ಶ್ರೀ ರಾಮಕೃಷ್ಣ ಶಾರದಾಶ್ರಮಕ್ಕೆ ನೂತನ ಅಧ್ಯಕ್ಷರ ನಿಯುಕ್ತಿ

ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಪ್ರಸ್ತುತ ಅಧ್ಯಕ್ಷರಾದ ಶ್ರೀಮದ್ ಸ್ವಾಮಿ ಅಮೂರ್ತಾನಂದಜೀ ಮಹಾರಾಜರು ರಾಮಕೃಷ್ಣ ಮಠದ ಪ್ರಧಾನ ಕಾರ್ಯಾಲಯದ ನಿರ್ದೇಶನದ ಮೇರೆಗೆ ಬೆಂಗಳೂರಿನ ಹಲಸೂರು ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುತ್ತಾರೆ.

ಆವರ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಶ್ರೀಮದ್ ಸ್ವಾಮಿ ತತ್ವರೂಪಾನಂದಜೀ ಮಹಾರಾಜರು ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ. ಶ್ರೀಯುತರು ರಾಮಕೃಷ್ಣಮಠದ ಹಲವಾರು ಶಾಖೆಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿರುತ್ತಾರೆ. ಮಠದ ಮುಂಬೈ ಶಾಖೆಯಲ್ಲಿ 25 ವಷಗಳ ಸೇವೆ, ತಿರುವನಂತಪುರದ ಶಾಖೆಯಲ್ಲಿ ಆಸ್ಪತ್ರೆಯ ಪ್ರಮುಖರಾಗಿ ಸೇವೆ ಹಾಗೂ ಪ್ರಸ್ತುತ ಬೆಂಗಳೂರಿನ ಹಲಸೂರು ಶಾಖೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುತ್ತಾರೆ. ಸ್ವಾಮಿಜಿಯವರು ಪೊನ್ನಂಪೇಟೆಯ ಶ್ರೀರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷರಾಗಿ ದಿನಾಂಕ ೦೫-೦೪-೨೨ ರಂದು ನಡೆದ ಸರಳ ಸಮಾರಂಭದಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಮಕೃಷ್ಣ ಮಠದ ಟ್ರಸ್ಟಿಗಳಾದ ಶ್ರೀ ಮದ್ ಸ್ವಾಮಿ ಮುಕ್ತಿದಾನಂದಜಿ ಯವರು ನಮ್ಮ ಭಾರತೀಯ ಸಂಸ್ಕೃತಿಯ ಪ್ರಕಾರ ಜನರು ಜೀವನ ನಡೆಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಆಂತರಿಕ ಪರಿವರ್ತನೆಯಿಂದ ಮೊದಲುಗೊಂಡು ಸಾಮಾಜಿಕ ಪರಿವರ್ತನೆ ಆಗಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷರಾದ ಶ್ರೀ ಮದ್ ಸ್ವಾಮಿ ತತ್ವರೂಪಾನಂದಜೀ ಮಹಾರಾಜರು ಮುಂದೆ ಹಲವಾರು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಾಗಿ ಇದರಲ್ಲಿ ಕೊಡಗಿನ ಸಮಸ್ತ ಜನತೆಗೆ ಭಾಗವಹಿಸಲು ಕರೆ ನೀಡಿದರು.

ತಮ್ಮ ಅವಧಿಯಲ್ಲಿ ಆಶ್ರಮದ ಚಟುವಟಿಕೆಗಳಲ್ಲಿ ಸಹಕಾರವನ್ನು ನೀಡಿದ ಸಮಸ್ತ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಧನ್ಯವಾದಗಳನ್ನು ಶ್ರೀಮದ್ ಸ್ವಾಮಿ ಅಮೂರ್ತಾನಂದಜೀ ಮಹಾರಾಜರು ತಿಳಿಸಿದರು.

ಕೊಡಗಿನ ಜನರಿಗೆ ಚಿರಪರಿಚಿತರಾದ ಆಶ್ರಮದ ಹಾಲಿ ಅಧ್ಯಕ್ಷರಾದ ಶ್ರೀ ಮದ್ ಸ್ವಾಮಿ ಬೋಧಸ್ವರೂಪಾನಂದಜೀ ಮಹರಾಜರು ಉಪಸ್ಥಿತರಿದ್ದರು.

error: Content is protected !!