ಸಂಭವಾಮಿ ಯುಗೇ ಯುಗೇ

ಕೃಷ್ಣ ಜನ್ಮಾಷ್ಟಮಿಯ ವಿಶೇಷ ಲೇಖನ
ಪ್ರೀತಿಯ ಓದುಗರಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಹಿಂದೂ ಧರ್ಮಗಳಲ್ಲಿ ಉಲ್ಲೇಖ ವಾಗಿರುವಂತೆ, ವಿಷ್ಣು ದೇವರ ಹತ್ತು ಅವತಾರಗಳಲ್ಲಿ ಎಂಟನೆಯ ಅವತಾರ ಶ್ರೀ ಕೃಷ್ಣನನದ್ದು. ಶ್ರಾವಣ/ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣಪಕ್ಷದ ಅಷ್ಟಮಿ ದಿವಸ ಮಥುರಾದ ಸೆರೆಮನೆಯಲ್ಲಿ ವಾಸುದೇವ ಮತ್ತು ದೇವಕಿ ನಂದನಾಗಿ ಜನಿಸಿದರೂ ಗೋಕುಲದಲ್ಲಿ ಯಶೋಧೆ ನಂದರ ಮಗನಾಗಿ ಅರಮನೆಯಲ್ಲಿ ಬೆಳೆದ ಪುರುಷೋತ್ತಮ. ನಮ್ಮ ಭಾರತದ ಹಲವೆಡೆ ಮುದ್ದು ಕೃಷ್ಣನ ಜನ್ಮ ದಿನವನ್ನು ಕೊಂಡಾಡುತ್ತಾರೆ. ಪುಟ್ಟ ಮಕ್ಕಳಿಗೆ, ಮುದ್ದು ಕೃಷ್ಣನ ಅಥವಾ ರಾಧೆಯ ಅಲಂಕಾರ ಮಾಡಿ ಅಮ್ಮಂದಿರು ಸಂಭ್ರಮಿಸುತ್ತಾರೆ. ಪುಟ್ಟ,ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬಿಡಿಸಿ,ಬಗೆಬಗೆಯ ಸಿಹಿ ತಿಂಡಿ ತಿನಿಸುಗಳೊಡನೆ “ಬೆಣ್ಣೆ” ಇಟ್ಟು ಬಾಲಕೃಷ್ಣನ ವಿಗ್ರಹ ಅಥವಾ ಫೋಟೊವಿಟ್ಟು ಅಲಂಕರಿಸಿ ಪೂಜೆ ಸಲ್ಲಿಸುತ್ತಾರೆ. ಎಳೆಯರಿಂದ ಹಿರಿಯರವರೆಗೆ ಅವರವರ ಮನಃಸ್ಥಿತಿಯ ಭಕ್ತಿಯ ರೂಪಕ್ಕೆ ತಕ್ಕಂತೆ ಆರಾಧಿಸಲ್ಪಡುವ ವೈವಿಧ್ಯಮಯ ವ್ಯಕ್ತಿತ್ವದ ದೇವ ಶ್ರೀ ಕೃಷ್ಣ, ಈತನ ಲೀಲೆ ಯಾರಿಗೆ ತಾನೆ ಇಷ್ಟ ವಾಗುವುದಿಲ್ಲ ಹೇಳಿ?

ಮಗುವಾಗಿದ್ದಾಗಲೇ ತಾಯಿಗೆ ಬ್ರಹ್ಮಾಂಡದ ದರ್ಶನ ಮಾಡಿಸಿದ ಪರಮಾತ್ಮ. ಕಷ್ಟದಲ್ಲಿ ಬಸವಳಿದಿದ್ದ ಸುಧಾಮನಿಗೆ ಐಶ್ವರ್ಯ ದಯಪಾಲಿಸಿದ ಸ್ನೇಹಿತ, ರಾಧೆಯ ಮುಖಾಂತರ ಪ್ರೀತಿ- ಪ್ರೇಮದ ಮುದ ನೀಡಿದ ಪ್ರಿಯತಮ,ಅರ್ಜುನನಿಗೆ ದಿವ್ಯ ದರ್ಶನ ನೀಡುವುದರೊಂದಿಗೆ ಜಗತ್ತಿಗೇ ಗೀತೆಯನ್ನು ಭೋದಿಸಿದ ಮಹಾಗುರು. ಎಂದೆಂದಿಗೂ ಪ್ರಸ್ತುತವಾಗಿರುವ ಶ್ರೀ ಕೃಷ್ಣನ ದಿವ್ಯ ವಾಕ್ಯ ಪರಿಪಾಲನೆ ಇಂದು ಲೋಕೋದ್ದಾರಕ್ಕೆ ಅತ್ಯವಶ್ಯಕ ವಾಗಿದೆ. ಶಿಷ್ಟರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸಿ,ಧರ್ಮವನ್ನು ಸಂಸ್ಥಾಪಿಸಲು ಈ ಭೂಮಿಯ ಲ್ಲಿ ನಿನ್ನ ಜನ್ಮವಾಗುತ್ತಿರಲಿ. ಇಂದು ನಾವೆಲ್ಲರೂ ಈ ಮಹಾಸ್ವಾಮಿಯನ್ನು ಶ್ರದ್ಧಾ- ಭಕ್ತಿಯಿಂದ ಪೂಜಿಸಿ, ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗೋಣ. ” ಪರಿತ್ರಾಣಾಯ ಸಾಧೂನಾಂ ವಿನಾಶಾಯಾಚ ದುಷ್ಕೃತಾಮ್ ,ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ ಯುಗೇ ಯುಗೇ…”.
