“ಸನ್ನಿಸೈಡ್” ಋಷ್ಯಾಶ್ರಮಕ್ಕಾಗಿ ಸೈನ್ಯ ಕಾದಿದ್ದು ೫೬ ವರ್ಷ!


೧೯೯೧ರ ಒಂದು ದಿನ. ಹಿರಿಯ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಅಲಸೂರು ಗೇಟ್ ಠಾಣೆಯಲ್ಲಿ ಕೆಲಸದಲ್ಲಿ ಮಗ್ನರಾಗಿದ್ದರು. ಇದ್ದಕ್ಕಿದ್ದಂತೆ ರಸ್ತೆಯಲ್ಲಿ ಮಿಲಿಟರಿ ಬ್ಯಾಂಡಿನ ಅಬ್ಬರ ಶುರುವಾಯಿತು. ವಾಹನ ದಟ್ಟಣೆ ಉಂಟಾಯಿತು. ಬ್ಯಾಂಡ್ ಸಂಗೀತದ ಸದ್ದು, ವಾಹನಗಳ ಹಾರ್ನ್‌ಗಳಿಂದ ಕಿರಿಕಿರಿಗೊಂಡ ಅಶೋಕ್ ಕುಮಾರ್ ಕಾನ್‌ಸ್ಟೇಬಲ್ ಒಬ್ಬನನ್ನು ಕರೆದು ರಸ್ತೆಯಲ್ಲಿ ಏನಾಗುತ್ತಿದೆ ನೋಡುವಂತೆ ತಿಳಿಸಿದರು. ಆತ ಧಾವಂತದಿಂದ ಹೊರಗೋಡಿ ಅದೇ ವೇಗದಿಂದ ಅಶೋಕ್ ಕುಮಾರ್ ಬಳಿ ಬಂದು, ಜನರಲ್ ತಿಮ್ಮಯ್ಯನವರ ಶವಯಾತ್ರೆ ನಡೆಯುತ್ತಿದೆಯೆಂದೂ, ವಿಕ್ಟೋರಿಯಾ ರಸ್ತೆಯ ಎಎಸ್‌ಸಿ ಸೆಂಟರಿಗೆ ಅದನ್ನು ಸಾಗಿಸಲಾಗುತ್ತಿದೆಯೆಂದು ತಿಳಿಸಿದ. ಜ. ತಿಮ್ಮಯ್ಯನವರ ಜೀವನ ಕಥನ ಓದಿಕೊಂಡಿದ್ದ ಅಶೋಕ್ ಕುಮಾರರಿಗೆ ಆತನ ಮಾತಿನಿಂದ ರೇಗಿತು. ತಿಮ್ಮಯ್ಯನವರು ಸತ್ತು ಇಪ್ಪತ್ತೈದು ವರ್ಷದ ಮೇಲಾಯಿತು. “ಯಾವ ತಿಮ್ಮಯ್ಯ ಎಂದು ವಿಚಾರಿಸಿ ಬಾ” ಎಂದು ಗದರಿದರು. ಆದರೆ ಆತ ಜನರಲ್ ತಿಮ್ಮಯ್ಯ ಎಂದೇ ಹೇಳುತ್ತಿದ್ದ. ಅಶೋಕ್ ಕುಮಾರ್ ಆತನೆಡೆಗೆ ವ್ಯಂಗ್ಯದ ನಗುವೊಂದನ್ನು ಬೀರುತ್ತಾ ಕ್ಯಾಪ್ ಧರಿಸಿ ರಸ್ತೆಗಿಳಿದು ಅಲ್ಲಿದ್ದ ಮಿಲಿಟರಿ ಅಧಿಕಾರಿಯಲ್ಲಿ ವಿಚಾರಿಸಿದರು. ಆತ ಕೂಡಾ ಇದು