ಸರ್ವ ಜನಾಂಗದ ಶಾಂತಿಯ ತೋಟದ ಹೂಗಳು ಬಾಡದಿರಲಿ!

ಕೋಮು ಪ್ರತಿಷ್ಠೆ, ಸ್ವಾಭಿಮಾನದಿ ಮರೆಯಾಗದಿರಲಿ ಮಾನವೀಯತೆ

                        –ಪ್ರತೀಕ್ ಪರಿವಾರ
                              ಮರಗೋಡು.

ರಾಜ್ಯದಲ್ಲಿ ಇತ್ತೀಚೆಗೆ ಕೋಮು ಸಂಘರ್ಷ ಅತ್ಯಂತ ಶಾಂತಿಯುತವಾಗಿ ಶೀತಲ ಸಮರದಂತೆಯೇ ನಡೆಯುತ್ತಿರುವುದು ಖೇದಕರ‌ ಸಂಗತಿ.

ಶಾಲಾ ಕಾಲೇಜು ಸಮವಸ್ತ್ರದ ವಿಚಾರವಾಗಿ ಕೇಸರಿ ಶಾಲು-ಹಿಜಾಬ್ ವಿವಾದ ಭುಗಿಲೆದ್ದು, ವಿದ್ಯಾರ್ಥಿಗಳ ನಡುವೆಯೇ ಇರುಸು ಮುರಿಸುಗೆ ಕಾರಣವಾಯಿತು. ನಂತರ ಅದು ಕೋಟ್೯ ಮೆಟ್ಟಿಲೇರುವ ತನಕ ಉಲ್ಬಣಗೊಂಡಿತು. ವಿವಾದ ಕ್ರಮೇಣ ಹೈಕೋಟ್೯ ತಲುಪಿ ಅಲ್ಲಿಂದ ವಾದ-ವಿವಾದಗಳ ನಂತರ ಮಧ್ಯಂತರ ಆದೇಶವೂ ಹೊರ ಬಿದ್ದಿತು. ಅದಕ್ಕೆ ವಿರೋಧ ವ್ಯಕ್ತಪಡಿಸಿದ ಮುಸ್ಲಿಂ ಪರವಾದ ರಾಜಕೀಯ ಪಕ್ಷವೊಂದು ನ್ಯಾಯಾಂಗದ ಆದೇಶವನ್ನು ವಿರೋಧಿಸಿ, ಗೌರವ ನೀಡದೆ, ರಾಜ್ಯಾದ್ಯಂತ ಬಂದ್ ಘೋಷಿಸಿತು. ನಂತರ ಇದು ಬೇರೆ ಸ್ವರೂಪ ಪಡೆಯಿತು.

ಹಿಂದೂ ಪರ ಸಂಘಟನೆಗಳು ಕಾನೂನು ಪಾಲಿಸಿಕೊಂಡೇ ಹಿಂದೂಗಳ ಜಾತ್ರೆ, ಮಹೋತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಮಳಿಗೆ ಹಾಕಲು ನಿರ್ಬಂಧಿಸಿದವು. ಇದು ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ನಡೆದ ವಿವಿಧ ಹಿಂದೂ ಜಾತ್ರೆ, ಮಹೋತ್ಸವಗಳಲ್ಲಿ ಪುನರಾವರ್ತಿತವಾದವು. ಕೊಡಗಿನ ಸೋಮವಾರಪೇಟೆಯ ಶನಿವಾರಸಂತೆಯ ಸಮೀಪದ ಅಂಕನಹಳ್ಳಿಯ ಶ್ರೀ ಕ್ಷೇತ್ರ ತಪೋವನ ಮನೆಹಳ್ಳಿ ಮಠದಲ್ಲಿ ನಡೆದ ರಾಜ್ಯಮಟ್ಟದ ಕೃಷಿ ಮತ್ತು ಕುಲಗೋವುಗಳ ಸಮ್ಮೇಳನದಲ್ಲೂ ಇದೇ ಪರಿಸ್ಥಿತಿ ಕಂಡು ಬಂತು. ಈಗ ಮಾಂಸದ ಅಂಗಡಿಗಳಲ್ಲಿ ಮಾಡಲಾಗುವ ಹಲಾಲ್ ಕಟ್-ಜಟ್ಕ ಕಟ್ ಬಗೆಗೆ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಇದು ಮುಂದೊಂದು ದಿನ ಸಮಾಜದಲ್ಲಿ ದೊಡ್ಡ ಬಿರುಕನ್ನು ಸೃಷ್ಟಿಸುವ ಅಪಾಯವಿದೆ. ಈ ಬಗ್ಗೆ ಜನ ವಲಯದಲ್ಲಿ ಯಾವ ಅಭಿಪ್ರಾಯಗಳಿವೆ ಎಂಬ ಬಗ್ಗೆ ಸುದ್ದಿ ಸಂತೆ ಹಲವರನ್ನು ಮಾತನಾಡಿ, ಅಭಿಪ್ರಾಯ ಸಂಗ್ರಹಿಸಿದೆ.


