ಸಂಪೂರ್ಣ ಸಾಕ್ಷರತೆ ಸಾಧಿಸಲು ಪ್ರಯತ್ನಿಸಿ: ಡಾ.ಬಿ.ಸಿ.ಸತೀಶ್

ಮಡಿಕೇರಿ ಸೆ.13:-ಕೊಡಗು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣವು ಶೇ.82 ರಷ್ಟು ಇದ್ದು, ಸಂಪೂರ್ಣ ಸಾಕ್ಷರತೆ ಹೊಂದುವಂತಾಗಲು ಪ್ರಯತ್ನಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.        

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಲೋಕ ಶಿಕ್ಷಣ ಇಲಾಖೆ ವತಿಯಿಂದ ನಗರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಮತ್ತು ಸಾಕ್ಷರತಾ ಸಪ್ತಾಹ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. 

ಪ್ರತಿಯೊಬ್ಬರೂ ಓದು ಮತ್ತು ಬರೆಯುವುದನ್ನು ಕಲಿಯಬೇಕು. ಕೊಡಗು ಜಿಲ್ಲೆಯನ್ನು ಶೇ.100 ರಷ್ಟು ಸಾಕ್ಷರತಾ ಜಿಲ್ಲೆಯನ್ನಾಗಿ ಮಾಡಲು ಪ್ರತಿಯೊಬ್ಬರೂ ಕೈಜೋಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

‘ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಡಿಜಿಟಲೀಕರಣದ ಬಳಕೆಯಲ್ಲಿ ಹಿಂದೆ ಇರುತ್ತಾರೆ. ಆದ್ದರಿಂದ ಕಲಿಕೆ ನಿರಂತರವಾಗಿರುತ್ತದೆ. ಅಪ್‍ಡೇಟ್ ಮಾಹಿತಿಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು ಎಂದರು.’

‘ಸಾಕ್ಷರತಾ ಕಾರ್ಯಕ್ರಮಗಳು ಜಿಲ್ಲೆಯನ್ನು ಸಾಕ್ಷರ ಸಮೃದ್ಧ, ಸುಸ್ಥಿರ ಮತ್ತು ಅಭಿವೃದ್ಧಿ ನಾಡನ್ನಾಗಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ.

ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರ ಮನೆ ಹಾಗೂ ಮನವನ್ನು ತಲುಪಿ, ಮಹಿಳೆ ಮತ್ತು ಶಿಕ್ಷಣ ವಂಚಿತ ವರ್ಗದವರ ಕಲಿಕೆಗಾಗಿ ಸಾಕ್ಷರತಾ ಕಾರ್ಯಕ್ರಮವು ಜನಾಂದೋಲನಗೊಳ್ಳಲು ಕಾಯಾ, ವಾಚಾ, ಮನಸಾ ಪಾಲ್ಗೊಂಡು ಸೇವೆ ಸಲ್ಲಿಸುವ ಸಂಕಲ್ಪ ಮಾಡಿಕೊಂಡಿದ್ದೇನೆ.

ಅನಕ್ಷರಸ್ಥರೆಲ್ಲರೂ ಅಕ್ಷರ ಕಲಿತು ಸಾಕ್ಷರಸ್ಥರಾಗಿ ಕೌಶಲಾಭಿವೃದ್ಧಿ ಹೊಂದಲು ಹಾಗೂ ಕಲಿಯುತ್ತಿರುವ ಸಮಾಜದ ನಿರ್ಮಾಣಕ್ಕಾಗಿ ನಾನು ಕಲಿತ ಋಣವನ್ನು ಕಲಿಸಿ ತೀರಿಸುತ್ತೇನೆಂದು ಪ್ರಮಾಣೀಕರಿಸುತ್ತೇನೆ ಎಂದು ಜಿಲ್ಲಾಧಿಕಾರಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.’
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ ಕೊಡಗು ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಒಂದು ಹೆಜ್ಜೆ ಮುಂದೆ ಇದೆ. ಆದರೆ ಹಾಡಿಗಳಲ್ಲಿ ಇನ್ನೂ ಸಹ ಸಾಕ್ಷರತೆ ಪ್ರಮಾಣ ಹೆಚ್ಚಿಸಬೇಕು ಎಂದರು. 

