ಸದ್ಯದಲ್ಲೇ ನಿರ್ಮಾಣವಾಗಲಿದೆ ಪ್ರಪಂಚದ ಅತಿ ದೊಡ್ಡ ದೇವಾಲಯ ಸಮುಚ್ಛಯ ‘ವಿರಾಟ್ ರಾಮಾಯಣ ಮಂದಿರ’

ಶ್ರೀ ರಾಮ ರಾಮ ರಾಮೇತಿ
ರಮೇ ರಾಮೇ ಮನೋರಮ
ಸಹಸ್ರನಾಮ ತತ್ತುಲ್ಯಂ
ರಾಮ ನಾಮ ವರಾನನೇ

ಶ್ರೀ ರಾಮಚಂದ್ರ ಈ ದೇಶದ ಅಸ್ಮಿತೆ, ಅಸ್ಥಿತ್ವದ ಭಾಗ. ಸನಾತನ ಧರ್ಮದ ಆರಾಧ್ಯ ದೈವ. ರಾಮ ಎಂದರೆ ಆದರ್ಶ ಆಡಳಿತಗಾರ, ಮಾದರಿ ಏಕ ಪತ್ನಿ ವೃತಸ್ಥ, ತ್ಯಾಗ-ಪ್ರೀತಿಯ ಸಂಕೇತ. ರಾಮನಿಲ್ಲದ ಭಾರತದ ಕಲ್ಪನೆಯೂ ಅಸಾಧ್ಯ. ಅಂತಹ ದೈವಾಂಶ ಸಂಭೂತ ರಾಮನಿಗೊಂದು ಮಂದಿರ ಅವನ ಜನ್ಮ ಸ್ಥಳದಲ್ಲಿ ನಿರ್ಮಿಸುತ್ತಿರುವಾಗಲೇ ಸದ್ದು ಮಾಡುತ್ತಿದೆ, ವಿರಾಟ್ ರಾಮಾಯಣ ಮಂದಿರ!

ಬಿಹಾರ ರಾಜ್ಯದ ಚಂಪಾರಂ ಜಿಲ್ಲೆಯ ಕೇಸರಿಯಾದಲ್ಲಿ ಕಟ್ಟಲಾಗುತ್ತಿರುವ ರಾಮಾಯಣ ಮಂದಿರ ಬೃಹತ್ತಾಗಲಿದ್ದು, 250 ವರ್ಷಗಳ ಬಾಳಿಕೆ ಬರುವಂತೆ ಗುಣಮಟ್ಟವನ್ನು ಕಾಪಾಡಿಕೊಂಡು ನಿರ್ಮಿಸಲಾಗುತ್ತಿದೆ. ಕಾಂಬೋಡಿಯಾದ ಅಂಗ್ಕೋರ್ ವಾಟ್ ದೇವಾಲಯವೇ ಈಗ ಪ್ರಪಂಚದ ಅತಿ ದೊಡ್ಡ ದೇವಾಲಯ ಸಮುಚ್ಛಯವಾಗಿದ್ದು, ಅದೇ ಮಾದರಿಯಲ್ಲಿ ಈಗ ಭಾರತದ ಬಿಹಾರ್ ಅಲ್ಲಿ ಕಟ್ಟಲಾಗುತ್ತಿದೆ ವಿರಾಟ್ ರಾಮಾಯಣ ಮಂದಿರ. ಆದರೆ ಇದು ಕೇವಲ ಅಂಗ್ಕೋರ್ ವಾಟ್ ದೇವಾಲಯದ ಹಾಗಿರದೆ ರಾಮೇಶ್ವರಂನ ಮೀನಾಕ್ಷಿ ದೇವಾಲಯವನ್ನೂ ಹೋಲುವಂತೆ ನಿರ್ಮಾಣವಾಗಲಿದೆ. ಒಟ್ಟು 191 ಎಕರೆ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲೇಳಲಿರುವ ದೇವಾಲಯಗಳ ಸಮುಚ್ಛಯವು 215 ಅಡಿ ಎತ್ತರವಿರಲಿದ್ದು, 18 ದೇವರುಗಳ ದೇವಸ್ಥಾನಗಳು ಇಲ್ಲಿ ಇರಲಿದೆ. ದೇವಾಲಯದ ಒಳ ಸಭಾಂಗಣದಲ್ಲಿ ಸುಮಾರು 20,000 ಜನರು ಕುಳಿತುಕೊಳ್ಳುವ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವಿಳಂಬಗೊಂಡಿದ್ದೇಕೆ ಯೋಜನೆ…?