ಪ್ರಸ್ತುತ ಸರ್ಕಾರದ ಸಾಧನೆ ಶೂನ್ಯವಾಗಿದ್ದು, ಕೇವಲ ಮತಕ್ಕಾಗಿ ಇಂತಹ ಪ್ರಕ್ರಿಯೆಗಳು ನಡೆಯುತ್ತಿದ್ದು ಇದು ರಾಜಕೀಯ ಹುನ್ನಾರವಾಗಿದೆ .ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟಿಸಿರುವುದು ನಮ್ಮ ಹಕ್ಕಾಗಿದ್ದು, ಇಂತಹ ಪ್ರತಿಭಟನೆಗಳೂ ಈ ಹಿಂದೆಯೂ ನಡೆದಿವೆ.ಒಂದು ಸಮುದಾಯವನ್ನು ಈ ರೀತಿ ಬಹಿಷ್ಕಾರ ಮಾಡುತ್ತಿರುವುದು ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಿದೆ.

ಅಮೀನ್ ‌ಮೊಹಿಸಿನ್
ನಗರಸಭೆ ಸದಸ್ಯರು
ಮಡಿಕೇರಿ, ಕೊಡಗು.

ಈ ದೇಶವೇ ಧರ್ಮದ ಆಧಾರದಲ್ಲಿ ವಿಭಜನೆ ಆಗಿದೆ ಅಂದ ಮೇಲೆ ದೇಶದ ಎಲ್ಲಾ ಚಟುವಟಿಕೆಗಳೂ ಸಹ ಧರ್ಮದ ಆಧಾರದಲ್ಲಿ ನಡೆಯಲಿ.ಒಬ್ಬ ವ್ಯಕ್ತಿಗೆ ಯಾರೊಂದಿಗೆ ವ್ಯವಹರಿಸಬೇಕೆನ್ನುವುದು ಅವರ ಆಯ್ಕೆ. ಹಾಗಾಗಿ ದೇಶದ ಕಾನೂನನ್ನು ಗೌರವಿಸದೆ ಇರುವವರೊಂದಿಗೆ ವ್ಯವಹಾರ ನಿಲ್ಲಿಸಿದ್ದೇವೆ ಇದು ಬಹಿಷ್ಕಾರ ಹೇಗಾಗುತ್ತದೆ???

ಕೃಷ್ಣಮೂರ್ತಿ
ವಕೀಲರು ಮತ್ತು ಜಿಲ್ಲಾಧ್ಯಕ್ಷರು
ವಿ. ಹಿಂ. ಪ. ಕೊಡಗು.

ಈ ವಿಚಾರದಲ್ಲಿ ಕೊಡಗು ಯುವ ಸೇನೆಯು ಹಿಂದೂ ವ್ಯಾಪಾರಿಗಳ ಪರವಾಗಿ ನಿಲುವನ್ನು ಹೊಂದಿದೆ. ನಮ್ಮವರ ಬಳಿ ನಮ್ಮ ವ್ಯಾಪಾರ ಎಂಬಂತೆ ಹಿಂದೂಗಳು ಹಿಂದೂ ವರ್ತಕರ ಬಳಿಯೇ ವ್ಯವಹರಿಸಲಿ.. ಬಹಿಷ್ಕಾರದ ಹಿನ್ನಲೆಯಲ್ಲಿ ಹಲಾಲ್ ಬೋರ್ಡ್ ಹೊಂದಿರುವ ಹಿಂದೂ ವ್ಯಾಪಾರಿಗಳ ಅಂಗಡಿ ಮುಂಗಟ್ಟುಗಳಲ್ಲಿ ಬೋರ್ಡ್ ತೆಗೆಸುವ ಪ್ರಯತ್ನಗಳೂ ನಡೆಯುತ್ತಿದ್ದು ಇದಕ್ಕೆ ಯುವ ಸೇನೆಯ ಸಂಪೂರ್ಣ ಬೆಂಬಲವಿದೆ.

ಕುಲ್ದೀಪ್ ಪೂನಚ್ಚ
ಸಂಸ್ಥಾಪಕರು
ಕೊಡಗು ಯುವ ಸೇನೆ.

