fbpx

ಸಾಹಿತಿಗಳೂ, ಸತ್ತವರೂ ಕನಸ್ಸಿನಲ್ಲಿ ಬರುತ್ತಾರೆ…!

ನಿನ್ನೆಯಿಂದ ಸ್ವಲ್ಪ ಅಸಿಡಿಟಿ ತೊಂದರೆ ಕೊಡುತ್ತಿದೆ. ಈ ಅಸಿಡಿಟಿ ಭಯಂಕರ ತಲೆ ನೋವನ್ನೂ, ರಾತ್ರಿ ಒಂದಿಷ್ಟು ಚಳಿ ಜ್ವರವನ್ನೂ ರಿಯಾಯಿತಿ ದರದಲ್ಲಿ ಕೊಟ್ಟಿದೆ. ಈಗ ನಾನು ಈ ಕಾರಣ ಹೇಳಿ ಈ ವಾರವೂ ಅಂಕಣ ಬರೆಯದಿದ್ದರೆ, ಗೆಳೆಯ ರಜತ್ ನಂಬುವುದಿಲ್ಲ. ಗುಳಿಗೆಯ ದೆಸೆಯಿಂದ ಚೇತರಿಸಿಕೊಂಡಿರುವ ನಾನು ಈಗ ಅನಿವಾರ್ಯವಾಗಿ ಸುದ್ದಿಸಂತೆಗೆ ಅಂಕಣ ಬರೆಯಲು ಕೂತಿದ್ದೇನೆ.


     ಸುಮಾರು ಹನ್ನೆರಡು ವಾರಗಳು ಸತತವಾಗಿ ಸುದ್ದಿ ಸಂತೆಯಲ್ಲಿ ಅಂಕಣ ಬರೆದ ನಾನು ದಿಢೀರನೆ ಕಳೆದ ನಾಲ್ಕು ವಾರಗಳ ಹಿಂದೆ ಅಂಕಣವನ್ನು ನಿಲ್ಲಿಸಿದ್ದೆ. ತಮಾಷೆ ಎಂದರೆ ನೀವು ಅಂಕಣ ಯಾಕೆ ನಿಲ್ಲಿಸಿದಿರಿ? ಎಂದು ಈವರೆಗೂ ಯಾರೂ ಕೇಳಿಲ್ಲ ಎನ್ನುವುದು. ಈ ವಿಚಾರವಾಗಿ ಕರ್ನಾಟಕದ ಹಿರಿಯ ಲೇಖಕರೊಬ್ಬರ ಬಳಿ ನಾನು ನನ್ನ ನೋವನ್ನು ಹೇಳಿಕೊಂಡಿದ್ದೆ. “ಅಲ್ಲ ಸರ್ ಒಂದು ನರಪಿಳ್ಳೆನೂ ಕೇಳಿಲ್ಲ ನೋಡಿ ಅಂಕಣ ಯಾಕೆ ಬರಿತಿಲ್ಲಾ ಅಂತಾ” ಉತ್ತರ ಕರ್ನಾಟಕಕ್ಕೂ ದಕ್ಷಿಣ ಕರ್ನಾಟಕಕ್ಕೂ ನಡುವೆ ಬದುಕುತ್ತಿರುವ ಆ ಹಿರಿಯರು “ಯಾವ್ ಸೂಳಿಮಗನಿಗೆ ಬೇಕು ಹೇಳಿ ಈ ಬರಹ, ಕಥೆ, ಮಣ್ಣು ಮಸಿ ಎಲ್ಲ. ತಿನ್ನಕ್ಕೆ ಅನ್ನಬೇಕು. ನಾವು ಬರೆಯೋ ಈ ಬರವಣಿಗೆಯಿಂದ ನಾಲ್ಕು ಜನರ ಹೊಟ್ಟೆ ತುಂಬುತ್ತೆ ಅನ್ನೋ ಹಾಗಿದ್ರೆ ಕೇಳ್ತಿದ್ರಪ್ಪ. ನಮ್ ತೆವಲಿಗೆ ನಾವು ಬರಿಬೇಕು ಇಲ್ವ ಮುಚ್ಕೊಂಡಿರಬೇಕು ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಬಾರದು” ಅಂದು ಬಿಟ್ಟರು.
ನನಗೂ ಅವರು ಹೇಳಿದ್ದು ಸರಿ ಅನ್ನಿಸಿ ಸುಮ್ಮನಾಗಿದ್ದೆ.
  

