fbpx

ಶಾಲಾ ವಿದ್ಯಾರ್ಥಿಗಳಿಗೆ ಕೊರೋನಾ ಸಂಕಷ್ಟ!

ಅಂಕಣ: ಅಭಿವ್ಯಕ್ತಿ


✍️ ರಾಜೇಶ್ ಕಂಬೇಗೌಡ, ತುಮಕೂರು.

ಕೊರೋನಾ ನಂತರ ಅತ್ಯಂತ ಚರ್ಚೆಗೆ ಒಳಗಾದ ಸಂಗತಿ ಮಕ್ಕಳ ವಿದ್ಯಾಭ್ಯಾಸದ್ದು.
ಕೋವಿಡ್ 19 ಭಾರತಕ್ಕೆ ಬಂದದ್ದೇ ತಡ, ರೋಗದ ಬಗ್ಗೆ, ಅದಕ್ಕೆ ಸೂಕ್ತವಾದ ಮದ್ದು ಇಲ್ಲದಿರುವ ಬಗ್ಗೆ, ಅದರಿಂದಾಗುವ ಜೀವ ಹಾನಿಯ ಬಗ್ಗೆ ಆದ ಚರ್ಚೆ ಅಷ್ಟಿಷ್ಟಲ್ಲ. ಸ್ವಲ್ಪ ವಿಷಯವನ್ನು ಕೆಲವು ಮಾಧ್ಯಮಗಳು ವೈಭವೀಕರಿಸಿದವು. ದಿನವಿಡೀ ಒಂದೇ ವಿಷಯದ ಬಗ್ಗೆ ಹೆದರಿಸಿದವು.

ದೇಶವೊಂದರ ಭವಿಷ್ಯ ಆ ದೇಶದ ಶಿಕ್ಷಿತರ ಮೇಲೆ ಅವಲಂಭಿತವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ವರ್ಷ ಕೊರೋನಾದ ಆರ್ಭಟ ದಿಂದಾಗಿ ಶೈಕ್ಷಣಿಕ ವ್ಯವಸ್ಥೆಯೇ ಬುಡಮೇಲಾಗಿದೆ.

ಯಾವಾಗ ಶಾಲೆ ತೆರೆಯಬೇಕು? ಯಾವಾಗ ಪರೀಕ್ಷೆ ಮಾಡ ಬೇಕು? ಎಂಬುದೇ ವಿಷಯ ದೊಡ್ಡ ಸಂಗತಿಯಾಯಿತು. ಜೀವ ಮತ್ತು ಶಿಕ್ಷಣ ಎರಡರಲ್ಲಿ ಒಂದನ್ನು ಆಯ್ದುಕೊಳ್ಳಿ ಎಂದರೆ ಮಕ್ಕಳ ಪಾಲಕರು ಖಂಡಿತಾ ಜೀವವನ್ನೇ ಆಯ್ದುಕೊಳ್ಳುತ್ತಾರೆ. ಆದರೆ ಸರಕಾರಕ್ಕೆ ಹಾಗೂ ಶಿಕ್ಷಣ ತಜ್ಞರೆನಿಸಿಕೊಂಡವರಿಗೆ ಯಾವಾಗ ಶಾಲೆ ತೆರೆಯುವುದು ಎಂಬುದೇ ಮಹಾ ಸಾಧನೆಯ ವಿಷಯವಾಗಿದೆ. ಶಿಕ್ಷಣ ಸಚಿವರಂತೂ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿದ್ದೇ ಮಹಾ ಸಾಧನೆಯೆಂದು ತಿಳಿದು ಶಾಲಾ ಶೈಕ್ಷಣಿಕ ಚಟುವಟಿಕೆಗಳ ಪುನರಾರಂಭಕ್ಕೆ ಉತ್ಸುಕರಾಗಿದ್ದಾರೆ.
ಆದರೆ ಪರೀಕ್ಷೆ ನಡೆಸುವುದು ಮತ್ತು ದೈನಂದಿನ ಚಟುವಟಿಗೆಗಳೊಂದಿಗೆ ಶಾಲೆಯನ್ನು ನಡೆಸುವುದಕ್ಕೂ ತುಂಬಾ ವ್ಯತ್ಯಾಸ ಇದೆ ಎನ್ನುವುದು ಗಮನಾರ್ಹ ವಿಚಾರ.

