fbpx

ಸಂಪಾದಕರ ಅಂಕಣ: ‘ಸತ್ಯ ದರ್ಶನ’

‘Make In India’ ‘Boycott China Products’ಕ್ಕೆ ಪರ್ಯಾಯ ಪರಿಹಾರವಾಗಬಲ್ಲುದೇ...!?

ಇದು ಮಾರ್ಮಿಕ ವಾಸ್ತವದ ಅರಿಕೆ

ಪ್ರತಿ ಭಾನುವಾರ ಸಂಪಾದಕ ರಜತ್ ರಾಜ್ ಡಿ.ಹೆಚ್ ಅವರು ಇನ್ನು ಮುಂದೆ ಸತ್ಯ ದರ್ಶನ (ಇದು ಮಾರ್ಮಿಕ ವಾಸ್ತವದ ಅರಿಕೆ) ಎಂಬ ಅಂಕಣವನ್ನು ಬರೆಯಲಿದ್ದಾರೆ.

ಚೀನಾ ಮೇಲೆ ಇಂದಿಗೂ ಭಾರತ ಅತಿಯಾಗಿ ಅವಲಂಭಿತವಾಗಿದೆ. 2019-20ರ ಸಾಲಿನಲ್ಲಂತೂ ಒಟ್ಟು 81ಬಿಲಿಯನ್ ಡಾಲರ್ ಭಾರತ-ಚೀನಾ ನಡುವಣ ಆದ ವ್ಯಾಪಾರ ವಹಿವಾಟಿನಲ್ಲಿ ನಮ್ಮ ಆಮದು 65 ಬಿಲಿಯನ್ ಡಾಲರ್ ನಷ್ಟಿತ್ತು. ಅಂದರೆ ಅದು ಅಜ-ಗಜಾಂತರ ವ್ಯತ್ಯಾಸ. ಆದರೂ ನಾವೀಗ ‘Boycott China  Products’ಎಂಬ ಅಭಿಯಾನ ಜೋರಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಎನ್‌.ಡಿ.ಎ ಸರಕಾರದ ಮಹತ್ವಾಕಾಂಕ್ಷಿ ಕನಸು ‘Make in inda’ದ ಕಥೆ ಏನಾಗಿದೆ? ಎಂದು ಗಮನಿಸಲೇ ಬೇಕಿದೆ.

ಸೆಪ್ಟಂಬರ್ 24, 2014ರಂದು ಪ್ರಧಾನಿ ನರೇಂದ್ರ ಮೋದಿ ಅವರು ‘Make In India’ ಎಂಬ ಹೊಸ ಹೆಜ್ಜೆಯ ಆರಂಭಕ್ಕೆ ಹೊಸ್ತಿಲ ಪೂಜೆ ಮಾಡಿದರು. ಈ ಯೋಜನೆ ಅನುಸಾರ ಒಟ್ಟು ದೇಶೀಯ ಉತ್ಪಾದನೆಯನ್ನು 16%ದಿಂದ 25%ನಷ್ಟು 2025ರ ಹೊತ್ತಿಗೆ ಹೆಚ್ಚಿಸುವ ಗುರಿಯೇ ಅತಿ ಮುಖ್ಯವಾಗಿತ್ತು. ಇದರ ಒಳಗೆ 25 ಆರ್ಥಿಕತೆಯ ಕ್ಷೇತ್ರಗಳನ್ನು ಒಳಪಡಿಸಲಾಗಿತ್ತು.

ಇನ್ನೂ ಈ ಯೋಜನೆ ಪೂರ್ಣಗೊಳ್ಳಲು ಐದು ವರ್ಷಗಳೇ ಬಾಕಿ ಇವೆ. ಈ ಆರು ವರ್ಷಗಳಲ್ಲಿ ಮೇಕ್ ಇನ್ ಇಂಡಿಯಾದ ಪ್ರಗತಿಯ ಬಗ್ಗೆ ಗಮನಿಸುವುದಾದರೆ ಕೊಂಚ ಗಾಬರಿ ಆಗೇ ಆಗುತ್ತದೆ.

° ಭಾರತದ ವಿದೇಶಿ ಬಂಡವಾಳ ಹೂಡಿಕೆ 2013-14ರಲ್ಲಿ 16 ಬಿಲಯನ್ ಡಾಲರ್ಸ್ ಇದ್ದಿದ್ದು, 2015-16ರಲ್ಲಿ 36 ಬಿಲಿಯನ್ ಡಾಲರ್ಸ್ ಆಗಿದೆ. ಆದರೆ ಅದು ಭಾರತದ ಕೈಗಾರಿಕೋದ್ಯಮಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ.