ಜ. ತಿಮ್ಮಯ್ಯ ಮೃತದೇಹ ಎಂದೇ ಹೇಳಿದ. ತಲೆ ಕೆಟ್ಟಂತಾದ ಅಶೋಕ್ ಕುಮಾರ್ ಮಿಲಿಟರಿ ಟ್ರಕ್ಕನ್ನೇರಿದರು. ಟ್ರಕ್ಕಿನೊಳಗೆ ಗಾಜಿನ ಪೆಟ್ಟಿಗೆಯಿತ್ತು. ಅದರೊಳಗೊಂದು ಮೃತದೇಹವೂ ಇತ್ತು. ಅಶೋಕ್ ಕುಮಾರ್ ಅದರತ್ತ ಇಣುಕಿದರು. ಅವರ ಎದೆ ಧಸಕ್ಕೆಂದಿತು. ಆಘಾತದಿಂದ ಒಂದು ಹೆಜ್ಜೆ ಹಿಂದೆ ಸರಿದರು. ಏಕೆಂದರೆ ಅದು ಅದೇ ಜನರಲ್ ತಿಮ್ಮಯ್ಯ. ಅಶೋಕ್ ಕುಮಾರ್ ಆರಾಧಿಸುತ್ತಿದ್ದ ಅದೇ ಕೊಡಂದೇರ ಮನೆಯ ಡುಬ್ಬು ಮಾಂವ! ನೋವಿನಿಂದ ಟ್ರಕ್ಕಿಳಿದ ಅಶೋಕ್ ಕುಮಾರ್ ಶವಯಾತ್ರೆಯ ಏರ್ಪಾಡುಗಳಿಗೆ ನಿಂತರು.
ಇಪ್ಪತ್ತೈದು ವರ್ಷದ ಹಿಂದೆ ನಿಧನರಾಗಿದ್ದ ತಿಮ್ಮಯ್ಯ ಮೃತದೇಹ ಇನ್ನೂ ಹಾಗೇ ಇತ್ತೇಕೆ? ಶವಯಾತ್ರೆ ನಡೆದದ್ದೇಕೆ ಎಂಬುದಕ್ಕೆ ಒಂದು ಮಹತ್ವದ ಕಾರಣವಿತ್ತು.

೧೯೬೪ರಲ್ಲಿ ತಿಮ್ಮಯ್ಯ ಸೈಪ್ರಸ್‌ಗೆ ತೆರಳಿದ್ದರು. ವಿಶ್ವಸಂಸ್ಥೆಯ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದ ತಿಮ್ಮಯ್ಯರಿಗೆ ಸೈಪ್ರಸಿನಲ್ಲಿ ಹೊಸ ಮಿಲಿಟರಿ ಕಟ್ಟುವ ಹೊಣೆಗಾರಿಕೆಯಿತ್ತು. ಯೂರೋಪಿಯನ್ ದೇಶವಾಗಿದ್ದರೂ ಸೈಪ್ರಸ್ ನಾಗರಿಕ ದಂಗೆಗಳಿಂದ ನಲುಗಿತ್ತು. ಅಂಥಾ ದೇಶದಲ್ಲಿ ತಿಮ್ಮಯ್ಯ ಜನರ ಮನಸ್ಸನ್ನು ಗೆದ್ದರು. ಜನರನ್ನು ಸೈನ್ಯಕ್ಕೆ ಸೇರುವಂತೆ ಮಾಡತೊಡಗಿದರು. ಹಾಗೆ ಸೈನ್ಯಕ್ಕೆ ಸೇರಿದವರಲ್ಲೊಬ್ಬ ಜಾರ್ಜಿಯೋಸ್ ಸೆರಾಡಕಿಸ್ (Georgios Seiradakis). ತಿಮ್ಮಯ್ಯ ಪ್ರೇರಣೆಯಿಂದ ಸೈನ್ಯಕ್ಕೆ ಸೇರಿದ್ದ ಆತ ಸದಾ ತಿಮ್ಮಯ್ಯನವರನ್ನು ನೆರಳಿನಂತೆ ಹಿಂಬಾಲಿಸತೊಡಗಿದ. ತಾನೂ ತಿಮ್ಮಯ್ಯರಂತಾಗಬೇಕೆಂದು ಕನಸ್ಸು ಕಾಣತೊಡಗಿದ. ಆದರೆ ೧೯೬೫ರಲ್ಲಿ ತಿಮ್ಮಯ್ಯ ಸೈಪ್ರಸಿನಲ್ಲೇ ನಿಧನರಾದರು. ಕಾಲ ಉರುಳಿತು. ೧೯೯೧ರಲ್ಲಿ ಅದೇ ಸೆರಾಡಕಿಸ್, ರಿಪಬ್ಲಿಕ್ ಆಫ್ ಸೈಪ್ರಸಿನ ನ್ಯಾಶನಲ್ ಗಾರ್ಡ್ಸ್ ಮುಖ್ಯಸ್ಥನಾದ. ಆದರೆ ಆ ಸೆರಾಡಕಿಸ್ ಎಂಬ ಸೈಪ್ರಸಿನ ಏಕಲವ್ಯ, “ಅಧಿಕಾರ ಸ್ವೀಕಾರಕ್ಕೆ ಮುನ್ನ ತನ್ನ ಗುರು ತಿಮ್ಮಯ್ಯ ಸಮಾಧಿಗೆ ಗೌರವ ವಂದನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು” ಎಂದು ಬೇಡಿಕೆಯನ್ನಿಟ್ಟ. ಸೈಪ್ರಸ್ ಆತನ ಬೇಡಿಕೆಯನ್ನು ಮನ್ನಿಸಿತು. ಹೊಸ ಸೇನಾ ಮುಖ್ಯಸ್ಥ ತನ್ನ ವಾದ್ಯವೃಂದ ಸಮೇತನಾಗಿ ದೆಹಲಿಗೆ ಬಂದಿಳಿದು ರಾಷ್ಟಪತಿ ಭವನವನ್ನು ಸಂಪರ್ಕಿಸಿದ. ರಾಷ್ಟ್ರಪತಿ ಭವನ ಬೆಂಗಳೂರು ಮಹಾನಗರ ಪಾಲಿಕೆಯನ್ನು ಸಂಪರ್ಕಿಸಿ ವಿಷಯ ಅರುಹಿತು. ಆದರೆ ಬೆಂಗಳೂರು ಕಾರ್ಪೋರೇಶನ್ ಕಟ್ಟಡ ತಿಮ್ಮಯ್ಯನವರನ್ನು ಮರೆತು ಎಷ್ಟೋ ಕಾಲವಾಗಿತ್ತು. ಸಂಸತ್ತು ನೆನಪಿಟ್ಟುಕೊಳ್ಳದ ಮನುಷ್ಯನನ್ನು ನೆನಪಿಟ್ಟುಕೋಳಬೇಕಾದ ಅನಿವಾರ್ಯತೆ ತನಗೇನಿದೆ ಎಂಬ ಉದಾಸೀನತೆಯಲ್ಲಿ ಅದಿತ್ತು. ಆದರೆ ರಾಷ್ಟ್ರಪತಿ ಭವನದ ಆದೇಶಕ್ಕಾಗಿ ಪಾಲಿಕೆ ರಾತ್ರಿಯಿಡೀ ಕಡತಗಳನ್ನು ಹುಡುಕಿ ತಿಮ್ಮಯ್ಯ ಸಮಾಧಿಯನ್ನು ಪತ್ತೆ ಹಚ್ಚಿತು. ೨೫ ವರ್ಷದ ಹಿಂದೆ ಪಾಲಿಕೆ ಲೋಕ ವಿಖ್ಯಾತನಾದ ಮಹಾ ಯೋಧನನ್ನು ವಿಲ್ಸನ್ ಗಾರ್ಡನಿನ ಕೊಳಕು ರುದ್ರಭೂಮಿಯಲ್ಲಿ ಹೂತು ಕೈ ತೊಳೆದುಕೊಂಡಿತ್ತು! ರಾತ್ರೋರಾತ್ರಿ ಸ್ಮಶಾನ ಸ್ವಚ್ಛಗೊಳಿಸಿ ಫಲಕ ನೆಡಲಾಯಿತು. ಆದರೆ ಮರುದಿನ ಸ್ಮಶಾನಕ್ಕೆ ಬಂದ ಸೈಪ್ರಸ್ ತಂಡಕ್ಕೆ ಎಲ್ಲವೂ ತಿಳಿದುಹೋಗಿತ್ತು. ಬೃಹತ್ ಸೈನ್ಯದ ಮುಖ್ಯಸ್ಥನಾಗಿದ್ದ, ವಿಶ್ವಸಂಸ್ಥೆಯ ಪಡೆಯ ಮುಖ್ಯಸ್ಥನೂ ಆಗಿದ್ದ, ಎಷ್ಟೋ ವಿದೇಶಾಂಗ ಬಿಕ್ಕಟ್ಟುಗಳನ್ನು ಪರಿಹರಿಸಿದ, ಎರಡನೇ ಮಹಾಯುದ್ಧದ ಹೀರೋ ಆಗಿದ್ದವನ, ತನ್ನ ದೇಶದ ಸೈನ್ಯ ಕಟ್ಟಿದವನ, ತನ್ನ ದೇಶದಲ್ಲಿ ಭೂಕಂಪವಾಗಿದ್ದಾಗ ಹೆಣ ಹೊತ್ತ ಮಹಾತ್ಮನನ್ನು ಹೀಗೆ ಹೂತಿಟ್ಟರಲ್ಲಾ ಎಂದು ಸೆರಾಡಕಿಸ್ ಮರುಗಿದ. ಕಣ್ಣೀರಾಗುತ್ತಲೇ ಆತ ವಿಧಿ ವಿಧಾನಗಳನ್ನು ಮುಗಿಸಿ ರಾಜಭವನಕ್ಕೆ ಧಾವಿಸಿದ. ರಾಜ್ಯಪಾಲ ಭಾನು ಪ್ರತಾಪ್ ಸಿಂಗ್‌ರನ್ನು ಭೇಟಿಯಾದ ಸೆರಾಡಕಿಸ್, ತಿಮ್ಮಯ್ಯ ಮೃತ ದೇಹವನ್ನು ತಾವು ಸೈಪ್ರಸ್‌ಗೆ ಕೊಂಡೊಯ್ಯುತ್ತೇವೆ, ವಿಶ್ವದಲ್ಲೇ ಅತೀ ದೊಡ್ಡ ಸ್ಮಾರಕ ನಿರ್ಮಾಣ ಮಾಡುತ್ತೇವೆಂದೂ, ತಾವು ಅನುಮತಿಯನ್ನು ನೀಡಬೇಕೆಂದು ವಿನಂತಿಸಿಕೊಂಡ. ೬೫ರಲ್ಲಿ ಮೃತದೇಹವನ್ನು ಭಾರತಕ್ಕೆ ಕಳುಹಿಸುವಾಗಲೇ ನಾವು ಅದನ್ನು ಶತಮಾನವಾದರೂ ಕೆಡದಂತೆ ಇರಿಸಿದ್ದೇವೆ ಎಂಬ ಸಂಗತಿಯನ್ನೂ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟ. ರಾಜ್ಯಪಾಲರು