ಸಮಯೋಚಿತ ಆವಿಷ್ಕಾರ ಮಾಡಿರುವ ಯುವ ಪ್ರತಿಭೆ ‘ಕಟ್ಟೇರ ಗಿಲನ್ ಕರುಂಬಯ್ಯ’

ಕೃಪೆ: ಅನು ಕಾರ್ಯಪ್ಪ
ಪೆಟ್ರೋಲ್, ಡೀಸೆಲ್ ಬೆಲೆ ನೂರರ ಗಡಿ ದಾಟಿ ಸಾಗ್ತಾ ಇದೆ. ವಾಹನದಲ್ಲಿ ಜನ ತಿರುಗಾಡೋದಕ್ಕೂ ಹಿಂದೆ ಮುಂದೆ ನೋಡ್ತಿದ್ದಾರೆ. ಪೆಟ್ರೋಲ್-ಡೀಸೆಲ್ ವೆಚ್ಚ ಕಡಿಮೆ ಮಾಡುವ ಚಿಂತನೆ ಎಲ್ಲರ ಮನದಲ್ಲೂ ಇದೆ. ಜತೆಗೆ ಇಂಧನ ರಹಿತ ವಾಹನಗಳ ಕಡೆಗೆ ಸೆಳೆತವೂ ಹೆಚ್ಚಾಗ್ತಿದೆ. ಇಂಥ ಟೈಮಲ್ಲಿ ಕೊಡಗಿನ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೂತನ ಆವಿಷ್ಕಾರ ಮಾಡಿ, ಹೊಸ ಆಶಾಭಾವನೆ ಮೂಡಿಸಿದ್ದಾರೆ.

ನೋಡೋದಕ್ಕೆ ಹಳೆ ಬೈಕ್… ನೋಡ್ವಾಗ ಒಳ್ಳೆ ಕಂಡೀಷನ್ನಲ್ಲಿ ಕಾಣುತ್ತಲ್ವಾ… ಆದ್ರೆ ಇದರ ಇನ್‍ಸೈಡ್ ಸ್ಟೋರಿ ಕೇಳಿದ್ರೆ ನೀವು ಬೆರಗಾಗ್ತೀರಾ… ಇಷ್ಟು ಸ್ಮೂಥ್ ಆಗಿ ಚಲಿಸುತ್ತಿರುವ ಈ ಬೈಕ್‍ಗೆ ಪೆಟ್ರೋಲ್ ಬೇಕಿಲ್ಲ. ಅರೆ, ಪೆಟ್ರೋಲ್ ಇಲ್ಲದೆ ಬೈಕ್ ಓಡುತ್ತಾ… ಬೇರೇನಾದ್ರು ಫ್ಯೂಲ್ ಹಾಕಿರ್ಬೋದು ಅಂದ್ಕೊಂಡಿರ್ತೀರಲ್ವಾ… ನೀವಂದುಕೊಂಡ ಹಾಗೆ ಯಾವುದೇ ಇಂಧನ ಇದರೊಳಗಿಲ್ಲ. ಈ ಸುಝುಕಿ ಸಮುರಯಿ ಬೈಕ್ ಓಡ್ತಿರೋದು ಬ್ಯಾಟರಿ ಪವರ್‍ನಿಂದ.

