fbpx

ಸಾಧನೆಯ ಹಾದಿಯಲ್ಲಿ ನಾವು ಕಳೆದುಕೊಳ್ಳುತ್ತಿರುವುದು ಏನು…?

ವಿನಯ್ ಜೈನ್
ಕಸಗುಪ್ಪೆ
ಅಧಿಕಾರಿ, ಭಾರತೀಯ ಸ್ಟೇಟ್ ಬ್ಯಾಂಕ್


ಈಗಿನ ಜನರ ಜೀವನವನ್ನು ನೋಡಿದರೆ ಎಷ್ಟೊಂದು ಖುಷಿಯಾಗುತ್ತದೆ. ಏನನ್ನಾದರೂ ಸಾಧಿಸಬೇಕು ಎಂಬ ಛಲ. ಹೆಚ್ಚು ಸಂಪಾಧಿಸಬೇಕು ಎಂಬ ಹಂಬಲ. ಸಮಾಜದಲ್ಲಿ ಎಲ್ಲರಿಗಿಂತ ಉನ್ನತ ಸ್ಥಾನದಲ್ಲಿರಬೇಕು ಎಂಬ ಆಸೆ ಆತನನ್ನು ಏನಾದರು ಸಾಧಿಸಬೇಕು ಎಂದು ಪ್ರೇರೇಪಿಸುತ್ತದೆ. ಅದಕ್ಕಾಗಿ ಆತ ಏನನ್ನಾದರೂ ಮಾಡಲು ಸಿದ್ಧನಾಗಿಬಿಡುತ್ತಾನೆ. ಹಾಗೆ ಮುಂದೊಂದು ದಿನ ಅಂದುಕೊಂಡಿದ್ದನ್ನು ಸಾಧಿಸುತ್ತಾನೆ. ಈ ಸಾಧನೆಯ ಹಾದಿಯಲ್ಲಿ ನಾನು ಕಳೆದುಕೊಳ್ಳುತ್ತಿರುವುದೇನು ಎಂಬ ಅರಿವೇ ಆತನಿಗೆ ಇರುವುದಿಲ್ಲ. ಇಲ್ಲಿ ಸಾಧನೆ ಎಂದರೆ ಅದು ಇಡೀ ಜಗತ್ತು ಮೆಚ್ಚುವ ಸಾಧನೆಯೇ ಆಗಿರಬೇಕು
ಎಂದಲ್ಲ. ತನ್ನ ಸ್ವಂತ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವುದು ಕೂಡ ಆಗಿರಬಹುದು. ಈಗ ನೀವು ಕೇಳಬಹುದು, ಆತ ಅಂದುಕೊಂಡಿದ್ದನ್ನು ಸಾಧಿಸಿದ ಮೇಲೆ ಆತ ಕಳೆದುಕೊಳ್ಳುವುದಾದರೂ ಏನು? ಎಂದು. ಅದನ್ನೇ ನಾನು ಇಲ್ಲಿ ಹೇಳಲು ಹೊರಟಿರುವುದು. ನನಗೆ ಒಂದು ಪುಟ್ಟ ಮಗುವಿನ ಕಥೆ ನೆನಪಾಗುತ್ತದೆ.

