fbpx

ಸಂಘಟಿತರಾಗಿ ಸಮಾಜವನ್ನು ಮುನ್ನಡೆಸಲು ಕರೆಮಕ್ಕಂದೂರು ಗೌಡ ಸಮಾಜದ ಮಹಾಸಭೆ – ಸನ್ಮಾನ

ಮಡಿಕೇರಿ,ಏ.೧೧: ಜನಾಂಗ ಬಾಂಧವರಿಗಾಗಿ ಸ್ಥಾಪನೆ ಮಾಡಿರುವ ಸಮಾಜವನ್ನು ಎಲ್ಲರೂ ಸಂಘಟಿತರಾಗಿ ಉತ್ತಮ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗುವಂತೆ ಮಕ್ಕಂದೂರು ಗೌಡ ಸಮಾಜದ ಸ್ಥಾಪಕ ಅಧ್ಯಕ್ಷ, ಹಿರಿಯ ಸಹಕಾರಿ ಕುಂಬಗೌಡನ ಉತ್ತಪ್ಪ ಕರೆ ನೀಡಿದರು.
ಮಕ್ಕಂದೂರು ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆದ ಗೌಡ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಮಕ್ಕಂದೂರು ವಿಭಾಗದಲ್ಲಿ ಅಧಿಕ ಸಂಖ್ಯೆಯಲ್ಲಿರುವ ಗೌಡ ಜನಾಂಗ ಬಾಂಧವರನ್ನು ಒಗ್ಗೂಡಿಸುವ ಸಲುವಾಗಿ ಗೌಡ ಸಮಾಜ ಸ್ಥಾಪನೆ ಮಾಡಲಾಗಿದೆ. ಹಲವು ಹಿರಿಯರ ಶ್ರಮ ಇದರಲ್ಲಿ ಅಡಗಿದೆ. ಸಮಾಜಕ್ಕಾಗಿ ಸ್ವಂತ ಜಾಗದಲ್ಲಿ ನಿವೇಶನ ನೀಡಿದ್ದು, ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಭಿವೃದ್ಧಿ ಪಡಿಸಿಕೊಂಡು ಮುನ್ನಡೆಯುವಂತೆ ಸಲಹೆ ಮಾಡಿದರು.

ಅತಿಥಿಯಾಗಿದ್ದ ನಿವೃತ್ತ ಅಬಕಾರಿ ನಿರೀಕ್ಷಕರಾದ ಸಬ್ಬಂಡ್ರ ಕುಶಾಲಪ್ಪ ಮಾತನಾಡಿ ದೂರಾಲೋಚನೆಯೊಂದಿಗೆ ಎಲ್ಲರ ಶ್ರಮದಿಂದ ಗೌಡ ಸಮಾಜ ನಿರ್ಮಾಣ ಮಾಡಲಾಗಿದೆ. ಕಟ್ಟಡದಲ್ಲಿ ಒಂದಿಷ್ಟು ಕೆಲಸ ಕಾರ್ಯಗಳು ಆಗಬೇಕಿದ್ದು, ಎಲ್ಲರೂ ಕೈಜೋಡಿಸುವರೊಂದಿಗೆ ಮುಂದಕ್ಕೆ ಸಮಾಜದ ಕಟ್ಟಡದಲ್ಲಿಯೇ ಕಾರ್ಯಕ್ರಮ ರೂಪಿಸುವಂತಾಗಬೇಕು. ಜನಾಂಗದ ದಾನಿಗಳು ಸಹಕರಿಸಬೇಕೆಂದು ಮನವಿ ಮಾಡಿದರು. ಮತ್ತೋರ್ವ ಅತಿಥಿ ಮಾಜಿ ಯೋಧ ಹುದೇರಿ ಕಾಳಪ್ಪ ಮಾತನಾಡಿ ಸಮಾಜ ಕಟ್ಟುವಲ್ಲಿ ಹಿರಿಯ ಪಾತ್ರ ಬಹಳಷ್ಟಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಯುವಕರ ಮೇಲಿದ್ದು, ಯುವ ಪೀಳಿಗೆ ಮುಂದೆ ಬರಬೇಕೆಂದು ಕರೆ ನೀಡಿದರು.