ಸುಝುಕಿ ಕಂಪೆನಿ ಅದ್ಯಾವಾಗ ಈ ಥರ ಎಲೆಕ್ಟ್ರಿಕ್ ಬೈಕ್ ಮಾರ್ಕೆಟ್‍ಗೆ ಬಿಡ್ತು ಅಂತ ತಲೆ ಕೆಡಿಸ್ಕೊಳ್ಬೇಡಿ. ಈ ಥರ ಬ್ಯಾಟರಿಯಿಂದ ಚಲಿಸುವ ಬೈಕ್ ಆವಿಷ್ಕಾರ ಮಾಡಿರೋದು ಕೊಡಗಿನ ಯುವಕ. ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ನಿವಾಸಿ ಕಟ್ಟೇರ ಗಿಲನ್ ಕರುಂಬಯ್ಯ ಹಳೆ ಬೈಕ್‍ಗೆ ಹೊಸ ಟಚ್ ಕೊಟ್ಟಿರೋದು. ಗುಜರಿ ಸೇರಬೇಕಿದ್ದ ಬೈಕ್ ಅನ್ನು ಬೇರೊಬ್ಬರಿಂದ ಸಾವಿರ ರೂ ನೀಡಿ ಖರೀದಿಸಿ, ಇದನ್ನ ಬಳಕೆಗೆ ಯೋಗ್ಯವಾಗುವಂತೆ ಮಾಡ್ಬೇಕು. ಅದೂ ಡಿಫರೆಂಟ್ ಆಗಿರ್ಬೇಕು ಅಂತ ಅಂದ್ಕೊಂಡು ಕಠಿಣ ಶ್ರಮ ಹಾಕಿ ಈ ರೂಪ ನೀಡಿದ್ದಾರೆ. ಇವರ ಈ ಶ್ರಮಕ್ಕೆ ಸಹಕಾರ ಕೊಟ್ಟಿದ್ದು ಅಂದಹಾಗೆ ಗಿಲನ್, ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಪ್ರಥಮ ವರ್ಷಕ್ಕೆ ಅಡ್ಮಿಷನ್ ಆಗಿದ್ರೂ ಲಾಕ್‍ಡೌನ್ ಕಾರಣಕ್ಕೆ ಸರಿಯಾಗಿ ತರಗತಿ ಅಟೆಂಡ್ ಆಗೋಕೆ ಆಗಿರಲಿಲ್ಲ. ಮೊದಲಿನಿಂದಲೂ ಇಲೆಕ್ರಿಕಲ್ ಮೆಕ್ಯಾನಿಕ್‍ನಲ್ಲಿ ಆಸಕ್ತಿ ಇದ್ದ ಕಾರಣಕ್ಕೆ ಲಾಕ್‍ಡೌನ್‍ನಲ್ಲಿ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ ಮಾಡುವ ಅಂದುಕೊಂಡು ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸ್ಥಳೀಯರೊಬ್ಬರಿಂದ ಹಳೆ ಬೈಕ್ ಖರೀದಿಸಿ ಅದಕ್ಕೆ 750 ವ್ಯಾಟ್ ಮೋಟಾರ್, 48 ವೋಲ್ಟ್ ಸಾಮಥ್ರ್ಯದ 24 ಆ್ಯಮ್ಸ್ ಲೆಡಿಸಿಡ್ ಬ್ಯಾಟರಿ ಉಪಯೋಗಿಸಿ ಹೊಸ ಪ್ರಯೋಗ ಮಾಡಿದ್ದಾರೆ. ಪೆಟ್ರೋಲ್ ಟ್ಯಾಂಕ್ ಭಾಗದಲ್ಲಿ ಬ್ಯಾಟರಿ, ಇಂಜಿನ್ ಇರುವ ಭಾಗದಲ್ಲಿ ಮೋಟಾರ್ ಅಳವಡಿಸಿದ್ದಾರೆ. ಬ್ಯಾಟರಿ ಮೇಲ್ಭಾಗದಲ್ಲಿ ಸ್ಟಾರ್ಟರ್ ಜೋಡಿಸಲಾಗಿದೆ. ಗೇರ್ ಬದಲು ಹ್ಯಾಂಡಲ್‍ನಲ್ಲಿ ಮೂರು ಬಗೆಯ ಪವರ್ ಮೋಡ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.



ವಿದ್ಯುತ್‍ನಿಂದ ಬ್ಯಾಟರಿ ಚಾರ್ಜ್ ಮಾಡಬಹುದಾಗಿದ್ದು, ಪೂರ್ತಿ ಚಾರ್ಜ್ ಆಗೋಕೆ ಆರು ಗಂಟೆ ಬೇಕು. ಒಂದೂವರೆ ಯೂನಿಟ್ ವಿದ್ಯುತ್ ಇದಕ್ಕೆ ಬಳಕೆಯಾಗುತ್ತೆ. ಇಷ್ಟು ಶಕ್ತಿಯಲ್ಲಿ 40 ಕಿಮೀ ಮೈಲೇಜ್ ನೀಡುತ್ತೆ ಈ ಬೈಕ್. ಮುಂದೆ ಲೀಥಿಯಂ ಬ್ಯಾಟರಿ ಅಳವಡಿಸಿದರೆ ಇನ್ನೂ ಹೆಚ್ಚಿನ ಮೈಲೇಜ್ ಸಿಗುತ್ತೆ ಅನ್ನುತ್ತಾರೆ ಗಿಲನ್. ಇಬ್ಬರು ಆರಾಮಾಗಿ ಇದರಲ್ಲಿ ಸಂಚರಿಸಬಹುದು. ಯಾವುದೇ ಸೌಂಡ್ ಇಲ್ಲ, ವಾಯು ಮಾಲಿನ್ಯ ಕೂಡಾ ಇದರಿಂದಾಗೋದಿಲ್ಲ. ಇಷ್ಟಕ್ಕಾಗಿ ವೆಚ್ಚವಾಗಿರೋದು 25 ಸಾವಿರ ರೂಪಾಯಿ ಮಾತ್ರ.ಗಿಲನ್ ಪ್ರಯತ್ನವನ್ನು ಕಂಡು ಊರವರು ಬೆರಗಾಗಿದ್ದಾರೆ. ಯುವ ಪ್ರತಿಭೆಯ ಆವಿಷ್ಕಾರ ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
40 ಕಿಮೀ ಹೋಗೋದಕ್ಕೆ ಒಂದು ಲೀಟರ್ ಪೆಟ್ರೋಲ್ ಬೇಕು. ಆದ್ರೆ ಈ ಬೈಕ್‍ನಲ್ಲಿ 10 ರೂಪಾಯಿ ಮಾತ್ರ ಖರ್ಚಾಗೋದು. ಯುವಕನ ಈ ಪ್ರಯತ್ನ ಮುಂದೆ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಲ್ಲಿ ಆತನ ಪೋಷಕರು, ಹಿತೈಷಿಗಳು ಕಾಯ್ತಿದ್ದಾರೆ.