°ಜಾಗತಿಕ ರಫ್ತಿನಲ್ಲಿ ಭಾರತ 2%ದಷ್ಟು ಪ್ರಗತಿಯಲ್ಲಿದ್ದರೆ, ಚೀನಾ 18%ದಷ್ಟು ಹೊಂದಿದೆ.

°ಈ ಆರು ವರ್ಷಗಳ ಕಾಲವೂ ನೋಡುವುದಾದರೆ ಚೀನಾದಿಂದ ನಮ್ಮ ಆಮದಿನ ಪಾಲು ಜಾಸ್ತಿಯಾಗುತ್ತಲೇ ಹೋಗಿದೆಯೇ ಹೊರತು, ಕಡಿಮೆ ಆಗಿಲ್ಲ.‌

‘ಆತ್ಮ ನಿರ್ಭರ್ ಭಾರತ’ವೆಂಬ ಸ್ವಾಭಿಮಾನಿ ರಾಷ್ಟ್ರದ ಕನಸು ನಿಜವಾಗುವುದು ಸುಲಭವೇ…!?’


ಜಪಾನ್ ಅಲ್ಲಿ ಅಮೇರಿಕಾ ಅಣು ಬಾಂಬ್ ದಾಳಿ ನಡೆಸಿದ ನಂತರ ಜಪಾನ್ ಅಮೇರಿಕಾದಿಂದ ಆಮದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಒಂದು ಸೂಜಿ ಮೊನೆಯನ್ನೂ ಕೂಡ ಅಮೇರಿಕಾಗೆ ಹಣ ಕೊಟ್ಟು ಕೊಳ್ಳುವ ಚಾಳಿಯನ್ನು ಮುಂದುವರೆಸಲಿಲ್ಲ ಜಪಾನ್.

ಜಪಾನಿಯರ ದೇಶಭಕ್ತಿಗೆ ಉತ್ತಮ ನಿದರ್ಶನ ನಮಗೆ ಸೋವಿಯತ್ ಒಕ್ಕೂಟದ ಮಾಜಿ ಅಧ್ಯಕ್ಷ ಮೈಕಲ್ ಗೋರ್ಬಚೆವ್ ಅವರ ಆತ್ಮ ಕಥೆಯಲ್ಲಿ ಸಿಗುತ್ತದೆ. ಅದರಲ್ಲಿ ಅವರು ಹೀಗೆ ಬರೆಯುತ್ತಾರೆ, “ಆಗ ಜಪಾನ್ ಎರಡನೇ ಮಹಾ ಯುದ್ಧದಿಂದ ಬಾರಿ ಆರ್ಥಿಕ ನಷ್ಟದಲ್ಲಿ ಇದ್ದ ಕಾಲವದು. ನಾನು ಯುರೋಪ್ ಅಲ್ಲಿ ಓದುತ್ತಿರುವಾಗ ಇಬ್ಬರು ಜಪಾನಿಯರು ನನ್ನ ಸಹಪಾಠಿಗಳಾಗಿದ್ದರು. ಆ ಜಪಾನಿ ವಿದ್ಯಾರ್ಥಿಗಳು ಟಿಪ್ಪಣಿ ಬರೆಯಲು ತಮ್ಮ ಪೆನ್ಸಿಲ್ ರೆಡಿ ಮಾಡಿ ಇಟ್ಟುಕೊಳ್ಳುತ್ತಿದ್ದರು. ಆಗೆಲ್ಲಾ ಜಪಾನಿನ ಪೆನ್ಸಿಲ್ ಕಡಿಮೆ ಗುಣಮಟ್ಟದಲ್ಲಿ ಇರುತ್ತಿದ್ದರಿಂದ ಅದರ ಸೀಸ ಆಗಾಗ್ಗೆ ಮುರಿದು ಹೋಗುತ್ತಿತ್ತು.”