ನಮ್ಮ ಸುದ್ದಿಸಂತೆ ಸಂಪಾದಕ ಮಾತ್ರ “ಯಾಕ್ ಮಗ ಬರಿತಿಲ್ಲ ನನ್ನಿಂದಾ ಏನಾದ್ರು ಬೇಜಾರಾಯ್ತ?” ಅನ್ನುತ್ತಾ ನನ್ನ ಬೆನ್ನು ಬಿದ್ದು ಬಿಟ್ಟದ್ದ.
ಮೊನ್ನೆ ಮಡಿಕೇರಿಯ ಕ್ಯಾಥೋಲಿಕ್ ಚರ್ಚಿನ ಬಳಿಯಿರುವ ಬಾರ್ & ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ, ಬರೋಬ್ಬರಿ ಎರಡು ಫುಲ್ ಬಾಟಲಿ ಬಿಯರ್ ಕುಡಿಸಿ, “ಈ ವಾರದಿಂದ ನಾನು ಅಂಕಣ ಪುನಃ ಶುರು ಮಾಡುತ್ತೇನೆ.” ಎನ್ನುವ ನುಡಿಮುತ್ತುಗಳನ್ನು ನನ್ನ ನಾಲಿಗೆಯಿಂದ ಹೊರಡಿಸಲು ಯಶಸ್ವಿಯಾಗಿದ್ದ.

ಈಗ ಅಸಿಡಿಟಿ ಆಗಿದೆ. ಮೊನ್ನೆ ಕುಡಿದ ಬೀರಿಂದಲೂ ಆಗಿರ ಬಹುದೆಂದರೆ ಆತ ನಂಬುತ್ತಾನ? ಅಥವಾ ನಮ್ಮ ಕರ್ನಾಟಕದ ನಡುವಲ್ಲಿ ಬದುಕುತ್ತಿರುವ ಹಿರಿಯರು ಹೇಳಿದಂತೆ “ಯಾವ್ ಸೂಳಿಮಗನಿಗೆ ಬೇಕು ಮಗಾ ನನ್ನ ಅಂಕಣ? ತಿನ್ನಲು ಅನ್ನ, ಕುಡಿಯಲು ಬೀರು ಸಾಕು” ಎನ್ನಲಾ?
   
ನೆಪಹೇಳಲು ಮತ್ತು ಬರೆಯಲು ಸಾಮಾಗ್ರಿಗಳಿರಬೇಕು ಎರಡೂ ಮುಗಿದು ಹೋದರೆ ನಾವು ಖಾಲಿ ಕೂತು ಬಿಡುತ್ತೇವೆ. ಈಗ ನೆಪಹೇಳಲು ಸಾಮಾಗ್ರಿ ಇಲ್ಲದ ಕಾರಣ ಹಾಗು ಎರಡು ಫುಲ್ ಬಾಟಲಿ ಬಿಯರ್ ನನ್ನ ನಾಲಿಗೆಯಿಂದ ನುಡಿಕೊಡಿಸಿರುವ ಕಾರಣ ಬರೆಯುತ್ತಿದ್ದೇನೆ.
    
ನಾನು ತೀರಾ ಕಂಟ್ರೋಲ್ ತಪ್ಪುವುದು ಕುಡಿದಾಗ, ಪ್ರೇಮದಲ್ಲಿ ಬಿದ್ದಾಗ ಹಾಗು ಪ್ರೇಮವಂಚಿತನಾದಗ ಮಾತ್ರ.

ಈಗ ಕುಡಿದಿಲ್ಲ. ಪ್ರೇಮದಲ್ಲಿ ಬಿದ್ದು, ಪ್ರೇಮವಂಚಿತನಾಗಿದ್ದೇನೆ ಹಾಗು ನಾನು ಆಗಾಗ್ಗೆ ಹೀಗೆ ಕಂಟ್ರೋಲ್ ಕಳೆದುಕೊಳ್ಳುತ್ತಿರುತ್ತೇನೆ.
  