ಕೆಲವು ರಾಜಕೀಯ ಪಟ್ಟ ಬದ್ದ ಹಿತಾಸಕ್ತಿಗಳಿಂದ ಇದು ಆಗುತ್ತಿದ್ದು, ಇದು ಶ್ರೀಮಂತರಿಗಲ್ಲ ಬದಲಾಗಿ ಕಡು ಬಡವರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ತೊಂದರೆಯುಂಟಾಗುತಿದೆ. ಕೆಟ್ಟದ್ದು ಹೆಚ್ಚು ಸಮಯ ನಿಲ್ಲುವುದಿಲ್ಲ ಎಂಬಂತೆ ಇದು ಸಹ ದೀರ್ಘಕಾಲ ನಡೆಯುವುದಿಲ್ಲ ಹಾಗೂ ಸಾಮರಸ್ಯದಿಂದ ಬದುಕುತಿರುವ ಜನರ ಮೇಲೆ ಈ ಬಹಿಷ್ಕಾರ ಪರಿಣಾಮ ಬೀರುವುದಿಲ್ಲ.

ಮೊಹಮದ್ ಹನೀಫ್
ಜಿಲ್ಲಾಧ್ಯಕ್ಷರು
ಕೊಡಗು ಜಮಾತ್ ಒಕ್ಕೂಟ.

ಶತಮಾನಗಳಿಂದ ಹಿಜಾಬ್, ಹಲಾಲ್ ಸಂಸ್ಕೃತಿಯು ಮುಸ್ಲಿಮರಲ್ಲಿ ನಡೆದುಕೊಂಡು ಬಂದಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಪಾಲಿಸಬೇಕು ಅನ್ನೋದನ್ನು ಎಲ್ಲರೂ ಒಪ್ಪಬೇಕಾದ ವಿಷಯವೇ ಆದರೆ ಆ ಬಗ್ಗೆ ಇನ್ನೂ ಮೇಲಿನ ನ್ಯಾಯಾಲಯಕ್ಕೆ ಹೋಗಬಹುದಾದ ಅವಕಾಶ ಇದ್ದೇ ಇದೆ. ಇದನ್ನು ರಾಜಕೀಯ ದುರುದ್ದೇಶದಿಂದ ವಿವಾದ ಮಾಡಲಾಗಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಶಿಕ್ಷಣ ಉಚಿತವಾಗಿ ಎಲ್ಲರಿಗೂ ಸಿಗುವಂತಾಗಬೇಕು. ಉಚಿತ ಶಿಕ್ಷಣ ನೀತಿ ಪದವಿ ಪೂರ್ವ ಶಿಕ್ಷಣದ ತನಕವೂ ಜಾರಿಗೊಳಿಸುವಂತಹ ಚಿಂತನೆಯನ್ನು ಸರಕಾರ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿನ ವ್ಯವಹಾರಿಕ ಜಾಲವನ್ನು ಭೇದಿಸುವಂತಾಗಬೇಕು. ಮುಸ್ಲಿಮರ ವ್ಯಾಪಾರಗಳನ್ನು  ಬಹಿಷ್ಕರಿಸುವುದಾದರೆ, ಪೆಟ್ರೋಲ್ ಉತ್ಪನ್ನಗಳನ್ನು ಕೂಡ ಮುಸ್ಲಿಂ ರಾಷ್ಟ್ರಗಳಿಂದ ಅಮದು ಮಾಡುವುದನ್ನು ಕೂಡ ನಿಲ್ಲಿಸಬೇಕು.

    -ಅಲ್ಲಾರಂಡ ವಿಠಲ್ ನಂಜಪ್ಪ,
           ಬರಹಗಾರರು.

            

ಒಟ್ಟಿನಲ್ಲಿ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಎಲ್ಲರೂ ಬ್ರಾತೃತ್ವ, ಭಾವೈಕ್ಯತೆಯಿಂದ ಬದುಕುವಂತಾಗಬೇಕು. ಧಾರ್ಮಿಕ ಸಾಮರಸ್ಯ, ಸಹೋದರತ್ವ ರಾಜಕೀಯದ ಕುತಂತ್ರ ಆಟಗಳಿಗೆ ಎಂದೂ ಬಡವಾಗದಿರಲಿ. ಧಾರ್ಮಿಕ  ಸ್ವಾಭಿಮಾನ, ಪ್ರತಿಷ್ಠೆಗಳು ಎಂದೂ ಮಾನವೀಯತೆಯ ಪರೀಧಿ ಮೀರದಿರಲಿ. ಮಾನವೀಯ ಮೌಲ್ಯಗಳು ಮರೆಯಾಗದಿರಲಿ.

error: Content is protected !!