fbpx

ಸುಳ್ಳು ಸುದ್ದಿ ಹಬ್ಬಿಸದಿರಿ…

✍🏻ವಿನೋದ್ ಮೂಡಗದ್ದೆ

ಪ್ರವಾಸಿಗರ ಸ್ವರ್ಗವಾಗಿದ್ದ ನಮ್ಮ ಈ ಕೊಡಗು ಕಳೆದ ಎರಡು ವರ್ಷಗಳಿಂದ ನರಕಯಾತನೆಯನ್ನು ಅನುಭವಿಸುತ್ತಿದೆ‌. ೨೦೧೮ ರ ಆಗಸ್ಟ್’ನಲ್ಲಿ ಮತ್ತೆ ೨೦೧೯ ರಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಜಲಪ್ರಳಯ ಇದಕ್ಕೆ ಕಾರಣ.

ಈ ಪ್ರಕೃತಿ ವಿಕೋಪದಿಂದ ಆಸ್ತಿ-ಪಾಸ್ತಿ ಅಲ್ಲದೆ ಜೀವ ಹಾನಿ‌ ಕೂಡ ಆಗಿದೆ‌.

ಈ ಸಲ‌ ಮತ್ತೆ ಮಳೆಗಾಲ ಪ್ರಾರಂಭವಾಗಿದ್ದು ದಿನೇ ದಿನೇ ತನ್ನ ಅಬ್ಬರವನ್ನು ಹೆಚ್ಚಿಸಿಕೊಂಡು ಹೋಗುತ್ತಿದೆ. ಕೊಡಗಿನ ಜನತೆ ಇನ್ನೂ ಕಳೆದೆರೆಡು ವರ್ಷದ ಘಟನೆಯನ್ನು ಮರೆತಿಲ್ಲ. ಈಗ ಸುರಿಯುತ್ತಿರುವ ಮಳೆ ಎಲ್ಲರಲ್ಲಿ ಭಯವನ್ನು ಹುಟ್ಟಿಸುತ್ತದೆ.

ಈಗಾಗಲೆ ಗಾಳಿ ಮಳೆಗೆ ಅಲ್ಲಲ್ಲಿ ಮರಗಳು ಉರುಳಿದೆ, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಸಣ್ಣ ಪುಟ್ಟ ಭೂಕುಸಿತಗಳು ಕೂಡ ಸಂಭವಿಸಿದೆ‌.

ಒಂದೊಮ್ಮೆ ಮಳೆ ಎಂದರೆ ಖುಷಿ ಪಡುತ್ತಿದ್ದ ಜನ ಈಗ ಹೆದರಿ ಜೀವವನ್ನು ಕೈಯಲ್ಲಿ ಹಿಡಿದು ದಿನ ಕಳೆಯುವಂತೆ ಆಗಿದೆ‌. ಸರಕಾರ, ಜಿಲ್ಲಾಡಳಿತ ಮತ್ತು ಕೆಲವು ಸಂಘ ಸಂಸ್ಥೆಗಳು ಜೊತೆಗೂಡಿ ಪ್ರಕೃತಿ ವಿಕೋಪವನ್ನು ಎದುರಿಸಲು ಸಜ್ಜಾಗುತ್ತಿದೆ‌.

ಇಂದಿನ ದಿನಗಳಲ್ಲಿ ಮೊಬೈಲ್ ಒಂದು ಪ್ರಭಲ ಮಾಧ್ಯಮವಾಗಿದೆ. ಏನೇ ಸುದ್ದಿ ಸಮಾಚಾರ ಇದ್ದರೂ ಕ್ಷಣ ಮಾತ್ರದಲ್ಲಿ ಪ್ರಪಂಚದ ಮೂಲೆ ತಲುಪುತ್ತದೆ‌. ಹೀಗಿರುವಾಗ ನಾವು ಇದನ್ನು ಉತ್ತಮ ಮತ್ತು ಸತ್ಯ ಸಂಗತಿಗಳನ್ನು ಬಿತ್ತರಿಸಲು ಬಳಸೋಣ.

ಕೆಲವು ಕಿಡಿಗೇಡಿಗಳಂತೂ ಎಂದೂ ನಡೆದ ಘಟನೆಯನ್ನು ಇಂದೇ ನಡೆಯಿತು ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ‌. ಬೇರೆ ಎಲ್ಲೋ ನಡೆದುದನ್ನು ಇಲ್ಲಿನ ಯಾವುದೋ ಪ್ರದೇಶದ ಹೆಸರು ಸೇರಿಸಿ ಇಲ್ಲಿ ನಡೆದಿದ್ದು ಎಂದು ಪ್ರಸರಿಸುತ್ತಾರೆ. ಅವರಿಗೇನೋ ವಿಕೃತ ಆನಂದ‌. ಆದರೆ ಅದು ಸಮಾಜದ ಮೇಲೆ ಬೀರುವ ಪರಿಣಾಮ ಹೇಳತೀರದು.

ಇಂತಹ ಪ್ರತಿಕೂಲ ಪರಿಸ್ಥಿಯಲ್ಲಿ ಎಲ್ಲರೂ ಸುರಕ್ಷಿತವಾಗಿ ಇರಲಿ ಎಂದು ಹಾರೈಸೋಣ‌. ಯಾವುದೇ ಸುಳ್ಳು ಸುದ್ದಿಗಳನ್ನು ಹಬ್ಬಿಸದೇ ಇರೋಣ‌.

ಪ್ರಕೃತಿ ವಿಕೋಪ ಸಂದರ್ಭದ ಏನೇ ಮಾಹಿತಿ ಅಥವಾ ಸಹಾಯಕ್ಕಾಗಿ ಜಿಲ್ಲಾಡಳಿತ ಕಂಟ್ರೋಲ್ ರೂಂ. 1077 ಅಥವಾ ವಾಟ್ಸಾಪ್ ಸಂಖ್ಯೆ 8550001077 ನ್ನು ಸಂಪರ್ಕಿಸಿಬಹುದು.

✍🏻ವಿನೋದ್ ಮೂಡಗದ್ದೆ

error: Content is protected !!