ಜಿಲ್ಲೆಯಲ್ಲಿ ಇನ್ನೂ 45 ಸಾವಿರ ಜನರು ಸಾಕ್ಷರತೆ ಪಡೆಯಬೇಕಿದೆ. ಆ ನಿಟ್ಟಿನಲ್ಲಿ ಹೊಸ ಸರ್ವೇ ಮಾಡಲಾಗುತ್ತಿದೆ ಎಂದರು.

ಕಲಿಕೆಗೆ ವಯಸ್ಸು ಮುಖ್ಯ ಅಲ್ಲ. ಮೂಲ ಅಕ್ಷರ ಕಲಿಕೆಗೆ ಒತ್ತು ನಿಡಬೇಕು. ಎಲ್ಲರೂ ಎಲ್ಲರಿಗಾಗಿ ಕಲಿಸಬೇಕು. ಇದರಿಂದ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಬಹುದು. ಗ್ರಾ.ಪಂ.ಮಟ್ಟದಲ್ಲಿ ಕಲಿಕಾ ಕೇಂದ್ರಗಳನ್ನು ಆರಂಭಿಸಿ ಹೆಚ್ಚಿನ ಸಾಕ್ಷರತೆಗೆ ಒತ್ತು ನೀಡಲಾಗುವುದು ಎಂದು ಜಿ.ಪಂ.ಸಿಇಒ ಅವರು ತಿಳಿಸಿದರು. 

ಜಿಲ್ಲಾ ಸಾಕ್ಷರತಾ ಅಧಿಕಾರಿ ಎಂ.ಕೃಷ್ಣಪ್ಪ ಅವರು ಮಾತನಾಡಿ 1965 ರಲ್ಲಿ ಇರಾನ್‍ನ ಟೆಹರಾನ್‍ನಲ್ಲಿ ಅನಕ್ಷರತೆಯ ನಿರ್ಮೂಲನೆ ಕುರಿತು ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಸಾಕ್ಷರತಾ ದಿನದ ಕುರಿತು ಕಲ್ಪನೆ ಮೂಡಿಬಂದಿತು. ಶಿಕ್ಷಣವನ್ನು ಎಲ್ಲರಿಗೂ ತಲುಪಿಸುವ ಮಹತ್ತರ ಉದ್ದೇಶ ಮತ್ತು ಗುರಿಯೊಂದಿಗೆ ಯುನೆಸ್ಕೋ ಸೆಪ್ಟೆಂಬರ್, 08, 1966 ರಲ್ಲಿ ಸಾಕ್ಷರತಾ ದಿನ ಆಚರಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.

1988 ರಲ್ಲಿ ಸಾಕ್ಷರತಾ ಭಾರತ ಆಂದೋಲನ ಹಮ್ಮಿಕೊಳ್ಳಲಾಯಿತು. ಹಾಗೆಯೇ ರಾಜ್ಯದಲ್ಲಿ 90 ರ ದಶಕದಲ್ಲಿ ಸಾಕ್ಷರತಾ ಆಂದೋಲನವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಆ ನಿಟ್ಟಿನಲ್ಲಿ ಸೆಪ್ಟೆಂಬರ್ 08 ರಿಂದ 14 ರವರೆಗೆ ಲೋಕ ಶಿಕ್ಷಣ ನಿರ್ದೇಶನಾಲಯ ವತಿಯಿಂದ ಸಾಕ್ಷರತಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರಾದ ವೇದಮೂರ್ತಿ, ಜಿ.ಪಂ.ಉಪ ಕಾರ್ಯದರ್ಶಿ ಜಿ.ಧನರಾಜು, ಯೋಜನಾ ನಿರ್ದೇಶಕರಾದ ಜಗದೀಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಜಿಲ್ಲಾ ಉಪ ಸಮನ್ವಯಾಧಿಕಾರಿ ಶೋಭ, ಶಿಕ್ಷಣಾಧಿಕಾರಿ ದೊಡ್ಡೇಗೌಡ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ, ಚಿತ್ರಕಲಾ ಶಿಕ್ಷಕ ಉ.ರಾ.ನಾಗೇಶ್ ಕಾರ್ಯಕ್ರಮ ಸಹಾಯಕರಾದ ಸಿ.ಕೆ.ರಾಜೇಶ್ವರಿ ಇತರರು ಇದ್ದರು.

error: Content is protected !!