ಒಂದು ದಿನ ಇದನ್ನು ಗಮನಿಸಿ, ಕಾಳಜಿಯಿಂದ ಎಲ್ಲಾ ಗೆಳೆಯರು ಸೇರಿ, ‘ನೀನ್ಯಾಕೆ  ಇಂಗ್ಲೆಂಡಿನಲ್ಲಿ ತಯಾರಿಸಿದ ಪೆನ್ಸಿಲ್ ಬಳಸಬಾರದು. ಅವು ಗುಣಮಟ್ಟದಿಂದ ಕೂಡಿವೆ. ಹಾಗು ದರವೂ ಕಡಿಮೆ ಇದೆ’ ಎಂದು ಸಲಹೆ ನೀಡಿದೆವು.

ಆಗ ಆ ಜಪಾನಿ ವಿದ್ಯಾರ್ಥಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು,”ನನ್ನ ದೇಶ ತಯಾರಿಸಿದ ವಸ್ತುಗಳನ್ನು ನಾನೇ ಉಪಯೋಗಿಸದಿದ್ದರೆ, ಇನ್ನು ಮತ್ತಾರು ಕೊಳ್ಳುತ್ತಾರೆ?! ನಮ್ಮ ಸ್ವದೇಶಿ ಉದ್ಯಮಗಳು ಉದ್ಧಾರವಾಗುವುದು ಹೇಗೆ? ನನ್ನ ರಾಷ್ಟ್ರ ಸ್ವಾವಲಂಬನೆಯ ಹಾದು ಹಿಡಿಯೋದು ಯಾವಾಗ? ಇವತ್ತು ನಮ್ಮ ದೇಶದ ಉತ್ಪನ್ನಗಳು ಕಳಪೆ ಇದ್ದು, ದರಗಳು ಜಾಸ್ತಿ ಇರಬಹುದು… ಆದರೆ ಮುಂದೊಂದು ದಿನ ವಿಶ್ವ ನಮ್ಮ ಉತ್ಪನ್ನಗಳನ್ನೇ ಬಳಸಬಹುದು.”ಎಂದು ಅಛಲತೆಯೊಂದಿಗೆ ನುಡಿದಿದ್ದ.

ಆದರೆ ನಮ್ಮಲ್ಲಿ ಆ ಪರಿಸ್ಥಿತಿಯೂ ಇಲ್ಲ, ಮನಸ್ಥಿತಿಯೂ ಇಲ್ಲ. ನಾವು ಅಗ್ಗದ ವಸ್ತು ಎಂದು ಚೀನಾ ತಯಾರಿಸಿದ ಉತ್ಪನ್ನಗಳನ್ನೇ ಕೊಂಡು ಕೊಂಡಾಡುತ್ತೇವೆ. ಭಾರತ ಹಾಗು ಭಾರತೀಯರು ಇಂದು ಚೀನಾದ ವಿದ್ಯುತ್ ಉಪಕರಣಗಳನ್ನು, ಬಟ್ಟೆ ಹಾಗು ನೇಕಾರ ಉದ್ಯಮಗಳನ್ನು, ಆಟಿಕೆ, ಔಷಧ, ಕಾರ್ ಬಿಡಿಭಾಗಗಳು ಸೇರಿದಂತೆ ಇ-ಕಾಮಸ್೯, OTT Platformಗಳಲ್ಲೂ ಚೀನಾವನ್ನು ಲಾಭದಲ್ಲಿ ಇಟ್ಟು, ಅವರನ್ನೇ ಬೆಳೆಸುತ್ತಿದ್ದೇವೆ. ಹಾಗೆ ಅವರು ತೀರಾ ಅಗ್ಗದ ವಸ್ತು ಹಾಗು ಸೇವೆಗಳನ್ನು ಕೊಡಲು ಹಲವಾರು ಕಾರಣಗಳೂ ಇವೆ. ಅವುಗಳ ಕುರಿತು ಗಮನ ಹರಿಸುವುದಾದರೆ,