ಪರೀಕ್ಷೆಗಳು ಮೊದಲಿಂದಲೂ ಸಾಮಾಜಿಕ ಅಂತರದಲ್ಲೇ ನಡೆಯುತ್ತಿದ್ದವು. ಅಂದರೆ ದೂರ ದೂರ ಕುಳಿತೇ ಪರೀಕ್ಷೆ ಬರೆಯುತ್ತಿದ್ದರು. ಮತ್ತು ಹತ್ತನೇ ತರಗತಿಯ ಮಕ್ಕಳಿಗೆ ಮಾಸ್ಕ್ ಹಾಕಿ, ಸ್ಯಾನಿಟರ್ ಬಳಸಿ ಎಂದರೆ ಅರ್ಥವಾಗುತ್ತೆ. ಅದೇ ಐದನೇ ತರಗತಿಯ ಕೆಳಗಿನ ವಿದ್ಯಾರ್ಥಿಗಳು ಈ ನಿಯಮವನ್ನು ಪಾಲಿಸಬಲ್ಲರೇ? ಒಟ್ಟಾಗಿ ಕುಳಿತುಕೊಳ್ಳಬೇಡಿ ಎಂದರೆ ಕೇಳುತ್ತಾರೆಯೇ? ಇದೆಲ್ಲಾ ನಮ್ಮ ಸರಕಾರ ನಡೆಸುವವರಿಗೆ ಯಾಕೆ ಅರ್ಥವಾಗುತ್ತಿಲ್ಲ. ಯಾವಾಗ ಶಾಲೆಗಳನ್ನು ಪುನರಾರಂಭ ಮಾಡಬೇಕು ಎನ್ನುವುದರ ಬಗ್ಗೆ ಸರಕಾರ ಸ್ವಷ್ಟ ನಿರ್ಧಾರ ತೆಗೆದುಕೊಂಡು ಪೋಷಕರ ತಲೆಬಿಸಿಯನ್ನು ಕಡಿಮೆ ಮಾಡುವುದು ಒಳಿತು.

ಒಂದೊಮ್ಮೆ ಕೆ.ಜಿ.ತರಗತಿಯಿಂದ 7 ನೇ ತರಗತಿಯವರೆಗಿನ ಈ ವರ್ಷದ ಶೈಕ್ಷಣಿಕ ತರಗತಿಗಳನ್ನು ರದ್ದು ಮಾಡಿ ಮುಂದಿನ ತರಗತಿಗೆ ತೇರ್ಗಡೆ ಮಾಡಿದರೆ ಏನು ತೊಂದರೆಯಾಗಲಾರದು. ಏಕೆಂದರೆ ಪ್ರಸ್ತುತ ಇರುವ ಶೈಕ್ಷಣಿಕ ಕ್ರಮದಲ್ಲಿ ಐದನೇ ತರಗತಿಯವರೆಗೆ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸುವುದು ಅತ್ಯಂತ ವಿರಳ. ಹಾಗಿರುವಾಗ ಮಕ್ಕಳಿಗೆಲ್ಲಾ ಒಂದು ವರ್ಷ ತೇರ್ಗಡೆ ಮಾಡುವ ಯೋಜನೆ ರೂಪಿಸಿಕೊಂಡರೆ ಏನು ತೊಂದರೆ?

ಬರುವ ದಿನಗಳಲ್ಲಿ ಕೊರೋನಾ ಹಿಡಿತಕ್ಕೆ ಬಂದರೆ ಜನವರಿ 2021 ರಿಂದ 8 ನೇ ತರಗತಿಯ ಮೇಲಿನ ಮಕ್ಕಳಿಗೆ ಮುಖ್ಯವಾದ ವಿಷಯಗಳ ಬಗ್ಗೆ ಅಥವಾ 30-40 ಶೇಕಡಾ ಪಠ್ಯ ಕ್ರಮದಲ್ಲಿ ಭೋಧನೆ ಮಾಡಬಹುದು ಮತ್ತು ಕಲಿಸಿದ ಆ ವಿಷಯದಲ್ಲೇ ಪರೀಕ್ಷೆ ಬರೆಸಬಹುದು. ಸ್ವಲ್ಪ ದೊಡ್ದ ಮಕ್ಕಳಿಗಾದರೆ ಸಾಮಾಜಿಕ ಅಂತರ, ಮಾಸ್ಕ್ ಇದೆಲ್ಲಾ ಅರ್ಥವಾಗುತ್ತೆ. ಆದುದರಿಂದ ದೊಡ್ಡ ಮಕ್ಕಳಿಗೆ ಇದನ್ನೆಲ್ಲಾ ಹೇಳಿ ಮಾಡಿಸುವುದರಲ್ಲಿ ಅರ್ಥವಿದೆ. ಸಣ್ಣ ಮಕ್ಕಳು ಶಾಲೆಗೆ ಬಂದು ಯಾರಿಗಾದರೂ ಕೊರೋನಾ ಬಂದರೆ ಯಾರು ಜವಾಬ್ದಾರರಾಗುತ್ತಾರೆ? ಆ ಮಗುವಿನಿಂದ ಎಲ್ಲರಿಗೂ ಹರಡಿ ಶಾಲೆಯಿಡೀ ಲಾಕ್ ಡೌನ್ ಆಗಬಹುದಾದ ಸಂದರ್ಭ ಕೂಡ ಬರಬಹುದು
 
ಕೆಲವು ಖಾಸಗಿ ಶಾಲೆಯವರಿಗೆ ತುರ್ತಾಗಿ ಮಕ್ಕಳ ಭೋಧನಾ ಶುಲ್ಕದ ಅಗತ್ಯ ಇದೆ. ಅದು ಅವರಿಗೆ ಸಿಕ್ಕರೆ ಖಂಡಿತಾ ಶಾಲೆ ಬಂದ್ ಮಾಡಲೂ ಅವರ ತಕರಾರು ಇರಲಿಕ್ಕಿಲ್ಲ. ಇಲ್ಲಿ ಅವರ ಪ್ರೀತಿ ಬಹುಷಃ ಮಕ್ಕಳ ವಿದ್ಯಾಭ್ಯಾಸದ ಮೇಲಲ್ಲ ಶಿಕ್ಷಣದ ಶುಲ್ಕದ ಮೇಲೆಯೇ ಇದೆಯೆಂದು ಸ್ಪಷ್ಟವಾಗಿ ಕಾಣಿಸುತ್ತದೆ. ಇಲ್ಲವಾದಲ್ಲಿ ಮಕ್ಕಳ ಪೋಷಕರ ಸಮ್ಮತಿ ಇಲ್ಲವಾದರೂ ಶಾಲೆಯನ್ನು ತೆರೆಯಲು ಹಾತೊರೆಯುವ ಅಗತ್ಯ ಇದೆಯೇ? ಮತ್ತೊಮ್ಮೆ ಯೋಚಿಸಬೇಕಾದ ಸಂಗತಿ.

ಇನ್ನೊಂದು ಅತ್ಯಂತ ಹಾಸ್ಯಾಸ್ಪದ ವಿಷಯವೆಂದರೆ ಶಾಲಾ ಮಕ್ಕಳಿಗೆ ಆನ್ ಲೈನ್ ಶಿಕ್ಷಣ.
ಮನೆಯಿಂದಲೇ ಕೆಲಸ ಮಾಡುವವರಿಗೆ ಅಥವಾ ಕೆಲವು ಪದವಿ ವಿದ್ಯಾರ್ಥಿಗಳಿಗೆ ಮನೆಯಿಂದಲೇ ಶಿಕ್ಷಣ ನೀಡುವ ವ್ಯವಸ್ಥೆ ಇರುತ್ತದೆ. ಆದರೆ ತಮ್ಮ ಹೆಸರನ್ನೇ ಸರಿಯಾಗಿ ಹೇಳಲು ಬಾರದ ಪುಟಾಣಿಗಳಿಗೆ ಆನ್ ಲೈನ್ ಶಿಕ್ಷಣ ನೀಡಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ!? ಸ್ಮಾರ್ಟ್ ಮೊಬೈಲ್ ಅಥವಾ ಲ್ಯಾಪ್ ಟಾಪ್ ಬೇಕೇ ಬೇಕಾಗುವ ವ್ಯವಸ್ಥೆ ಇದು. ಇಂಟರ್ ನೆಟ್ ಅಗತ್ಯ ಬೇಕು. ಕೆಲವು ಹಳ್ಳಿಗಳಲ್ಲಿ ಮೊಬೈಲ್ ನಲ್ಲಿ ಮಾತನಾಡಲು ನೆಟ್ ವರ್ಕ್ ಸಿಗುವುದೇ ಕಷ್ಟ ಹಾಗಿರುವಾಗ ಇಂಟರ್ ನೆಟ್ ಸಂಪರ್ಕ ಕೇಳುವ ಹಾಗೆ ಇಲ್ಲ. ಇಂಟರ್ ನೆಟ್ ಸಿಕ್ಕರೂ ಸರಿಯಾಗಿ ತರಗತಿಗಳು ಅರ್ಥವಾಗಬಹುದೇ? ಸಣ್ಣ ಮಕ್ಕಳಿಗೆ ಮೊಬೈಲ್ ಬಳಕೆ ಸೂಕ್ತವಲ್ಲ, ಅದರ ಪರದೆಯನ್ನು ಹೆಚ್ಚಾಗಿ ವೀಕ್ಷಿಸಿದರೆ ಕಣ್ಣಿನ ತೊಂದರೆಗಳು ಬರಬಹುದು ಎಂದು ತಿಳಿಸುವ ವರದಿಗಳು ಇವೆ. ಹೀಗಿರುವಾಗ ಯಾವ ಆಧಾರದಲ್ಲಿ ಆನ್ ಲೈನ್ ಶಿಕ್ಷಣವನ್ನು ಮಕ್ಕಳಿಗೆ ಕೊಡುತ್ತಿರುವುದು?
ಹಣ ಇರುವವರಾದರೆ ಇನ್ನೊಂದು ಮೊಬೈಲ್ ತೆಗೆದುಕೊಳ್ಳ ಬಹುದು. ಬಡವರು ಏನು ಮಾಡುವುದು? ಇಂತಹ ಶಿಕ್ಷಣದಲ್ಲಿ ತಾಂತ್ರಿಕವಾದ ಸಮಸ್ಯೆಗಳು ಹಲವಾರು ಇರುತ್ತವೆ.