ದಿನಾಲು ಆಫೀಸಿಗೆ ಹೋಗುವಾಗ ಮಗಳಿಂದ ಮುತ್ತನ್ನು ಪಡೆದು, ಅವಳಿಗೊಂದು ಮುತ್ತು ಕೊಟ್ಟು ಹೋಗುತ್ತಿದ್ದ. ಮುಂದೆ ಆತನಿಗೆ ಪ್ರೊಮೋಷನ್ ಆದಮೇಲೆ ಕೆಲಸದ ಒತ್ತಡದಿಂದ ರಾತ್ರಿ ತಡವಾಗಿ ಬರುತ್ತಿದ್ದ. ಬೆಳಗ್ಗೆ ಬೇಗನೆ ಹೋಗುತ್ತಿದ್ದ. ತನ್ನ ಮಗುವಿನ ಜೊತೆ ಮಾತನಾಡಲು ಆತನಿಗೆ ಸಮಯ ಸಿಗುವುದು ಕಷ್ಟವಾಯಿತು. ಮುಂದೆ ಆತನ ಹುಟ್ಟಿದ ಹಬ್ಬದ ದಿನ, ಆ ಮಗು ಆತನಿಗೆ ಒಂದು ಬಾಕ್ಸ್ ತಂದು ಕೊಟ್ಟಿತು. ಅದನ್ನು ತೆರೆದು ನೋಡಿದರೆ, ಖಾಲಿಯಾಗಿತ್ತು. ಅಪ್ಪನು, ಮಗಳು ಖಾಲಿಯಾದ ಗಿಫ್ಟ್ ನೀಡಿದ್ದಕ್ಕೆ ಬೈದ. ಆಗ ಪಾಪ ಆ ಮಗು ಹೇಳಿತು, ಮೊದಲು ನೀನು ಆಫೀಸಿಗೆ ಹೋಗುವಾಗ, ನನ್ನಿಂದ ಮುತ್ತು ಪಡೆದು ಹೋಗುತ್ತಿದ್ದೆ. ಆದರೆ ಈಗ ನೀನು ನನಗೆ ಸಿಗುವುದೇ ಇಲ್ಲ. ಆದ್ದರಿಂದ ದಿನಾಲು ಒಂದೊಂದು ಮುತ್ತನ್ನು ಈ ಬಾಕ್ಸ್ ನಲ್ಲಿಇಡುತ್ತಿದ್ದೆ, ಎಂದು. ಇದನ್ನು ಕೇಳಿ ಅಪ್ಪನ ಕಣ್ಣಲ್ಲಿ ನೀರು ತುಂಬಿತ್ತು.

ಈ ಮಗುವಿನ ಹಾಗೆ, ಈ ಜಗತ್ತಿನಲ್ಲಿ ಎಷ್ಟೋ ಮಕ್ಕಳ ಪರಿಸ್ಥಿತಿ ಹೀಗೆ ಇರಬಹುದು ಅಲ್ಲವೇ? ಹೆಚ್ಚು ಸಂಪಾದಿಸುವ ಹಂಬಲದಿಂದ, ಸಂಸಾರದ ಚಿಕ್ಕ ಪುಟ್ಟ ಸಂತೋಷಗಳನ್ನು ಆತ ಕಳೆದುಕೊಳ್ಳುತ್ತಿದ್ದ. “ನಾವು ನಮ್ಮವರಿಗೆ ಕೊಡಬಹುದಾದ ಬಹುದೊಡ್ಡ ಉಡುಗೊರೆ ಎಂದರೆ ಅದು ಸಮಯ”. ನೀವು ಕೋಟಿಗಟ್ಟಲೆ ಸಂಪಾದನೆ ಮಾಡಿ, ನಿಮ್ಮ ಅಪ್ಪ ಅಮ್ಮ, ಹೆಂಡತಿ, ಮಕ್ಕಳಿಗೆ ಕೋಟ್ಯಂತರ ಬೆಲೆಬಾಳುವ ಮನೆ ಕಾರು ಏನನ್ನಾದರೂ ಕೊಟ್ಟು, ಅವರೊಂದಿಗೆ ದಿನನಿತ್ಯ ನಿಮಗೆ ಸಮಯ ಕಳೆಯಲು ಆಗುವುದಿಲ್ಲ ಎಂದರೆ, ಈ ತರಹದ ಉಡುಗೊರೆಗಳ ಮೌಲ್ಯ ಶೂನ್ಯವಾಗಿಬಿಡುತ್ತದೆ. ನೀವು, ನಿಮ್ಮಬರೊಂದಿಗೆ ಸಮಯ ಕಳೆದರೆ, ಅದಕ್ಕಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ. ನಾನು ಹಳ್ಳಿಯವನಾದ್ದರಿಂದ, ನಮ್ಮಲ್ಲಿ ಹಲವರನ್ನು ನೋಡಿದ್ದೇನೆ.