°ಕೆಟ್ಟ ಕೆಂಪು ಕಮ್ಯುನಿಷ್ಟ್ ಆಡಳಿತದ ಉತ್ಪಾದನಾ ನೀತಿ


ಕೆಂಪು ಕಮ್ಯುನಿಸ್ಟ್ ಆಡಳಿತವು ಕಾರ್ಮಿಕರ ಶ್ರೇಯಾಭಿವೃದ್ಧಿಯ ಮೂಲ ಉದ್ದೇಶವನ್ನು ಬಿಟ್ಹಾಕಿ, ದೇಶದ ಬಹುಪಾಲು ಜನಸಂಖ್ಯೆ ಕಾರ್ಮಿಕರಾಗಿ ಕರುಣಾಜನಕವಾಗಿ ಜೀವನ ಪೂರ್ತಿ ದುಡಿಸುವ ನೀತಿಯನ್ನು ಅನುಸರಿಸುತ್ತಿದೆ. ಅದಕ್ಕೆ ‘Reform through labour’ (ಕಾರ್ಮಿಕರ ಮೂಲಕ ಕ್ರಾಂತಿ) ಎಂಬುದನ್ನು ಜಾರಿಗೆ ತಂದಿತು. ಅದಕ್ಕೆ 1959ರಲ್ಲಿ ಚೀನಾದಲ್ಲಿ ‘Leap forward’ ಎಂಬ ನೀತಿಯೂ ಚೀನಾದಲ್ಲಿ ಬದಲಾವಣೆ ತಂದು ಪುಷ್ಠಿ ನೀಡಿತ್ತು. ಒತ್ತಾಯ ಪೂರ್ವಕವಾಗಿ ಬಲತ್ಕಾರದಿಂದ ಬಹುಪಾಲು ಜನರನ್ನು ಚೀನಾ ಕಾರ್ಮಿಕರಾಗಲು ಪ್ರೇರೇಪಿಸಿತು ಮತ್ತು ಆದೇಶಿಸಿತು. ಅಲ್ಲಿಂದೀಚೆಗೆ ಜನರಿಗೆ ಸ್ವಾತಂತ್ರ್ಯ ಸ್ವಾಭಿಮಾನವೆಲ್ಲಾ ಬಿಟ್ಟು ದೇಶಕ್ಕಾಗಿ ಕಮ್ಯುನಿಷ್ಟರು ಹೇಳುವಂತೆ ದೈನೀಯವಾಗಿ ದುಡಿಯುವ ದೌರ್ಭಾಗ್ಯ ಒದಗಿ ಬಂದಿತು.

°ಲೆಯೊಗಾಯ್ ಖೈದಿಗಳ ಕಾರ್ಮಿಕ ಶಿಬಿರಗಳು


ಚೀನಾದ ಹಲವೆಡೆ ಲಿಯೊಗಾಯ್ ಎಂಬ ಹೆಸರಿನ ಖೈದಿಗಳ ಕಾರ್ಮಿಕ ಶಿಬಿರಗಳಿದ್ದು, ಅಲ್ಲಿ ಅತಿ ಹೆಚ್ಚಿನ ಉತ್ಪಾದನಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಅಲ್ಲಿ ವ್ಯವಸ್ಥೆಯ ವಿರುದ್ಧ ರೆಬೆಲ್ ಆದ ಕ್ರಾಂತಿಕಾರಿಗಳನ್ನು, ರಾಜಕೀಯ ವಿರೋಧಿಗಳನ್ನು, ಸಣ್ಣ ಪುಟ್ಟ ಕಳ್ಳಕಾಕರನ್ನು, ಧಾರ್ಮಿಕವಾಗಿ ಆಧ್ಯಾತ್ಮದ ಗೀಳು ಹೊಂದಿರುವವರನ್ನು ಸೆರೆಯಾಳುಗಳನ್ನಾಗಿಸಿ, ಅವರಿಂದ ನಿರ್ದಾಕ್ಷಿಣ್ಯತೆಯಿಂದ ಅತಿಯಾದ ಕೆಲಸ ಮಾಡಿಸಲಾಗುತ್ತಿದೆ. ಅವರ ಜೀವನ ಪೂರ್ತಿ ಕೂಳಿಗಾಗಿ ಕೂಲಿ ಮಾಡುವ ಜೀತದಾಳುಗಳಂತೆ‌ ಆಗಿ ಶೋಚನೀಯ ಗತಿಯಲ್ಲಿದೆ. ಅವರನ್ನು ಸದಾ ಸರಕಾರ ಹೀನಾಮಾನವಾಗಿ ಹಿಂಸಿಸಿ, ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇಂತಹ ಲಿಯೊಗಾಯ್ ಖೈದಿಗಳ ಕಾರ್ಮಿಕ ಶಿಬಿರಗಳನ್ನು ಚೀನಾದ ಹಲವೆಡೆ ಸ್ಥಾಪಿಸಿ, ಅಲ್ಲಿ ನಿರಂತರ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಲೇ ಇದೆ, ಉತ್ಪಾದನೆಯಲ್ಲಿ ಹೆಚ್ಚಿನ ನಾಗಾಲೋಟವನ್ನು ಮಾಡುತ್ತಲೇ ಇದೆ ಚೀನಾ!

