ಸಣ್ಣ ಸಾಲಗಾರರಿಗೆ ಮತ್ತೊಮ್ಮೆ ಸಾಲ ಮರುಪಾವತಿ ತಡೆ ಯೋಜನೆ ಪ್ರಕಟಿಸಿದ ರಿಸರ್ವ್‌ ಬ್ಯಾಂಕ್

ನವದೆಹಲಿ: ದೇಶದಲ್ಲಿ ಹಾಹಾಕಾರವನ್ನು ಸೃಷ್ಟಿಸಿರುವ ಕೊರೋನವೈರಸ್ ಎರಡನೇ ಅಲೆಯ ನಡುವೆ ರಾಜ್ಯವಾರು ಲಾಕ್-ಡೌನ್ಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರು ಮತ್ತು ಸಣ್ಣ ಉದ್ಯಮಗಳಿಗಾಗಿ ತನ್ನ ಒಂದು ಬಾರಿಯ ಸಾಲ ಪುನರ್ರಚನೆ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮತ್ತೆ ಪ್ರಕಟಿಸಿದೆ.

ಕೋವಿಡ್-19 ಮೊದಲನೇ ಅಲೆಯ ಸಂದರ್ಭದಲ್ಲಿ ಪ್ರಕಟಿಸಲಾಗಿದ್ದ ಯೋಜನೆಯ ಲಾಭವನ್ನು ಪಡೆದುಕೊಂಡಿರದ,25 ಕೋ.ರೂ.ವರೆಗೆ ಸಾಲಗಳನ್ನು ಹೊಂದಿರುವ ಮತ್ತು ಸಾಲಗಳು ಮಾ.31,2021ಕ್ಕೆ ಇದ್ದಂತೆ ಸ್ಟಾಂಡರ್ಡ್ ಎಂದು ವರ್ಗೀಕರಿಸಲ್ಪಟ್ಟಿದ್ದರೆ ಅಂತಹ ವ್ಯಕ್ತಿಗಳು,ಸಣ್ಣ ಉದ್ಯಮಗಳು ಹಾಗೂ ಎಂಎಸ್ಎಂಇಗಳು ಎರಡನೇ ಸುತ್ತಿನಲ್ಲಿ ಸಾಲ ಪುನರ್ರಚನೆಗೆ ಅರ್ಹವಾಗುತ್ತವೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು,ಇತ್ತೀಚಿನ ವಾರಗಳಲ್ಲಿ ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದ ಮರುಕಳಿಕೆ ಮತ್ತು ಸ್ಥಳೀಯ ಹಾಗೂ ಪ್ರಾದೇಶಿಕ ಮಟ್ಟಗಳಲ್ಲಿ ಕೈಗೊಳ್ಳಲಾಗಿರುವ ನಿಯಂತ್ರಣ ಕ್ರಮಗಳು ಹೊಸ ಅನಿರ್ದಿಷ್ಟತೆಗಳನ್ನು ಸೃಷ್ಟಿಸಿವೆ ಮತ್ತು ಆರ್ಥಿಕ ಚೇತರಿಕೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಿವೆ. ಇಂತಹ ಸ್ಥಿತಿಯಲ್ಲಿ ವೈಯಕ್ತಿಕ ಸಾಲಗಾರರು,ಸಣ್ಣ ಉದ್ಯಮಗಳು ಮತ್ತು ಎಂಎಸ್ಎಂಇಗಳು ಹೆಚ್ಚಿನ ಸಂಕಷ್ಟಕ್ಕೆ ಸಿಲುಕುತ್ತವೆ ಎಂದು ಹೇಳಿದರು.

ಪ್ರಸ್ತಾವಿತ ಮಾರ್ಗಸೂಚಿಯಡಿ ಸಾಲ ಪುನರಚನೆ ಸೌಲಭ್ಯವನ್ನು ಸೆ.30ರವರೆಗೆ ಪಡೆದುಕೊಳ್ಳಬಹುದು ಮತ್ತು ನಂತರದ 90 ದಿನಗಳಲ್ಲಿ ಅದನ್ನು ಅನುಷ್ಠಾನಿಸಬೇಕಾಗುತ್ತದೆ ಎಂದು ಹೇಳಿದ ದಾಸ್,ಮೊದಲ ಸಾಲ ಪುನರ್ರಚನೆ ಯೋಜನೆಯ ಸೌಲಭ್ಯವನ್ನು ಪಡೆದಿದ್ದ ಮತ್ತು ಅನುಮತಿ ನೀಡಲಾಗಿದ್ದ ಮರುಪಾವತಿ ಸ್ತಂಭನ ಅವಧಿ ಎರಡು ವರ್ಷಗಳಿಗಿಂತ ಕಡಿಮೆಯಿದ್ದ ವೈಯಕ್ತಿಕ ಸಾಲಗಾರರು ಮತ್ತು ಸಣ್ಣ ಉದ್ಯಮಗಳ ಪ್ರಕರಣಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಂತಹ ಪ್ರಕರಣಗಳನ್ನು ಪರಿಷ್ಕರಿಸಿ ಸ್ತಂಭನ ಅವಧಿಯನ್ನು ಒಟ್ಟು ಎರಡು ವರ್ಷಗಳಿಗೆ ವಿಸ್ತರಿಸಬಹುದಾಗಿದೆ ಎಂದು ತಿಳಿಸಿದರು.
ತುರ್ತು ವೈದ್ಯಕೀಯ ಸೇವೆಗಳಿಗೆ ಹಣಕಾಸಿನ ಲಭ್ಯತೆಯನ್ನು ಖಚಿತಪಡಿಸಲು ಆರೋಗ್ಯ ಕ್ಷೇತ್ರಕ್ಕೆ ಆರ್ಬಿಐನ 50,000 ಕೋಟಿ ರೂ. ಸಾಲ ಯೋಜನೆಯನ್ನೂ ದಾಸ್ ಪ್ರಕಟಿಸಿದರು. ಭಾರತವು ಕೋವಿಡ್-19 ಬಿಕ್ಕಟ್ಟಿನಿಂದ ಹೊರಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ ದಾಸ್,ಪರಿಸ್ಥಿಯ ಮೇಲೆ ಸೂಕ್ಷ್ಮ ನಿಗಾವನ್ನು ಆರ್ಬಿಐ ಮುಂದುವರಿಸಲಿದೆ ಎಂದು ತಿಳಿಸಿದರು.

error: Content is protected !!