ಪತ್ರಕರ್ತ ಕುಡೆಕಲ್ ಸಂತೋಷ್ ಮಾತನಾಡಿ ಜನಾಂಗ ಬಾಂಧವರನ್ನು ಒಗ್ಗೂಡಿಸಲು, ಅಚಾರ -ವಿಚಾರ-ಪದ್ಧತಿ- ಪರಂಪರೆಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹಿರಿಯರು ಸಮಾಜ ಸ್ಥಾಪನೆ ಮಾಡಿದ್ದಾರೆ. ಅದನ್ನು ಮುನ್ನಡೆಸಿಕೊಂಡು ಹೋಗಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಯುವ ಪೀಳಿಗೆ ಸಂಸ್ಕೃತಿ-ಅಚಾರ-ವಿಚಾರಗಳನ್ನು ಮೈಗೂಡಿಕೊಳ್ಳುವ, ಕಲಿತುಕೊಳ್ಳುವ ಅನಿವಾರ್ಯತೆ ಇದೆ. ಸಿಗುವ ಸವಲತ್ತು, ಸೌಲಭ್ಯಗಳನ್ನು ಬಳಸಿಕೊಂಡು. ಸಮಾಜಕ್ಕಾಗಿ ಸೇವೆ ಸಲ್ಲಿಸುವಂತೆ ಹೇಳಿದರು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಮಾಜದ ಅಧ್ಯಕ್ಷ ತೂಟೇರ ಡಿ. ವೆಂಕಟರಮಣ ಮಾತನಾಡಿ ಪ್ರಕೃತಿ ವಿಕೋಪ ಹಾಗೂ ಕೋವಿಡ್ ಕಾರಣಗಳಿಂದಾಗಿ ಕಳೆದ ಕೆಲವು ವರ್ಷ ಯಾವದೇ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ರೂಪಿಸಲಾಗುವದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ, ಮನರಂಜನೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ಸ್ಥಾಪಕಾಧ್ಯಕ್ಷ ಕುಂಬಗೌಡನ ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ಮಳ್ಳನ ಸುಬ್ಬಯ್ಯ ಅವರುಗಳನ್ನು ಸನ್ಮನಿಸಿ ಗೌರವಿಸಲಾಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಳ್ಳನ ವಿಠಲ, ಕುಂಬಗೌಡನ ಸುನಿಲ್, ಸಬ್ಬಂಡ್ರ ಮನು ಅವರುಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಹಿರಿಯರಾದ ತೂಟೇರ ಸಾವಿತ್ರಿ, ಸಮಾಜದ ಉಪಾಧ್ಯಕ್ಷ ದೇರಣ್ಣನ ಸರೋಜಿನಿ, ಖಜಾಂಚಿ ಚೌಕಿಮನೆ ರಘು ತಿಮ್ಮಯ್ಯ ಇತರರಿದ್ದರು. ಕೊಟ್ಟಕೇರಿಯನ ಕಲ್ಪನಾ ಪ್ರದೀಪ್ ಪ್ರಾರ್ಥಿಸಿದರೆ, ಅಣ್ಣಚ್ಚಿರ ಸತೀಶ್ ಸೋಮಣ್ಣ ಸ್ವಾಗತಿಸಿದರು. ಸಮಾಜದ ಕಾರ್ಯದರ್ಶಿ ಮಳ್ಳನ ವಿಜಯ ಕುಮಾರ್ ವರದಿ ವಾಚಿಸಿದರೆ, ಕುಂಬಗೌಡನ ರಂಜಿತ್ ನಿರೂಪಿಸಿ, ವಂದಿಸಿದರು.

error: Content is protected !!