ಶಿವಮೊಗ್ಗ ರೈತ ಸಂಘದ ಸದಸ್ಯರಿಂದ ಜಿಯೋ ಬೈಕಾಟ್!

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ಖಂಡಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಶಿವಮೊಗ್ಗ ಜಿಲ್ಲಾ ರೈತ ಸಂಘ ಜಿಯೋದಿಂದ ಏರ್ಟೆಲ್ಗೆ ಪೋರ್ಟ್ ಆಗುವ ಮೂಲಕ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಅದಾನಿ, ಅಂಬಾನಿ ಅವರಂತಹ ಕಾರ್ಪೋರೇಟ್ಗಳಿಗೆ ಅನುಕೂಲಕರವಾಗುವಂತವಾಗಿವೆ. ಇದರಿಂದ ರೈತರು ಜಿಯೋ ಸಿಮ್ ಬಹಿಷ್ಕರಿಸುವ ಅಭಿಯಾನ ಪ್ರಾರಂಭಿಸಿದ್ದಾರೆ. ಅದರ ಭಾಗವಾಗಿ ರೈತ ಸಂಘ ಹಾಗೂ ಹಸಿರು ಸೇನೆಯ ಗೌರವಾಧ್ಯಕ್ಷ ಹೆಚ್.ಎಸ್.ಬಸವರಾಜಪ್ಪ ನೇತೃತ್ವದಲ್ಲಿ ನೂರಾರು ರೈತರು ನಗರದ ಏರ್ಟೆಲ್ ಕಚೇರಿಗೆ ಹೋಗಿ ತಮ್ಮ ಸಿಮ್ಗಳನ್ನು ಜಿಯೋದಿಂದ ಏರ್ಟೆಲ್ಗೆ ಪೋರ್ಟ್ ಮಾಡಿಸಿದ್ದಾರೆ. ಈ ವೇಳೆ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ ಸೇರಿದಂತೆ ಇತರರು ಹಾಜರಿದ್ದರು.