ಉನ್ನತ ಶಿಕ್ಷಣಕ್ಕೆಂದು ಊರು ಬಿಟ್ಟು ಪಟ್ಟಣ ಸೇರುವ ಯುವಕರು ಮುಂದೆ ತಮ್ಮ ಊರಿನ ನಂಟನ್ನೇ ಬಿಟ್ಟುಬಿಡುತ್ತಾರೆ. ಅವರ ತಂದೆ ತಾಯಿ ಹಳ್ಳಿಯಲ್ಲಿ, ಅವರು ಪಟ್ಟಣದಲ್ಲಿ. ಎಲ್ಲೋ ವರುಷಕ್ಕೊಮ್ಮೆ ಊರಿಗೆ ಬಂದು ಹೋಗುತ್ತಾರೆ. ಕಾಲಕ್ರಮೇಣ, ಹುಟ್ಟೂರಿನ ನಂಟೇ ಹೋಗಿಬಿಡುತ್ತದೆ. ಕೆಲವರಂತೂ ಅಪ್ಪ, ಅಮ್ಮ, ಸಂಬಂದಿಕರನ್ನೇ ಮರೆತು ಬಿಡುತ್ತಾರೆ. ಅವರು ವಿಧ್ಯಾಭ್ಯಾಸ ಮಾಡಿ, ಒಳ್ಳೆಯ ಉದ್ಯೋಗ ಪಡೆದು, ಸಂಪಾದಿಸುವುದು ಸರಿ. ಆದರೆ, ತನ್ನ ಸ್ವಂತ ಮನೆ, ಊರು, ಊರಿನ ಜನ, ಸಂಬಂಧಿಕರು, ಸ್ನೇಹಿತರನ್ನು ಮರೆತು ಬದುಕುವುದು ಸರಿಯಲ್ಲ ಎಂಬುದು ನನ್ನ ಅನಿಸಿಕೆ.

ಹಳ್ಳಿಯಲ್ಲಿ ಮನೆಯವರು, ನೆಂಟರು, ಎಲ್ಲಾ ಸೇರಿ ಆಚರಿಸುವ ಹತ್ತಾರು ಸಾಂಪ್ರದಾಯಿಕ ಹಬ್ಬಗಳು, ಊರಿನವರೆಲ್ಲಾ ಕೂಡಿ ಆಚರಿಸುವ ಜಾತ್ರೆಯ ಕ್ಷಣಗಳು, ಗಣೇಶ ಚೌತಿಯಂತಹ ಸಾರ್ವಜನಿಕ ಹಬ್ಬದ ಸಂತಸ, ಎಂದಿಗೂ ಪಟ್ಟಣದ ಜೀವನದಲ್ಲಿ ಸಿಗಲು ಸಾಧ್ಯವೇ ಇಲ್ಲ. ಏಕೆಂದರೆ ಅಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಪ್ರೀತಿ, ವಿಶ್ವಾಸ, ನಂಬಿಕೆ ಇರುವುದೇ ಇಲ್ಲ. ದಿನಗಳು ಕಳೆದಂತೆ ನಮ್ಮಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ನಾನು, ನನ್ನ ಮನೆ, ನನ್ನ ಸಂಸಾರ, ಇಷ್ಟೇ ಆತನಿಗೆ ಬೇಕಾಗಿರುವುದು. ಹಾಗಾಗಿಯೇ ಈಗ ಅವಿಭಕ್ತ ಕುಟುಂಬಗಳು ಕಡಿಮೆಯಾಗಿರುವುದು. ವಿಪರ್ಯಾಸ ಏನಪ್ಪಾ ಅಂದ್ರೆ, ಈ ಮನುಷ್ಯನಿಗೆ ತನ್ನ ಒಡಹುಟ್ಟಿದವರಿಗಿಂತ, ಹೊರಗಿನ ಸ್ನೇಹಿತರು, ಬಂಧುಗಳ ಮೇಲೆ ನಂಬಿಕೆ, ವಿಶ್ವಾಸ, ಪ್ರೀತಿ ಹೆಚ್ಚು.