ತಲೆತಗ್ಗಿಸಿದರು. ಸೆರಾಡಕಿಸನನ್ನು ಸಾಗಹಾಕಿದ ರಾಜ್ಯಪಾಲರು ನೇರ ಫೋನ್ ಹಚ್ಚಿದ್ದು ಸೈನ್ಯದ ಕೇಂದ್ರ ಕಛೇರಿಗೆ. ದೆಹಲಿ ತುರ್ತು ಕೆಲಸ ಆರಂಭಿಸಿತು. ಬೆಂಗಳೂರಿನ ವಿಕ್ಟೋರಿಯಾ ರಸ್ತೆಯ ಎಎಸ್‌ಸಿ ಸೆಂಟರ್‌ಗೆ ಮೃತದೇಹವನ್ನು ಸ್ಥಳಾಂತರಿಸಬೇಕೆಂದೂ, ತಿಮ್ಮಯ್ಯ ಸಮಾಧಿಯನ್ನು ನಿರ್ಮಾಣ ಮಾಡಬೇಕೆಂದೂ ಆದೇಶವಾಯಿತು. ಲೆ.ಜ. ಭಟ್ಟಿ ಎಂಬ ಅಧಿಕಾರಿಯ ಉಸ್ತುವಾರಿಯಲ್ಲಿ ಕಾರ್ಯಗಳು ಪ್ರಾರಂಭವಾದವು. ಅಂದರೆ ಸೇನಾ ಮುಖ್ಯಸ್ಥರಾಗಿದ್ದಾಗ ಸರ್ಕಾರ ತಿಮ್ಮಯ್ಯನವರನ್ನು ಹೇಗೆ ನಡೆಸಿಕೊಂಡಿತ್ತೋ, ಅವರ ದೇಹಾವಸಾನದ ನಂತರ ಕೂಡಾ ಅವರಿಗೆ ಗೌರವ ಕೊಡುವುದನ್ನು ಮರೆತಿತ್ತು. ಟೈಗರ್ ಅಶೋಕ್ ಕುಮಾರ್ ಅಂದು ತಿಮ್ಮಯ್ಯ ಮೃತದೇಹದೊಂದಿಗೆ ಕಂಡಿದ್ದು ವ್ಯವಸ್ಥೆಯ ಶವಯಾತ್ರೆಯನ್ನು ಕೂಡಾ.
ಅಷ್ಟೇ ಅಲ್ಲ. ಅದೇ ಹೊತ್ತಿಗೆ ಮಡಿಕೇರಿಯ ತಿಮ್ಮಯ್ಯನವರು ಹುಟ್ಟಿ ಬೆಳೆದ ಮನೆ ’ಸನ್ನಿ ಸೈಡ್’ ಅನ್ನು ಸರ್ಕಾರ ಭ್ರಷ್ಟಾಚಾರದ ಮಹಾಕೂಪ ಆರ್‌ಟಿಒ ಕಛೇರಿಯಾಗಿ ಬದಲಿಸಿತ್ತು! ಯಾವ ಮನೆಯಲ್ಲಿ ಇದ್ದ ಮೂವರು ಹುಡುಗರೂ ಶ್ರೀಮಂತಿಕೆಯನ್ನು ಒದ್ದು ಮಿಲಿಟರಿ ಸೇರಿದ್ದರೋ, ಯಾವ ಮನೆಯಿಂದ ಪೊನ್ನಪ್ಪ, ಬೋಸರ ಕರೆಗೆ ಓಗೊಟ್ಟು ಐಎನ್‌ಎ ಸೇರಿದ್ದನೋ (ಬರ್ಮಾ ಯುದ್ಧದಲ್ಲಿ ಈ ಪೊನ್ನಪ್ಪ ತಮ್ಮ ತಿಮ್ಮಯ್ಯರಿಂದ ಬಂಧನಕ್ಕೊಳಗಾದ), ಯಾವ ಮನೆ ಹುತಾತ್ಮನೊಬ್ಬನನ್ನು ನಿರ್ಮಾಣ ಮಾಡಿತ್ತೋ (ತಮ್ಮ ಸೋಮಯ್ಯ ೪೮ ರಲ್ಲಿ ಕಾಶ್ಮೀರದಲ್ಲಿ ಹುತಾತ್ಮರಾಗಿದ್ದರು) ಅಂಥಾ ಮನೆಯನ್ನು ಸರ್ಕಾರ ಲಂಚಗುಳಿ ಅಧಿಕಾರಿಗಳ ಅಡ್ಡೆಯನ್ನಾಗಿ ಮಾಡಿತ್ತು! ಏಕೆಂದರೆ ನೆಹರೂ ಎದುರು ಎದೆ ಸೆಟೆದುನಿಂತ ಎಲ್ಲರನ್ನೂ ಕಾಂಗ್ರೆಸ್ ಸಮೂಲ ನಾಶಮಾಡುತ್ತಿತ್ತು. ಆದರೆ ಸೈನ್ಯ ತಿಮ್ಮಯ್ಯ ಮನೆಯನ್ನು ಸ್ಮಾರಕ ಮಾಡಬೇಕೆಂಬ ಅಗ್ನಿಯನ್ನು ಕಾಪಿಟ್ಟುಕೊಂಡಿತ್ತು. ಆದರೂ ಶತ್ರು ಸೈನ್ಯವನ್ನು ನಿರಾಯಾಸದಿಂದ ಮಣಿಸುತ್ತಿದ್ದ ಸೈನ್ಯದಂಥಾ ಶಕ್ತಿಯನ್ನೇ ಸ್ವಾರ್ಥ ರಾಜಕಾರಣ ಸುಸ್ತುಹೊಡೆಸಿಬಿಟ್ಟಿತ್ತು. ಹಾಗೆ ಸೈನ್ಯ ಸ್ಮಾರಕಕ್ಕಾಗಿ ಕಾದಿದ್ದು ಬರೋಬ್ಬರಿ ೫೬ ವರ್ಷಗಳು!
ಇತಿಹಾಸದಲ್ಲಿ ಕಾಂಗ್ರೆಸ್ ಮೂಲೆಗುಂಪು ಮಾಡಿದ ಅವೆಷ್ಟೋ ವ್ಯಕ್ತಿತ್ವಗಳಲ್ಲಿ ತಿಮ್ಮಯ್ಯ ಪ್ರಮುಖರು. ತಿಮ್ಮಯ್ಯ ಜನಮಾನಸದಲ್ಲಿದ್ದರೆ ನೆಹರೂ ತಪ್ಪುಗಳೂ ಜನಮಾನಸದಲ್ಲಿರುತ್ತವೆ, ನೆಹರೂ ಎಡವಟ್ಟುಗಳು ಹಸಿರಾಗಿರುತ್ತವೆ ಎಂಬ ರಾಜಕಾರಣದ ಚಿಂತನೆ ಒಂದೆಡೆಯಾದರೆ, ತಿಮ್ಮಯ್ಯ ಬ್ರಿಟಿಷ್ ಚಾಕ್ರಿ ಮಾಡಿದ್ದವನು, ಪ್ರಮುಖನೇನಲ್ಲ ಎಂಬ ಅರೆಬೆಂದ ಚಿಂತನೆಗಳ ನಡುವೆ ಮಹಾ ಆದರ್ಶವೊಂದು ಕೂಡಾ ಮೂಲೆಗುಂಪಾಯಿತು. ಆದರೆ ತಿಮ್ಮಯ್ಯನವರು ದೇಶದ ಇತಿಹಾಸದಲ್ಲಿ ಏಕೆ ಮುಖ್ಯವಾಗುತ್ತಾರೆ ಎಂಬುದನ್ನು ಫೆಬ್ರುವರಿಯ 7 ತಾರೀಕಿನಂದು ಉದ್ಘಾಟನೆಯಾಗಿರುವ ಮ್ಯೂಸಿಯಂ ಉತ್ತರ ಹೇಳುತ್ತದೆ. ಆ ಕಾರಣಕ್ಕೆ ಮಡಿಕೇರಿಯ ಮ್ಯೂಸಿಯಂ ಮಹತ್ವದ್ದಾಗುತ್ತದೆ.