ಮೊನ್ನೆ ದಿನ ನಾನು ಹಾಗು ಗೆಳೆಯ ರಜತ್ ಮಡಿಕೇರಿಯ ಪ್ರೇಸ್ ಕ್ಲಬ್ಬಿನಲ್ಲಿ ನಡೆದ ಒಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೊ ಅಲ್ಲಿಂದ ಹೊರಡುವಾಗ ಎದುರಾದ ಹಿರಿಯ ಸಾಹಿತಿಗಳೊಬ್ಬರು.  ಸ್ವಲ್ಪ ಎಣ್ಣೆ  ಮಸ್ತಿನಲ್ಲಿದ್ದರು “ನೀನು ಬರೀ ಕಳ್ಳ, ಪ್ರೇಯಸಿರು ಅದೂ ಇದು ಅಂತಾ ಬರಿತೀಯ. ನಿನ್ನ ಯಾವ ಪ್ರೇಯಸಿಯರೂ ನಿನಗೆ ಮೋಸ ಮಾಡಿಲ್ಲ. ಎಲ್ಲರಿಗೂ ನೀನೇ ಕೈ ಕೊಟ್ಟಿದ್ದು ಹಾಗು ನೀನು ಬರೆಯೋದೆಲ್ಲ ಶುದ್ಧ ಸುಳ್ಳು” ಅಂದು ಬಿಟ್ಟರು.
ಪಕ್ಕದಲ್ಲಿದ್ದ ರಜತ್‌ನನ್ನು ಉದ್ದೇಶಿಸಿ “ಇವನು ಗುಡ್ ಹುಡುಗ ಒಬ್ಬಳನ್ನೇ ಪ್ರೇಮಿಸಿದ. ಅವಳು ಕೈ ಕೊಟ್ಟಳು. ಅಲ್ಲಿಂದ ಸುಮ್ಮನಿದ್ದಾನೆ” ಅಂದರು.


  
ಹಾಗೆ ಅವರು ನನ್ನ ಕುರಿತು ಕಮೆಂಟ್ ಪಾಸ್ ಮಾಡಿದ್ದರಲ್ಲಿ ಅರ್ಧ ಸತ್ಯವೂ ಹೌದು. ಆದರೇ ನನ್ನ ಅಷ್ಟೂ ಪ್ರೇಯಸಿರೂ ನನ್ನಷ್ಟೇ ಕಳ್ಳರು ಎನ್ನುವುದು ಅಷ್ಟೇ ನಿಜ ಕೂಡ.  ಯಾಕೆಂದರೆ ನನ್ನ ಈವರೆಗಿನ ಯಾವ ಪ್ರೇಯಸಿಯರು ಯಾರು? ಎನ್ನುವ ವಿಚಾರ ಸಾರ್ವಜನಿಕವಾಗಿ ಗೊತ್ತೇ ಆಗಿಲ್ಲ. ಹಾಗೆ ಗೊತ್ತಾಗದಂತೆ ಅವರೆಲ್ಲರೂ ಮುತುವರ್ಜಿವಹಿಸಿ ಸೇಫ್ ಗೇಮ್ ಆಡುತ್ತಿದ್ದರು ಅನಿಸುತ್ತಿದೆ. ನಾನು ಅಷ್ಟಾಗಿ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ ಆದರೆ ಹಿರಿಯರ ಆರೋಪ ನನ್ನನ್ನು ಯೋಚನೆಗೆ ಹಚ್ಚಿದೆ. ನಾನು ಕೈ ಕೊಟ್ಟಿದ್ದರೆ ಯಾರಾದರೂ ಒಬ್ಬರಾದರೂ ನನ್ನ ಮೇಲೆ ಮೊಕದ್ದಮೆ ಹೂಡಬಹುದಿತ್ತಲ್ಲ. ಎನ್ನುವ ಅನುಮಾನ ಶುರುವಾಗಿದೆ.


  
ನಿಜ ಏನೆಂದರೆ ಅವರೂ ನನ್ನಂತೆ ಕಳ್ಳರು, ಕಪಟಿಗಳು, ನಾಟಕ ಶೂರರೂ ಆಗಿರುವುದರಿಂದ ಯಾರೂ ಆ ಸಾಹಸಕ್ಕೆ ಕೈ ಹಾಕಿಲ್ಲ ಹಾಗು ಯಾರೂ ಸತ್ತೇನೂ ಹೋಗಿಲ್ಲ ಎಲ್ಲರೂ ಹಾಯಾಗಿದ್ದಾರೆ. ನೆನಪಾದಾಗಲೆಲ್ಲ ಈಗಲೂ ಮೆಸೇಜ್ ಎಸೆದು ಫ್ಲರ್ಟ್ ಮಾಡುತ್ತಿರುತ್ತಾರೆ.
  