ಈ ಅವಿಭಕ್ತ ಕುಟುಂಬದ ವಾತಾವರಣ, ಒಬ್ಬ ವ್ಯಕ್ತಿಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂದು ಕಲಿಸುತ್ತದೆ. ಹಾಗೆಯೇ ಅಲ್ಲಿ ಎಲ್ಲಾಒಂದಾಗಿ ಆಚರಿಸುವ ಹಬ್ಬ, ಸಮಾರಂಭಗಳು, ಒಬ್ಬರ ದುಃಖ ಸಂತೋಷಗಳಿಗೆ ಇನ್ನೊಬ್ಬರು ಸ್ಪಂದಿಸುತ್ತಾ ಬಾಳುವುದೇ ಒಂದು ಸುಖ. ಈಗ ಹೆಚ್ಚಿನ ಸಂಸಾರಗಳಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುವುದರಿಂದ, ಮಕ್ಕಳಿಗೆ ಮನೆಯಲ್ಲಿ ತಂದೆ ತಾಯಿ ಪ್ರೀತಿ ಸಿಗುವುದು ಕಡಿಮೆಯಾಗುತ್ತಿದೆ. ಮಕ್ಕಳಿಗೆ ಹೀಗೆ ತಂದೆ ತಾಯಿಯ ಮಹತ್ವ ತಿಳಿಯುವುದಿಲ್ಲ. ಹೀಗೆ ಮುಂದೆ ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ತನ್ನ ತಂದೆ ತಾಯಿಯನ್ನು ತಿರಸ್ಕರಿಸುವುದು. ಹಾಗೆಯೇ ಮಕ್ಕಳಿಗೆ ಮನೆಯಲ್ಲಿ ಅವರು ಬಯಸಿದಷ್ಟು ಪ್ರೀತಿ ಸಿಗುವುದಿಲ್ಲವೋ ಆಗ ಅವರು ಆ ಪ್ರೀತಿಯನ್ನು ಹೊರಗಡೆಯಿಂದ ಬಯಸಿ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವುದು. ನೀವು ಉನ್ನತ ಹುದ್ದೆಯಲ್ಲಿದ್ದಾಗ, ವಿದೇಶದಲ್ಲಿದ್ದಾಗ, ನಿಮ್ಮ ತಂದೆ ತಾಯಿ ಬಂಧು ಬಳಗ ಮೊದಲಿಗೆ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ.

ಆದರೆ ಬರಬರುತ್ತಾ ಯಾವಾಗ ನೀವು ನಿಮ್ಮವರಿಗೆ ಸಮಯ ನೀಡಲು ಸಾಧ್ಯವಿಲ್ಲವೋ, ಆಗ ಅವರು ನಿಮ್ಮನ್ನು ಬೈದು ಮರೆತು ಬಿಡುತ್ತಾರೆ. ಹೀಗೆ ಏನನ್ನಾದರೂ ಸಾಧಿಸುವ ಹಂಬಲದಿಂದ, ಸ್ವಾರ್ಥ ಮನಸ್ಸಿನಿಂದ, ನಮ್ಮವರಿಗೆ ಸಮಯ ನೀಡಲಾಗದೆ, ನಾವು ನಮ್ಮ ಮನೆಯವರನ್ನು, ಸಂಬಂಧಿಕರನ್ನು, ಊರಿನವರನ್ನು, ಗೆಳೆಯರನ್ನು,
ಕಳೆದುಕೊಳ್ಳುತ್ತಿದ್ದೇವೆ. ಮುಂದೊಂದು ದಿನ ನೀವು ಸಾಧನೆಯ ಶಿಖರ ಏರಿದಾಗ, ನಿಮ್ಮ ಸಂತೋಷವನ್ನು ಹಂಚಿಕೊಳ್ಳಲು ನಿಮ್ಮೊಂದಿಗೆ ಯಾರು ಸಹ ಇರುವುದಿಲ್ಲ. ಆಗ ನಿಮಗೆ ಅರಿವಾಗುತ್ತದೆ, ನೀವು ಕಳೆದುಕೊಂಡಿದ್ದು ಏನು? ಎಂದು.

ವಿನಯ್ ಜೈನ್, ಕಸಗುಪ್ಪೆ

error: Content is protected !!