಕ್ಷಣಕ್ಕೂ ಪ್ರವಾಹದ ಭೀತಿಯೂ ಇದೆ.

ಹೀಗಿದ್ದರೂ ಅಧಿಕಾರಿಗಳು ಜನ ಪ್ರತಿನಿಧಿಗಳು ಇದರ ಕುರಿತು ಗಮನ ಹರಿಸದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧ ಪಟ್ಟವರು ಇಲ್ಲಿನ ಬಡ ಕಾರ್ಮಿಕ ಕುಟುಂಬಗಳಿಗೊಂದು ಶಾಶ್ವತ ಆಶ್ರಯ ಕಲ್ಪಿಸಲು ಕಾರ್ಯೋನ್ಮುಕವಾಗಬೇಕಾಗಿದೆ.

error: Content is protected !!