ಯಾಕೋ “ಯಾವ್ ತಿಕ್ಕಲಿಗೆ ಬೇಕು ಪ್ರೇಮ? ಅದೇನು ಹೊಟ್ಟೆ ತುಂಬಿಸುತ್ತಾ? ಬದುಕಲು ಅನ್ನ, ಕುಡಿಯಲು ನೀರು, ಉಸಿರಾಡಲು ಗಾಳಿ ಬೇಕು. ಇದಕ್ಕೂ ದುಡ್ಡು ಬೇಕು ಎಂದು ಕೂಗಿ ಪ್ರಪಂಚಕ್ಕೆ ಹೇಳಬೇಕು ಅನ್ನಿಸುತ್ತಿದೆ.
  
ಇರಲಿ ನನ್ನ ಈ ಎಲ್ಲಾ ಗೊಂದಲಗಳ ಪರಿಹಾರಕ್ಕೆಂದು ನನ್ನ ಆಧ್ಯಾತ್ಮಿಕ ಗುರುಗಳ ಬಳಿಗೆ ಹೋಗಿ ಕುಳಿತುಕೊಂಡೆ. ನಾನು ಹೋಗುವಾಗ ಅವರು ಗಾಳಿಗೆ ಮುರಿದು ಹೋಗಿದ್ದ ಸೌದೆ ಕೊಟ್ಟಿಗೆಯನ್ನು ಸರಿ ಮಾಡುತ್ತಿದ್ದರು.

ನನ್ನನ್ನು ಕಂಡೊಡನೆ ಬಂದು ಉಭಯಕೊಶಲೋಪರಿ ವಿಚಾರಿಸಿದರು.
ನಾನು ನನ್ನ ಗೊಂದಲಗಳ ಕುರಿತು ಪ್ರಸ್ತಾಪಸಿದೆ.

ಅವರು ಪ್ರಶ್ನಿಸತೊಡಗಿದರು “ನಿನಗೆ ಕನಸ್ಸು ಬೀಳುತ್ತದಾ?” ಹೌದು ಅಂದೆ. “ಇತ್ತಿಚ್ಚೆಗೆ ನಿನ್ನ ಕನಸ್ಸಿನಲ್ಲಿ ಯಾರು ಯಾರು ಬರುತ್ತಿದ್ದಾರೆ?” ಕೆಲ ಸಾಹಿತಿಗಳು, ಮತ್ತೂ ಕೆಲ ನನ್ನದೇ ಕಥಾ ಪಾತ್ರಗಳು ಅಂದೇ.
ಆ ಕಥಾ ಪಾತ್ರಗಳಲ್ಲಿ ತೀರಿ ಹೋದವರು ಬರುತ್ತಾರಾ?

ಹೌದು ಹೆಚ್ಚು ಅವರೇ ಬರುತ್ತಾರೆ ಅಂದೆ.
ನನ್ನ ಕನಸ್ಸಿನಲ್ಲಿ ಸಾಹಿತಿಗಳು, ತೀರಿಹೋದವರು ಮತ್ತು ಪರಮಾಪ್ತ ಬಳಗದವರು ಬರುತ್ತಾರೆ ಅನ್ನುವುದು ನಿಜ ಕೂಡ.
  
ಕನಸ್ಸಿನಲ್ಲಿ ದೇವರು? ಯಾವುದೋ ಪುರಾತನ ದೇವಸ್ಥಾನ ಬರುವುದುಂಟು ದೇವರು ಕಂಡಿಲ್ಲ. ಅಂದೇ.
‘ದೆವ್ವಗಳು? ಭಯ ಉಂಟಾಗುವಂತದ್ದು?
ನನಗೆ ಕನಸ್ಸಿನಲ್ಲಿ ದೆವ್ವಗಳು ಬರುವುದಿಲ್ಲ. ಅಪರೂಪಕ್ಕೊಮ್ಮೆ ಹಳೆಯ ಪ್ರೇಯಸಿಯರು ಬರುತ್ತಾರೆ ಹಾಗೆ ಅವರು ಬಂದಾಗ ಬೆಚ್ಚಿ ಬಿದ್ದು ಎದ್ದೇಳುತ್ತೇನೆ ಪ್ರತಿ ಸಾರಿಯೂ ಆಗ ತುಂಬಾ ಹೆದರಿರುತ್ತೇನೆ’ ಅಂದೇ.
  
