ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆದ ರಾಜ್ಯ ಮಟ್ಟದ ಕಸಾಪ ಸಭೆ

ಮಡಿಕೇರಿ ಮೇ 2. ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯ ಕನಕ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವಸದಸ್ಯರ ಹಾಗೂ ವಿಶೇಷ ಸರ್ವಸದಸ್ಯರ ಸಭೆಯು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ನಾಡೋಜ ಮಹೇಶ್ ಜೋಶಿಯವರ ಅಧ್ಯಕ್ಷತೆಯಲ್ಲಿ ದಿ. 01.05.2022 ರಂದು ಜರುಗಿತು.
ಗೌ ಕಾರ್ಯದರ್ಶಿಗಳು ಗೌ ಕೋಶಾಧ್ಯಕ್ಷರು ಹಾಗೂ ಎಲ್ಲಾ ಜಿಲ್ಲಾ ಅಧ್ಯಕ್ಷರುಗಳು, ಗಡಿ ರಾಜ್ಯಗಳ ಅಧ್ಯಕ್ಷರುಗಳು ಭಾಗವಹಿಸಿದರು.
ಕೊಡಗು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ಎಂ.ಪಿ.ಕೇಶವ ಕಾಮತ್, ಸೋಮವಾರಪೇಟೆ ತಾಲ್ಲೂಕಿನ ಅಧ್ಯಕ್ಷ ಎಸ್.ಡಿ ವಿಜೇತ್, ಸದಸ್ಯರಾದ ವಿ.ಟಿ.ಮಂಜುನಾಥ್, ಆರ್ ರಾಜಾರಾವ್, ಚಂದನ್ ಕಾಮತ್ ಭಾಗವಹಿಸಿದರು.

ವಿಶೇಷ ಮಹಾಸಭೆಯಲ್ಲಿ ಪರಿಷತ್ತಿನ ಬೈಲಾ ತಿದ್ದುಪಡಿಗಾಗಿ ನಿಯಮ ನಿಬಂಧನೆಗಳಲ್ಲಿ ಬದಲಾವಣೆಗಳನ್ನು ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಂಡಿಸಿದರು. ನಂತರ ಸದಸ್ಯರ ಅಭಿಪ್ರಾಯವನ್ನು ಕೋರಿದಾಗ ಭಾಗವಹಿಸಿದ್ದ ಸಾವಿರಾರು ಸದಸ್ಯರು ತಮ್ಮ ಕೈ ಎತ್ತುವ ಮೂಲಕ ತಿದ್ದುಪಡಿಗೆ ಒಪ್ಪಿಗೆ ನೀಡಿದರು.
ಪ್ರಮುಖವಾಗಿ ಈಗಿರುವ ಸದಸ್ಯತ್ವ ಶುಲ್ಕ ಮತ್ತು ಕನ್ನಡ ನಾಡು ಪುಸ್ತಕ ಚಂದಾ ಸೇರಿ ರೂ ಒಂದು ಸಾವಿರ ರೂಪಾಯಿಗಳಾಗಿದ್ದು ಅದನ್ನು ರೂ ಇನ್ನೂರೈವತ್ತಕ್ಕೆ ಇಳಿಸಲಾಯಿತು. ಹೋಬಳಿ ಘಟಕಗಳ ಸ್ಥಾಪನೆಮಾಡಿ ಮುಂದೆ ಪರಿಷತ್ತನ್ನು ಗ್ರಾಮ ಮಟ್ಟದಲ್ಲಿ ಬೆಳೆಸಲು ಅನುವು ಮಾಡುವ ತಿದ್ದುಪಡಿಯನ್ನು ಮಾಡಲಾಯಿತು.
ಈ ಸರ್ವಸದಸ್ಯರ ಸಭೆಯಲ್ಲಿ ರಾಜ್ಯದ ಜಿಲ್ಲಾ , ಗಡಿ ಜಿಲ್ಲೆಗಳ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಮತ್ತು ಕಸಾಪದ ಆಜೀವ ಸದಸ್ಯರುಗಳು ಭಾಗವಹಿಸಿದರು.