°ಶಾಲೆಗಳಲ್ಲಿ ಗುತ್ತಿಗೆ ಆಧಾರಿತ ಯೋಜನೆಗಳ ಜಾರಿ


ಚೀನಾ ಅದರ ಶಾಲೆಗಳಲ್ಲಿ ಮಕ್ಕಳಿಗೆ ಕೇವಲ ಶಿಕ್ಷಣದೊರೆಯಿವಂತೆ  ಮಾಡದೆ, ಅವರ ಮನಸ್ಸುಗಳನ್ನು ಆಳುವ ಕೆಲಸವನ್ನು ಅವರು ಬಾಲ್ಯಾವಸ್ತೆಯಲ್ಲಿ ಇದ್ದಾಗಲೇ ಮಾಡುವ ಕುತಂತ್ರ ಮಾಡುತ್ತದೆ. ಶಾಲೆಗಳೊಂದಿಗೆ ಕಮ್ಯುನಿಷ್ಟ್ ಸರಕಾರವು ಗುತ್ತಿಗೆ ಆಧಾರಿತ ಉತ್ಪಾದನಾ ಒಪ್ಪಂದ ಮಾಡಿಕೊಂಡು ಅದಕ್ಕಾಗಿ ವಸ್ತುಗಳ ಉತ್ಪಾದನೆಯನ್ನು ವಿದ್ಯಾರ್ಥಿಗಳಿಂದ ಮಾಡಿಸುತ್ತದೆ. ಹಾಗೆ ಅಲ್ಲಿ ದಯೆ, ಕರುಣೆ ಇಲ್ಲದೆ ಮಕ್ಕಳನ್ನೂ ಕೂಡ ಉತ್ಪಾದನಾ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವ ಚೀನಾ,  ಅವರನ್ನು ಆಜನ್ಮ ಪರಿಯಂತ ಗುಲಾಮಗಿರಿಯ ಸೋಗಿನಲ್ಲಿ ಬದುಕುವ ಪರಿಗೆ ಸಿದ್ಧ ಪಡಿಸುತ್ತದೆ.

°ಉದ್ಯೋಗಿಯಾಗಲೂ ಸಹ ಹಣ ತೆತ್ತು ಅನುಮತಿ ಪಡೆಯಬೇಕು


ಜನ್ಮ ಪರಿಯಂತ ಕಾರ್ಮಿಕನಾಗಿ ಕರುಣಾಜನಕವಾಗಿ ದುಡಿಯಲು ಉದ್ಯೋಗಕ್ಕೆ ಸರಕಾರದಿಂದ ಅನುಮತಿ ಪಡೆಯಬೇಕು. ಅನುಮತಿಗಾಗಿ ಹೆಚ್ಚಿನ ಹಣದ ಮೊತ್ತವನ್ನು ಸರಕಾರಕ್ಕೆ ಕಟ್ಟಬೇಕು. ಅದನ್ನು ಸಾಲದಂತೆ ಮಾಡಿ, ಸರಕಾರಕ್ಕೆ ಪ್ರತಿ ತಿಂಗಳ ಸಂಬಳದಲ್ಲಿ ನೀಡಬೇಕು.