ಅವರು ಜೋರಾಗಿ ನಕ್ಕು. ನಿನ್ನ ಕನಸ್ಸಿನಲ್ಲಿ ನೀನು ಬರುವುದುಂಟಾ?
ಬಹುತೇಕ ಕನಸ್ಸುಗಳಲ್ಲಿ ನಾನಿರುತ್ತೇನೆ. ಆಗ ಯಾವ ಬಣ್ಣದ ಬಟ್ಟೆ ಹಾಕಿರುತ್ತೀಯಾ?
   ಬಿಳಿ ಬಣ್ಣದ ಚರ್ಚಿನಲ್ಲಿ ಫಾದರ್‌ಗಳು ಹಾಕುವ ಬಟ್ಟೆಯಂತಹಾ ಬಟ್ಟೆಯಲ್ಲೇ ನಾನಿರುತ್ತೇನೆ ಅಂದೆ.
ಅವರು ಕಣ್ಣು ಮುಚ್ಚಿ ಕುಳಿತು. ನಿಟ್ಟುಸಿರು ಬಿಟ್ಟು. ನಿನಗೆ ಹಣದ ಬಗ್ಗೆ, ಆಸ್ತಿ, ಬಗ್ಗೆ, ಚಿನ್ನದ ಬಗ್ಗೆ ಏನು ಅನಿಸುತ್ತದೆ? ನನಗೆ ಏನೂ ಅನಿಸುವುದಿಲ್ಲ ಅದ್ಯಾವೂದು ನನ್ನ ಬಳಿ ಇಲ್ಲ ಆ ಕಾರಣಕ್ಕೂ ಇರಬಹುದು ಅಂದೆ.
  
ಗುರುಗಳು ಅವರ ಗುಡಿಸಲಿನಂತಹ ಮನೆಯ ಒಳಗೆ ಹೋಗಿ.  ಸ್ವಲ್ಪ ಸಮಯದ ನಂತರ ಕುಡಿಯಲು ಖಾಲಿ ಟೀ ತಂದರು.
  
ಕುಡಿಯುತ್ತಾ ಕೂತೆ. ನೀನು ಹಾಲು ಕುಡಿಯುತ್ತೀಯ? ಹೌದು ಅಂದೆ. ಹಾಲಿಗೆ ಸಕ್ಕರೆ ಹಾಕಿ ಕುಡಿಯುತ್ತೀಯಾ?
ಇಲ್ಲ ನಾನು ಸಣ್ಣವಯಸ್ಸಿನಿಂದಲೂ ಸಕ್ಕರೆ ಇಲ್ಲದ ಹಾಲನ್ನೇ ಕುಡಿಯುವುದು ಅಂದೆ “ಹ್ಮೂಂ.. ಅನ್ನುತ್ತಾ ಕಣ್ಣು ಮಿಟುಕಿಸಿ” ಏನನ್ನೋ ಧ್ಯಾನಿಸುವಂತೆ ಕುಳಿತುಕೊಂಡರು ಮತ್ತೆ ಏನೋ ನೆನಪಾದವರಂತೆ ಮನೆಯ ಒಳಕ್ಕೆ ಹೋಗಿ ಮರಳಿದರು.
“ನೀನು ಇತ್ತಿಚ್ಚೆಗೆ ಸಾವಿನ ಮನೆಯೊಂದಕ್ಕೆ ಹೋಗಿದ್ದೆ ಅಲ್ವ?” ಹೌದು ಅಂದೆ. ಸಣ್ಣ ಪ್ರಾಯದ ಸಾವು. ಸಣ್ಣ ಪ್ರಾಯದ ಹುಡುಗಿ ವಿಧವೆ ಆದಳು ಆ ಸಾವಿನಿಂದ. ಅಂದರು ನಾನು ಹೌದು ಅಂದೇ.
 
ನಿನಗೊಂದು ಪ್ರೇಮವಿತ್ತಲ್ಲ ಮುರಿದು ಬಿತ್ತಾ? ನಾನು ಇತ್ತು. ಬಿತ್ತು ಅಂದೆ.
    
ಬಿದ್ದಿಲ್ಲ ಅದು ಅಷ್ಟು ಸುಲಭಕ್ಕೆ ಬೀಳಲ್ಲ. ಆ ಪ್ರೇಮ ಮರಳಿ ಮೂಡುತ್ತದೆ ಮತ್ತೆ ಮುರಿಯುತ್ತದೆ ಅಂದರು. ನಾನು ಸುಮ್ಮನಾದೆ.  