ಜಗತ್ತಿನ ಮಿಲಿಟರಿ ಇತಿಹಾಸ ಮೂರು ಯೋಧರನ್ನು ಸಾರ್ವಕಾಲಿಕ ಶ್ರೇಷ್ಠ ಜನರಲ್‌ಗಳು ಎಂದು ಉಲ್ಲೇಖಿಸುತ್ತದೆ. ಅದರಲ್ಲೊಬ್ಬರು ಜರ್ಮನಿಯ ಇರ್ವಿನ್ ರೊಮೆಲ್, ಇನ್ನೊಬ್ಬರು ಅಮೆರಿಕಾದ ರಾಬರ್ಟ್ ಇ.ಲೀ, ಮತ್ತೊಬ್ಬರು ಕರ್ನಾಟಕದ ತಿಮ್ಮಯ್ಯ! ಮಿಲಿಟರಿ ಇತಿಹಾಸಕಾರ ಹಂಪ್ರೆ ಇವಾನ್ಸ್ ಪ್ರಕಾರ, “ತಿಮ್ಮಯ್ಯ ಎಂದರೆ ಪರಾಕ್ರಮದಲ್ಲಿ ಶಿವಾಜಿಯಂತೆ, ಬುದ್ಧಿಯಲ್ಲಿ ವಿವೇಕಾನಂದರಂತೆ, ಸಮಚಿತ್ತದಲ್ಲಿ ರಾಣಾ ಪ್ರತಾಪನಂತೆ, ರಾಜತಾಂತ್ರಿಕತೆಯಲ್ಲಿ ಮಹಾರಾಜಾ ರಂಜಿತ್ ಸಿಂಗ್‌ನಂತೆ.” ಇದೇನೂ ಅತಿಶಯೋಕ್ತಿ ಎನಿಸುವುದಿಲ್ಲ. ಏಕೆಂದರೆ ಇದುವರೆಗೆ ಆಗಿಹೋಗಿರುವ ಭಾರತೀಯ ಸೈನ್ಯದ ಜನರಲ್‌ಗಳನ್ನೇ ನೋಡಿ. ಶಿಸ್ತಿನ ಸೈನ್ಯ ರೂಪಿಸಿದ ಕಾರ್ಯಪ್ಪ, ಅಗಾದ ದೂರದೃಷ್ಟಿತ್ವದ ಮಾಣಿಕ್ ಶಾ, ಮಹಾವೀರ ಚಕ್ರ ’ಬಾರ್’ ಎ.ಎಸ್ ವೈದ್ಯ, ಸೈನ್ಯವನ್ನು ಶಾಸ್ತ್ರೀಯವಾಗಿ ಕಟ್ಟಿದ ಕೃಷ್ಣರಾವ್, ವಾರ್ ಜಂಕೀ ಎನಿಸಿಕೊಂಡೂ ಸಿಡಿಎಸ್ ಆಗಬಹುದು ಎಂದು ತೋರಿಸಿಕೊಟ್ಟ ಬಿಪಿನ್ ರಾವತ್…ಹೀಗೆ ಒಬ್ಬೊಬ್ಬರೂ ಮಹಾ ಪರ್ವತಗಳೇ. ಆದರೆ ಈ ಎಲ್ಲಾ ಗುಣಗಳ ಅಚ್ಚು ಜನರಲ್ ತಿಮ್ಮಯ್ಯ! ನಿಜಕ್ಕೂ ತಿಮ್ಮಯ್ಯರನ್ನು ವರ್ಣಿಸಲು ವಾಕ್ಯಗಳು ಹೆಣಗುತ್ತವೆ. ಪುಟಗಳು ಕೊರತೆಯಾಗುತ್ತದೆ. ಆದರೂ ಕೆಲವು ಪ್ರಶ್ನೆಗಳು ಮಾತ್ರ ಉಳಿದುಹೋಗುತ್ತವೆ. ವೈರಿಗಳೂ ಪ್ರೀತಿಸಿದ ಆ ವ್ಯಕ್ತಿತ್ವವನ್ನು