°ಅತಿಯಾದ ಷೋಷಣೆ, ಹಿಂಸೆಯನ್ನು ಸಹಿಸಿಕೊಳ್ಳಬೇಕು


ಚೀನಾದ ಬಹುತೇಕ ಜನಸಂಖ್ಯೆ ಅವರ ಜನ್ಮ ಪರ್ಯಂತ ಕತ್ತೆಗಳಂತೆ ದೇಶಕ್ಕಾಗಿ ದುಡಿದರೂ ಅಲ್ಲಿನ ಸರಕಾರ, ನಿರಂತರವಾಗಿ ವಿವಿಧ ರೀತಿಯಲ್ಲಿ ಪೀಡಿಸುತ್ತದೆ. ಪ್ರತಿ ಪ್ರಜೆಯ ಮೇಲೂ ಬೇಹುಗಾರಿಕೆ ನಡೆಸುತ್ತಿರುತ್ತದೆ. ಕಡಿಮೆ ಸಂಬಳ ನೀಡುವುದರೊಂದಿಗೆ ಕ್ಷುಲ್ಲಕ ಕಾರಣಕ್ಕೂ ದಂಡ ಹಾಕುತ್ತದೆ, ಅತಿಯಾದ ಕೆಲಸದ ಸಮಯ ವಿಧಿಸುತ್ತದೆ. ಪ್ರತಿಯೊಬ್ಬರ ಮೇಲೂ ದೈಹಿಕ ನಿಯಂತ್ರಣವನ್ನು ಹೇರುತ್ತದೆ. ಯಾರಾದರೂ ಕೊಂಚ ತಿರುಗಿ ಬೀಳುವ ಲಕ್ಷಣ ಕಂಡು ಬಂದರೂ ಅವರನ್ನು ಒಂದೋ ಕೊಲ್ಲುತ್ತಾರೆ, ಕಾಣೆ ಮಾಡುತ್ತಾರೆ, ಅಥವಾ ಲಿಯೊಗಾಯ್ ಖೈದಿಗಳ ಶಿಬಿರಕ್ಕೆ ಹಾಕಿ ಅವರ ಹಣೆಬರಹವನ್ನೇ ಹೈರಾಣಾಗಿಸಿ ಬಿಡುತ್ತಾರೆ ಅಲ್ಲಿನ ಆಡಳಿತ ಶಾಹಿ ಕಮ್ಯುನಿಷ್ಟರು.

°ಅಧಿಕಾರದ ವಿಕೇಂದ್ರೀಕರಣ ಕೂಡ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ


ಚೀನಾದ ಅಧಿಕಾರದ ವಿಕೇಂದ್ರೀಕೃತ ಆಡಳಿತದ  ಪರಿಯೂ ಕೂಡ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ. ಅಲ್ಲಿನ ಅಧಿಕಾರಿ ವರ್ಗ ಹಾಗು ಉದ್ಯಮಶೀಲ ಮಾಲಿಕರ ವರ್ಗವು ಚೀನೀ ಜನರನ್ನು ಕಮ್ಯುನಿಷ್ಟರ ಬಲದೊಂದಿಗೆ ಹೇಗೆ ಬೇಕೋ ಹಾಗೆ ಬೇಕಾ ಬಿಟ್ಟಿ ಬಳಸಿಕೊಂಡು ಲಾಭದಾಯಕವಾಗಿ ಐಶಾರಾಮದಲ್ಲಿ ಬದುಕುತ್ತವೆ.

ಚೀನಾ ಅದು ಉತ್ಪಾದನೆಯಲ್ಲಿ ಈವತ್ತು ಜಗತ್ತಿನ 2ನೇ ಸ್ಥಾನದಲ್ಲಿ ನಿಂತಿದೆ ಎಂದರೆ ಅಲ್ಲಿನ ಪ್ರಜೆಗಳ ಕಣ್ಣೀರಿನ ಶಾಪವನ್ನು ಪಡೆದುಕೊಂಡೇ ಗಳಿಸಿದೆ ಎಂದು ಅರ್ಥ. ಅಲ್ಲಿನ ನಿಶ್ಕರುಣಿ ಕಮ್ಯುನಿಷ್ಟ್ ವ್ಯವಸ್ಥೆಯು ಪ್ರಜೆಗಳ ಸ್ವಾತಂತ್ರ್ಯಗಳ ಹರಣ ಮಾಡಿ, ಗುಲಾಮರಂತೆ ಜೀತದಾಳುಗಳಂತೆ ಬಳಸಿ, ತಿರುಗಿ ಬೀಳುತ್ತಾರೆಂಬ ಮುನ್ಸೂಚನೆ ಸಿಕ್ಕಿದೊಡನೆ ಅದನ್ನು ಅಲ್ಲೇ ಧಮನ ಮಾಡುವ ಹುನ್ನಾರವನ್ನು ನಡೆಸುತ್ತಲೇ ಇದೆ. ಯಾವ ಮಾನವ ಹಕ್ಕು ಇಲ್ಲ, ವಾಕ್ ಸ್ವಾತಂತ್ರ್ಯವೂ ಇಲ್ಲ. ಸರಕಾರ, ಉದ್ಯಮಿ, ಅಧಿಕಾರಿ, ಸೇನೆ ಮೆರೆಯುತ್ತದೆ, ಆದೇಶಿಸುತ್ತದೆ ಅದನ್ನು ಚಾಚು ತಪ್ಪದೆ ಪ್ರಜೆಗಳು ಪಾಲಿಸಬೇಕು. ಅಷ್ಟೇ ಎಂದರೆ ಅಷ್ಟೇ.