ಗೊಂದಲ ಬೇಡ. ನೀನು ಸಣ್ಣವಯಸ್ಸಿಗೆ ಪ್ರೌಢನಂತೆ ಆಡುವವನು ಆದರೆ ನಿನಗೆ ಅಷ್ಟೊಂದೇನೂ ಪ್ರೌಢಿಮೆ ಇಲ್ಲ. ಸತ್ತವರ ಕುರಿತು, ನಿನ್ನ ಈಗ ಮುರಿದು ಬಿದ್ದ ಪ್ರೇಮದ ಕುರಿತು, ಆ ಸಾವಿನ ಕುರಿತು ಹಾಗು ನೀ ಈವರೆಗೆ ಎಸಗಿರುವ ಪಾಪ ಕೃತ್ಯಗಳ ಕುರಿತು ಎಲ್ಲೂ ಏನೂ ಬರೆಯಬೇಡ ಹಾಗು ಯೋಚಿಸಬೇಡ ಅಪಾಯ ಅಂದರು.
   
ಹಾಲಿಗೆ ಚಿಟಕೆಯಷ್ಟು ಸಕ್ಕರೆ ಹಾಕಿ ಕುಡಿ. ಚಪ್ಪೆ ಹಾಲು ಕುಡಿಯುವವನು ಅಧಿಕಾರ, ಐಶ್ವರ್ಯ, ಆಸೆ, ಗುರಿ, ಸಾಧನೆಗಳ ಕುರಿತು ಆಸ್ಥೆ ಕಳೆದುಕೊಳ್ಳುತ್ತಾನೆ ಅಂದರು.
  
ತುಂಬಾ ಯೋಚಿಸಬೇಕಾಗಿಲ್ಲ. ತಲೆಗೆ ವಾರಕ್ಕೊಮ್ಮೆ ದಾಸವಾಳ ಗಿಡದ ಹೂವನ್ನು‌  ಅರಿದು ಲೇಪಿಸಿಕೋ ಕೂದಲು ಉದುರುವುದು ಕಡಿಮೆ ಆಗುತ್ತದೆ ತಲೆಯೂ ತಣ್ಣಗಿರುತ್ತದೆ ಅಂದರೂ. ಕನ್ನಡಿ ನೋಡಿಕೊಂಡೆ. ತಲೆ ಕೂದಲು ಸ್ವಲ್ಪ ವೀಕಾಗಿದೆ ಅನಿಸಿತು.
 
ಊಟ ಮಾಡಿ ಹೊರಡು ಅಂದರು. ಬೇಡ ಎಂದು ಎದ್ದು ನಿಂತು ನಾಲ್ಕು ಹೆಜ್ಜೆ ಇಟ್ಟೆ. ನಿಲ್ಲು  ಅಂದರು. ನಿಂತೆ. ಬಾ ಎಂದು ಅವರ ಮನೆಯ ಪೂರ್ವ ದಿಕ್ಕಿನ ತೋಟಕ್ಕೆ ನಡೆಸಿಕೊಂಡು ಹೋದರು. ಅಲ್ಲೊಂದು ಕಲ್ಲಿಟ್ಟು ಪೂಜಿಸುವ ಪೀಠ ಇತ್ತು. ಪಕ್ಕದಲ್ಲಿ ತ್ರಿಶೂಲ ಚುಚ್ಚಿಟ್ಟಿದ್ದರು, ತ್ರಿಶೂಲಕ್ಕೆ ಕಪ್ಪು ಬಳೆ ಸಿಕ್ಕಿಸಿಟ್ಟಿದ್ದರು ಅವೆಲ್ಲ ಹಳಸಾಗಿತ್ತು, ಕಲ್ಲಿನ ಮೇಲೂ ತ್ರೀಶೂಲದ ಮೇಲೂ ಜೇಡ ಬಲೆ ಹೆಣೆದಿತ್ತು.

ಮರಳುವಾಗ ಕೇಳಿದರು. ಕನಸ್ಸಿನಲ್ಲಿ ಕಂಡದ್ದು ಇದೇ ದೇವಾಲಯವನ್ನು ಹೌದಾ?
ಹೌದು ಎಂದು ತಲೆಯಾಡಿಸಿದೆ. ಮನೆಗೆ ಬಂದವನೆ ದಾಸವಾಳ ಹೂ ಕುಯ್ದು ನುಣ್ಣಗೆ ಮಾಡಿ ತಲೆಗೆ ಮೆತ್ತಿಕೊಂಡೆ. ತಂಪೆನಿಸಿತು. ಹಾಲಿಗೆ ಚಿಟಿಕೆ ಸಕ್ಕರೆ ಹಾಕಿ ಕುಡಿದೆ. ಈಗ ಆಸೆಗಳು ಮೂಡುತ್ತಿದೆ..!

ರಂಜಿತ್ ಕವಲಪಾರ

error: Content is protected !!