ಶಿಕ್ಷಣದ ಸಮಯದಲ್ಲಿ ಮಕ್ಕಳ ಜೊತೆ ಪೋಷಕರೂ ಇರಬೇಕು ಎನ್ನುವುದಾದರೆ ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗುವವರಾದರೆ ರಜೆ ಮಾಡಿ ಕುಳಿತುಕೊಳ್ಳಲಾದೀತೇ? ಇಲ್ಲ. ಅವರು ಕೆಲಸ ಮಾಡುವ ಸಂಸ್ಥೆಗಳು ಮಕ್ಕಳ ಆನ್ ಲೈನ್ ಶಿಕ್ಷಣಕ್ಕೆ ರಜೆ ಕೊಡುವರೇ? ಖಂಡಿತ ಇಲ್ಲ. ದೂರದರ್ಶನದಲ್ಲಿ ದಿನಕ್ಕೆ ಸ್ವಲ್ಪ ಸಮಯ ಬೇಕಾದಲ್ಲಿ ಶೈಕ್ಷಣಿಕ ವಿಷಯದ ಮೇಲೆ ಪಾಠವನ್ನು ಹೇಳಿಕೊಡ ಬಹುದು. ಆದರೂ ವಿದ್ಯುತ್ ಸಮಸ್ಯೆಯಂತೂ ಇದ್ದೇ ಇರುತ್ತದೆ.

ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಸಣ್ಣ ಮಕ್ಕಳಿಗೆ ಈ ವರ್ಷ ಶಿಕ್ಷಣ ಬೇಕಾ? ಕವಿದ ಕೊರೋನಾ ಮೋಡಗಳು ಖಂಡಿತಾ ಮುಂದಿನ ದಿನಗಳಲ್ಲಿ ತಿಳಿಯಾಗುತ್ತವೆ. ಆಗ ಶಾಲೆ ಪ್ರಾರಂಭಿಸಲಿ. ಶಾಲಾ ಶಿಕ್ಷಣ ಕೊಡಲು ಪೋಷಕರು ಎಷ್ಟು ಬೇಕಾದರೂ ಹಣ ಕೊಡುತ್ತಾರೆ. ಆದರೆ ಈ ಶಿಕ್ಷಣ ತಮ್ಮ ಪುಟ್ಟ ಪುಟ್ಟ ಕಂದಮ್ಮಗಳ ಜೀವಗಳನ್ನೇ ಬಲಿಪಶುಮಾಡಲು ಹೊರಟರೆ ಅವರಾದರೂ ಯಾಕೆ ಬೆಂಬಲ ನೀಡುತ್ತಾರೆ? ಸರ್ಕಾರ ಯೋಚಿಸಬೇಕಾದ ಸಂಗತಿ ಇದು. 

ರಾಜೇಶ್ ಕಂಬೇಗೌಡ, ತುಮಕೂರು.
error: Content is protected !!