ಆದರೆ ನಮ್ಮ ಭಾರತದಲ್ಲಿ ಪ್ರಜೆಗಳೇ ಪ್ರಭು ಎಂದು ಕಾಣಲಾಗುತ್ತದೆ. ಇಲ್ಲಿ ಯಾರ ಮಾತು ಯಾರೂ ಕೇಳುವುದಿಲ್ಲ. ಸ್ವದೇಶಿ ಉದ್ಯಮಗಳನ್ನು ಬೆಳೆಸುವ ಮಾತು ಪಕ್ಕಕ್ಕೆ ಇಡೋಣ, ಇಲ್ಲಿ ‘ಭಾರತ್‌ ಮಾತಾ ಕಿ ಜೈ’ ಎಂದರೂ ಕೂಡ ಹಲವು ಪ್ರಜೆಗಳ ಅಕ್ಷೇಪ ಖಂಡನೆ ಎದುರಿಸಬೇಕಾಗುತ್ತದೆ. ‘ಬದುಕಿ ಬದುಕಲು ಬಿಡಿ’ ಎಂಬ ಮಾನವತಾವಾದ ನಮ್ಮದು. ‘ಹತ್ತು ಅಪರಾಧಿಗಳಿಗೆ ಶಿಕ್ಷೆ ಆಗದಿದ್ದರೂ ತೊಂದರೆ ಇಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು’ ಎಂಬ ಉದಾರತಾವಾದ ನಮ್ಮ ನೆಲದ ಕಾನೂನಿನದ್ದು. ವ್ಯವಸ್ಥೆ ಇಂತದನ್ನು ಪಾಲಿಸು ನೀನು ಎಂದರೆ ಯಾಕೆ? ಎಂಬ ಪ್ರಶ್ನೆ ಎತ್ತುವ ಜಾಯಮಾನ ನಮ್ಮದು. ವ್ಯವಸ್ಥೆ ‘ನೀನು’ ಎಂದರೆ, ಜನ ‘ನಿನ್ನಪ್ಪ’ ಎನ್ನುವ ಮಟ್ಟಕ್ಕೆ ಮಿತಿ ಮೀರಿದ್ದಾರೆ. ಅಗ್ಗದ ಚೀನಾ ವಸ್ತುವಿನಿಂದ ಹಣ ಉಳಿತಾಯ ಆದರೆ ಸಾಕು, ಸ್ವದೇಶಿ ವಸ್ತು, ವಸ್ತುವಿನ ಗುಣಮಟ್ಟ ಹಾಗು ಬಾಳಿಕೆಗಳ ಅಂಶವೆಲ್ಲಾ ನಮಗೆ ನಗಣ್ಯ. ಆದರೂ ನಾವು ಜೋರಾಗಿ ಬೀದಿಯಲ್ಲಿ ನಿಂತು ‘Boycott China Products’ ಎಂದು ಪ್ರತಿಭಟಿಸಿ, ಪ್ರಚಾರ ತೆಗೆದುಕೊಳ್ಳಲು ಇಚ್ಛಿಸುತ್ತೇವೆ. ‘Make In India’ ಬಗ್ಗೆ‌ ಪ್ರಶ್ನಿಸಲು ಮತ್ತು ಆಳವಾಗಿ ವಿಶ್ಲೇಷಿಸಲು ಹಿಂಜರಿಯುತ್ತೇವೆ. ಹೀಗಾದರೆ ‘Atma Nirbhar Bharath’ ಕನಸು ಸಾಕಾರಗೊಳ್ಳಲು ಸಾಧ್ಯವೇ? ಚೀನಾದಂತಹ ದೈತ್ಯ‌ ಉತ್ಪಾದನಾ ವಲಯದ ರಾಕ್ಷಸನ ಮಟ್ಟಕ್ಕೆ ನಮ್ಮ ದೇಶ ಬೆಳೆಯಲು ಈ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಜೊತೆಯಾಗಬಲ್ಲುದೇ? ಎಲ್ಲವೂ ಚಿಂತನಾರ್ಹ ಹಾಗು ಯೋಚಿಸಬೇಕಾದ ವಿಚಾರವೇ ಸರಿ…ನೀವೇನಂತೀರಿ?

ರಜತ್ ರಾಜ್ ಡಿ.ಹೆಚ್, ಸಂಪಾದಕರು

error: Content is protected !!