ರಾಜಕೀಯ ಏಕೆ ದ್ವೇಷಿಸಿತು? ಚೀಫ್ ಆದರೂ ಯಾಕೆ ತಿಮ್ಮಯ್ಯ ಆಪರೇಶನ್ ಮುಖ್ಯಸ್ಥರಾಗುತ್ತಿದ್ದರು? ಸಿಪಾಯಿಗಳೊಂದಿಗೆ ಫುಟ್‌ಬಾಲ್ ಆಡುತ್ತಿದ್ದರು? ಪುಢಾರಿಗಳು ಮೂದಲಿಸಿದರೂ ಏಕೆ ಅವರು ಗೊಣಗಾಟದ ಅಧಿಕಾರಿಯಾಗಲಿಲ್ಲ? ಆರೆಸ್ಸೆಸ್ ಸ್ವಯಂಸೇವಕರಂತೆ ತನ್ನ ನೋವನ್ನು ಹೊಟ್ಟೆಯೊಳಗಿಟ್ಟುಕೊಂಡು ಆದರ್ಶದಿಂದ ಬದುಕಲು ಅವರಿಗೆ ಹೇಗೆ ಸಾಧ್ಯವಾಯಿತು? ಕೊನೆಯವರೆಗೂ ಪರಿಶುದ್ಧತೆಯನ್ನು, ಪ್ರಜ್ಞಾವಂತಿಕೆಯನ್ನು, ಸಮರ್ಪಣೆಯನ್ನು ಕಾಪಿಟ್ಟುಕೊಂಡು ಬದುಕಲು ಅವರಿಗೆ ಸಾಧ್ಯವಾಗಿದ್ದು ಹೇಗೆ? ಹೀಗೆ ಅವರ ವೃತ್ತಿ ಸಾಧನೆ, ವ್ಯಕ್ತಿತ್ವಗಳೆರಡನ್ನೂ ಇಣುಕಿ ನೋಡಿದರೆ ತಿಮ್ಮಯ್ಯನವರ ಅಗಾಧತೆಯ ಅರಿವಾಗುತ್ತದೆ.
ಹಾಗೆ ಬದುಕಿದ ತಿಮ್ಮಯ್ಯ ನಮ್ಮ ರಾಜ್ಯದವರು, ನಮ್ಮ ಕೊಡಗಿನವರು. ಅಂಥಾ ತಿಮ್ಮಯ್ಯ ಮೆಮೋರಿಯಲ್ ಮ್ಯೂಸಿಯಮನ್ನು ರಾಷ್ಟ್ರಪತಿಗಳಲ್ಲದೆ ಬೇರೆ ಯಾರು ಉದ್ಘಾಟಿಸಿದ್ದರೂ ಕಡಿಮೆಯಾಗುತ್ತಿತ್ತು. ತಿಮ್ಮಯ್ಯ ಅಂಥವರು. ಅವರು ಯೋಧನಿಗೆ ಸಲ್ಲಬೇಕಾದ ಎಲ್ಲಾ ಬಿರುದುಗಳಿಂದ ಆವೃತರಾಗಿದ್ದವರು. ಅದಕ್ಕೋ ಏನೋ ರಾಜಾಜಿ ಅವರನ್ನು ’ಸೈನಿಕ ಋಷಿ’ ಎಂದು ಕರೆದಿದ್ದರು.

ಹಾಗಾಗಿ ಉದ್ಘಾಟನೆಯಾಗಿರುವುದು ಸನ್ನಿಸೈಡ್ ಮ್ಯೂಸಿಯಂ ಅಲ್ಲ. ನಿಜಕ್ಕೂ ಅದು ಸೈನ್ಯದ ಋಷ್ಯಾಶ್ರಮ.
ಕೃಪೆ ಶ್ರೀ ಕೆ. ವಿ. ಭಟ್

error: Content is protected !!