ಅಂಗ್ಕೋರ್ ವಾಟ್ ದೇವಸ್ಥಾನ

2015 ಜೂನ್ ವೇಳೆಗೆ ವೇಗ ಪಡೆದಿದ್ದ ಈ ಯೋಜನೆಗೆ ಕಾಂಬೋಡಿಯಾದ ಸರಕಾರ ಅಂಗ್ಕೋರ್ ವಾಟ್ ದೇವಸ್ಥಾನದ ಮಾದರಿಯಲ್ಲಿಯೇ ಈ ದೇವಸ್ಥಾನ ನಿರ್ಮಾಣವಾಗುತ್ತಿದೆ ಎಂದು ಅಪಸ್ವರ ಎತ್ತಿತ್ತು. ಹಾಗಾಗಿ ಯೋಜನೆಯ ನೀಲಿ ನಕ್ಷೆಯಲ್ಲಿ ಬದಲಾವಣೆ ತಂದು, ಹಲವು ಸುತ್ತುಗಳ ಚರ್ಚೆಯ ಬಳಿಕ ಸಮಸ್ಯೆ ಇತ್ತಿಚೆಗೆ ಬಗೆಹರಿಯಿತು.  ಹಾಗಾಗಿ ಈಗ ಮತ್ತೊಮ್ಮೆ ಯೋಜನೆ ಬಿರುಸುಗೊಂಡಿದೆ.

ರಾಜಕೀಯ ಲಾಭ…ವೋಟ್ ಬ್ಯಾಂಕ್ ಸೃಷ್ಟಿ

ಎರಡನೇ ಬಾರಿಗೆ ಜಯಭೇರಿ ಬಾರಿಸಿ ಯಶಸ್ವಿ ಸರಕಾರದ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್ ಅವರ ಮಹತ್ವಾಕಾಂಶಿ ಯೋಜನೆ ಇದಾಗಿದೆ. 2011ರ ಜನರ ಸಮೀಕ್ಷೆ ಪ್ರಕಾರ ಬಿಹಾರ ರಾಜ್ಯದಲ್ಲಿ ಹಿಂದೂಗಳ ಜನಸಂಖ್ಯೆ 82.7 ಶೇಖಡ ಇತ್ತು. ಈಗ ಅದು ಹೆಚ್ಚು ಕಡಿಮೆ ಆಗಿದ್ದರೂ, ಹಿಂದೂಗಳು ಅಲ್ಲಿ ಬಹುಸಂಖ್ಯಾತ ಜನ ಸಮುದಾಯವೇ ಆಗಿದೆ. ಹೀಗಾಗಿ 2023ನ ಕೊನೆಯಲ್ಲಿ ಸಂಪೂರ್ಣ ಆಗಲಿರುವ ಈ ಧಾರ್ಮಿಕ ಕ್ಷೇತ್ರ ನಿತೀಶ್ ಕುಮಾರ್ ಅವರಿಗೆ ಹಿಂದೂ ಮತ ಬ್ಯಾಂಕ್ ಅನ್ನೇ ದೊಡ್ಡದಾಗಿ ಸೃಷ್ಟಿಸಲಿದೆ. ಮತ್ತು ಅದು 2025ರ ವಿಧಾನ ಸಭಾ ಚುನಾವಣೆಯಲ್ಲಿ ಅವರಿಗೆ ಲಾಭ ಮಾಡಲಿದೆ.

ಒಟ್ಟಿನಲ್ಲಿ, ಈ ಧಾರ್ಮಿಕ ಕ್ಷೇತ್ರ ಬಹಳ ಬೃಹತ್ ಯೋಜನೆ ಆಗಿದ್ದು, ಪೂರ್ಣಗೊಂಡರೆ ಭಾರತಕ್ಕೆ ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣವಾಗಲಿದೆ. ಪ್ರವಾಸೋದ್ಯಮದ ಆದಾಯದಲ್ಲಿ ಗಮನಾರ್ಹ ಹೆಚ್ಚಳ ಮಾಡಲಿದೆ. ಭಾರತಕ್ಕೆ ಇದು ಹಿರಿಮೆ ಹಾಗು ಗರಿಮೆಯಂತೆ ಕಂಗೊಳಿಸಲಿದೆ. ಸೆಂಟ್ರಲ್ ವಿಸ್ಟಾ ಯೋಜನೆಗೆ ಕೆಲಸ ಮಾಡಿದ ತಂಡವೇ ಇದಕ್ಕೂ ಹಗಲು ರಾತ್ರಿ ಶ್ರಮಿಸುತ್ತಿದ್ದು, ಅತ್ಯಂತ ಸುಂದರವಾಗಿ ರೂಪುಗೊಳ್ಳುವ ನಿರೀಕ್ಷೆ ಇದೆ. ಯಾವುದಕ್ಕೂ 2023ರ ತನಕ ಕಾಯಲೇಬೇಕಿದೆ.

ರಜತ್ ರಾಜ್ ಡಿ.ಹೆಚ್,
ಸುದ್ದಿ ಸಂತೆ
ಪ್ರಧಾನ ಸಂಪಾದಕರು
error: Content is protected !!